ಕೊರೋನ ವೈರಸ್‌ಗೆ ಕೋಮು ಬಣ್ಣ ನೀಡಬೇಡಿ: ಪಕ್ಷದ ನಾಯಕರಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಎಚ್ಚರಿಕೆ

Update: 2020-04-04 12:13 IST
ಕೊರೋನ ವೈರಸ್‌ಗೆ ಕೋಮು ಬಣ್ಣ ನೀಡಬೇಡಿ: ಪಕ್ಷದ ನಾಯಕರಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಎಚ್ಚರಿಕೆ
  • whatsapp icon

ಹೊಸದಿಲ್ಲಿ, ಎ.4: ಕೊರೋನ ವೈರಸ್‌ಗೆ ಯಾವುದೇ ಕೋಮು ಬಣ್ಣ ನೀಡದಂತೆ ಯಾವುದೇ ವಿಭಜನೆ ಹಾಗೂ ವ್ಯತ್ಯಾಸವನ್ನು ಸೃಷ್ಟಿಸುವುದರಿಂದ ದೂರವಿರಿ ಎಂದು ತನ್ನ ಪಕ್ಷದ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಎಚ್ಚರಿಕೆ ನೀಡಿದರು.

ಗುರುವಾರ ಸಂಜೆ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಿದ ನಡ್ಡಾ, ಪಕ್ಷದ ಯಾವುದೇ ನಾಯಕರು ಪ್ರಚೋದನಾತ್ಮಕ ಅಥವಾ ವಿಭಜನಾತ್ಮಕ ಹೇಳಿಕೆಯನ್ನು ನೀಡಬಾರದು. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಆ ರಾಜ್ಯದ ಸರಕಾರಗಳಿಗೆ ಹಾಗೂ ಪ್ರಧಾನಮಂತ್ರಿಗಳ ಪ್ರಯತ್ನಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.

 ದೇಶವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ. ವೈರಸ್ ಹಾಗೂ ಕಾಯಿಲೆ ವಿಶ್ವದಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿದೆ. ಯಾರೋಬ್ಬರೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ನಡ್ಡಾ ತಿಳಿಸಿದರು.

ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದ ತಬ್ಲೀಗಿ ಜಮಾಅತ್ ಸಭೆಯ ವಿಚಾರ ಬಂದಾಗಲೂ ಇದನ್ನು ಪುನರುಚ್ಚರಿಸಲಾಯಿತು. ಇದನ್ನು ಯಾರೂ ಕೋಮುವಾದಿ ವಿಚಾರವನ್ನಾಗಿ ಮಾಡಬಾರದು ಎಂಬ ನಿರ್ದೇಶನವಿದೆ. ಅಲ್ಪ ಸಂಖ್ಯಾತ ಮುಖಂಡರು ಮಾತ್ರ ಅವರು ಬಯಸಿದರೆ ಆ ಕುರಿತು ಹೇಳಿಕೆ ನೀಡಬಹುದು. ವೈರಸ್ ವಿರುದ್ಧ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ನಡ್ಡಾ ತಿಳಿಸಿದರು.

 ಬಿಜೆಪಿಯ ಪಕ್ಷದ ಹೆಚ್ಚಿನ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದ ತಬ್ಲೀಗಿ ಜಮಾಅತ್ ಸಭೆಯ ವಿಚಾರವನ್ನು 'ಕೊರೋನ ಜಿಹಾದ್' ಹಾಗೂ 'ಮರ್ಕಝ್ ಪಿತೂರಿ' ಎಂದು ಕರೆಯುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News