ಜನರ ಚೆಲ್ಲಾಟ, ಪೌರ ಕಾರ್ಮಿಕರಿಗೆ ಪ್ರಾಣ ಸಂಕಟ!
ಬೆಂಗಳೂರು, ಎ.15: ಕೊರೋನ ಸೋಂಕು ಹರಡುವ ಭೀತಿಯಿಂದಾಗಿ ಪ್ರತಿನಿತ್ಯ ಮುಖಕ್ಕೆ ಮಾಸ್ಕ್ ಬಳಸುವರರ ಸಂಖ್ಯೆ ಏರುತ್ತಲೇ ಇದೆ. ಆದರೆ, ಮಾಸ್ಕ್ ಬಳಸಿ ಬಿಸಾಡುವ ವಿಚಾರದಲ್ಲಿ ಜನರ ಬೇಜವಾಬ್ದಾರಿಯಿಂದ ಪೌರ ಕಾರ್ಮಿಕರ ಜೀವಕ್ಕೆ ಕುತ್ತು ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ನಗರ ಪ್ರದೇಶದ ನಿವಾಸಿಗಳು, ಬಳಕೆ ಮಾಡಿದ ಮಾಸ್ಕ್‌ಗಳನ್ನು ಬೇಜವಾಬ್ದಾರಿಯಿಂದ ಕಸದ ಬುಟ್ಟಿಗೆ ಎಸೆಯುತ್ತಿರುವ ಕಾರಣದಿಂದಾಗಿ, ಇದನ್ನು ವಿಲೇವಾರಿ ಮಾಡಲು ಬರುವ ಪೌರ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದ್ದು, ಕೊರೋನ ಸೋಂಕು ಹರಡುವ ಭೀತಿ ಉಂಟಾಗಿದೆ.
ದಿನದಿಂದ ದಿನಕ್ಕೆ ನಗರದಲ್ಲಿ ಕೊರೋನ ಭೀತಿ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರಲ್ಲಿ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಬಳಕೆ ಮಾಡಿದ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಅನ್ನು ಸಾರ್ವಜನಿಕರು ಕಸದಲ್ಲಿ ಮಿಶ್ರಣ ಮಾಡಿ ನೀಡುತ್ತಾರೆ. ಇವುಗಳನ್ನು ಸೋಂಕಿತರು ಅಥವಾ ಶಂಕಿತರು ಬಳಸಿದ್ದರೆ, ಅದರಿಂದ ನಮಗೂ ಸೋಂಕು ತಗಲುವ ಭೀತಿ ಇದೆ ಎಂದು ಬಿಬಿಎಂಪಿ ಪೌರಕಾರ್ಮಿಕ ರಮೇಶ್ ಸೊಣಪ್ಪ ನುಡಿದರು.
1 ಲಕ್ಷ ಮಾಸ್ಕ್: ರಾಜಧಾನಿ ಬೆಂಗಳೂರಿನಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್‌ಗಳು ಬಳಕೆಯಾಗಿ ಕಸದ ಬುಟ್ಟಿಗೆ ಸೇರಿವೆ. ಮಾಸ್ಕ್ ವೈದ್ಯಕೀಯ ತ್ಯಾಜ್ಯಕ್ಕೆ ಸೇರಬೇಕಾದ ವಸ್ತು. ಇದನ್ನು ಸೂಕ್ತ ರೀತಿಯಲ್ಲಿ ಬೇರ್ಪಡಿಸಿ ನೀಡುತ್ತಿಲ್ಲ. ಸಾಮಾನ್ಯ ಒಣಕಸದ ರೀತಿಯಲ್ಲಿಯೇ ಕಸಕ್ಕೆ ಸುರಿಯುತ್ತಾರೆ. ಕೆಲವೊಮ್ಮೆ ಬೀದಿ ಬದಿಯ ರಸ್ತೆಗಳಲ್ಲಿಯೂ ಮಾಸ್ಕ್‌ಗಳು ಪತ್ತೆಯಾಗಿದ್ದು, ಈ ಬಗ್ಗೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಪೌರಕಾರ್ಮಿಕರ ಒತ್ತಾಯ.
ರೋಗ ಹರಡಲಿದೆ: ಯಾವುದೇ ಒಂದು ಬಟ್ಟೆ ಅಥವಾ ಮಾಸ್ಕ್ ಅನ್ನು ಸತತ ಆರೇಳು ಗಂಟೆಗಳ ಕಾಲ ಮುಖದ ಬಳಿ ಬಳಕೆ ಮಾಡಿದರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ಅಂಟಿಕೊಂಡು ಜೀವಂತವಾಗಿರುತ್ತದೆ. ಇದನ್ನು ಮತ್ತೊಬ್ಬರು ಮುಟ್ಟಿದರೆ, ಬಹುಬೇಗ ರೋಗದ ಸೋಂಕು ಹರಡಲಿದೆ ಎಂದು ಹಿರಿಯ ವೈದ್ಯ ಡಾ.ಶಂಕರ್ ಮಹಾದೇವ ಅಭಿಪ್ರಾಯಟ್ಟರು.
ಯಾವುದೇ ಕಾರಣಕ್ಕೂ ಮಾಸ್ಕ್ ಹಾಗೂ ಗ್ಲೌಸ್ ಸೇರಿದಂತೆ ವೈದ್ಯಕೀಯ ತ್ಯಾಜ್ಯಗಳನ್ನು ನೇರವಾಗಿ ನೀಡಿದರೆ ತೆಗೆದುಕೊಳ್ಳಬೇಡಿ ಎಂದು ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸಬಾರದು. ಈ ರೀತಿ ಮಾಡುವುದರಿಂದ ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಮಾಸ್ಕ್, ಗ್ಲೌಸ್‌ಗಳನ್ನು ಪೇಪರ್‌ನಲ್ಲಿ ಸುತ್ತಿ ನೀಡಿದರೆ ಮಾತ್ರ ಸ್ವೀಕರಿಸುವಂತೆ ಸೂಚನೆ ನೀಡಲಾಗಿದೆ.
-ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)
ಮನೆ ಮಾಸ್ಕ್ ಬಳಸಿ
ಬಹುತೇಕರು ಸರ್ಜಿಕಲ್ ಮಾಸ್ಕ್ ಬಳಕೆ ಮಾಡುತ್ತಿರುವುದು ಸರಿಯಲ್ಲ. ಆರೋಗ್ಯ ಸಿಬ್ಬಂದಿ ಹೊರತುಪಡಿಸಿ, ಇತರರು ಸರ್ಜಿಕಲ್ ಮಾಸ್ಕ್ ಬಳಸಬೇಡಿ. ಎಲ್ಲರೂ ಸರ್ಜಿಕಲ್ ಮಾಸ್ಕ್ ಬಳಸುವುದರಿಂದ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಕೊರತೆಯಾಗುತ್ತದೆ. ಸಾಮಾನ್ಯ ನಾಗರಿಕರು ಬಟ್ಟೆ ಮೂಲಕ ಮನೆಯಲ್ಲಿಯೇ ತಯಾರಿಸಿದ ಮಾಸ್ಕ್ ಬಳಕೆ ಮಾಡಿ. ಜತೆಗೆ, ಹೊರಗಡೆ ಎಸೆಯುವಾಗ ಜಾಗೃತಿ ವಹಿಸಿ.
-ಡಾ.ದೇವಿ ಪ್ರಸಾದ್ ಶೆಟ್ಟಿ, ಚೇರ್ಮನ್ ನಾರಾಯಣ ಹೆಲ್ತ್
ಪೇಪರ್‌ನಲ್ಲಿ ಸುತ್ತಿ ಪ್ರತ್ಯೇಕವಾಗಿ ನೀಡಿ
ಬಳಸಿದ ಮಾಸ್ಕ್, ಹ್ಯಾಂಡ್ ಗ್ಲೌಸ್, ಟಿಶುಪೇಪರ್, ವೈದ್ಯಕೀಯ ಚಿಕಿತ್ಸೆಗೆ ಬಳಕೆ ಮಾಡಿದ ಹತ್ತಿ, ಬ್ಯಾಂಡೇಜ್ ಅನ್ನು ಒಂದು ಕಾಗದದ ಕವರ್ ಅಥವಾ ಪೇಪರ್‌ನಲ್ಲಿ ಸುತ್ತಿ ಪ್ರತ್ಯೇಕವಾಗಿ ಪೌರಕಾರ್ಮಿಕರಿಗೆ ನೀಡಬೇಕು. ಹಸಿ ಮತ್ತು ಒಣ ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ ನೀಡಬಾರದು.
-ಮನ್ಸೂರ್ ಅಹ್ಮದ್, ಒಣತ್ಯಾಜ್ಯ ಸಂಗ್ರಹಕಾರ