ಲಾಕ್‌ಡೌನ್; ನಾಲ್ಕು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಕನಿಷ್ಠ 18 ವಲಸೆ ಕಾರ್ಮಿಕರ ಸಾವು

Update: 2020-05-19 16:02 GMT
ಫೈಲ್ ಚಿತ್ರ

ಹೊಸದಿಲ್ಲಿ,ಮೇ 19: ದೇಶವ್ಯಾಪಿ ಲಾಕ್‌ಡೌನ್ ನಡುವೆಯೇ ವಿವಿಧ ರಾಜ್ಯಗಳಲ್ಲಿ ಸೋಮವಾರ ರಾತ್ರಿಯಿಂದೀಚಿಗೆ ಸಂಭವಿಸಿದ ನಾಲ್ಕು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಕನಿಷ್ಠ 18 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.

ಈ ಪೈಕಿ ಎರಡು ಅಪಘಾತಗಳು ಉತ್ತರ ಪ್ರದೇಶದಲ್ಲಿ ನಡೆದಿದ್ದು,ಐವರು ವಲಸೆ ಕಾರ್ಮಿಕರು ಬಲಿಯಾಗಿದ್ದಾರೆ. ಮಹೋಬಾ ಜಿಲ್ಲೆಯಲ್ಲಿ ಝಾನ್ಸಿ-ಮಿರ್ಝಾಪುರ ಹೆದ್ದಾರಿಯ ಮಹುವಾ ಕ್ರಾಸಿಂಗ್ ಬಳಿ ಲಾರಿಯೊಂದರ ಟೈರ್ ಸ್ಫೋಟಗೊಂಡು ರಸ್ತೆಬದಿಯ ಹೊಂಡಕ್ಕೆ ಪಲ್ಟಿಯಾದ ಪರಿಣಾಮ ಮೂವರ ಮಹಿಳೆಯರು ಮೃತಪಟ್ಟಿದ್ದಾರೆ 12 ಜನರು ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

17 ವಲಸೆ ಕಾರ್ಮಿಕರ ಗುಂಪು ದಿಲ್ಲಿಯಿಂದ ಉತ್ತರ ಪ್ರದೇಶದ ತಮ್ಮ ಗ್ರಾಮಗಳಿಗೆ ಕಾಲ್ನಡಿಗೆಯಿಂದ ಸಾಗುತ್ತಿದ್ದಾಗ ಲಾರಿ ಚಾಲಕ ಅವರನ್ನು ತನ್ನ ವಾಹನದಲ್ಲಿ ಹತ್ತಿಸಿಕೊಂಡಿದ್ದ. ಉನ್ನಾವೊದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿಯೊಂದು ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಕೊಲ್ಲಲ್ಪಟ್ಟಿದ್ದು, 23 ಜನರು ಗಾಯಗೊಂಡಿದ್ದಾರೆ. ವಲಸೆ ಕಾರ್ಮಿಕರು ದಿಲ್ಲಿಯಿಂದ ಅಝಮ್‌ಗಡಕ್ಕೆ ಪ್ರಯಾಣಿಸುತ್ತಿದ್ದರು.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಸಂಭವಿಸಿದ ಇನ್ನೊಂದು ರಸ್ತೆ ಅಪಘಾತದಲ್ಲಿ ಐವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇವರೆಲ್ಲ ಸೋಲಾಪುರದಿಂದ ಜಾರ್ಖಂಡ್‌ಗೆ ತೆರಳುತ್ತಿದ್ದರು.

ಅತ್ತ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಲಾರಿಯೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಭತ್ತು ವಲಸೆ ಕಾರ್ಮಿಕರು ಮೃತಪಟ್ಟು,ಹಲವಾರು ಜನರು ಗಾಯಗೊಂಡಿದ್ದಾರೆ.

ಕಳೆದ 10 ದಿನಗಳಲ್ಲಿ ತಮ್ಮ ಮನೆಗಳಿಗೆ ಮರಳುವ ಪ್ರಯತ್ನದಲ್ಲಿ ಕನಿಷ್ಠ 50 ವಲಸೆ ಕಾರ್ಮಿಕರು ವಿವಿಧ ಅವಘಡಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News