ಕೊರೋನಕ್ಕಿಂತಲೂ ವೇಗವಾಗಿ ಹಬ್ಬುತ್ತಿರುವ ಇನ್ನೊಂದು ವೈರಾಣು

Update: 2020-04-11 17:12 GMT

ಅನಾದಿ ಕಾಲದಿಂದಲೂ ಮನುಕುಲವನ್ನು ಬಾಧಿಸುತ್ತಲೇ ಬಂದಿರುವ ಪ್ಲೇಗ್, ಫ್ಲೂ, ಕಾಲರಾ, ಏಡ್ಸ್ಸ್, ಮಂಗನ ಕಾಯಿಲೆ, ಹಕ್ಕಿ ಜ್ವರ, ಹಂದಿ ಜ್ವರ ಮೊದಲಾದ ಒಂದಿಲ್ಲೊಂದು ಸಾಂಕ್ರಾಮಿಕ ಕಾಯಿಲೆಗಳು ಲೆಕ್ಕವಿಲ್ಲದಷ್ಟು ಜೀವಗಳನ್ನು ಆಹುತಿ ಪಡೆದುಕೊಂಡಿರುವ ಸತ್ಯ ನಮಗೆಲ್ಲ ತಿಳಿದಿದೆ. ಅದೇ ವೇಳೆ ಇವೆಲ್ಲಾ ವ್ಯಾಧಿಗಳಿಗೂ ಸೂಕ್ತ ಔಷಧಗಳನ್ನು ಕಂಡುಹಿಡಿಯುವ ಮೂಲಕ ಮಾನವರು ಅವುಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನುವುದೂ ಅಷ್ಟೇ ನಿಜ. ಇದೀಗ ಜಗತ್ತಿನಾದ್ಯಂತ ಲಕ್ಷಾಂತರ ಮಾನವರನ್ನು ಬಾಧಿಸಿ, ಕೋಟ್ಯಂತರ ಜನರನ್ನು ಆತಂಕ, ಸಂಕಷ್ಟಗಳಿಗೆ ತಳ್ಳಿರುವ ಕೊರೋನ ವೈರಸ್‌ಗೂ ಪರಿಣಾಮಕಾರಿ ಔಷಧವನ್ನು ಒಂದೆರಡು ವರ್ಷಗಳೊಳಗಾಗಿ ಕಂಡುಹಿಡಿಯಲಾಗುವುದರಲ್ಲಿ ಸಂಶಯವಿಲ್ಲ. ಆದರೆ ಸೋಜಿಗದ ವಿಷಯವೆಂದರೆ ಭಾರತದಲ್ಲಿ ಕಳೆದ ಸುಮಾರು ಹತ್ತು ದಶಕಗಳಿಂದ ತಳವೂರಿರುವ ಒಂದು ಮಹಾಭೀಕರ ವ್ಯಾಧಿಗೆ ಮದ್ದು ತಕ್ಷಣಕ್ಕೇ ಲಭ್ಯವಿದ್ದರೂ ಏನು ಮಾಡಿದರೂ ಅದನ್ನು ಮಟ್ಟಹಾಕಲು ಸಾಧ್ಯವೇ ಆಗುತ್ತಿಲ್ಲ. ಇದು ವಿಚಿತ್ರವೆನಿಸಿದರೂ ಸತ್ಯ! ಇದುವರೆಗೆ ಅಸಂಖ್ಯಾತ ಜೀವಗಳನ್ನು ಬಲಿ ಪಡೆದುಕೊಂಡು, ಲಕ್ಷಾಂತರ ಕುಟುಂಬಗಳನ್ನು ಆತಂಕಕ್ಕೆ ತಳ್ಳಿರುವ ಆ ಹೆಮ್ಮಾರಿಯೇ ‘ಸಾವರ್-23’ ಎಂಬ ಕೋಮು ವ್ಯಾಧಿ. ಇದು ಕೋಮು ವೈರಾಣುವಿನಿಂದ ಉಂಟಾಗುವ ಕಾಯಿಲೆಯಾಗಿದೆ.

ಮೂಲತಃ ಮಧ್ಯಯುಗೀನ ಯುರೋಪಿನಲ್ಲಿ ಹುಟ್ಟಿ ಆಮೇಲೆ ಇಟಲಿಯಲ್ಲಿ ಫ್ಯಾಶಿ ವೈರಾಣುವಾಗಿ, ಜರ್ಮನಿಯಲ್ಲಿ ನಾಝಿ ವೈರಾಣುವಾಗಿ ರೂಪಾಂತರಗೊಂಡ ಕೋಮು ವೈರಸ್ ಭಾರತಕ್ಕೆ ಕಾಲಿಟ್ಟ ನಂತರ ಮತ್ತೆ ಬದಲಾವಣೆಗೊಂಡು ‘ಸಾವರ್-23’ ಎಂಬ ಮಹಾಮಾರಿಯನ್ನು ದೇಶಾದ್ಯಂತ ಹಬ್ಬಿಸಿಬಿಟ್ಟಿದೆ. ಪರೋಕ್ಷವಾಗಿ ಕಾರ್ಯಾಚರಿಸುವ ಇದರ ವೈಶಿಷ್ಟವೆಂದರೆ ಮೊದಲು ಇಂದ್ರಿಯಗಳ ಮೂಲಕ ನೇರವಾಗಿ ಮನುಷ್ಯನ ಮಿದುಳನ್ನು ಪ್ರವೇಶಿಸುವ ಇದು ಅಲ್ಲಿ ಕೋಮು ನಂಜನ್ನು ಉತ್ಪಾದಿಸಿ ಆ ಮೂಲಕ ಆತ ನಿರ್ದಿಷ್ಟ ಸಮುದಾಯಗಳಿಗೆ ಸೇರಿದ ಮನುಷ್ಯರನ್ನು ದ್ವೇಷಿಸುವಂತೆ ಮಾಡಿ ಅಂತಿಮವಾಗಿ ಅವರೆಲ್ಲರನ್ನು ನಿರ್ನಾಮಗೊಳಿಸಲು ಪ್ರಚೋದಿಸುತ್ತದೆ. ಭಾರತದ ಸಾಂಸ್ಕೃತಿಕ ವಲಯ, ಮಾಧ್ಯಮರಂಗ, ಶಿಕ್ಷಣ ಕ್ಷೇತ್ರ, ಆಡಳಿತ ಯಂತ್ರ, ಸರಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳನ್ನೂ ಬಿಡದೆೆ ಸಮಾಜದ ನಾನಾ ಸ್ಥರಗಳಲ್ಲಿ ಹಬ್ಬಿರುವ ಈ ‘ಸಾವರ್-23’ ಅನ್ನು ನಿಗ್ರಹಿಸುವಂತಹ ಪರಿಣಾಮಕಾರಿ ಔಷಧ ಕೈಗೆಟಕುವಂತಿದ್ದರೂ ಸರಕಾರಗಳು ಮನಸ್ಸು ಮಾಡದಿರುವ ಕಾರಣ ಅದರ ವೈರಾಣು ದಿನೇ ದಿನೇ ಬೆಳೆಯುತ್ತಾ ತನ್ನ ಸಂತಾನವನ್ನು ವಿಪರೀತವಾಗಿ ವೃದ್ಧಿಸಿಕೊಳ್ಳುತ್ತಿದೆ. ನಮ್ಮ ಸರಕಾರಗಳು ಕೋವಿಡ್-19ರ ಮಾದರಿಯ ಸಮರೋಪಾದಿ ಕ್ರಮಗಳನ್ನು ಕೋಮು ವೈರಾಣುವಿನ ಹತ್ತಿಕ್ಕುವಿಕೆಗೂ ಬಳಸಿದವೆಂದಾದರೆ ಅದಕ್ಕಿಂತ ದೊಡ್ಡ ದೇಶ ಸೇವೆಯ ಕಾರ್ಯ ಇನ್ನೊಂದಿರದು. ಆದರೆ ಸದ್ಯದ ಪರಿಸ್ಥಿತಿಯಲ್ಲಂತೂ ಇದು ಕನಸಿನ ಗಂಟಾಗಿಯೇ ಉಳಿಯಲಿದೆ.

‘ಸಾವರ್-23’ ವ್ಯಾಧಿಗ್ರಸ್ತರು ಸದಾಕಾಲವೂ ಜಪಿಸುವ ಸುಪರಿಚಿತ ಮಂತ್ರಗಳೆಂದರೆ ‘ಅಲ್ಪಸಂಖ್ಯಾತರ ತುಷ್ಠೀಕರಣ’, ‘ಮತಾಂತರ’, ‘ಗೋಹತ್ಯೆ’, ‘ಲವ್ ಜಿಹಾದ್’ ಇತ್ಯಾದಿ ಇತ್ಯಾದಿ. ಅಲ್ಪಸಂಖ್ಯಾತರ ಮೇಲೆ ದ್ವೇಷ ಕಾರಲು ನಿರಂತರವಾಗಿ ಹೊಸ ಹೊಸ ವಿಷಯಗಳನ್ನು ಅರಸುತ್ತಲೇ ಇರುವ ಈ ವಿಕೃತ ಮೆದುಳುಗಳಿಗೆ ಈಗ ಕೋವಿಡ್-19 ಕಾಯಿಲೆಯೂ ಒಂದು ವಿನೂತನ ಅಸ್ತ್ರವಾಗಿ ಕಂಡುಬಂದಿರುವುದರಲ್ಲಿ ಅಚ್ಚರಿಯೇನಿದೆ? ಪ್ರಾಯಶಃ ಈ ಆವಿಷ್ಕಾರಗಳ ಉದ್ದೇಶ ಮಹಾದಂಡನಾಯಕನ ಗಮನವನ್ನು ತಮ್ಮೆಡೆ ಸೆಳೆದು, ಆತನ ಕೃಪೆಗೆ ಪಾತ್ರರಾಗಿ ಸಚಿವ ಸ್ಥಾನವನ್ನೋ ಅಥವಾ ಇನ್ಯಾವುದಾದರೂ ಲಾಭದಾಯಕ ಹುದ್ದೆಯನ್ನೋ ಗಿಟ್ಟಿಸಿಕೊಳ್ಳುವುದಾಗಿರಬೇಕೆಂದು ತೋರುತ್ತದೆ. ಬಹುಶಃ ಹೀಗೇ ಯೋಚಿಸಿರಬಹುದಾದ ರಾಜ್ಯದ ಖ್ಯಾತ ಸಂಸದೆಯೊಬ್ಬರು ‘‘ಕೊರೋನ ಜಿಹಾದ್’’ ಎಂಬ ಹೊಸ ಮಂತ್ರವೊಂದನ್ನು ಆವಿಷ್ಕರಿಸಿಯೇ ಬಿಟ್ಟಿದ್ದಾರೆ. ಇದರರ್ಥ ಏನೆಂದರೆ ಇಸ್ಲಾಮ್ ಧರ್ಮೀಯರು ಉದ್ದೇಶ ಪೂರ್ವಕವಾಗಿ ಹಿಂದೂ ಧರ್ಮೀಯರ ವಿರುದ್ಧ ಒಂದು ‘ವ್ಯಾಧಿ ಯುದ್ಧ’ ನಡೆಸುತ್ತಿದ್ದಾರೆ. ಕೋವಿಡ್-19 ರೋಗಕ್ಕೂ ಧರ್ಮಕ್ಕೂ ಏನು ಸಂಬಂಧ ಎಂದು ನೋಡಹೊರಟರೆ ಅವೆರಡಕ್ಕೂ ನಂಟು ಕಲ್ಪಿಸುವುದೇ ‘ಸಾವರ್-23’ ರೋಗಪೀಡಿತ ಮನಸ್ಸುಗಳು ಎನ್ನುವ ಸತ್ಯಾಂಶ ಸ್ಪಷ್ಟವಾಗಿ ಗೋಚರಿಸುತ್ತದೆ! ಇವರ ಕೈಗಳಿಗೆ ಈ ವಿನೂತನ ಅಸ್ತ್ರವನ್ನು ದಯಪಾಲಿಸಿರುವುದೇ ತಬ್ಲೀಗಿ ಜಮಾಅತ್.

ಮಲೇಶಿಯದಿಂದ ಬಂದ ಮುನ್ನೆಚ್ಚರಿಕೆಯ ಹೊರತಾಗಿಯೂ ಕಳೆದ ತಿಂಗಳು ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ನಡೆಸಿದ ಪರಿಣಾಮವಾಗಿ ದೇಶದ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರಿಗೆ (ಒಟ್ಟು ಕೊರೋನ ಪೀಡಿತರ ಪೈಕಿ ಶೇ.30ಕ್ಕೂ ಅಧಿಕ) ಕೋವಿಡ್-19 ತಗಲುವಂತೆ ಮಾಡಿದ ತಬ್ಲೀಗಿ ಜಮಾಅತ್ ಒಂದು ಅತ್ಯಂತ ಬೇಜವಾಬ್ದಾರಿತನದ, ಅತ್ಯಂತ ಮೂರ್ಖತನದ, ಅತ್ಯಂತ ಅಕ್ಷಮ್ಯವಾದ ಅಪರಾಧವನ್ನೆಸಗಿರುವುದರಲ್ಲಿ ಎರಡು ಮಾತಿಲ್ಲ. ಅದೇ ವೇಳೆ ಗೊತ್ತಿದ್ದೂ ಗೊತ್ತಿದ್ದೂ ನಿಝಾಮುದ್ದೀನ್ ಮಾತ್ರವಲ್ಲದೆ ಇಂತಹ ಇನ್ನಿತರ ಕಾರ್ಯಕ್ರಮಗಳಿಗೂ ವಿದೇಶಗಳಿಂದ ಆಗಮಿಸಿದವರಿಗೆ ವೀಸಾ ನೀಡಿದ ಮತ್ತು ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ ಅಧಿಕಾರಿಗಳು ಕೂಡ ಕ್ರಿಮಿನಲ್ ಅಪರಾಧ ಮಾಡಿದ್ದಾರೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇದರ ಬಗ್ಗೆ ಹಿರಿಯ ಅಧಿಕಾರಿಗಳು, ಆಳ್ವಿಕರು ಮತ್ತು ಅವರ ಸಾಕು ಮಾಧ್ಯಮಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ. ತಬ್ಲೀಗಿ ಜಮಾಅತ್ ಮಾಡಿರುವಂತಹುದೇ ಹುಂಬ ಕೃತ್ಯಗಳನ್ನು ಇನ್ನೂ ಅನೇಕರು ಮಾಡಿರುವುದಾಗಿ ತಿಳಿದು ಬಂದಿದೆ.

ಉದಾಹರಣೆಗೆ ಮಾರ್ಚ್ 20ರಂದು ಮಧ್ಯ ಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದ ಶ್ರಾದ್ಧ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ ಕುಟುಂಬದ 11 ಸದಸ್ಯರಿಗೆ ಕೊರೋನ ಸೋಂಕು ಇರುವುದಾಗಿ ದೃಢಪಟ್ಟಿದೆ. ಸದರಿ ತಿಥಿ ಸಮಾರಂಭದಲ್ಲಿ ಸುಮಾರು ಎರಡು ಸಾವಿರ ಜನ ಪಾಲ್ಗೊಂಡಿದ್ದರೆಂದು ವರದಿಯಾಗಿದೆ. ತಾಯಿಯ ಅಂತ್ಯಕ್ರಿಯೆಗೋಸ್ಕರ ದುಬೈಯಿಂದ ವಾಪಸಾಗಿದ್ದ ಮಗನಿಗೆ ಕೊರೋನ ಲಕ್ಷಣಗಳಿದ್ದರೂ ಅದನ್ನು ಕಡೆಗಣಿಸಿದ ಆತ ಆಪ್ತೇಷ್ಟರ ಮನೆಗಳಿಗೆ ಭೇಟಿ ನೀಡಿ ಅವರನ್ನೆಲ್ಲ ಶ್ರಾದ್ಧಕ್ಕೆ ಆಹ್ವಾನಿಸಿದ್ದರು! ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲ ತರುವಾಯ ಯಾರ್ಯಾರ ಸಂಪರ್ಕದಲ್ಲಿ ಬಂದಿದ್ದಾರೆಂಬುದನ್ನು ಪತ್ತೆಹಚ್ಚಿದ ಬಳಿಕ ಜಿಲ್ಲೆಯ ಸುಮಾರು 26,000 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಮಾರ್ಚ್ 25ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರಾಮಲಲ್ಲಾನ ಮೂರ್ತಿಯನ್ನು ತಾತ್ಕಾಲಿಕ ಸ್ಥಳದಿಂದ ಮಾನಸ ಭವನ ಸಮೀಪದಲ್ಲಿರುವ ನೂತನ ಕಟ್ಟಡವೊಂದಕ್ಕೆ ಸ್ಥಳಾಂತರಿಸಿದ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು ನೂರು ಜನ ಭಾಗವಹಿಸಿದ್ದರೆಂದು ತಿಳಿದು ಬಂದಿದೆ. ಇವರನ್ನೆಲ್ಲ ಸೋಂಕು ತನಿಖೆಗೆ ಒಳಪಡಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಯಾವ ಮಾಹಿತಿಯೂ ಲಭ್ಯವಿಲ್ಲ. ವಿಚಿತ್ರವೆಂದರೆ ಈ ಘಟನೆಯನ್ನು ವರದಿ ಮಾಡಿದುದಕ್ಕಾಗಿ ‘ದಿ ವೈರ್’ ಪತ್ರಿಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ!

ಎಪ್ರಿಲ್ 2ರಂದು ಹಲವಾರು ಜಾಗಗಳಲ್ಲಿ ರಾಮ ನವಮಿಯನ್ನು ಆಚರಿಸಲಾಗಿದ್ದು ಆ ಸಂದರ್ಭದಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಘಟನೆಗಳೂ ವರದಿಯಾಗಿವೆ. ಎಪ್ರಿಲ್ 3ರಂದು ರಾಜಸ್ಥಾನದ ಬುಂದಿ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾದ ‘ನೇಜಾ ಕಿ ಸವಾರಿ’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಮಂದಿ ಪಾಲ್ಗೊಂಡಿದ್ದರು. ‘ನೇಜಾ ಕಿ ಸವಾರಿ’ಯಲ್ಲಿ ಭಾಗವಹಿಸಿದವರು ಬಳಿಕ ಸಮೀಪದ ಭಿಲ್ವಾರಾ ಜಿಲ್ಲೆಯ ಜನರನ್ನು ಸಂಪರ್ಕಿಸಿರಬಹುದಾದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯ ಸುಮಾರು 28 ಲಕ್ಷ ಜನರನ್ನು ವಿಚಾರಿಸಲಾಗುತ್ತಿದೆ. ಎಪ್ರಿಲ್ 5ರಂದು ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಸುಮಾರು 150 ಭಕ್ತರನ್ನು ಚರ್ಚ್‌ನಲ್ಲಿ ಒಟ್ಟು ಸೇರಿಸಿ ಪಾಮ್ ಸಂಡೆ ಹಬ್ಬ ಆಚರಿಸಿದ ಪಾಸ್ಟರ್ ಒಬ್ಬರನ್ನು ಬಂಧಿಸಲಾಗಿದೆ.

    ಎಪ್ರಿಲ್ 5ರಂದು ಬೆಂಗಳೂರಿನಲ್ಲೂ ಸಂತ ಥಾಮಸ್ ಟೌನ್‌ನ ಚರ್ಚ್ ಒಂದರಲ್ಲಿ ಸುಮಾರು 15 ಜನರೊಂದಿಗೆ ಪ್ರಾರ್ಥನೆ ನಡೆಸಿದ್ದ ಪಾದ್ರಿ ಮತ್ತಾತನ ಮಗನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೀಗಿರುವಾಗ ‘ಕೊರೋನ ಜಿಹಾದ್’ ಶಬ್ದಪುಂಜದ ಹುಟ್ಟಿಗೆ ಕಾರಣವಾಗಿರುವ ಕುತರ್ಕದ ಅನುಸಾರ ಮೇಲಿನ ಘಟನೆಗಳನ್ನೂ ಧರ್ಮದೊಂದಿಗೆ ಥಳಕುಹಾಕಿ ‘ಕೊರೋನ ಮಹಾಭಾರತ್’ ಮತ್ತು ‘ಕೊರೋನ ಕ್ರುಸೇಡ್’ ಎಂದು ಕರೆಯಬಹುದಲ್ಲವೇ? ಹಾಗೆ ಮಾಡುವುದು ಸರಿಯೇ? ಕೋಮುವಾದಿಗಳು ಕೋವಿಡ್-19ನ್ನು ಹೊಸ ಅಸ್ತ್ರವಾಗಿ ಮಾಡಿಕೊಂಡ ನಂತರದಲ್ಲಿ ದೇಶದುದ್ದಕ್ಕೂ ಕೋಮುವಾರು ಘಟನೆಗಳಲ್ಲಿ ಏಕಾಏಕಿ ಏರಿಕೆಯಾಗಿದೆ. ಕೋಮುವಾದಿಗಳ ಆಡುಂಬೊಲವೆಂದೇ ಕುಖ್ಯಾತಿ ಪಡೆದಿರುವ ದ.ಕ. ಜಿಲ್ಲೆಯಲ್ಲೇ ಇದುವರೆಗೆ ಕನಿಷ್ಠ ಏಳೆಂಟು ಘಟನೆಗಳು ನಡೆದಿವೆ. ಇವುಗಳ ಪೈಕಿ ಕೆಲವು ಪ್ರಚೋದನಕಾರಿ, ಅವಹೇಳನಕಾರಿ ಸಂದೇಶಗಳ ರೂಪದಲ್ಲಿದ್ದರೆ ಇನ್ನೊಂದೆಡೆ ಆಹಾರದ ಕಿಟ್ ವಿತರಿಸುತ್ತಿದ್ದ ಮುಸ್ಲಿಮ್ ಸಂಘಟನೆಯವರಿಗೆ ತಡೆಯೊಡ್ಡಿರುವ ಘಟನೆಯೂ ನಡೆದಿದೆ. ಎಪ್ರಿಲ್ 5ರ ದೀಪ ಹಚ್ಚುವ ಕಾರ್ಯಕ್ರಮದ ನಂತರ ಬಂಟ್ವಾಳದಲ್ಲಿ ಅಲ್ಪಸಂಖ್ಯಾತರ ಮನೆಗಳ ಮೇಲೆ ಕಲ್ಲುಗಳನ್ನು ತೂರಲಾಗಿದೆ. ಮುಧೋಳದ ಬಿದರಿ ಗ್ರಾಮದಲ್ಲಿ ‘‘ನಿಮ್ಮಿಂದಲೇ ಕೊರೋನ ವೈರಸ್ ಹಬ್ಬುತ್ತಿದೆ’’ ಎಂದು ಆರೋಪಿಸಿ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗಿದೆ.

ದಿಲ್ಲಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಮರಳಿದ್ದ 30ರ ಹರೆಯದ ಯುವಕನೊಬ್ಬ ಗುಂಪು ಹತ್ಯೆಗೆ ಬಲಿಯಾಗಿದ್ದಾನೆ. ಸರಕಾರಗಳು ಈ ಕೂಡಲೇ ಎಚ್ಚತ್ತುಕೊಂಡು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಈ ‘ಸಾವರ್-23’ ವ್ಯಾಧಿಗ್ರಸ್ತರು ಇನ್ನಷ್ಟು ದಿಟ್ಟತನದಿಂದ ಹೆಚ್ಚೆಚ್ಚು ಕೋಮುವಾರು ಘಟನೆಗಳನ್ನು ನಡೆಸಲಿರುವುದು ಖಚಿತ. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ‘‘ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’’ ಎಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ಮಾನ್ಯ ಮುಖ್ಯಮಂತ್ರಿ ‘‘ಹೇಳೋದು ಶಾಸ್ತ್ರ ಇಕ್ಕೋದು ಗಾಳ’’ ಎಂಬ ಗಾದೆಗನುಸಾರವಾಗಿ ನಡೆದುಕೊಳ್ಳಬಾರದು. ಅವರು ಕೋಮುದ್ವೇಷ ಕಕ್ಕುವ ಸಂಘಪರಿವಾರಿಗರು ಮತ್ತು ತಮ್ಮ ಪಕ್ಷದ ಸಾಮಾನ್ಯ ಸದಸ್ಯರ ವಿರುದ್ಧ ಮಾತ್ರವಲ್ಲ ಮೊತ್ತಮೊದಲಿಗೆ ‘ಎಲ್ಲರೂ ಒಂದಾಗಿ ದೀಪ ಹಚ್ಚುವುದರಿಂದ ವೈರಸ್ ಸಾಯುತ್ತದೆ’ ಎಂದು ಮೂಢನಂಬಿಕೆ ಬಿತ್ತಿದ ಮಾಜಿ ಸಚಿವರೊಬ್ಬರ ವಿರುದ್ಧ, ‘ಕೊರೋನ ಜಿಹಾದ್’ ಎನ್ನುವ ಮೂಲಕ ಮುಸ್ಲಿಮರ ವಿರುದ್ಧ ನಂಜು ಕಾರಿದ ಹಾಲಿ ಸಂಸದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ತನ್ನ ಹೇಳಿಕೆಯ ಪ್ರಾಮಾಣಿಕತೆಯನ್ನು ರುಜುವಾತುಪಡಿಸಬೇಕು. ಯಡಿಯೂರಪ್ಪ ಇದನ್ನು ಮಾಡುವ ಮೂಲಕ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ಮಾದರಿಯಾಗಲಿರುವರೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News