ರಾಜ್ಯದ 54 ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಗಳ ಜಿಪಿಎಸ್ ಆಧಾರಿತ ಸರ್ವೇ
ಮಾದರಿ ವಕ್ಫ್ ಬೋರ್ಡ್ ರಚನೆ
ರಾಜ್ಯದಲ್ಲಿರುವ ಎಲ್ಲ ವಕ್ಫ್ ಆಸ್ತಿಗಳನ್ನು ಸಮುದಾಯದ ಬೆಳವಣಿಗೆ ಹಾಗೂ ಅಭಿವೃದ್ಧಿಯ ದೃಷ್ಟಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಬದ್ಧವಾಗಿದ್ದೇವೆ. ಜಿಪಿಎಸ್ ಆಧಾರಿತ ಸರ್ವೇ ಕಾರ್ಯದಿಂದಾಗಿ ಪರಿಣಾಮಕಾರಿಯಾಗಿ ವಕ್ಫ್ ಆಸ್ತಿಗಳ ಸಂರಕ್ಷಣೆ ಸಾಧ್ಯ. ಇಡೀ ದೇಶದಲ್ಲಿ ನಮ್ಮ ರಾಜ್ಯದ ವಕ್ಫ್ ಬೋರ್ಡ್ ಅನ್ನು ಮಾದರಿಯನ್ನಾಗಿ ಮಾಡಲು ಹೊಸ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.
ಡಾ.ಮುಹಮ್ಮದ್ ಯೂಸುಫ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ
ಬೆಂಗಳೂರು, ಫೆ.13: ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ಅಧೀನದಲ್ಲಿರುವ ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾ(WAMSI) ಮಾದರಿಯಲ್ಲಿ ರಾಜ್ಯದ 54 ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಗಳನ್ನು ಜಿಪಿಎಸ್ ಆಧಾರಿತ ಸರ್ವೇ ಮಾಡಲು ರಾಜ್ಯ ವಕ್ಫ್ ಬೋರ್ಡ್ ಮುಂದಾಗಿದೆ.
ರಾಜ್ಯದಲ್ಲಿ ಅಂದಾಜು 54,194 ವಕ್ಫ್ ಆಸ್ತಿಗಳಿದ್ದು, ಈಗಾಗಲೇ ಪ್ರಾಯೋಗಿಕವಾಗಿ 5,963 ಆಸ್ತಿಗಳನ್ನು ಜಿಪಿಎಸ್ ಆಧಾರಿತವಾಗಿ ಸರ್ವೇ ಮಾಡಲಾಗಿದೆ. ಡಾ.ಮುಹಮ್ಮದ್ ಯೂಸುಫ್ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ವಕ್ಫ್ ಬೋರ್ಡ್ ಇಡೀ ದೇಶದಲ್ಲೆ ತ್ವರಿತವಾಗಿ ಜಿಪಿಎಸ್ ಆಧಾರಿತವಾಗಿ ಸರ್ವೇ ಕಾರ್ಯ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಿದೆ.
ಇದಲ್ಲದೇ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಬೋರ್ಡ್‌ನಲ್ಲಿರುವ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಅಗತ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು 'ಮಾದರಿ ಮಸೀದಿ'(ಮಿಸಾಲಿ ಮಸ್ಜಿದ್) ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ.
ತಾಲೂಕು ಕೇಂದ್ರಗಳಲ್ಲಿರುವ ಎಲ್ಲ ಜಾಮಿಯಾ ಮಸೀದಿಗಳನ್ನು 'ಮಾದರಿ ಮಸೀದಿ' ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡು, ಈ ಮಸೀದಿಗಳಲ್ಲಿ ಮಾಹಿತಿ ಕೇಂದ್ರ ಹಾಗೂ ಬೈತುಲ್ ಮಾಲ್‌ಗಳನ್ನು ಆರಂಭಿಸಲು ವಕ್ಫ್ ಬೋರ್ಡ್ ಮುಂದಾಗಿದೆ.
ಅಲ್ಲದೇ, ಮಸೀದಿಗಳು ತಮ್ಮ ವ್ಯಾಪ್ತಿಯಲ್ಲಿ ಒಳಪಡುವ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಮುಸ್ಲಿಮರ ವಿವರಗ ಳನ್ನು ಸಂಗ್ರಹಿಸಿ, ಸಂರಕ್ಷಿಸಿಡಲು ಸಹಕಾರಿ ಯಾಗುವಂತೆ ಅಗತ್ಯ ಯೋಜನೆ ರೂಪಿಸಿದೆ. ಪ್ರಮುಖ ಮದ್ರಸಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಸಮಾಲೋಚನಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದೆ.
ಮಸೀದಿ, ಮದ್ರಸಗಳಲ್ಲಿ ವಿಶೇಷ ತರಗತಿ
ಜಿಲ್ಲಾ ಕೇಂದ್ರಗಳಲ್ಲಿ ಮೊಹಲ್ಲಾ ಕ್ಲಿನಿಕ್‌ಗಳು ಹಾಗೂ ವಕ್ಫ್ ನರ್ಸಿಂಗ್ ಹೋಮ್‌ಗಳನ್ನು ತೆರೆಯುವುದು. 7ನೇ ಹಾಗೂ 10ನೇ ತರಗತಿಯ ಮುಸ್ಲಿಮ್ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ್, ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಬೋಧಿಸಲು ನಿವೃತ್ತ ಶಿಕ್ಷಕರನ್ನು ಬಳಸಿಕೊಂಡು ಮಸೀದಿ ಹಾಗೂ ಮದ್ರಸಾಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ವಕ್ಫ್ ಬೋರ್ಡ್ ಮುಂದಾಗಿದೆ.