ದ.ಕ.ದಲ್ಲಿ 3 ದಿನಗಳ ಸಂಪೂರ್ಣ ಬಂದ್: ಒಂದು ಅನಿಸಿಕೆ

Update: 2020-04-02 09:46 GMT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19ರ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸಲುವಾಗಿ ಮಾರ್ಚ್ 28ರಿಂದ ಆರಂಭಿಸಿ ಮೂರು ದಿನಗಳ ಕಾಲ ಸಂಪೂರ್ಣ ಬಂದ್ ವಿಧಿಸಬೇಕಾಯಿತು ಎನ್ನಲಾಗುತ್ತದೆ. ಅಂದ ಹಾಗೆ, ಗಾಬರಿಯಾಗಬೇಡಿ ಎಂದು ಜನರಿಗೆ ಮತ್ತೆ ಮತ್ತೆ ನೆನಪಿಸುತ್ತಿರುವಂತಹ ಆಡಳಿತ ವ್ಯವಸ್ಥೆಯೇ ಖುದ್ದು ಗಾಬರಿಗೊಂಡು ಇಡೀ ಜಿಲ್ಲೆಯನ್ನು ಸತತ 3 ದಿನಗಳ ಕಾಲ ಪೂರ್ತಿ ಬಂದ್ ಮಾಡಿರುವುದು ಬಹುದೊಡ್ಡ ವಿಪರ್ಯಾಸವಲ್ಲವೇ? ಸದರಿ ಬಂದ್‌ಅನ್ನು ಮಾರ್ಚ್ 31ರಂದು ಒಂದು ದಿನದ ಮಟ್ಟಿಗೆ ಹಿಂಪಡೆಯಲಾಗುವುದು, ದಿನಸಿ ಮತ್ತು ತರಕಾರಿ ಅಂಗಡಿಗಳನ್ನು ಬೆಳಗ್ಗೆ 6ರಿಂದ ಸಂಜೆ 3ರ ತನಕ ತೆರೆದಿಡಲಾಗುವುದೆಂಬ ಸುದ್ದಿ ತಿಳಿದಾಕ್ಷಣ ಮಿಕ್ಕೆಲ್ಲರಂತೆ ನಾನೂ ಬೆಳ್ಳಂಬೆಳಗ್ಗೆ ಮನೆಯಿಂದ ಹೊರಬಿದ್ದು ಸುಮಾರು 2 ಕಿಮೀ ದೂರದಲ್ಲಿದ್ದ ಸೂಪರ್ ಮಾರ್ಕೆಟೊಂದರ ಕಡೆಗೆ ಪಯಣ ಬೆಳೆಸಿದೆ. ಅಲ್ಲಿಗೆ ತಲುಪಿದಾಗ ಆಗಲೇ ಸುಮಾರು ನೂರು ನೂರೈವತ್ತರಷ್ಟು ಜನ ಸರದಿಯ ಸಾಲಿನಲ್ಲಿ ನಿಂತುಕೊಂಡಿದ್ದ ದೃಶ್ಯ ನೋಡಿ ಒಂದು ಕ್ಷಣ ಆತಂಕವಾದರೂ ದೊಡ್ಡ ಮಳಿಗೆಯಾದ ಕಾರಣ ಕೊರತೆ ಉದ್ಭವಿಸದೆಂಬ ಆಶಾಭಾವದಿಂದ ಸಾಲಿಗೆ ಸೇರಿಕೊಂಡೆ. ಅಲ್ಲಿದ್ದ ಪೊಲೀಸನೊಬ್ಬ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಆಗಾಗ ಎಚ್ಚರಿಸುತ್ತಾ ಇದ್ದರೂ ಹೆಚ್ಚಿನವರು 2.5 ಮೀಟರ್‌ನ ಬದಲು ಬರೀ ಒಂದೆರಡು ಅಡಿ ಅಂತರವನ್ನಷ್ಟೇ ಕಾಯ್ದುಕೊಳ್ಳುತ್ತಿದ್ದರು. ಸುಮಾರು 2 ತಾಸು ಕ್ಯೂನಲ್ಲಿ ನಿಂತ ಬಳಿಕ ಮಳಿಗೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಿತು. ಅಲ್ಲಿ ನೋಡಿದರೆ ಹೊರಗೆ ಸರತಿಯ ಸಾಲಿನಲ್ಲಿ ಇದ್ದ ಅಲ್ಪಸ್ವಲ್ಪ ಶಿಸ್ತೂ ಒಳಗೆ ಇರದಿರುವುದನ್ನು ಗಮನಿಸಿದೆ. ಅನೇಕ ಮಂದಿ ‘ಗಾಬರಿಕೊಳ್ಳುವಿಕೆ’ ಮಾಡುತ್ತಿರುವಂತೆ ಕಂಡಿತು. ಅಂತೂ ಇಂತೂ ಮನೆಗೆ ಬೇಕಿದ್ದ ಕೆಲವೊಂದು ಅಗತ್ಯ ವಸ್ತುಗಳನ್ನು ಖರೀದಿಸಿ ಅಂಗಡಿಯಿಂದ ಹೊರಬಿದ್ದು ಮರಳಿ ಮನೆಗೆ ಮುಟ್ಟುವಷ್ಟರಲ್ಲಿ ಬರೋಬ್ಬರಿ ಮೂರೂವರೆ ತಾಸು ಕಳೆದಿತ್ತು. ಇದು ತಕ್ಕಮಟ್ಟಿಗೆ ಸುಶಿಕ್ಷಿತ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ಕಥೆಯಾದರೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ದಾರಿಯಲ್ಲಿ ಸಿಕ್ಕ ಹಲವಾರು ಸಣ್ಣಪುಟ್ಟ ತರಕಾರಿ, ದಿನಸಿ ಅಂಗಡಿಗಳಲ್ಲಿನ ಜನಜಂಗುಳಿಯ ಪರಿಸ್ಥಿತಿ ನೋಡಿದರೆ ಯಾರಿಗಾದರೂ ಗಾಬರಿಯಾಗಬೇಕು. ಹೆಚ್ಚಿನೆಡೆ ಇದ್ದಬದ್ದ ಸಾಮಗ್ರಿಗಳಿಗೋಸ್ಕರ ಮುಗಿಬೀಳುವ ತುರ್ತಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಗಾಳಿಗೆ ತೂರಲಾಗಿತ್ತು. ಒಬ್ಬರ ಮೈ ಇನ್ನೊಬ್ಬರಿಗೆ ಇನ್ನೇನು ತಾಗಿಬಿಡುತ್ತದೆ ಎಂಬಷ್ಟು ಹತ್ತಿರದಲ್ಲಿ ನಿಂತುಕೊಂಡು ಖರೀದಿ ಮಾಡುತ್ತಿದ್ದ ಜನರಲ್ಲಿ ಕೊರೋನ ವೈರಸ್‌ನ ಭೀತಿ ಎರಡನೇ ಸ್ಥಾನ ಪಡೆದುಕೊಂಡಿದ್ದಂತೆ ತೋರುತ್ತಿತ್ತು. ಬಹುಶಃ 3 ದಿನಗಳ ನಂತರ ಮನೆಯಲ್ಲಿದ್ದ ದಾಸ್ತಾನು ಕರಗಿರುವ ಹಿನ್ನೆಲೆಯಲ್ಲಿ ಹಿಂಡುಗೂಡುವ ಪ್ರವೃತ್ತಿ ಮುನ್ನೆಲೆಗೆ ಬಂದಿರುವುದೇ ಇದಕ್ಕೆ ಒಂದು ಕಾರಣ ಇರಬಹುದು. ಎರಡನೆಯದಾಗಿ ಪೊಲೀಸರು ಸರಕು ಸಾಗಾಟದ ವಾಹನಗಳಿಗೂ ಅಡ್ಡಿಪಡಿಸುವ ವರ್ತಮಾನಗಳ ಹಿನ್ನೆಲೆಯಲ್ಲಿ ಎಲ್ಲಾದರೂ ಅಂಗಡಿಯಲ್ಲಿ ಸಾಮಗ್ರಿಗಳ ಸ್ಟಾಕ್ ಖಾಲಿಯಾಗಿಬಿಟ್ಟರೆ ಎಂಬ ಬಲವಾದ ಭೀತಿಯೊಂದು ಜನರನ್ನು ಕಾಡಿರಲೂ ಸಾಕು.

ಕೆಲವು ಅಂಗಡಿಗಳಲ್ಲಿ ನಿಜಕ್ಕೂ ಇದ್ದಬದ್ದ ದಾಸ್ತಾನೆಲ್ಲ ಬಹುಬೇಗನೆ ಖಾಲಿಯಾಗಿ ಜನ ಸಪ್ಪೆ ಮೋರೆ ಹಾಕಿ ಹಿಂದಿರುಗಿದ ಘಟನೆಗಳೂ ನಡೆದಿವೆ. ನಾಳೆಯ ಕುರಿತ ಅಸ್ಪಷ್ಟತೆ - ನಾಳೆಯಿಂದ ಬಂದ್ ಮತ್ತೆ ಮುಂದುವರಿಯುತ್ತದೋ ಏನೋ ಎಂದು ಗೊತ್ತಿರದ ಸ್ಥಿತಿ - ಆತಂಕವನ್ನು ಸೃಷ್ಟಿಸಿ ಎಷ್ಟು ಸಾಧ್ಯವೋ ಅಷ್ಟೆಲ್ಲವನ್ನೂ ಇಂದೇ ಖರೀದಿಸಿ ಬಿಡೋಣ ಎಂಬ ಮನಃಸ್ಥಿತಿ ನಿರ್ಮಾಣವಾದ ಫಲವಾಗಿ ಜನರಲ್ಲಿ ಒಂದು ವಿಧದ ಮಂದೆ ಸ್ವಭಾವ ಉಂಟಾಗಿರಬಹುದು. ಇದೆಲ್ಲವನ್ನು ಯಾಕೆ ಇಷ್ಟು ವಿವರವಾಗಿ ಹೇಳಬೇಕಾಯಿತೆಂದರೆ ಸತತ 3ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ನಾಲ್ಕನೆಯ ದಿನ ಬಂದ್ ಹಿಂದೆಗೆದುಕೊಂಡಾಗ ಜನ ಅಗತ್ಯ ವ ್ತುಗಳ ಖರೀದಿಗಾಗಿ ನಿಸ್ಸಂದೇಹವಾಗಿಯೂ ಮುಗಿ ಬೀಳಲಿದ್ದಾರೆ ಎಂಬ ಭವಿಷ್ಯವಾಣಿಯನ್ನು ಶಾಲಾ ಮಕ್ಕಳು ಕೂಡ ಮೊದಲೇ ಹೇಳಬಲ್ಲರು. ಹೀಗಿರುವಾಗ ಬುದ್ಧಿವಂತರ ಜಿಲ್ಲೆ ಎಂದು ಹೆಸರು ಪಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ, ಇಲ್ಲಿನ ಕಾರ್ಪೊರೇಟರ್‌ಗಳು, ಶಾಸಕರು, ಸಂಸದರು ಮುಂತಾದ ದಿಗ್ಗಜರ ತಲೆಗೆ ಈ ಸರಳ ಸತ್ಯವೇಕೆ ಹೊಳೆಯಲಿಲ್ಲ?

ಜನಜಂಗುಳಿಯ ಪರಿಣಾಮವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯವಾಗಿ ಸಂಪೂರ್ಣ ಬಂದ್ ಉದ್ದೇಶ ಸಂಪೂರ್ಣ ವಿಫಲವಾಗಲಿದೆ ಎಂದೇಕೆ ಅರ್ಥವಾಗಲಿಲ್ಲ? ಕೋವಿಡ್-19ರ ವಿರುದ್ಧದ ಸಮರದಲ್ಲಿ ಜನಸಾಮಾನ್ಯರಿಗೆ, ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ, ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆಯುಳ್ಳ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳುವ ವಿಷಯದಲ್ಲಿ ಅಧಿಕಾರಿಗಳು, ರಾಜಕಾರಣಿಗಳು, ವಿವಿಧ ರಾಜಕೀಯ ಪಕ್ಷಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು, ವರ್ತಕರು ಮುಂತಾದವರು ಸೇರಿದಂತೆ ಜವಾಬ್ದಾರಿಯ ಸ್ಥಾನಗಳಲ್ಲಿರುವವರ ನಡುವೆ ಪರಸ್ಪರ ಸಮನ್ವಯದ ಕೊರತೆಯೇ ಇಂತಹದೊಂದು ಪರಿಸ್ಥಿತಿಗೆ ಕಾರಣವಿರಬಹುದೇ?

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News