ಭೀತಿಯ ನೆರಳಲ್ಲಿ ಭಾರತ ಮತ್ತು ಭಾರತೀಯರು

Update: 2020-02-28 18:12 GMT

ಇಂದಿನ ಪರಿಸ್ಥಿತಿಯಲ್ಲಿ ಭಾರತದ ಜನತೆ ಭಯಗ್ರಸ್ತರಾಗಿ ಬದುಕುತ್ತಿದ್ದರೆ ಅದಕ್ಕೆ ಜಾಗತಿಕ ಭಯೋತ್ಪಾದನೆ ಕಾರಣವಲ್ಲ. ಆತ್ಮಾಹುತಿ ದಳಗಳ ಭೀತಿಯೂ ಅಲ್ಲ. ಇಂದು ಪ್ರತಿಯೊಬ್ಬ ಪ್ರಜೆಯೂ ಭಯದಿಂದಲೇ ಬದುಕುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಸುತ್ತಲೂ ನಾವೇ ಸೃಷ್ಟಿಸಿಕೊಂಡಿರುವ ವಿಷ ವರ್ತುಲಗಳು. ಕ್ರಿಯೆ-ಪ್ರತಿಕ್ರಿಯೆಯ ಚೌಕಟ್ಟಿನಿಂದ ಹೊರಬಂದು, ವಾಸ್ತವದ ನೆಲೆಯಲ್ಲಿ ನಿಂತು ನೋಡಿದಾಗ ಈ ಭೀತಿ ವಾತಾವರಣದ ಹಿನ್ನೆಲೆ ಅರ್ಥವಾಗುತ್ತದೆ. ಅವರ ಕೈಯಲ್ಲಿ ಬಂದೂಕುಗಳಿವೆ ನಾವೇನು ಬರಿಗೈಯಲ್ಲಿ ಹೋರಾಡಬೇಕೇ ಎಂದು ಪ್ರಶ್ನಿಸುತ್ತಿದ್ದ ಕ್ಷುದ್ರ ಮನಸ್ಸುಗಳು ಇಂದು ನಿಶ್ಶಸ್ತ್ರರಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದು ಯುದ್ಧಕ್ಕಿಳಿದಿದ್ದಾರೆ.


ಭಾರತ ಎದುರಿಸುತ್ತಿರುವ ಪ್ರಮುಖ ಸವಾಲು ಭಯೋತ್ಪಾದನೆ ಎಂದು ಕಳೆದ ಮೂರು ದಶಕಗಳಿಂದಲೂ ಹೇಳಲಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳೂ ಈ ಹೇಳಿಕೆಗೆ ಬದ್ಧತೆ ತೋರುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಮತ್ತೊಂದೆಡೆ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸರಕಾರಗಳು ಎಲ್ಲ ರೀತಿಯ ಆಡಳಿತಾತ್ಮಕ, ಕಾನೂನು ಕ್ರಮಗಳನ್ನೂ ಕೈಗೊಳ್ಳುತ್ತಿವೆ. ಅಸಂಬದ್ಧ ಎನಿಸಿದರೂ ನೋಟು ರದ್ದತಿಯನ್ನೂ ಈ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಲಾಗಿತ್ತು. ಆದರೆ ರದ್ದಾದ ನೋಟುಗಳು ಪುಲ್ವಾಮ ದಾಳಿಯನ್ನು ತಪ್ಪಿಸಲಿಲ್ಲ ಎನ್ನುವುದು ವಾಸ್ತವ. ಜಾಗತಿಕ ಭಯೋತ್ಪಾದನೆಯನ್ನು ಮಟ್ಟ ಹಾಕುವ ಪ್ರಯತ್ನಕ್ಕೆ ಅಡ್ಡಿಯಾಗಿರುವುದೇನು ಎಂಬ ಪ್ರಶ್ನೆ ಎದುರಾದಾಗ ಎಲ್ಲ ಸರಕಾರಗಳೂ ಮೌನಕ್ಕೆ ಶರಣಾಗುತ್ತವೆ. ಏಕೆಂದರೆ ಭಯೋತ್ಪಾದಕರು ಬಳಸುವ ಶಸ್ತ್ರಾಸ್ತ್ರಗಳು, ಪಾಕಿಸ್ತಾನ ಸರಕಾರ ಭಯೋತ್ಪಾದಕರಿಗೆ ಒದಗಿಸುವ ಶಸ್ತ್ರಾಸ್ತ್ರಗಳು, ಸಾಮ್ರಾಜ್ಯಶಾಹಿಗಳು ಸಣ್ಣ ಪುಟ್ಟ ರಾಷ್ಟ್ರಗಳ ಮೇಲೆ ಪ್ರಯೋಗಿಸುವ ಮಾರಕಾಸ್ತ್ರಗಳು ಎಲ್ಲದರ ಮೂಲ ಅಮೆರಿಕದಲ್ಲಿದೆ. ಪೆಂಟಗನ್ ಅಮೆರಿಕದ ಅರ್ಥವ್ಯವಸ್ಥೆಯ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಆದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಸಬರಮತಿ ಆಶ್ರಮದಲ್ಲಿ ಗಾಂಧಿಯ ಚರಕದ ಬಳಿ ಕುಳಿತು ಮಾನವತೆ, ಶಾಂತಿ, ಸೌಹಾರ್ದ ಮತ್ತು ಪ್ರಜಾತಂತ್ರದ ಮಾತುಗಳನ್ನಾಡುತ್ತಾರೆ. ಎಲ್ಲಿಯವರೆಗೆ ಈ ವಿಡಂಬನೆ? ಉಭಯ ರಾಷ್ಟ್ರಗಳ ನಡುವೆ ಏರ್ಪಡುವ ರಕ್ಷಣಾ ಒಪ್ಪಂದಗಳು ಗಾಂಧಿಯ ಚರಕವನ್ನು ತಿಪ್ಪೆಗೆಸೆಯುವಂತಿರುತ್ತದೆ. ಭೌಗೋಳಿಕ ದೇಶದ ರಕ್ಷಣೆಗಾಗಿ ಭಾರತ ಅಥವಾ ಮತ್ತಾವುದೇ ದೇಶ ಅಮೆರಿಕ, ಫ್ರಾನ್ಸ್, ರಶ್ಯ, ಜರ್ಮನಿಯಿಂದ ಖರೀದಿಸುವ ಶಸ್ತ್ರಾಸ್ತ್ರಗಳು ಗಡಿಗಳನ್ನು ರಕ್ಷಿಸುತ್ತವೆ. ಆದರೆ ಗಡಿಯೊಳಗಿನ ಜೀವಗಳಿಗೆ ಸದಾ ಮರಣಶಾಸನವಾಗಿರುತ್ತವೆ. ಈ ವಾಸ್ತವವನ್ನು ಅರಿತೂ ಸುಮ್ಮನಿರುವ ಸುಶಿಕ್ಷಿತ ಮಧ್ಯಮ ವರ್ಗಕ್ಕೆ ದೇಶಪ್ರೇಮದ ಪೊರೆ ವಾಸ್ತವದಿಂದ ವಿಮುಖರಾಗಲು ನೆರವಾಗುತ್ತದೆ.

ದುರಂತ ಎಂದರೆ ಭಯೋತ್ಪಾದನೆಯ ವ್ಯಾಖ್ಯಾನದಲ್ಲೇ ದೋಷವಿದೆ. ಭಾರತೀಯ ಸಮಾಜದಲ್ಲಿ ಭಯೋತ್ಪಾದನೆ ವಿಭಿನ್ನ ಆಯಾಮಗಳಲ್ಲಿ ಶತಮಾನಗಳಿಂದಲೂ ಅಸ್ತಿತ್ವದಲ್ಲಿದೆ. ರಸ್ತೆಯಲ್ಲಿ ನಡೆದಾಡಲು ಹೆದರುತ್ತಿದ್ದ, ತಲೆಎತ್ತಿ ನೋಡಲು ಹೆದರುತ್ತಿದ್ದ, ಮಾತನಾಡಲು ಹೆದರುತ್ತಿದ್ದ ಅಸ್ಪೃಶ್ಯ ಸಮುದಾಯಗಳು ಶತಮಾನಗಳ ಕಾಲ ಮೇಲ್ಜಾತಿಯ ಭಯೋತ್ಪಾದನೆಯನ್ನು ಎದುರಿಸಿವೆ. ಇಂದಿಗೂ ಎದುರಿಸುತ್ತಿವೆ. ಉತ್ತರ ಭಾರತದಲ್ಲಿ ಇಂದಿಗೂ ಒಬ್ಬ ದಲಿತ ನಿರ್ಭೀತಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ವಿವಾಹಿತನಾಗಿ ಕುದುರೆ ಏರಿ ಮೆರವಣಿಗೆ ಹೋಗಲಾಗುವುದಿಲ್ಲ. ಕೆಲವೆಡೆ ದೇವಸ್ಥಾನಗಳಿಗೆ ಪ್ರವೇಶಿಸಲಾಗುವುದಿಲ್ಲ. ಮೇಲ್ಜಾತಿಯವರ ಬಾವಿಗಳ ನೀರು ಕುಡಿಯುವಂತಿಲ್ಲ. ಇವೆಲ್ಲ ಘಟನೆಗಳೂ ಅಲ್ಲಲ್ಲಿ ಕಂಡುಬರುವ ಅಪಭ್ರಂಶಗಳು ಎಂದು ಭಾವಿಸಿದರೆ ಅದು ನಮ್ಮ ದೃಷ್ಟಿದೋಷ ಅಥವಾ ಪೂರ್ವಗ್ರಹ ಆಗುತ್ತದೆ. ಅಸ್ಪೃಶ್ಯತೆ, ಜಾತೀಯತೆ ಇಂದಿಗೂ ಜೀವಂತವಾಗಿರುವ ಕುರುಹುಗಳು ಈ ಘಟನೆಗಳು. ಉನಾ ಘಟನೆ ಒಂದು ಮೇರು ನಿದರ್ಶನ. ಈ ದೌರ್ಜನ್ಯಗಳ ಮೂಲಕ ಸಮಾಜದ ಒಂದು ವರ್ಗದಲ್ಲಿ ಶಾಶ್ವತವಾದ ಭೀತಿಯನ್ನು ಸೃಷ್ಟಿಸಲಾಗುತ್ತಿದೆ. ಆದರೂ ಇದನ್ನು ನಾವು ಭಯೋತ್ಪಾದನೆ ಎನ್ನುವುದಿಲ್ಲ. ಏಕೆಂದರೆ ಪ್ರಭುತ್ವ ಹಾಗೆ ಭಾವಿಸುವುದಿಲ್ಲ. ಸುಶಿಕ್ಷಿತ ಸಮಾಜ ಪ್ರಭುತ್ವದ ಭಾಷೆಯಲ್ಲೇ ಮಾತನಾಡುತ್ತದೆ ಎನ್ನಲು ಇದೊಂದು ನಿದರ್ಶನವಷ್ಟೆ.

ಆದರೂ ನಾವು ಭಾರತವನ್ನು ಶಾಂತಿಪ್ರಿಯ ದೇಶ, ಸೌಹಾರ್ದದದ ತವರು ಎಂದೆಲ್ಲಾ ಹೊಗಳುತ್ತಲೇ ಇರುತ್ತೇವೆ. ಸೌಹಾರ್ದ ಎನ್ನುವ ಪದವನ್ನೂ ಪ್ರಭುತ್ವದ ಭಾಷೆಯಲ್ಲೇ ನಾವೂ ಸಹ ಬಳಸುತ್ತೇವೆ. ನಮ್ಮಿಳಗಿನ ಸೌಹಾರ್ದವನ್ನು ಸುಲಭವಾಗಿ ಬಲಿಕೊಡಲು ಈ ಅನುಕರಣೆ ಸಹಾಯಕವಾಗುತ್ತದೆ. 1980ರ ದಶಕದಿಂದ ಇಂದಿನವರೆಗೂ ದೇಶದಲ್ಲಿ ಸಂಭವಿಸಿರುವ ಕೋಮುದಂಗೆ, ಸಂಘರ್ಷಗಳಿಗೆ ಮತ್ತು ಅದರಿಂದುಂಟಾದ ಸಾವು ನೋವುಗಳಿಗೆ ಜನಸಾಮಾನ್ಯರು ಕಾರಣರಲ್ಲ. ಜನಸಾಮಾನ್ಯರ ಆತಂಕ, ಹತಾಶೆ, ದುಗುಡ ಮತ್ತು ನಿತ್ಯ ಜೀವನದ ಒತ್ತಡಗಳನ್ನು ತಮ್ಮ ರಾಜಕೀಯ ಮುನ್ನಡೆಗೆ ಬಂಡವಾಳವನ್ನಾಗಿ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಹಿತಾಸಕ್ತಿ ರಕ್ಷಣೆಗೆ ಈ ಗಲಭೆಗಳು ನೆರವಾಗಿವೆ. ಆದರೆ ಪ್ರತಿಯೊಂದು ಕೋಮುಗಲಭೆಯಾದ ನಂತರ ಎಲ್ಲ ರಾಜಕೀಯ ಪಕ್ಷಗಳು ಶಾಂತಿ ಸಭೆ ನಡೆಸುತ್ತವೆ, ಸೌಹಾರ್ದ ಸಾಧಿಸಲು ಉಪನ್ಯಾಸ ನೀಡುತ್ತವೆ, ಶಾಂತಿ ಕಾಪಾಡಲು ವಿನಂತಿಸುತ್ತವೆ.

ಅಂದರೆ ಕೋಮು ಗಲಭೆಗಳಿಗೆ ಜನರೇ ಹೊಣೆಯೇ ಹೊರತು, ಆಳ್ವಿಕರಲ್ಲ, ರಾಜಕೀಯ ಪಕ್ಷಗಳು ಅಲ್ಲ ಎಂಬ ಭಾವನೆ ಇಲ್ಲಿ ಕಾಣುತ್ತದೆ. ವಾಸ್ತವ ಬೇರೆ ರೀತಿಯಲ್ಲೇ ಕಾಣುವುದಲ್ಲವೇ? ಕೊಲೆ, ಅತ್ಯಾಚಾರ, ದೌರ್ಜನ್ಯ, ದೊಂಬಿ, ಗಲಭೆ ಇವೆಲ್ಲವೂ ರಾಜಕೀಯ ಅಸ್ತಿತ್ವದ ಅಡಿಪಾಯವಾಗಿರುವ ಭಾರತದಲ್ಲಿ ಹೆಣಗಳೂ ಮಾರಾಟವಾಗುತ್ತಿರುವುದನ್ನು ಕಳೆದ ಹಲವು ವರ್ಷಗಳಿಂದ ಕಾಣುತ್ತಿದ್ದೇವೆ. ಆದರೂ ಭಯೋತ್ಪಾದನೆ ಎಂದ ಕೂಡಲೇ ನಮ್ಮ ದೃಷ್ಟಿ ಬಾಂಬ್ ದಾಳಿ, ಆತ್ಮಾಹುತಿ ದಾಳಿಗಳತ್ತ ಹೊರಳುತ್ತದೆ. ಇಲ್ಲೇ ಸೃಷ್ಟಿಯಾಗುವ ಗಲಭೆಗಳು ಜನಸಾಮಾನ್ಯರಲ್ಲಿ ಉತ್ಪಾದಿಸುವ ಭಯ ಮತ್ತು ಭೀತಿಯನ್ನು ನಾವು ಪರಿಗಣಿಸುವುದೇ ಇಲ್ಲ. ವಿಚಿತ್ರ ಎನಿಸುವುದಿಲ್ಲವೇ?

ಇಂದು ಇದೇ ಮಾರ್ಗದಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬಾಂಬ್ ಸ್ಫೋಟ, ಸರಣಿ ಬಾಂಬ್ ದಾಳಿ, ಆತ್ಮಾಹುತಿ ದಳ ಈ ಪರಿಕಲ್ಪನೆಗಳನ್ನು ಮೀರಿದ ಭಯೋತ್ಪಾದನೆಯ ವಿಭಿನ್ನ ಆಯಾಮವನ್ನು ಭಾರತೀಯ ಸಮಾಜದಲ್ಲಿ ಕಾಣುತ್ತಿದ್ದೇವೆ. ಈ ವಿದ್ಯಮಾನವನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡು ಬರುತ್ತಿರುವ ಕೋಮುವಾದಿ/ಮೂಲಭೂತವಾದಿ ಗುಂಪುಗಳ ದೃಷ್ಟಿಯಲ್ಲಿ ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತರುವ ವಿಧ್ವಂಸಕ ಕೃತ್ಯಗಳು ಕ್ರಿಯೆ-ಪ್ರತಿಕ್ರಿಯೆಯ ಪರಿಭಾಷೆಯಲ್ಲೇ ಕಳೆದುಹೋಗುತ್ತವೆ. ಇಂದಿನ ಪರಿಸ್ಥಿತಿಯಲ್ಲಿ ಭಾರತದ ಜನತೆ ಭಯಗ್ರಸ್ತರಾಗಿ ಬದುಕುತ್ತಿದ್ದರೆ ಅದಕ್ಕೆ ಜಾಗತಿಕ ಭಯೋತ್ಪಾದನೆ ಕಾರಣವಲ್ಲ. ಆತ್ಮಾಹುತಿ ದಳಗಳ ಭೀತಿಯೂ ಅಲ್ಲ. ಇಂದು ಪ್ರತಿಯೊಬ್ಬ ಪ್ರಜೆಯೂ ಭಯದಿಂದಲೇ ಬದುಕುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಸುತ್ತಲೂ ನಾವೇ ಸೃಷ್ಟಿಸಿಕೊಂಡಿರುವ ವಿಷ ವರ್ತುಲಗಳು. ಕ್ರಿಯೆ-ಪ್ರತಿಕ್ರಿಯೆಯ ಚೌಕಟ್ಟಿನಿಂದ ಹೊರಬಂದು, ವಾಸ್ತವದ ನೆಲೆಯಲ್ಲಿ ನಿಂತು ನೋಡಿದಾಗ ಈ ಭೀತಿ ವಾತಾವರಣದ ಹಿನ್ನೆಲೆ ಅರ್ಥವಾಗುತ್ತದೆ. ಅವರ ಕೈಯಲ್ಲಿ ಬಂದೂಕುಗಳಿವೆ ನಾವೇನು ಬರಿಗೈಯಲ್ಲಿ ಹೋರಾಡಬೇಕೇ ಎಂದು ಪ್ರಶ್ನಿಸುತ್ತಿದ್ದ ಕ್ಷುದ್ರ ಮನಸ್ಸುಗಳು ಇಂದು ನಿಶ್ಶಸ್ತ್ರರಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದು ಯುದ್ಧಕ್ಕಿಳಿದಿದ್ದಾರೆ. ದಿಲ್ಲಿಯ ಶಾಹೀನ್ ಬಾಗ್ ಒಂದು ನಿದರ್ಶನ. ಅಲಿಗಡ, ಜೆಎನ್‌ಯು, ಜಾಮಿಯಾ ಮಿಲ್ಲಿಯಾ ಇನ್ನು ಹಲವು ನಿದರ್ಶನಗಳು.

ದೇಶ-ದೇಶಪ್ರೇಮ-ದೇಶದ್ರೋಹ ಈ ತ್ರಿಕೋನದಲ್ಲಿ ಯಾರು ಎಲ್ಲಿ ನಿಲ್ಲುತ್ತಾರೆ ಎಂದು ನಿಷ್ಕರ್ಷೆ ಮಾಡುತ್ತಿರುವುದು ಈ ದೇಶದ ಕಾನೂನು ಮತ್ತು ಆಡಳಿತ ವ್ಯವಸ್ಥೆ ಅಲ್ಲ. ಒಂದು ರಾಜಕೀಯ ಗುಂಪು, ಒಂದು ಮತಧಾರ್ಮಿಕ ಗುಂಪು, ಒಂದು ಸಾಂಸ್ಕೃತಿಕ(?) ಸಂಘಟನೆ, ಒಂದು ಮತಾಂಧ ಸಂಘಟನೆ ಇದನ್ನು ನಿರ್ಧರಿಸುತ್ತದೆ. ಹಾಗಾಗಿಯೇ ಪಾಕಿಸ್ತಾನ ಭಾರತೀಯರ ದೇಶಪ್ರೇಮವನ್ನು ಗುರುತಿಸುವ ಪ್ರಮುಖ ಮಾನದಂಡವಾಗಿಬಿಟ್ಟಿದೆ. ದೇಶದ್ರೋಹ ಎನ್ನುವ ಆರೋಪ ಕಾನೂನು ನಿಯಮಗಳನ್ನೂ ಮೀರಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡುಬಿಟ್ಟಿದೆ. ಸೆಕ್ಷನ್ 124ಎ ಅನುಸಾರ ಕಾನೂನಿನ ವ್ಯಾಪ್ತಿಯಲ್ಲಿ ದೇಶದ್ರೋಹ ಎಂದರೇನು ಎಂದು ಕೇಳುವ, ಕೇಳಿಸಿಕೊಳ್ಳುವ ವ್ಯವಧಾನವನ್ನೂ ನಮ್ಮ ನಾಗರಿಕ ಸಮಾಜ ಕಳೆದುಕೊಂಡುಬಿಟ್ಟಿದೆ. ಹಾಗಾಗಿಯೇ ಕವನದ ನಾಲ್ಕು ಸಾಲುಗಳಲ್ಲಿ ಈ ದೇಶದ ಶೇ. 50ರಷ್ಟು ಜನರ ಆಯ್ಕೆಯಿಂದ ಪ್ರಧಾನಿಯಾಗಿರುವ ವ್ಯಕ್ತಿಯನ್ನು ಟೀಕಿಸುವುದು ದೇಶದ್ರೋಹ ಎನಿಸಿಕೊಳ್ಳುತ್ತದೆ. ನಾಟಕದ ಒಂದು ಸಂಭಾಷಣೆಯಲ್ಲಿ ಪ್ರಧಾನಿಯನ್ನು ಖಂಡಿಸುವುದು ದೇಶದ್ರೋಹವಾಗುತ್ತದೆ. ಪೊಲೀಸ್ ಇಲಾಖೆಯೂ ಸಹ ಕಾನೂನಿನ ವ್ಯಾಖ್ಯಾನವನ್ನೂ ಲೆಕ್ಕಿಸದೆ ಮೊಕದ್ದಮೆಗಳನ್ನು ದಾಖಲಿಸುತ್ತವೆ. ನ್ಯಾಯಾಲಯಗಳೂ ವಿಚಾರಣೆ ನಡೆಸುತ್ತವೆ. ನಾಗರಿಕ ಸಮಾಜ ನಾಟಕದ ಪ್ರೇಕ್ಷಕರಂತೆ ಗೋಣು ಆಡಿಸುತ್ತಿರುತ್ತದೆ. ಹಾಗಾದರೆ ದೇಶ ಎಂದರೇನು? ಚುನಾಯಿತ ಪ್ರಧಾನಿಯನ್ನು ದೇಶಕ್ಕೆ ಸಮೀಕರಿಸಲು ಸಾಧ್ಯವೇ?

ದೇಶದ್ರೋಹದ ಅಮಲು ನಮ್ಮ ನಾಗರಿಕ ಸಮಾಜವನ್ನು ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ನ್ಯಾಯವ್ಯವಸ್ಥೆಯಲ್ಲಿ ಕಕ್ಷಿದಾರರ ಪರವಾಗಿ ವಕಾಲತ್ತು ವಹಿಸಿ ನ್ಯಾಯ ಒದಗಿಸಲು ಶ್ರಮಿಸುವಂತೆ ಸಾಂವಿಧಾನಿಕವಾಗಿ ಪ್ರಮಾಣ ಮಾಡಿರುವ ವಕೀಲರೂ ಸಹ ಬೀದಿ ಜಗಳಕ್ಕೆ ಮುಂದಾಗಿದ್ದಾರೆ. ದೇಶದ್ರೋಹದ ಆರೋಪ ಹೊತ್ತ ವ್ಯಕ್ತಿ ಕೇವಲ ಆರೋಪಿಯಷ್ಟೇ. ನ್ಯಾಯಾಲಯ ವಿಚಾರಣೆಯ ನಂತರ ಅಂತಿಮ ತೀರ್ಪಿನಲ್ಲಿ ಅಪರಾಧಿ ಎಂದು ಘೋಷಿಸುವವರೆಗೂ ಆರೋಪಿಗಳನ್ನು ಅಪರಾಧಿ ಎನ್ನಲಾಗುವುದಿಲ್ಲ. ಕನಿಷ್ಠ ನ್ಯಾಯಶಾಸ್ತ್ರದ ಪರಿಜ್ಞಾನ ಇರುವವರಿಗೆ ಇದನ್ನು ಹೇಳಬೇಕಿಲ್ಲ. ಆದರೆ ಇಂದು ಇದನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಬೇಕಿದೆ. ಏಕೆಂದರೆ ವಕೀಲ ಸಮುದಾಯದ ಒಂದು ವರ್ಗ ತಮ್ಮ ಸಹೋದ್ಯೋಗಿ ಮಿತ್ರರ ಮೇಲೆ ದೈಹಿಕ ಹಲ್ಲೆ ನಡೆಸುವಷ್ಟು ಮಟ್ಟಿಗೆ ಉನ್ಮತ್ತಕ್ಕೆ ಬಲಿಯಾಗಿದೆ. ನ್ಯಾಯಾಲಯದ ಅಂಗಳದಲ್ಲಿ ಬಹಿಷ್ಕೃತರ ಸಂಖ್ಯೆ ಹೆಚ್ಚಾಗುತ್ತಿದೆ. ನ್ಯಾಯಶಾಸ್ತ್ರದ ಮೌಲ್ಯಗಳನ್ನು ಮೀರಿದ ವಿಕೃತಿ ವಕೀಲ ಸಮುದಾಯದಲ್ಲಿ ಕಂಡುಬರುತ್ತಿದೆ. ಕಾಡುಗಳ್ಳರನ್ನು, ಕಳ್ಳಸುಳ್ಳರನ್ನು, ಅತ್ಯಾಚಾರಿಗಳನ್ನು, ಕೊಲೆಗಡುಕರನ್ನು, ಮಾಫಿಯಾಗಳನ್ನು, ಭ್ರಷ್ಟಾಚಾರಿಗಳನ್ನು, ಸುಪಾರಿ ಹಂತಕರನ್ನು ನ್ಯಾಯಾಲಯದಲ್ಲಿ ಸಮರ್ಥಿಸುವ ವಕೀಲರು, ಒಂದು ಘೋಷಣೆಯಿಂದ ದೇಶದ್ರೋಹದ ಆರೋಪ ಹೊತ್ತ ವ್ಯಕ್ತಿಯನ್ನು ಸಮರ್ಥಿಸಲು ಅವಕಾಶ ನೀಡುತ್ತಿಲ್ಲ. ಸಮರ್ಥಿಸುವ ವಕೀಲರನ್ನೂ ದೇಶದ್ರೋಹಿಗಳ ಪಟ್ಟಿಗೆ ಸೇರಿಸಲಾಗುತ್ತಿದೆ.

ಈ ವಿದ್ಯಮಾನಗಳನ್ನು ಜನಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ತಲುಪಿಸುವ ನೈತಿಕ, ಸಾಮಾಜಿಕ ಮತ್ತು ಸಾಂವಿಧಾನಿಕ ಕರ್ತವ್ಯ ಹೊತ್ತಿರುವ ಮಾಧ್ಯಮಗಳು ಅಕ್ಷರಶಃ ಸರ್ವೋಚ್ಚ ನ್ಯಾಯಾಲಯದ ಸ್ಥಾನವನ್ನು ಅಲಂಕರಿಸಿಬಿಟ್ಟಿವೆ. ದೇಶದ್ರೋಹದ ಆರೋಪ ಹೊತ್ತ ವ್ಯಕ್ತಿಯನ್ನು ಪರದೆಯ ಮೇಲೆ ರೋಚಕವಾಗಿ ಬಿಂಬಿಸುವ ಆತುರದಲ್ಲಿ ಟಿಆರ್‌ಪಿ ದಾಹಿ ಮಾಧ್ಯಮಗಳು ಅವರನ್ನು ದೇಶದ್ರೋಹಿ ಎಂದೇ ಕರೆಯುತ್ತವೆ. ಕೆಲವು ಮುದ್ರಣ ಮಾಧ್ಯಮಗಳಲ್ಲೂ ಈ ದೋಷ ಕಂಡುಬರುತ್ತಿದೆ. ಆರೋಪಿಯನ್ನು ಅಪರಾಧಿ ಎಂದು ಬಿಂಬಿಸುವ ಹಕ್ಕನ್ನು ಮಾಧ್ಯಮಗಳಿಗೆ ನೀಡಿದವರಾರು ? ಮಾಧ್ಯಮಗಳ ಈ ಪ್ರಮಾದವನ್ನು ನ್ಯಾಯಾಲಯಗಳು ಗಮನಿಸುತ್ತಿಲ್ಲವೇ, ನ್ಯಾಯಶಾಸ್ತ್ರಜ್ಞರು ನೋಡುತ್ತಿಲ್ಲವೇ, ಪೊಲೀಸ್ ಅಧಿಕಾರಿಗಳು ಗಮನಿಸುತ್ತಿಲ್ಲವೇ?

ಇವರೆಲ್ಲರೂ ನ್ಯಾಯ ಮತ್ತು ಕಾನೂನು ವ್ಯವಸ್ಥೆಯನ್ನು ಸಂರಕ್ಷಿಸಲು ಸಾಂವಿಧಾನಿಕವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಅಲ್ಲವೇ? ಮತ್ತೇಕೆ ಈ ಧೋರಣೆ. ದೇಶದ್ರೋಹದ ಆರೋಪ ಹೊತ್ತ ವ್ಯಕ್ತಿಯ ಪಕ್ಕದಲ್ಲಿರುವವರನ್ನೂ ದೇಶದ್ರೋಹಿ ಎಂದು ಆಪಾದನೆ ಮಾಡುವ ಮಟ್ಟಿಗೆ ಉನ್ಮಾದ ಸೃಷ್ಟಿಯಾಗಿದೆ. ಇದಕ್ಕೆ ಯಾರು ಹೊಣೆ? ಈ ದೇಶದ ಸಂವಿಧಾನ, ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಹೊಣೆ ಹೊತ್ತಿರುವ ನ್ಯಾಯಾಂಗ ಸ್ವಪ್ರೇರಣೆಯಿಂದ ಈ ವಿಕೃತ ಪ್ರವೃತ್ತಿಯನ್ನೇಕೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ?

ಸಂಘಟನಾ ಸಾಮರ್ಥ್ಯವನ್ನು ಸಮಾಜದ ಉನ್ನತಿಗೆ ಬಳಸುವುದು ವಿವೇಕಯುತ ನಡೆ. ಆದರೆ ಭಾರತದ ವಕೀಲರ ಸಂಘಗಳು ಭಿನ್ನ ನಿಲುವು ತಾಳುವ ವಕೀಲರಿಗೆ ಅವರ ವೃತ್ತಿಪರ ಕರ್ತವ್ಯ ನಿರ್ವಹಿಸಲೂ ಅವಕಾಶ ನೀಡುತ್ತಿಲ್ಲ. ಧಾರವಾಡದ ಕೋರ್ಟ್ ಆವರಣದಲ್ಲಿ ನಡೆದ ಗಲಭೆ ಮತ್ತು ವಕೀಲರ ಮೇಲೆ ನಡೆದ ಹಲ್ಲೆ ಈ ಪ್ರಶ್ನೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಈ ಮನಸ್ಥಿತಿ ಸೃಷ್ಟಿಯಾಗಲು ಈ ದೇಶದ ಸಾಂಸ್ಕೃತಿಕ ರಾಜಕಾರಣ ಮತ್ತು ಕೋಮು ಧ್ರುವೀಕರಣವೇ ಕಾರಣ ಎಂದು ಹೇಳಬೇಕಿಲ್ಲ. ಬಹುಶಃ ಇದು ಹೀಗೆಯೇ ಮುಂದುವರಿದರೆ ವೈದ್ಯರೂ ಸಹ ನಿರ್ಬಂಧಕ್ಕೊಳಗಾಗುವ ದಿನಗಳು ದೂರ ಇಲ್ಲ. ಇಂದು ಶಾಲಾ ಮಕ್ಕಳು ನಾಟಕ ಮಾಡಲು ಹೆದರುತ್ತಾರೆ, ಕವಿಗಳು ನಾಲ್ಕು ಸಾಲು ಗೀಚಲು ಹೆದರುತ್ತಾರೆ, ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಒಂದು ಚರ್ಚೆ, ಸಂವಾದ, ವಿಚಾರ ಸಂಕಿರಣ ನಡೆಸುವುದಿರಲಿ, ನಡೆಸುವವರಿಗೆ ಜಾಗ ಕೊಡಲೂ ಹೆದರುತ್ತಿವೆ. ಲೇಖಕರು ತಮ್ಮ ಪುಸ್ತಕ ಬಿಡುಗಡೆ ಮಾಡಲು ಹೆದರುತ್ತಿದ್ದಾರೆ. ವಕೀಲರು ವಕಾಲತ್ತು ವಹಿಸಲು ಹೆದರುತ್ತಿದ್ದಾರೆ. ಈ ಭಯದ ವಾತಾವರಣದಲ್ಲಿ ಬದುಕುತ್ತಲೇ ನಾವು ಭಯೋತ್ಪಾದನೆ ಎಂದರೇನು ಎಂದು ಅರ್ಥಮಾಡಿಕೊಂಡಿಲ್ಲ. ಈಗಲೂ ತಾಲಿಬಾನ್ ಮಾತ್ರ ಕಣ್ಣಿಗೆ ಕಾಣುತ್ತದೆ. ಇದು ದೃಷ್ಟಿದೋಷವಲ್ಲ ಎನ್ನುವುದು ಸ್ಪಷ್ಟ.

ಏಕೆಂದರೆ ವಿಷಪೂರಿತ ಮಾತುಗಳನ್ನಾಡುವ ಬಿಜೆಪಿ ನಾಯಕರಾರಿಗೂ ದೃಷ್ಟಿದೋಷವಿಲ್ಲ. ಈ ವಿಷಪೂರಿತ ಮಾತುಗಳೆಲ್ಲವೂ ಎಂದೋ ಬಿತ್ತಿದ ಬೀಜಗಳಿಂದ ಟಿಸಿಲೊಡೆದಿರುವ ಕವಲುಗಳು. ಈ ಕವಲುಗಳನ್ನು ಪೋಷಿಸುವ ವ್ಯವಸ್ಥೆ ಸುರಕ್ಷಿತವಾಗಿದೆ. ಮತ್ತೊಮ್ಮೆ ವ್ಯವಸ್ಥೆ ಬಳಸುವ ಭಾಷೆಯನ್ನೇ ಬಳಸುತ್ತೇವೆ. ಅವರದೇ ಪರಿಭಾಷೆಯಲ್ಲಿ ಮಾತನಾಡುತ್ತೇವೆ. ನಿತ್ಯ ಭಯದಲ್ಲಿ ಬದುಕುತ್ತಿದ್ದರೂ ನಮ್ಮ ಸುತ್ತಲೂ ಭಯೋತ್ಪಾದಕ ವಾತಾವರಣ ಇದ್ದರೂ, ಭಯೋತ್ಪಾದನೆ ಎಂದ ಕೂಡಲೇ ತಾಲಿಬಾನ್‌ನತ್ತ ನೋಡುತ್ತೇವೆ. ಈ ಜಟಿಲ ವಿಷವರ್ತುಲದಲ್ಲಿ ಸಿಲುಕಿರುವ ಹಿಂದೂ, ಮುಸ್ಲಿಮ್, ಕ್ರೈಸ್ತ, ದಲಿತ, ಆದಿವಾಸಿ ಪ್ರಜೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲೂ ಹೆದರುವ ಪರಿಸ್ಥಿತಿ ಎದುರಾಗಿದೆ.

ಈ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವ ಸ್ಥೈರ್ಯ ಜನಸಾಮಾನ್ಯರಲ್ಲಿದೆ ಎಂದು ಇತ್ತೀಚಿನ ಶಾಂತಿಯುತ ಹೋರಾಟಗಳು ನಿರೂಪಿಸುತ್ತವೆ. ಹಾಗಾಗಿಯೇ ಈ ಹೋರಾಟಗಳನ್ನು ವಿಫಲಗೊಳಿಸುವ ಪ್ರಯತ್ನಗಳೂ ಹೆಚ್ಚಾಗುತ್ತಿವೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News