ಭಾಷಾ ಹೋರಾಟ ಶಾಹಿನ್‌ ಬಾಗ್ ರೀತಿಯಲ್ಲಿ ರೂಪಿತವಾಗಲಿ: ಪುರುಷೋತ್ತಮ ಬಿಳಿಮಲೆ

Update: 2020-02-16 15:50 GMT

ಬೆಂಗಳೂರು, ಫೆ.16: ಪ್ರಾಥಮಿಕ ಶಾಲೆವರೆಗಿನ ಶಿಕ್ಷಣವು ಮಾತೃಭಾಷೆಯಲ್ಲಿಯೇ ಆಗಬೇಕೆಂಬ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಆಗ್ರಹಿಸಿ ನಡೆಯುತ್ತಿರುವ ಹೋರಾಟವು ಶಾಹಿನ್‌ ಬಾಗ್ ರೀತಿಯಲ್ಲಿ ಅವಿರತವಾಗಿ ನಡೆದರೆ ಮಾತ್ರ ನಮಗೆ ಜಯ ಸಿಗಲು ಸಾಧ್ಯವೆಂದು ಜೆಎನ್‌ಯು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ರವಿವಾರ ನಾವೇ ಕರ್ನಾಟಕದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಕನ್ನಡ ಭಾಷೆ-ಕರ್ನಾಟಕತ್ವ ಭಾರತ ಒಕ್ಕೂಟದಲ್ಲಿ ಕನ್ನಡಿಗರ ರಾಜಕೀಯ ಪ್ರಜ್ಞೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸತ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದರು ಮಾತೃ ಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಾಯಿ ಬಿಡುತ್ತಿಲ್ಲ. ಹೀಗಾಗಿ ಜನಪರ ಸಂಘಟನೆಗಳು ನೇತೃತ್ವದಲ್ಲಿ ಜನಸಾಮಾನ್ಯರು ಅವಿರತ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ ಎಂದರು.

2011ರ ಜನಗಣತಿಯ ಪ್ರಕಾರ ಹಿಂದಿನ ಭಾಷೆ ಮಾತನಾಡುವವ ಸಂಖ್ಯೆ ಶೇ.45.8ರಷ್ಟು ಹೆಚ್ಚಾಗಿದೆ. ತೆಲುಗು ಶೇ.17, ತಮಿಳು ಶೇ.13, ತುಳು ಶೇ.7ರಷ್ಟು ಹೆಚ್ಚಾದರೆ, ಕನ್ನಡ ಭಾಷಿಕರ ಸಂಖ್ಯೆ ಶೇ.3.5ರಷ್ಟು ಮಾತ್ರ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದು ಇಳಿಮುಖವಾಗುವ ಎಲ್ಲ ಮುನ್ಸೂಚನೆಗಳು ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರಕಾರ ಕೇಂದ್ರದಿಂದ 150 ಕೋಟಿ ರೂ.ಹೆಚ್ಚು ಅನುದಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಕರ್ನಾಟಕವು ಕೇವಲ 6 ಕೋಟಿ ರೂ.ಗಳನ್ನಷ್ಟೆ ಪಡೆದಿದೆ. ಇದೊಂದೆ ಅಲ್ಲ, ಕೇಂದ್ರದಿಂದ ವಿವಿಧ ನಿಗಮಗಳಿಗೆ, ಮಂಡಳಿಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿಯೂ ನಾವು ಹಿಂದುಳಿದಿದ್ದೇವೆ. ಇದೆಲ್ಲವುಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಈ ವೇಳೆ ನಾವೇ ಕರ್ನಾಟಕದ ಪಾರ್ವತೀಶ್ ಬಿಳಿದಾಳೆ, ಪ್ರಾಧ್ಯಾಪಕ ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತುಳುನಾಡಿನ ಮುಸ್ಲಿಮ್ ಸಮುದಾಯದ ದೈವ ಬೊಬ್ಬರ್ಯನನ್ನು ಹಿಂದುತ್ವ ಸಂಘಟನೆಗಳು ಬಬ್ರುವಾಹನವೆಂದು ಬಿಂಬಿಸುತ್ತಿವೆ. ಆ ಮೂಲಕ ತಳ ಸಮುದಾಯದ ಸಂಸ್ಕೃತಿಯನ್ನು ಬ್ರಾಹ್ಮಣೀಕರಸಲು ನಿರತವಾಗಿವೆ. ಈ ಬಗ್ಗೆ ಬೊಬ್ಬರ್ಯ ದೈವದ ಬಗ್ಗೆ ಅಧ್ಯಯನ ಮಾಡಿರುವ ವಿವೇಕ ರೈ ಸೇರಿದಂತೆ ಯಾವೊಬ್ಬ ವಿದ್ವಾಂಸರು ಬಾಯಿ ಬಿಡದಿರುವುದು ದುರಂತ

-ಪುರುಷೋತ್ತಮ ಬಿಳಿಮಲೆ ಪ್ರಾಧ್ಯಾಪಕ, ಜೆಎನ್‌ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News