ಓ ಮೆಣಸೇ...
ಕೊರೋನ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ವಿಶ್ವವೇ ಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಚೀನಾ ಕೂಡ ಭೇಷ್ ಎಂದಿದೆ.
ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಕಲಿಕೆಗೆ ಒತ್ತು ನೀಡುವ ಮೂಲಕ ಶೈಕ್ಷಣಿಕ ಅಸಮಾನತೆಗೆ ಪರಿಹಾರ ಕಂಡುಕೊಳ್ಳಬಹುದು - ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ
ಬಿಸಿಯೂಟವನ್ನೂ ಮೊಬೈಲ್ ಮೂಲಕವೇ ಕಳುಹಿಸುವ ಯೋಜನೆಯಿರಬೇಕು.
ಭಾರತ ಈ ಹಿಂದೆ ಇದ್ದಂತೆ ಬಲಹೀನ ರಾಷ್ಟ್ರವಲ್ಲ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಹೌದು, ನೇಪಾಳ ಕೂಡ ಆ ಧೈರ್ಯದಲ್ಲೇ ತಿರುಗಿ ನಿಂತಿರುವುದು.
ಬಿಜೆಪಿಯಲ್ಲಿ ಲೀಡರ್‌ಗಿರಿ ಇಲ್ಲ - ರಮೇಶ್‌ಜಾರಕಿಹೊಳಿ, ಸಚಿವ
ಸದ್ಯಕ್ಕೆ ದೇಶಕ್ಕೇ ಯೋಗ್ಯ ಲೀಡರ್ ಇಲ್ಲದಂತೆ ಮಾಡಿದ ಪಕ್ಷ ಅದು.
ಹೊಸ ವ್ಯವಸ್ಥೆ, ಚಿಂತನೆಗಳು ಬೇಡ ಎನ್ನುವವರದ್ದು ಬಾವಿಯೊಳಗಿನ ಕಪ್ಪೆಯ ಮನಸ್ಥಿತಿ - ಆರ್.ಅಶೋಕ್, ಸಚಿವ
ಎಲ್ಲರನ್ನೂ ಪಾಳುಬಾವಿಗೆ ನೂಕುವ ಹೊಸ ಚಿಂತನೆಯೇನೋ ನಿಮ್ಮಲ್ಲಿರಬೇಕು.
ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರಲಾಗುತ್ತಿದೆ -ಬಿ.ವೈ.ರಾಘವೇಂದ್ರ, ಸಂಸದ
ಭೂಸುಧಾರಣಾ ಕಾಯ್ದೆ ತಂದಿರುವುದು ರೈತರು ಭೂಮಿಯ ಹಕ್ಕುದಾರರಾಗಬೇಕು ಎಂದು. ಇನ್ನೊಬ್ಬರಿಗೆ ಮಾರಬೇಕು ಎನ್ನುವುದಕ್ಕಾಗಿ ಅಲ್ಲ.
ನಮ್ಮ ದೇಶಕ್ಕೆ ಬೇಕಿರುವುದು ಶಾಂತಿ ಮತ್ತು ಸೌಹಾರ್ದ; ಚೀನಾ, ಪಾಕ್‌ನ ಭೂಮಿಯಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ದೇಶದೊಳಗೆ ಮೊದಲು ಶಾಂತಿ, ಸೌಹಾರ್ದವನ್ನು ನಿರ್ಮಿಸಿ.
ರಾಹುಲ್‌ಗಾಂಧಿಗೆ ದೇಶದ ಸಹಿಷ್ಣುತೆ ಮತ್ತು ಸೌಹಾರ್ದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಗಡಿಯಲ್ಲಿ ನಡೆದಿರುವುದು ಸಹಿಷ್ಣುತೆ, ಸೌಹಾರ್ದಗಳಿಗೆ ಮಾದರಿಯೆ?
ಭಾರತವು ತಪ್ಪು ಸ್ಪರ್ಧೆಯಲ್ಲಿ ಜಯ ಸಾಧಿಸುತ್ತಿದೆ - ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ಒಟ್ಟಿನಲ್ಲಿ ಮೋದಿ ಆಡಳಿತದಲ್ಲಿ ಭಾರತ ಜಯ ಸಾಧಿಸುತ್ತಿದೆಯಲ್ಲ, ಅದು ಮುಖ್ಯ.
ನಮ್ಮೆಲ್ಲರ ತ್ಯಾಗದಿಂದಾಗಿ ಉಪಮುಖ್ಯಮಂತ್ರಿ ಆಗಿರುವುದನ್ನು ಡಾ.ಅಶ್ವತ್ಥನಾರಾಯಣ ಮರೆಯಬಾರದು - ಎಚ್.ವಿಶ್ವನಾಥ್, ಮಾಜಿ ಸಚಿವ
ಅದಕ್ಕೆ ತ್ಯಾಗ ಎನ್ನುವುದಿಲ್ಲ, ಸಮಯಸಾಧಕತನ ಎನ್ನುತ್ತಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಿವಾಳಿಯಾಗಿವೆ - ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ
ಬಿಜೆಪಿ ವಿಶ್ವದಲ್ಲೇ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಅಷ್ಟು ಸಾಲದೆ?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ರೈಂ ರೇಟ್ ಸಾಕಷ್ಟು ಕಡಿಮೆಯಾಗಿದೆ -ಬಸವರಾಜ ಬೊಮ್ಮಾಯಿ, ಸಚಿವ
ಅದಕ್ಕಾಗಿ, ಮುಂದಿನ ವರ್ಷವೂ ಲಾಕ್‌ಡೌನ್ ಹೇರುವ ಉದ್ದೇಶವಿದೆಯೆ?
ಬಿಜೆಪಿಯಲ್ಲಿ ಈಗಾಗಲೇ ಮೂರು ಗುಂಪುಗಳಿವೆ. ಬೇರೆಯವರು ಹೋದರೆ ನಾಲ್ಕು ಗುಂಪು ಆಗಲಿವೆ - ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಆ ನಾಲ್ಕನೇ ಗುಂಪಿನ ನೇತೃತ್ವ ವಹಿಸುವ ಉದ್ದೇಶವೇನಾದರೂ ಇದೆಯೆ?
ಭಾರತ - ನೇಪಾಳ ನಡುವಿನ ರೋಟಿ-ಬೇಟಿ ಸಂಬಂಧ ಯಾರಿಂದಲೂ ಮುರಿಯಲಾಗದು - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಯಾರಿಗೂ ಸಾಧ್ಯವಾಗದೇ ಇದ್ದುದನ್ನು ಮಾಡುವುದಕ್ಕಾಗಿಯೇ ತಾನೆ, ಮೋದಿಯವರು ಪ್ರಧಾನಿಯಾಗಿರುವುದು.
ಬಿಜೆಪಿಯನ್ನು ನಂಬಿ ಬಂದವರಿಗೆ ನೀಡಿರುವ ಭರವಸೆಯಂತೆ ಅವಕಾಶ ಸಿಗಲಿದೆ - ಕೆ.ಎಸ್.ಈಶ್ವರಪ್ಪ, ಸಚಿವ
ನಂಬಿದ ಮತದಾರರಿಗೆ ಮಾತ್ರ ಆಕಾಶವೇ ಗತಿ.
ಇನ್ನು ಮಾಸ್ಕ್ ಧರಿಸದೆ ಹೊರಗೆ ಹೋಗುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದು - ನರೇಂದ್ರ ಮೋದಿ, ಪ್ರಧಾನಿ
ಗಡಿಯಲ್ಲಿ ನಡೆದ ಘಟನೆಗೆ ಮುಖ ಮುಚ್ಚಿಕೊಂಡು ಓಡಾಡುವುದು ಪರಿಹಾರವಲ್ಲ.
ನಾನು 20 ವರ್ಷದ ಹಿಂದೆಯೇ ಬಿಜೆಪಿಗೆ ಬರಬೇಕಿತ್ತು - ರಮೇಶ್ ಜಾರಕಿಹೊಳಿ, ಸಚಿವ
ಹೌದು, ಈಗ ಬಿಜೆಪಿ ಸರಕಾರವನ್ನು ಉರುಳಿಸಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಬಹುದಿತ್ತು.
ನಾನು ಬಿಜೆಪಿಗೆ ಹೊಸಬ, ಆದುದರಿಂದ ಆ ಪಕ್ಷದ ಆಳ, ಅಗಲ ನನಗೆ ತಿಳಿದಿಲ್ಲ - ಎಚ್.ವಿಶ್ವನಾಥ್, ಮಾಜಿ ಸಚಿವ
ಆಳ ತಿಳಿಯದೆ ಆ ಪಕ್ಷಕ್ಕೆ ಹಾರಿದ ಹಲವರು, ಮೂರೇ ದಿನಗಳಲ್ಲಿ ಹೆಣವಾಗಿ ತೇಲಿದ್ದಿದೆ.
ಚುನಾವಣೆಯಲ್ಲಿ ನನ್ನ ಸೋಲಿಗೆ ಸಿದ್ದರಾಮಯ್ಯ, ಡಿಕೆಶಿ ಮತ್ತು ಕುಮಾರಸ್ವಾಮಿ ಈ ತ್ರಿಮೂರ್ತಿಗಳೇ ಕಾರಣ -ಎಂ.ಟಿ.ಬಿ. ನಾಗರಾಜ್, ವಿ.ಪ.ಸದಸ್ಯ
ನಿಮ್ಮ ವಿರುದ್ಧ ಮತಹಾಕಿದ ಜನರ ಪಾತ್ರವೇ ಇಲ್ಲ ಎಂದಾಯಿತು.
ಬಿಎಸ್‌ವೈ ಸರಕಾರದಲ್ಲಿ ನಾನು ಸಚಿವನಾಗಲು ಬಯಸುವುದಿಲ್ಲ - ಬಸನಗೌಡಪಾಟೀಲ್ ಯತ್ನಾಳ್, ಶಾಸಕ
ನೇರವಾಗಿ ಮುಖ್ಯಮಂತ್ರಿಯಾಗುವ ಆಸೆಯೆ?
ಕೊರೋನ ನಿಯಂತ್ರಣದಲ್ಲಿ ಮಾಸ್ಕ್ ಬಹುಮುಖ್ಯ ಪಾತ್ರವಹಿಸುತ್ತ -ಡಾ.ಕೆ.ಸುಧಾಕರ್, ಸಚಿವ
ಆಪರೇಷನ್ ಕಮಲ ಸಂದರ್ಭದಲ್ಲೂ ಬಳಸಿಕೊಳ್ಳಬಹುದು.
ಎಲ್ಲ ಮುಖಂಡರೂ ಕೂಡಿ ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಎಲ್ಲ ಮುಖಂಡರೂ ಒಟ್ಟು ಕೂಡಿ ಬಿಜೆಪಿಗೆ ಹೋಗುವ ಸಿದ್ಧತೆಯೆ?