ಓ ಮೆಣಸೇ...

Update: 2020-06-14 17:32 GMT

ಮೋದಿ ನೇತೃತ್ವದ ಕೇಂದ್ರ ಸರಕಾರ ನುಡಿದಂತೆ ನಡೆಯುತ್ತಿದೆ
 - ಅಮಿತ್‌ಶಾ, ಕೇಂದ್ರ ಸಚಿವ

ಬಹುಶಃ ಆರೆಸ್ಸೆಸ್ ನುಡಿದಂತೆ ನಡೆಯುತ್ತಿರಬೇಕು.


ಒಂದು ಕುಟುಂಬದವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಅಸಮಾಧಾನ ಎಂದಾದರೆ ಬಿಜೆಪಿಯಲ್ಲಿ ಅಸಮಾಧಾನವಿದೆ
 -ಈಶ್ವರಪ್ಪ, ಸಚಿವ
ಭಾವನೆಗಳನ್ನು ಹಂಚಿಕೊಳ್ಳುವಾಗ ಕುಟುಂಬ ಒಡೆಯಬಾರದಲ್ಲ?


ಕೊರೋನ ಸಹಿತ ಪ್ರತಿಯೊಂದು ವಿಚಾರದಲ್ಲೂ ಸರಕಾರವೇ ಕಡಿವಾಣ ಹಾಕುವುದು ಸಾಧ್ಯವಿಲ್ಲ -ಬಸವರಾಜ ಬೊಮ್ಮಾಯಿ, ಸಚಿವ

ಸರಕಾರಕ್ಕೆ ಕಡಿವಾಣ ಹಾಕುವವರಿಲ್ಲದ ಪರಿಣಾಮ ಇದು.


ಈ ತನಕ ದೇಶದಲ್ಲಿ ಯಾರೊಬ್ಬರೂ ಪ್ರಶ್ನೆ ಮಾಡದಂತೆ ನಾನು ನಡೆದುಕೊಂಡು ಬಂದಿದ್ದೇನೆ -ದೇವೇಗೌಡ, ಮಾಜಿ ಪ್ರಧಾನಿ
ಅಂದರೆ ನಿಮ್ಮನ್ನು ಪ್ರಶ್ನೆ ಮಾಡುವುದು ತಪ್ಪೇ?


ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ - ಸುರೇಶ್‌ಕುಮಾರ್, ಸಚಿವ

ಕೊರೋನ ಪರೀಕ್ಷೆಯನ್ನು ರದ್ದುಗೊಳಿಸುವ ಉದ್ದೇಶ ಇರಬೇಕು.


ಸಕ್ಕರೆ ಕಾರ್ಖಾನೆ ಸಹಿತ ರಾಜ್ಯದ ಎಲ್ಲ ಕೈಗಾರಿಕೆಗಳನ್ನು ಖಾಸಗೀಕರಣ ಮಾಡುವುದು ಉತ್ತಮ
 -ಮುರುಗೇಶ್ ನಿರಾಣಿ, ಶಾಸಕ

=ಖಾಸಗಿಯವರ ಬಾಯಿಗೆ ಸಕ್ಕರೆ, ಬಡವರ ಬಾಯಿಗೆ ವಿಷ.


ಕೋವಿಡ್-19 ಸೋಂಕಿನ ವಿಷಯದಲ್ಲಿ ವಿಶ್ವದ ಇತರ ರಾಷ್ಟ್ರಗಳಿಗಿಂತ ಭಾರತ ಸುರಕ್ಷಿತ ಸ್ಥಾನದಲ್ಲಿದೆ - ಡಾ.ಹರ್ಷವರ್ಧನ್, ಕೇಂದ್ರ ಸಚಿವ

ಬಹುಶಃ ಬಾಲ್ಕನಿ ಇವರ ಪ್ರಕಾರ ಸುರಕ್ಷಿತ ಸ್ಥಾನವಾಗಿರಬೇಕು.


ನಾವು ಕಾನೂನು ಗೌರವಿಸುವವರೇ ಹೊರತು ಕಾನೂನು ಭಂಗ ಮಾಡುವವರಲ್ಲ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕಾನೂನುಗಳನ್ನು ಮಾಡಿರುವುದೇ ಅವುಗಳನ್ನು ಭಂಗ ಮಾಡುವುದಕ್ಕಂತೆ.


ಜಾತ್ಯತೀತತೆ, ಜನರ ಸಮಸ್ಯೆ, ಪಕ್ಷದ ಉಳಿವು ನನಗೆ ಮುಖ್ಯ - ದೇವೇಗೌಡ, ಮಾಜಿ ಪ್ರಧಾನಿ

ಕೆಲವೊಮ್ಮೆ ಪಕ್ಷದ ಉಳಿವಿಗಾಗಿ ಜಾತ್ಯತೀತತೆ, ಜನರ ಸಮಸ್ಯೆಗಳನ್ನು ಬದಿಗಿಡಲಾಗುವುದು.


ಮಹಾರಾಷ್ಟ್ರದಿಂದ ಬಂದವರಿಗೆ ಇನ್ನ್ನು ಅವರವರ ಮನೆಯಲ್ಲಿಯೇ ಕ್ವಾರಂಟೈನ್ - ಶ್ರೀರಾಮುಲು, ಸಚಿವ
ನಿಮ್ಮನ್ನು ಮಹಾರಾಷ್ಟ್ರಕ್ಕೆ ಕೊಂಡೊಯ್ದು ಕ್ವಾರಂಟೈನ್ ಮಾಡಿದರೆ ಹೇಗೆ?


ಈ ಡಿಸೆಂಬರ್ ಒಳಗಾಗಿ ದೇಶದಲ್ಲಿ ರಾಜಕೀಯ ಧ್ರುವೀಕರಣ ಸಂಭವಿಸಲಿದೆ - ಎಚ್.ವಿಶ್ವನಾಥ್, ಮಾಜಿ ಸಚಿವ
ಈ ಬಾರಿ ನಿಮ್ಮ ರೇಟೆಷ್ಟು?


ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಈ ಬಾರಿ ರಾಜ್ಯಸಭೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದೆ - ಯಡಿಯೂರಪ್ಪ, ಮುಖ್ಯಮಂತ್ರಿ

ಆರೆಸ್ಸೆಸ್‌ನ ಸಾಮಾನ್ಯ ಕಾರ್ಯಕರ್ತರಿಗೆ ಎಂದರೆ ಇನ್ನೂ ಅರ್ಥಪೂರ್ಣ.


ನಮ್ಮ ಪಕ್ಷದಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತದೆ - ನಳಿನ್ ಕುಮಾರ್ ಕಟೀಲು, ಸಂಸದ

ಮತಹಾಕಿದವರಿಗೆ ಮಾತ್ರ ಚಿಪ್ಪು ಸಿಗುತ್ತದೆ ಎಂಬ ಆರೋಪಗಳಿವೆ.


ಮೋದಿ ಹೇಳಿದಂತೆ ಜನರು ಕೇಳುವುದರಿಂದಲೇ ಭಾರತದಲ್ಲಿ ಕೊರೋನ ನಿಯಂತ್ರಣ ಸಾಧ್ಯವಾಯಿತು
 -ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಭಾರತದಲ್ಲಿ ಕೊರೋನ ನಿಯಂತ್ರಣದಲ್ಲಿದೆಯೇ?


ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ನಿರಾಶ್ರಿತೆ ಆಗುವುದು ನಿಶ್ಚಿತ - ಅಮಿತ್ ಶಾ, ಕೇಂದ್ರ ಸಚಿವ

ಇಡೀ ಭಾರತವೇ ನಿರಾಶ್ರಿತರ ಶಿಬಿರವಾಗಿದೆ ನಿಮ್ಮ ಪ್ರಯತ್ನದಿಂದ.


ರಾಜ್ಯದಲ್ಲಿ ಸೋಂಕು ಹರಡಲು ಮಹಾರಾಷ್ಟ್ರದಿಂದ ಬಂದವರೇ ಕಾರಣ - ಬಸವರಾಜ ಬೊಮ್ಮಾಯಿ, ಸಚಿವ
‘ನಮಸ್ತೆ ಟ್ರಂಪ್’ ಸಮಾವೇಶ ಮಹಾರಾಷ್ಟ್ರದಲ್ಲಿ ನಡೆದಿರುವುದೇ?


ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರಣ -ಸಿ.ಟಿ.ರವಿ, ಸಚಿವ
ಸಂತೋಷ್ ಅವರ ಹರ ಪ್ರಯತ್ನ ವಿಫಲವಾದದ್ದೇ ಕಾರಣ ಎನ್ನಬಹುದು.


ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಿಜೆಪಿಯನ್ನು ಕಂಗಾಲಾಗಿಸಿದೆ - ಯು.ಟಿ.ಖಾದರ್, ಮಾಜಿ ಸಚಿವ

ಕಾಂಗ್ರೆಸ್‌ನಲ್ಲಿರುವ ಕೆಲವು ನಾಯಕರನ್ನೂ ಕಂಗಾಲಾಗಿಸಿರುವ ವದಂತಿಗಳಿವೆ.


ಗುಜರಾತ್‌ನಲ್ಲಿ ಆದಂತೆ ರಾಜಸ್ಥಾನದಲ್ಲಿ ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಿಲ್ಲ - ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

ಮತ್ತೆ ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟಿರುವುದು?.


ದೇವೇಗೌಡರು ನನ್ನ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾದರು ಎಂದು ಹೇಳಲು ನಾನು ಮುಟ್ಟಾಳನಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಮ್ಮ ಬೆಂಬಲದಿಂದ ಆಯ್ಕೆಯಾದ ದೇವೇಗೌಡರೇ ಮುಟ್ಟಾಳರು ಎಂದು ಹೇಳುತ್ತಿದ್ದೀರಾ?


ಕೋವಿಡ್-19 ಬಿಕ್ಕಟ್ಟು ದಿಟ್ಟ ನಿರ್ಧಾರ ತಳೆಯಲು ದೊರೆತ ಸದವಕಾಶ -ನರೇಂದ್ರ ಮೋದಿ, ಪ್ರಧಾನಿ

ನಿಮಗೆ ದಿಟ್ಟ ನಿರ್ಧಾರ ತಳೆಯಲು ಇನ್ನೂ ಯಾವ ಯಾವ ವೈರಸ್‌ಗಳ ಅಗತ್ಯವಿದೆ ಎನ್ನುವುದನ್ನು ಹೇಳಿ ಬಿಡಿ.


ಬ್ರಾಹ್ಮಣರಿಗೆ ಆಸ್ತಿಗಿಂತ ಶಿಕ್ಷಣವೇ ಸಂಪತ್ತು - ಯಡಿಯೂರಪ್ಪ, ಮುಖ್ಯಮಂತ್ರಿ
ಅದಕ್ಕೇ ಉಳಿದವರ ಕೈಯಿಂದ ಶಿಕ್ಷಣ ಕಿತ್ತು ಬ್ರಾಹ್ಮಣರಿಗೆ ನೀಡುವ ಉದ್ದೇಶವೇನಾದರೂ ಇದೆಯೇ? 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!