ಲಾಕ್​ಡೌನ್ ನಡುವೆ 102 ದಿನ ಪೂರೈಸಿದ ಬೆಂಗಳೂರಿನ ಬಿಲಾಲ್ ಬಾಗ್ ಸಿಎಎ ವಿರೋಧಿ ಪ್ರತಿಭಟನೆ

Update: 2020-05-17 12:14 GMT

ಬೆಂಗಳೂರು, ಮೇ 17: ಕೋವಿಡ್-19 ಪರಿಣಾಮ ಲಾಕ್‍ಡೌನ್ ಜಾರಿಗೊಳಿಸಿದ್ದರೂ, ಇದರ ನಡುವೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಮುಂದುವರಿಸಿ ಮೂವರು ಮಹಿಳೆ ಸೇರಿ ಐವರು ದೇಶದ ಗಮನ ಸೆಳೆದಿದ್ದಾರೆ.

ಈ ವರ್ಷದ ಆರಂಭದಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಪ್ರಕ್ರಿಯೆ ವಿರೋಧಿಸಿ ದೇಶದೆಲ್ಲೆಡೆ ಆಕ್ರೋಶ ಮುಗಿಲು ಮುಟ್ಟಿತ್ತು. ಇದರ ವಿರುದ್ಧ ನೂರಾರು ಸ್ಥಳಗಳು ಪ್ರತಿಭಟನಾ ಕೇಂದ್ರ ಬಿಂದುಗಳಾಗಿದ್ದವು. ಆದರೆ, ಕೋವಿಡ್-19 ಪರಿಣಾಮ ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಪ್ರತಿಭಟನೆಗಳು ನಿಂತೇ ಹೋಗಿದ್ದವು ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಬೆಂಗಳೂರಿನ ಟ್ಯಾನರಿ ರಸ್ತೆಯ ಬಿಲಾಲ್ ಬಾಗ್‍ನಲ್ಲಿ ಆರಂಭವಾಗಿರುವ ಅನಿರ್ದಿಷ್ಟಾವಧಿ ಹೋರಾಟ ಇಂದಿಗೆ 102ನೇ ದಿನ ಪೂರೈಸಿದೆ.

‘ಪ್ರಜಾಪ್ರಭುತ್ವ ರಕ್ಷಿಸಿ ಮತ್ತು ದೇಶ ರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಆರಂಭವಾಗಿರುವ ಬಿಲಾಲ್ ಬಾಗ್ ಹೋರಾಟ ಹೊಸದಿಲ್ಲಿಯ ಶಾಹೀನ್ ಬಾಗ್ ರೀತಿಯಲ್ಲಿಯೇ ಜನರ ಗಮನ ಸೆಳೆದಿದ್ದು, ಕಳೆದ 102 ದಿನಗಳಲ್ಲಿ ಟ್ಯಾನರಿ ರಸ್ತೆಯ ಬಿಲಾಲ್‍ ಬಾಗ್ ಎಲ್ಲರಿಗೂ ಚಿರಪರಿಚಿತ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲದೆ, ಹಲವು ದಿನಗಳಿಂದ ಲಾಕ್‍ಡೌನ್ ಜಾರಿಯಿಂದಾಗಿ ಸಂಚಾರವೇ ಸ್ಥಗಿತಗೊಂಡಿತ್ತು. ಇದರಿಂದ ಹೋರಾಟಗಾರರು, ಜನರು ಈ ಕಡೆ ಸುಳಿದಿಲ್ಲ. ಆದರೆ, ಪ್ರತಿಭಟನಾ ಸ್ಥಳದಲ್ಲಿಯೇ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು, ಮೂವರು ಮಹಿಳೆಯರು ನೆಲೆಸಿ ಪ್ರತಿಭಟನೆ ಮುಂದುವರಿಸಿರುವುದು ವಿಶೇಷ.

"ಶಾಹೀನ್ ಬಾಗ್‍ ನಂತೆ ಬಿಲಾಲ್ ಬಾಗ್ ಹೋರಾಟ ಕೇವಲ ಒಂದು ಪ್ರತಿಭಟನೆಯಾಗಿ ಉಳಿದಿಲ್ಲ. ಮೊದ ಮೊದಲು ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ವಿರುದ್ಧದ ರಾಜಕೀಯ ಪ್ರತಿಭಟನೆಯಾಗಿ ಬಿಂಬಿಸಲಾಗಿತ್ತು. ಆದರೆ, ಸಮಾಜದ ಎಲ್ಲ ವರ್ಗಗಳ ಜನರ ಒಳಗೊಳ್ಳುವಿಕೆಯಿಂದಾಗಿ ಸಾಂಸ್ಕೃತಿಕ ಸ್ವರೂಪ ಪಡೆದುಕೊಂಡಿದೆ. ಬಹುತ್ವದ ನೆಲೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ" ಎನ್ನುತ್ತಾರೆ ಪ್ರತಿಭಟನಾ ನಿರತ ಹೋರಾಟಗಾರ್ತಿ ವಾರಸಿ.

"ಮಹಿಳೆಯರು, ವಿದ್ಯಾರ್ಥಿಗಳು, ರೈತ ಸಂಘಟನೆಗಳ ಪ್ರತಿನಿಧಿಗಳು, ವಕೀಲರು, ಕಲಾವಿದರು ಹೀಗೆ ಹಲವರು ಬಿಲಾಲ್ ಬಾಗ್ ಒಡಲು ಸೇರುತ್ತಿದ್ದರು. ಧರಣಿ ಸ್ಥಳದಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮ, ಹಗಲು- ರಾತ್ರಿ ಆರೋಗ್ಯಕರ ಮಾತುಕತೆ, ಚರ್ಚೆ, ಸಂಗೀತ ಮತ್ತು ವಿಭಿನ್ನ ಕಲಾತ್ಮಕ ಕಾರ್ಯಕ್ರಮಗಳಿಗೆ ಈ ಸ್ಥಳ ವೇದಿಕೆಯಾಗಿತ್ತು. ಆದರೆ, ಕೊರೋನದಿಂದ ಎಲ್ಲವೂ ನಿಂತಿದೆ. ಹೀಗಾಗಿ, ನಾವೇ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದೇವೆ" ಎಂದು ಮತ್ತೋರ್ವ ಹೋರಾಟಗಾರ್ತಿ ಅಬಾರಿನ್ ನುಡಿದರು.

ಹಲವರ ಭೇಟಿ: ಬೆಂಗಳೂರಿನ ಬಿಲಾಲ್ ಬಾಗ್ ಪ್ರತಿಭಟನಾ ಸ್ಥಳಕ್ಕೆ ಪ್ರಸಿದ್ಧ ಬಾಲಿವುಡ್ ನಟ ನಾಸೀರುದ್ದೀನ್ ಶಾ, ಇತಿಹಾಸಕಾರ ರಾಮಚಂದ್ರ ಗುಹಾ, ಗುಜರಾತ್‍ನ ಯುವ ರಾಜಕಾರಣಿ ಜಿಗ್ನೇಶ್ ಮೇವಾನಿ, ಯುವ ವಕೀಲ ವಲೀ ರಹ್ಮಾನಿ, ಮಹಿಳಾ ಹಕ್ಕು ಹೋರಾಟಗಾರ್ತಿ ದೇವಕಿ ಜೈನ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಅಂಕಣಕಾರ ಆಕಾರ್ ಪಟೇಲ್, ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಸದಸ್ಯರು ಸೇರಿದಂತೆ ಹಲವು ಗಣ್ಯರು ಬಿಲಾಲ್ ಬಾಗ್ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ್ದರು.

ಅಷ್ಟೇ ಅಲ್ಲದೆ, ಗಾಯಕರಾದ ಎಂ.ಡಿ. ಪಲ್ಲವಿ, ಬಿಂದು ಮಾಲಿನಿ, ವಾಸು ದೀಕ್ಷಿತ್ ಮತ್ತು ವಾನಂದಫ್ ಮತ್ತಿತರ ಸಂಗೀತಗಾರರು ಗಾಯನ, ಸಂಗೀತದ ಮೂಲಕ ಹೋರಾಟದ ಕಿಚ್ಚು ಹೆಚ್ಚಿಸಿದ್ದರು. ‘ಅವರು ದೇಶ ಒಡೆಯುವವರು, ನಾವು ಭಾರತೀಯರು, ಮನಸ್ಸು ಕಟ್ಟುವವರು’ ಎಂಬ ಘೋಷಣೆಗಳು ನಿತ್ಯ ಮೊಳಗುತ್ತಿದ್ದವು. ಈ ಹೋರಾಟದಿಂದಾಗಿ ಬಿಲಾಲ್ ಬಾಗ್ ಹೊಸ ಸಾಂಸ್ಕೃತಿಕ ನೆಲೆಯಾಗಿ ಬದಲಾಗಿತ್ತು ಎಂದು ಪ್ರತಿಭಟನಾ ನಿರತ ಹೋರಾಟಗಾರರು ನೆನೆದರು.

‘ಹೊಸದಿಲ್ಲಿ ಮಾದರಿ ಹೋರಾಟ’

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಶಾಹೀನ್ ಬಾಗ್ ಮಾದರಿಯಲ್ಲಿಯೇ ಬೆಂಗಳೂರಿನ ಬಿಲಾಲ್ ಬಾಗ್‍ನಲ್ಲಿ ಹೋರಾಟ ನಡೆಸುವ ಮೂಲಕ ರಾಷ್ಟ್ರದ ಗಮನ ಸೆಳೆಯುವುದು ನಮ್ಮ ಉದ್ದೇಶ. ಅಲ್ಲದೆ, ಇದೇ ಮಾದರಿಯಲ್ಲಿ ದೇಶದ 139 ಪ್ರದೇಶಗಳಲ್ಲಿ ಹೋರಾಟ ನಡೆಯುತಿತ್ತು. ಆದರೆ, ಲಾಕ್ ಡೌನ್ ನಿಂದಾಗಿ ಎಲ್ಲ ಕಡೆ ಪ್ರತಿಭಟನೆ ನಿಂತಿದ್ದರೂ ಸಹ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿದೆ ಎನ್ನುತ್ತಾರೆ ಧರಣಿಯ ಆಯೋಜಕರಲ್ಲಿ ಒಬ್ಬರಾದ ದೌಲತ್ ಖಾನ್.

ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಹೋರಾಟ

ಬೆಂಗಳೂರಿನ ಟ್ಯಾನರಿ ರಸ್ತೆಯ ಬಿಲಾಲ್ ಬಾಗ್ ಜಾಗವು ಖಾಸಗಿ ಒಡೆತನಕ್ಕೆ ಸೇರಿದೆ. ಹಾಗಾಗಿಯೇ, ನಮ್ಮನ್ನು ಯಾರು ಇಲ್ಲಿಂದ ಹೋಗಿ ಎಂದು ಹೇಳಿಲ್ಲ. ಅಲ್ಲದೆ, ಲಾಕ್‍ಡೌನ್ ಆರಂಭ ದಿನದಲ್ಲಿ ಸ್ಥಳೀಯ ಪೊಲೀಸರು ಪ್ರತಿಭಟನೆ ನಡೆಸದಂತೆ ಒತ್ತಡ ಹೇರಿದರು. ಆದರೆ, ಕೊರೋನ ಸೋಂಕು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಹೋರಾಟ ಮುಂದುವರೆಸಿದ್ದೇವೆ ಎಂದು ಹೋರಾಟಗಾರ್ತಿ ಅನಿಯಾ ನುಡಿದರು.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News