ಓ ಮೆಣಸೇ...

Update: 2020-04-19 18:01 GMT

 ಬಡವರಿಗೆ ವಿತರಿಸುತ್ತಿರುವ ಆಹಾರ ಚೀಲಗಳ ಮೇಲೆ ಶಿಷ್ಟಾಚಾರದ ಭಾಗವಾಗಿ ನನ್ನ ಭಾವಚಿತ್ರ ಬಳಸಿದ್ದಾರೆ
-ಅರವಿಂದ ಲಿಂಬಾವಳಿ, ಶಾಸಕ

ಕೊರೋನ ಕುರಿತಂತೆ ಜಾಗೃತಿ ಮೂಡಿಸಲು ವೈರಸ್ ಚಿತ್ರ ಸಿಕ್ಕಿರಲಿಲ್ಲ ಎಂದು ಕಾಣುತ್ತದೆ.


ನಾನು ಮುಸ್ಲಿಮ್ ವಿರೋಧಿಯಲ್ಲ - ರೇಣುಕಾಚಾರ್ಯ, ಶಾಸ

ಮನುಷ್ಯರಿಗಷ್ಟೇ ನೀವು ವಿರೋಧಿ. ಗೊತ್ತಿದೆ.


ಹೆದರಬೇಡಿ, ಕೊರೋನ ಚಿಕಿತ್ಸೆಗೆ 1ಲಕ್ಷ ಹಾಸಿಗೆಗಳು ತಯಾರಿವೆ
 -ಲವ ಅಗರ್ವಾಲ್, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ
 ಯಾವಾಗ ಆಸ್ಪತ್ರೆಗೆ ಸಾಗಿಸುತ್ತೀರಿ, ಕೊರೋನ ಭಾರತದಿಂದ ತೊಲಗಿದ ಬಳಿಕವೆ?


ಜಗತ್ತು ತತ್ತರಿಸಿದರೂ ಪ್ರಧಾನಿ ಮೋದಿಯವರ ಕಟ್ಟುನಿಟ್ಟಿನ ಕ್ರಮದಿಂದ ಕೊರೋನ ನಿಯಂತ್ರಣದಲ್ಲಿದೆ

-ನಳಿನ್‌ಕುಮಾರ್ ಕಟೀಲು, ಸಂಸದ
  ಕಟ್ಟು ಮತ್ತು ನಿಟ್ಟು ಯಾವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ?


ಯಾವುದೇ ಕಾರಣಕ್ಕೂ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು

-ಎಚ್.ನಾಗೇಶ್, ಸಚಿವ
 ವಲಸೆ ಕಾರ್ಮಿಕರು, ರೈತರು ಆತ್ಮಹತ್ಯೆ ಮಾಡಿಕೊಳ್ಳಬಹುದೆ?


ರಾಜಕಾರಣ ಮಾಡುವ ಸಮಯ ಇದಲ್ಲ -ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

 ರಾಜಕಾರಣ ಮಾಡುವುದಕ್ಕೆ ಬೇಕಾಗುವಷ್ಟು ಹಣ ಖಜಾನೆಯಲ್ಲಿಲ್ಲ ಎಂದು ಕಾಣುತ್ತದೆ.


ದೇಶದಲ್ಲಿ ಅಗತ್ಯ ವಸ್ತುಗಳ ದಾಸ್ತಾನು ಸಾಕಷ್ಟಿದೆ
- ಅಮಿತ್ ಶಾ, ಕೇಂದ್ರ ಸಚಿವ
ಆದರೂ ಹಸಿದ ಜನ ಸಾಮಾನ್ಯರಿಗೆ ನೀಡುವುದಿಲ್ಲ ಎನ್ನುವ ಹಟ.


ಕೊರೋನ ಬಗ್ಗೆ ಸುಳ್ಳು ಮಾಹಿತಿ ನೀಡಿ ಅಮೆರಿಕವನ್ನು ಅಪಾಯಕ್ಕೆ ದೂಡಿರುವುದಕ್ಕೆ ಚೀನಾ ಮುಂದೆ ತಕ್ಕಶಾಸ್ತಿ ಅನುಭವಿಸಲಿದೆ

-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
 ಅದಕ್ಕೆ ಮೊದಲು ಅಪಾಯದಿಂದ ಪಾರಾಗಿ.


ಕೊರೋನ ವಿರುದ್ಧ ಜಯ ಸಾಧಿಸಲು ಜಾತಿ, ಧರ್ಮ, ವರ್ಗರಹಿತ, ಪಕ್ಷಾತೀತ ಹೋರಾಟ ಅಗತ್ಯ - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
 ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ವಸೂಲಿ ಮಾಡುವುದರಿಂದಲೇ ಆ ಹೋರಾಟ ಆರಂಭವಾಗಲಿ.


‘ಸಾಮಾಜಿಕ ಅಂತರ’ದ ಪರಿಕಲ್ಪನೆಯನ್ನು ನಮ್ಮಲ್ಲಿ ಪ್ರಚಲಿತವಾಗಿರುವ ಮಡಿ-ಮೈಲಿಗೆಗಳ ಪರಿಕಲ್ಪನೆಯೊಂದಿಗೆ ಹೋಲಿಸಬಾರದು

 - ಡಾ.ಎಸ್.ಎಲ್.ಭೈರಪ್ಪ, ಸಾಹಿತಿ
 ಮಡಿ, ಮೈಲಿಗೆಗಳನ್ನು ಕೊರೋನದ ಜೊತೆಗೆ ಹೋಲಿಸಬಹುದೆ?


 ಬಿಡಿಎ ಸೈಟ್‌ಗಳನ್ನು ಮಾರುವಷ್ಟು ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಬಿಜೆಪಿಗೆ ಮಾರಾಟವಾಗಿರುವ ಶಾಸಕರನ್ನು ಮಾರುವ ಯೋಜನೆಯಿದೆಯಂತೆ. ಕೊಳ್ಳುವವರಿಲ್ಲ ಅಷ್ಟೇ.


ಎಲ್ಲರನ್ನು ಸೇರಿಸಿಕೊಂಡು ಮಗನ ಮದುವೆ ಮಾಡಲು ಆಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

 ಅಂದರೆ ಕೊರೋನವನ್ನೂ ಜೊತೆಗೆ ಸೇರಿಸಿಕೊಂಡು ಮದುವೆ ಮಾಡುವ ಕನಸಿತ್ತೆ?


 ಕೊರೋನ ವಿಚಾರದಲ್ಲಿ ಕೆಲವರು ಸುಸೈಡ್ ಬಾಂಬರ್‌ಗಳಂತೆ ವರ್ತಿಸುತ್ತಿದ್ದಾರೆ -ಈಶ್ವರಪ್ಪ, ಸಚಿವ
 ಭಾರತಕ್ಕೆ ಆಗಮಿಸಿದ ಟ್ರಂಪ್‌ನ ಬಗ್ಗೆ ಹಾಗೊಂದು ವದಂತಿಯಿದೆ.


ಜಾತಿ, ಧರ್ಮ, ವಯಸ್ಸು ಕೊರೋನ ವಿರುದ್ಧ ಹೋರಾಟಕ್ಕೆ ಅಡ್ಡಿಯಾಗಬಾರದು -ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ

ಕೊರೋನ ಮೂಲಕವೇ ಜಾತಿ, ಧರ್ಮದ ನಡುವೆ ಗೋಡೆ ಬಿತ್ತುವ ಹೋರಾಟಕ್ಕೆ ಜಯ ಸಿಗುತ್ತಿದೆ.


ಇನ್ನು ಮುಂದೆ ಡ್ರಿಂಕ್ಸ್ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ -ಶ್ರುತಿ ಹಾಸನ್, ನಟಿ
 ಬರೇ ಡ್ರಿಂಕ್ಸ್ ತುಂಬಿರುವ ಬಾಟಲಿಯನ್ನಷ್ಟೇ ಎತ್ತುವ ಪ್ರತಿಜ್ಞೆಯಿರಬೇಕು.


ಚೀನಾ ಸದಾ ಜವಾಬ್ದಾರಿಯುತ ಧೋರಣೆ ಅನುಸರಿಸುತ್ತಿರುವ ದೇಶ -ಝಾವೊ ಲಿಜನ್, ಚೀನಾ ವಿದೇಶಾಂಗ ಖಾತೆಯ ವಕ್ತಾರ

ಕೊರೋನ ವೈರಸ್ ಮೂಲಕ ವಿಶ್ವದ ಜವಾಬ್ದಾರಿಯನ್ನು ಹೆಚ್ಚಿಸಿದ್ದು ಇದಕ್ಕೆ ಇರಬೇಕು.


ಭಾರತ ವಿಶ್ವಕ್ಕೆ ಕೊರೋನ ಔಷಧ ಕಳುಹಿಸಿದರೆ ಪಾಕ್ ಉಗ್ರರನ್ನು ಕಳುಹಿಸುತ್ತದೆ -ಎಂ.ಎಂ.ನರವಾನೆ, ಭಾರತದ ಸೇನಾ ಮುಖ್ಯಸ್ಥ

 ಕೊರೋನ ಮೂಲಕವೇ ಒಂದು ಹೊಸ ಸರ್ಜಿಕಲ್ ಸ್ಟ್ರೈಕ್ ಹಮ್ಮಿಕೊಂಡರೆ ಹೇಗೆ?


  ಕೊರೋನ ಮುಗಿದ ಬಳಿಕವೂ ಅದರ ಜೊತೆಗೆ ಬದುಕಿನ ಬಂಡಿ ತಳ್ಳುವುದು ಅನಿವಾರ್ಯವಾಗಲಿದೆ
 -ಡಾ.ಅಶ್ವತ್ಥ ನಾರಾಯಣ, ಉಪ ಮುಖ್ಯಮಂತ್ರಿ
 ಚಕ್ರಗಳೆಲ್ಲ ಕಳಚಿಕೊಂಡ ಮೇಲೆ ತಳ್ಳುವುದೇ ಗತಿ.


ಲಾಕ್‌ಡೌನ್ ಇರುವಾಗ ಮೋಜು -ಮಸ್ತಿಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು -ಶ್ರೀರಾಮುಲು, ಸಚಿವ
  ಈಜುಕೊಳದಲ್ಲಿ ಮಸ್ತಿ ಮಾಡಿದವರೂ ಈ ವ್ಯಾಪ್ತಿಯಲ್ಲಿ ಬರುತ್ತಾರೆಯೆ?


 ಮದ್ಯಕ್ಕಿಂತ ಜನರ ಪ್ರಾಣ ಮುಖ್ಯ -ಎಚ್.ನಾಗೇಶ್, ಸಚಿವ
ತುಳಸಿ ನೀರಿನ ಬದಲು ಮದ್ಯವನ್ನೇ ಸುರಿಯಿರಿ ಎನ್ನುವುದು ಕುಡುಕರ ಪ್ರಾರ್ಥನೆ.


ಅಧಿಕಾರ ಇರಲಿ, ಇಲ್ಲದಿರಲಿ ದೇಶಾದ್ಯಂತ ಕಾಂಗ್ರೆಸ್ ಜನರ ನಡುವೆ ನಿಂತು ಕೊರೋನ ವಿರುದ್ಧ ಹೋರಾಟ ನಡೆಸಲಿದೆ -ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

 ಇಡೀ ಕಾಂಗ್ರೆಸ್‌ನ್ನು ಕ್ವಾರಂಟೈನ್‌ನಲ್ಲಿ ಇಡಬೇಕಾಗುತ್ತದೆ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!