ಕೋಳಿ ದರದ ವಿಚಾರಕ್ಕೆ ವ್ಯಕ್ತಿಯ ಇರಿದು ಕೊಲೆ

Update: 2020-04-30 13:10 IST

ಹೊಸದಿಲ್ಲಿ ಎ.30: ವಾಯುವ್ಯ ದಿಲ್ಲಿಯ ಜಹಾಂಗಿರ್‌ಪುರಿ ಪ್ರದೇಶದಲ್ಲಿ ಕೋಳಿಯ ಬೆಲೆ ವಿಚಾರಕ್ಕೆ ಸಂಬಂಧಿಸಿ ಜಗಳಕ್ಕಿಳಿದ ನಾಲ್ವರು 35 ವರ್ಷದ ವ್ಯಕ್ತಿಯನ್ನು ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ಸಿರಾಜ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೀನು ಮಾರಾಟ ಮಾಡುತ್ತಿದ್ದ ಸಿರಾಜ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಹಾಂಗಿರ್‌ಪುರಿ ಪ್ರದೇಶದಲ್ಲಿ ಕೋಳಿಯನ್ನು ಮಾರಾಟ ಮಾಡುತ್ತಿದ್ದರು. ಸಿರಾಜ್ ಕೋಳಿಗಳನ್ನು ತನ್ನ ಗುಡಿಸಲಿನ ಹೊರಗೆ ಮಾರಾಟ ಮಾಡುತ್ತಿದ್ದರು. ಅಲ್ಲಿಗೆ ಬಂದ ನಾಲ್ವರು ಕೋಳಿ ದರವನ್ನು ಕೇಳಿದ್ದಾರೆ. ಆಗ ದುಷ್ಕರ್ಮಿಗಳು ದರದ ವಿಚಾರಕ್ಕೆ ಸಂಬಂಧಿಸಿ ಜಗಳಕ್ಕಿಳಿದರು. ಸಿರಾಜ್ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಕೋಳಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ಬಳಿಕ ಚೂರಿ ಹಾಗೂ ಕಬ್ಬಿಣದ ರಾಡ್‌ನೊಂದಿಗೆ ವಾಪಾಸು ಬಂದ ನಾಲ್ವರು ಸಿರಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಚೂರಿ ಇರಿತದಿಂದ ತೀವ್ರ ಗಾಯಗೊಂಡಿದ್ದ ಸಿರಾಜ್ ಅವರನ್ನು ನಾವು ಸಂಜಯ್‌ಗಾಂಧಿ ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಕಮೀಷನರ್ ವಿಜಯಾಂತ ಆರ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News