ಲಾಕ್​ಡೌನ್ ಎಪೆಕ್ಟ್: ಸಂಕಷ್ಟದಲ್ಲಿ ಸಿಲುಕಿದ ಹಣ್ಣು ಮಾರಾಟಗಾರರ ಬದುಕು

Update: 2020-05-17 16:55 GMT

ಬೆಂಗಳೂರು, ಮೇ 17: ‘ದಯವಿಟ್ಟು ನಮ್ಮ ಬಗ್ಗೆ ಎಲ್ಲೂ ಪ್ರಚಾರ ಮಾಡಬೇಡಿ. ನಮ್ಮ ಈ ದುಡಿಮೆಗೆ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಆದರೆ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡಲು ಬಂದಿದ್ದೇವೆ.’ ಇದು ನಗರದ ಜನನಿಬಿಡ ಪ್ರದೇಶಗಳಲ್ಲಿ ಹಲಸಿನ ಹಣ್ಣಿನ ತೊಳೆ ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ಮಾತು.

ನಗರದಲ್ಲಿ ಹಲಸಿನ ಹಣ್ಣು ಮಾರುಕಟ್ಟೆಗೆ ಬಂದು ತಿಂಗಳಾಗುತ್ತಾ ಬಂತು. ಆದರೆ, ಕೊರೋನ ಹರಡುವ ಭೀತಿ ಹಿನ್ನೆಲೆ ಕಲ್ಲಂಗಡಿ, ಹಲಸು ಸೇರಿ ಕತ್ತರಿಸಿ ಮಾರುವ ಹಣ್ಣುಗಳ ಮಾರಾಟಕ್ಕೆ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಇನ್ನೂ ಎರಡು ತಿಂಗಳು ಅನುಮತಿ ಸಿಗುವ ಸಾಧ್ಯತೆಯೂ ಕಡಿಮೆ. ಹೀಗಾಗಿ, ಇದನ್ನೆ ನಂಬಿ ಜೀವನ ಸಾಗಿಸುವ ಜನರು ಅನಿವಾರ್ಯವಾಗಿ ಸರಕಾರದ ನಿಯಮ ಮೀರಬೇಕಾದ ಪರಿಸ್ಥಿತಿ ಎದುರಾಗಿದೆ.

ವಿವಿಧ ಸೀಸನ್‍ಗಳಲ್ಲಿ ಆಯಾ ಸಮಯಕ್ಕೆ ಬರುವ ಹಣ್ಣನ್ನು ಮಾರಾಟ ಮಾಡಿ ಬದುಕುತ್ತೇವೆ. ಸದ್ಯ ಹಲಸಿನ ಹಣ್ಣಿನ ಸೀಸನ್ ಇದೆ. ಯುವಕರಂತೆ ರಸ್ತೆ ರಸ್ತೆ ಸುತ್ತಿ ಬೇರೆ ಹಣ್ಣನ್ನು ಮಾರಾಟ ಮಾಡುವ ಶಕ್ತಿ ನನಗಿಲ್ಲ. ಹೀಗಾಗಿ, ನಿಂತಲ್ಲೇ ಬೆಳಗ್ಗಿನಿಂದ ಸಂಜೆಯವರೆಗೆ ವ್ಯಾಪಾರ ಮಾಡಿ 200-300 ರೂ. ಸಂಪಾದಿಸುತ್ತೇವೆ. ಕಳೆದ 30 ವರ್ಷದಿಂದ ಈ ವೃತ್ತಿ ಮಾಡುತ್ತಿದ್ದೇನೆ. ಈಗ ವಯಸ್ಸಾಗಿದೆ. ಹೊಟ್ಟೆಪಾಡಿಗೆ ಈ ಕೆಲಸ ನೆಚ್ಚಿಕೊಂಡಿದ್ದೇನೆ ಎಂದು ಯಶವಂತಪುರ ಮಾರುಕಟ್ಟೆಯಲ್ಲಿ ಹಲಸಿನ ಹಣ್ಣಿನ ತೊಳೆ ಬಿಡಿಸಿ ಮಾರುವ ವೃದ್ಧ ಮುಹಮ್ಮದ್ ತನ್ನ ಕಷ್ಟ ತೋಡಿಕೊಂಡಿದ್ದಾರೆ.

ಕೊರೋನ ಆರಂಭದ ಸಂದರ್ಭ ಮಾರ್ಚ್ ತಿಂಗಳಲ್ಲಿ ಕತ್ತರಿಸಿ ಮಾರುವ ಹಣ್ಣುಗಳ ವ್ಯಾಪಾರಕ್ಕೆ ಯಾವುದೇ ತಡೆ ಇರಲಿಲ್ಲ. ಬಳಿಕ ಇಂತಹ ಹಣ್ಣುಗಳ ಮಾರಾಟಕ್ಕೆ ಸರಕಾರ ನಿರ್ಬಂಧ ಹೇರಿದೆ. ಕಲ್ಲಂಗಡಿ ಹಣ್ಣು ಈಗಲೂ ಮಾರುಕಟ್ಟೆಯಲ್ಲಿದೆ. ಆದರೆ, ಕತ್ತರಿಸಿ ಮಾರುವವರು ಕಾಣಿಸುತ್ತಿಲ್ಲ. ಆದರೆ, ಹಲಸಿನ ಹಣ್ಣಿನಲ್ಲಿ ನೂರಾರು ತೊಳೆಗಳು ಇರುವುದರಿಂದ, ಇಡೀ ಹಣ್ಣನ್ನು ಯಾರೂ ಕೊಂಡೊಯ್ಯುವುದಿಲ್ಲ. ಜನ ಬಿಡಿ ಬಿಡಿಯಾಗಿ ತಮಗೆ ಬೇಕಿರುವಷ್ಟು ತೊಳೆಯನ್ನು ಈ ಬೀದಿ ಬದಿಯ ವ್ಯಾಪಾರಿಗಳ ಬಳಿಯಿಂದ ಕೊಂಡೊಯ್ಯುತ್ತಾರೆ. ಆದರೆ, ಇದೀಗ ಮಾರಾಟಗಾರರಿಗೆ ಸಂಕಷ್ಟ ಎದುರಾಗಿದ್ದು, ಜೀವನ ನಡೆಸಲು ಬೇರೆ ದಾರಿಯಿಲ್ಲದೆ ಅಲ್ಲಿ ಇಲ್ಲಿ ಕದ್ದು ಮುಚ್ಚಿ ಪೊಲೀಸರಿಂದ ಬೈಸಿಕೊಂಡು ಕೆಲವರು ವ್ಯಾಪಾರ ಮಾಡುತ್ತಿದ್ದಾರೆ.

Writer - -ಪ್ರಕಾಶ್ ಅವರಡ್ಡಿ

contributor

Editor - -ಪ್ರಕಾಶ್ ಅವರಡ್ಡಿ

contributor

Similar News