ಸುಶಾಂತ್ ಸಿಂಗ್ ಸಾವನ್ನು ‘ಹಿಟ್ ವಿಕೆಟ್’ ಎಂದಿದ್ದ ಆರೋಪ: ‘ಆಜ್ ತಕ್’ ಗೆ ಕಾನೂನು ನೋಟಿಸ್

Update: 2020-06-17 15:40 IST

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ಪ್ರಸಾರ ಮಾಡುವ ವೇಳೆ ‘ಇಂಡಿಯಾ ಟುಡೇ’ ಸಮೂಹದ ‘ಆಜ್ ತಕ್’ ವಾಹಿನಿಯು ಅಸಂವೇದಿತನದಿಂದ ವರದಿ ಮಾಡಿದೆ ಎಂದು ಆರೋಪಿಸಿ ‘ಇಂಡಿಯಾ ಟುಡೇ’ ಸಮೂಹದ ಅಧ್ಯಕ್ಷ ಹಾಗೂ ಮುಖ್ಯ ಸಂಪಾದಕ ಅರುಣ್ ಪೂರಿ ಅವರಿಗೆ ದಿಲ್ಲಿ ಮೂಲದ ವಕೀಲ ಮೋಹಿತ್ ಸಿಂಗ್ ಅವರು ಕಾನೂನು ನೋಟಿಸ್ ನೀಡಿದ್ದಾರೆ.

ಸುಶಾಂತ್ ಅವರ ಸಾವಿನ ಸುದ್ದಿಯ ವರದಿ ಮಾಡುವ ವೇಳೆ ಆಜ್ ತಕ್ ವಾಹಿನಿಯು ಫ್ಲ್ಯಾಶ್ ಮಾಡಿದ ನ್ಯೂಸ್ ಟಿಕ್ಕರ್‍ ನಲ್ಲಿ “ಹೌ ಡಿಡ್ ಹೀ ಹಿಟ್ ವಿಕೆಟ್?'' ಎಂದು ಬರೆಯಲಾಗಿತ್ತೆನ್ನಲಾಗಿದೆ. ಧೋನಿ ಜೀವನಾಧರಿತ ಚಿತ್ರದಲ್ಲಿ ಅವರು ಮಾಡಿದ ಪಾತ್ರವನ್ನು ಉಲ್ಲೇಖಿಸಿ  ಈ ರೀತಿ ವ್ಯಂಗ್ಯವಾಗಿ ಬರೆಯಲಾಗಿತ್ತೆಂದು ಆರೋಪಿಸಲಾಗಿದೆ.

“ಈ ರೀತಿ ಬರೆಯುವ ಮೂಲಕ ಸುಶಾಂತ್ ಆತ್ಮಹತ್ಯೆಯು ಬ್ಯಾಟ್ಸ್ ಮ್ಯಾನ್ ಒಬ್ಬ  ತನ್ನದೇ ವಿಕೆಟ್ ಕಿತ್ತಂತಾಗಿದೆ ಎಂದು ಹೇಳಿದಂತಾಗಿದೆ. ಈ ರೀತಿಯ ಬೇಜವಾಬ್ದಾರಿಯುತ ತಲೆಬರಹಗಳ ಮೂಲಕ ಆಜ್ ತಕ್ ವಾಹಿನಿ ವೀಕ್ಷಕರತ್ತ ತನಗಿರುವ ಜವಾಬ್ದಾರಿಯನ್ನು ಮರೆತಿದೆ'' ಎಂದು ದೂರುದಾರರು ಆರೋಪಿಸಿದ್ದಾರೆ.

ವಾಹಿನಿ ತನ್ನ ಈ ಕಮೆಂಟ್ ಮೂಲಕ ನಟನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದೆ, ಇಂತಹ ಕೃತ್ಯ ಐಪಿಸಿಯ ಸೆಕ್ಷನ್ 500 ಅನ್ವಯ ಶಿಕ್ಷಾರ್ಹವಾಗಿದೆ ಎಂದೂ  ಅವರು ಹೇಳಿದ್ದಾರಲ್ಲದೆ, ಇಂಡಿಯಾ ಟುಡೇ ಸಮೂಹ ತನ್ನ ಈ ಕಮೆಂಟ್‍ಗಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಇಲ್ಲದೇ ಇದ್ದಲ್ಲಿ ಅದರ ವಿರುದ್ಧ ಕಾನೂನು ಹೋರಾಟ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News