ನಮ್ಮಲ್ಲಿ ಫ್ಲಾಯ್ಡಾನಂತಹವರಿಗೆ ಕೊರತೆಯೂ ಇಲ್ಲ... ಬೆಲೆಯೂ ಇಲ್ಲ...

Update: 2020-07-04 18:13 GMT

ಅಪರಾಧ ಮತ್ತು ಅಪರಾಧಿಯ ನಡುವೆ ನಮ್ಮ ಸಮಾಜದಲ್ಲಿ ಇರುವ ಸೂಕ್ಷ್ಮತಂತುಗಳು ಮನುಷ್ಯನ ಹುಟ್ಟು ಮತ್ತು ಸಾವಿನ ನಡುವೆಯೂ ಸ್ಪಷ್ಟವಾಗಿ ಕಾಣುತ್ತದೆ ಎನಿಸುವುದಿಲ್ಲವೇ? ಶ್ರೇಣೀಕೃತ ವ್ಯವಸ್ಥೆಯ ನಮ್ಮ ನಾಗರಿಕ ಸಮಾಜದಲ್ಲಿ ಹುಟ್ಟು ಬದುಕನ್ನು ನಿರ್ಧರಿಸುವಂತೆಯೇ ಸಾವಿನ ಮಾರ್ಗವನ್ನೂ ನಿರ್ಧರಿಸಿಬಿಡುತ್ತದೆ. ಹಾಗಾಗಿ ಸಾವು ನಮ್ಮ ಕಣ್ಣಿಗೆ ರಾಚುತ್ತದೆ. ಆದರೆ ಸಾವಿಗೀಡಾದ ಜೀವದ ಹುಟ್ಟಿನ ಮೂಲ ಪೊರೆಯಂತೆ ಕಣ್ಣನ್ನು ಮಸುಕು ಮಾಡಿಬಿಡುತ್ತದೆ.

‘‘ಹುತಾತ್ಮ’’ ಈ ಪದಕ್ಕೆ ಸಮಸ್ತ ಭಾರತೀಯ ರನ್ನೂ ಕ್ಷಣಾರ್ಧದಲ್ಲಿ ಜಾಗೃತಗೊಳಿಸುವ ಶಕ್ತಿ ಇದೆ. ಸುದ್ದಿಮನೆಗಳ ನಿರೂಪಕರು ಮತ್ತು ಸುದ್ದಿವಾಹಕರ ಆಂಗಿಕ ವೈಚಿತ್ರ್ಯಗಳು ಮತ್ತು ಹಾವಭಾವಗಳು ಈ ಪದಕ್ಕೆ ಮತ್ತಷ್ಟು ಮೆರುಗು ನೀಡಿರುವುದನ್ನು ಕಳೆದ ಹಲವು ವರ್ಷಗಳಲ್ಲಿ ಕಂಡಿದ್ದೇವೆ. ಕಳೆದ ವರ್ಷ ಭಯೋತ್ಪಾದಕರಿಂದ 59 ಯೋಧರು ಪುಲ್ವಾಮದಲ್ಲಿ ಹುತಾತ್ಮರಾದರು, ಕೆಲವು ದಿನಗಳ ಹಿಂದೆ ಚೀನಾದ ಸೈನಿಕರ ದಾಳಿಗೆ 20 ಯೋಧರು ಹುತಾತ್ಮರಾದರು. ಪುಲ್ವಾಮದಲ್ಲಿ ಹತರಾದವರಿಗೆ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಆತ್ಮಶಾಂತಿಯ ಮಾರ್ಗವಾಯಿತು. ಗಲ್ವ್ವಾನ್‌ನಲ್ಲಿ ಹತರಾದವರ ಆತ್ಮಶಾಂತಿಯ ಪ್ರಯತ್ನಗಳು ನಡೆಯುತ್ತಿವೆ. ಸದ್ಯಕ್ಕೆ ಆ್ಯಪ್ ನಿಷೇಧದ ಮೂಲಕ ನಾಂದಿ ಹಾಡಲಾಗಿದೆ.

ಹುತಾತ್ಮ ಪದವೇ ವಿಚಿತ್ರ ಎನಿಸುತ್ತದೆ. ಯಾರನ್ನು ಹುತಾತ್ಮ ಎನ್ನುವುದು? ಒಂದು ನಿರ್ದಿಷ್ಟ ಧ್ಯೇಯ ಸಾಧನೆಗಾಗಿ ಜೀವನ ಪಣ ಇಟ್ಟು ಹೋರಾಡುವವರು ತಮ್ಮ ವಿರೋಧಿಗಳಿಂದ ಹತರಾದರೆ ಹುತಾತ್ಮ ಪಟ್ಟಕ್ಕೆ ಅರ್ಹತೆ ಪಡೆಯಬಹುದೇ? ಸಾಮಾನ್ಯವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವವರು, ದೇಶ ರಕ್ಷಣೆಗಾಗಿ ಗಡಿ ಕಾಯುವ ಯೋಧರು ಹುತಾತ್ಮ ಪಟ್ಟಕ್ಕೆ ಸದಾ ಅರ್ಹತೆ ಪಡೆದಿರುತ್ತಾರೆ. ಇದು ತಪ್ಪೇನಲ್ಲ. ಏಕೆಂದರೆ ಅವರ ತ್ಯಾಗ, ಬಲಿದಾನಗಳಿಗೆ ಗೌರವ ಸೂಚಿಸುವುದು ಭೌಗೋಳಿಕ ರಾಷ್ಟ್ರದ ಪ್ರಜೆಗಳ ನೈತಿಕ ಕರ್ತವ್ಯ. ಇನ್ನು ಮತಧರ್ಮಗಳ ಅನುಯಾಯಿಗಳು ತಮ್ಮ ಧರ್ಮದ ರಕ್ಷಣೆಗಾಗಿ ಮಡಿಯುವವರನ್ನೂ ಹುತಾತ್ಮರೆನ್ನುತ್ತಾರೆ.

ನಮ್ಮ ಭೌಗೋಳಿಕ ರಾಷ್ಟ್ರದ ವಿಮೋಚನೆಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಾವಿರಾರು ಯೋಧರು, ಸೇನಾನಿಗಳು, ಹೋರಾಟಗಾರರು ಹುತಾತ್ಮರಾಗಿಯೇ ಅಜರಾಮರವಾಗಿ ಉಳಿಯುವುದು ಸಹಜ. ಆದರೆ ಈ ಹುತಾತ್ಮರ ಆತ್ಮಾರ್ಪಣೆಗೆ ಒಂದು ಸಾರ್ಥಕತೆ ಬರುವುದು ಯಾವಾಗ? ಚೀನಾ ದಾಳಿಯನ್ನು ತಡೆಗಟ್ಟಲು ಮುಂದಾಗಿ ತಮ್ಮ ಜೀವ ತೆತ್ತ 20 ಯೋಧರು ಕೇವಲ ನಮ್ಮ ಭೂ ಪ್ರದೇಶವನ್ನು ರಕ್ಷಿಸಲು ನಿಯೋಜಿಸಲ್ಪಟ್ಟವರೇ? ಅಲ್ಲ. ಈ ದೇಶದೊಳಗಿನ 130 ಕೋಟಿ ಜನರ ರಕ್ಷಣೆ ಅವರ ಆದ್ಯತೆಯಾಗಿರುತ್ತದೆ. ಸ್ವಾತಂತ್ರ್ಯ ಸೇನಾನಿಗಳ ಧ್ಯೇಯವೂ ಇದೇ ಅಲ್ಲವೇ? ಈ 130 ಕೋಟಿ ಜನರಲ್ಲಿ ಒಂದು ವರ್ಗ, ಸಮುದಾಯ, ಜಾತಿ, ಮತಧರ್ಮದ ಜನರು, ವ್ಯವಸ್ಥೆಯಿಂದಲೇ, ಆಂತರಿಕ ಹಂತಕರಿಂದಲೇ ಹತರಾಗುತ್ತಿದ್ದರೆ ಯೋಧರ ಸಾರ್ಥಕತೆಗೆ ಅರ್ಥವಾದರೂ ಏನು?

ಒಂದು ದೇಶ ವಸಾಹತು ಆಳ್ವಿಕೆಯಿಂದ ಅಥವಾ ಸಾಮ್ರಾಜ್ಯಶಾಹಿ ಹಿಡಿತದಿಂದ ಮುಕ್ತವಾಗುವುದೆಂದರೆ ಆ ದೇಶದ ಪ್ರಜೆಗಳು ಹೊಸ ಸ್ವತಂತ್ರ ಆಡಳಿತ ವ್ಯವಸ್ಥೆಯ ಫಲಾನುಭವಿಗಳಾಗುತ್ತಾರೆ ಎಂದೇ ಅರ್ಥ, ಅಲ್ಲವೇ? ಈ ಫಲಾನುಭವಿಗಳು ತಾವೇ ಚುನಾಯಿಸುವ ಒಂದು ಸರಕಾರ ಮತ್ತು ತಾವೇ ಬಯಸುವ ಆಡಳಿತ ವ್ಯವಸ್ಥೆಯಲ್ಲಿ ನಿರ್ಭೀತಿಯಿಂದ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಈ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತಮ್ಮದೇ ಆದ ಜೀವನದ ಗುರಿ ಮುಟ್ಟುವ ತವಕ ಪ್ರತಿಯೊಬ್ಬ ನಾಗರಿಕನಲ್ಲೂ ಇರುತ್ತದೆ. ಪರಕೀಯರ ಆಡಳಿತದಲ್ಲಿರುವ ಪ್ರಜೆಗಳಲ್ಲಿ ಇರುವ ಅತಂತ್ರದ ಕಲ್ಪನೆ ಸ್ವತಂತ್ರ ರಾಷ್ಟ್ರದ ಪ್ರಜೆಗಳಲ್ಲಿ ಇರಬೇಕಿಲ್ಲ. ಆದರೆ ಸ್ವಾತಂತ್ರ್ಯದ ಹಂಬಲ ಮಾತ್ರ ಇದ್ದೇ ಇರುತ್ತದೆ.

ಏಕೆಂದರೆ ತನ್ನ ವ್ಯಕ್ತಿಗತ ಬದುಕು ರೂಪಿಸಿಕೊಳ್ಳುವ ಮಾರ್ಗದಲ್ಲಿ ಮನುಷ್ಯ ಸದಾ ಸ್ವಾತಂತ್ರ್ಯ ಬಯಸುತ್ತಾನೆ. ಒಂದು ದೇಶದ ಸಂವಿಧಾನ ಈ ಸ್ವಾತಂತ್ರ್ಯವನ್ನು, ಮುಕ್ತ ಅವಕಾಶವನ್ನು ಕಲ್ಪಿಸಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ವ್ಯಕ್ತಿ ಸ್ವಾತಂತ್ರ್ಯವೇ, ನಾವು ದೇಶ ಎಂದು ಭಾವಿಸುವ ಭೌಗೋಳಿಕ ಅಸ್ಮಿತೆಗೆ ಅಡಿಪಾಯವಾಗಿರುತ್ತದೆ. ತನ್ನ ವ್ಯಕ್ತಿ ಸ್ವಾತಂತ್ರ್ಯವನ್ನು ಬಳಸುವ ಮೂಲಕವೇ ಪ್ರತಿಯೊಬ್ಬ ನಾಗರಿಕನೂ ಜೀವನದ ಗುರಿ ತಲುಪಲು ಯತ್ನಿಸುತ್ತಿರುತ್ತಾನೆ. ಈ ಗುರಿ ತಲುಪುವ ಮಾರ್ಗದಲ್ಲಿ ಅವನು ಅಥವಾ ಅವಳು ಭಾರತೀಯ ಸೇನೆಯನ್ನೂ ಆಶ್ರಯಿಸಬಹುದು ಅಥವಾ ತನ್ನದೇ ಆದ ವಂಶಪಾರಂಪರಿಕ ಕಸುಬನ್ನೋ, ನೌಕರಿಯನ್ನೋ, ವ್ಯಾಪಾರವನ್ನೋ ಆಶ್ರಯಿಸಬಹುದು.

ಕೃಷಿ, ವ್ಯಾಪಾರ, ಸರಕಾರಿ ನೌಕರಿ, ಸ್ವಯಂ ಉದ್ಯೋಗ, ವೃತ್ತಿಪರ ಕಾಯಕ ಹೀಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಾಗರಿಕರು ಆಯ್ಕೆ ಮಾಡಿಕೊಳ್ಳುವ ಹಲವು ಮಾರ್ಗಗಳಲ್ಲಿ ಸೇನೆಯೂ ಒಂದು. ಸೇನೆ ದೇಶದ ಗಡಿ ರಕ್ಷಣೆ ಮಾಡುತ್ತದೆ, ಸೈನಿಕರು ತಮ್ಮ ಪ್ರಾಣ ಒತ್ತೆ ಇಟ್ಟು ದೇಶದ ಅಖಂಡತೆಯ ರಕ್ಷಣೆ ಮಾಡುತ್ತಾರೆ ಹಾಗಾಗಿ ಶ್ರೇಣೀಕರಣ ವ್ಯವಸ್ಥೆಯಲ್ಲಿ ಉಚ್ಚ ಸ್ಥಾನ ಪಡೆಯುತ್ತಾರೆ. ಹಾಗೆಂದ ಮಾತ್ರಕ್ಕೆ ದೇಶದ ಉತ್ಪಾದನಾ ಪ್ರಕ್ರಿಯೆಯಲ್ಲಿ ತಮ್ಮ ಶ್ರಮದ ಪಾಲು ಹೊಂದಿರುವ ಇತರ ನಾಗರಿಕರನ್ನು ಕಡೆಗಣಿಸಲಾಗುವುದೇ? ಈ ದೃಷ್ಟಿಯಿಂದ ನೋಡಿದಾಗ ಪ್ರತಿಯೊಬ್ಬ ಪ್ರಜೆಯೂ ಯೋಧರಂತೆಯೇ ಕಾಣುತ್ತಾರೆ. ಕೆಲವು ಯೋಧರು ರಕ್ಷಿಸುತ್ತಾರೆ, ಕೆಲವರು ಪೋಷಿಸುತ್ತಾರೆ, ಕೆಲವರು ಸಲಹುತ್ತಾರೆ, ಕೆಲವರು ಹೆಗಲು ನೀಡುತ್ತಾರೆ.

ನೆಲದ ಗುಣವರಿತು ತಮ್ಮ ಬೆವರು ನೆತ್ತರು ಸುರಿಸಿ ದೇಶದ ಪ್ರಗತಿಗೆ ಹೆಗಲು ನೀಡುವ ಪ್ರತಿಯೊಬ್ಬ ಶ್ರಮಜೀವಿಯನ್ನೂ ಯೋಧನಂತೆ ಕಂಡಾಗಲೇ ಆ ದೇಶ ಊರ್ಜಿತವಾಗುತ್ತದೆ. ಇಲ್ಲಿ ದೇಶ ಎನ್ನುವ ಕಲ್ಪನೆ ತನ್ನ ಭೌಗೋಳಿಕ ಸ್ವರೂಪವನ್ನು ಕಳಚಿಕೊಂಡು ತಾತ್ವಿಕ ನೆಲೆಯಲ್ಲಿ ತನ್ನ ನೈತಿಕ ನೆಲೆಯಲ್ಲಿ ಸ್ಥಾಪನೆಯಾಗುತ್ತದೆ. ಬೌದ್ಧಿಕವಾಗಿ ಉತ್ಕೃಷ್ಟತೆ ಪಡೆಯಲು ಬಯಸುವ ಯಾವುದೇ ಭೌಗೋಳಿಕ ರಾಷ್ಟ್ರ ಈ ನೈತಿಕ ನೆಲೆಯನ್ನು ತಲುಪಲು ಸಾಕಷ್ಟು ಶ್ರಮಿಸಬೇಕಾಗುತ್ತದೆ. ಸಮ ಸಮಾಜದ ಕಲ್ಪನೆ ಮತ್ತು ಶೋಷಣೆ ಇಲ್ಲದ ಮನುಕುಲದ ಕಲ್ಪನೆಗೆ ಈ ರಾಷ್ಟ್ರದ ನೆಲೆ ವರದಾನವಾಗುತ್ತದೆ.

ಇದು ಕಾಲ್ಪನಿಕ ಜಗತ್ತಿನ ರೋಚಕತೆ ಎನಿಸಬಹುದು. ಆದರೆ ನಮ್ಮ ನಡುವಿನ ಕ್ರೌರ್ಯ, ಅಪಮಾನಿತ ಜನತೆಯ ಬವಣೆ, ಶ್ರೇಷ್ಠತೆಯ ಅಹಮಿಕೆ, ಶ್ರೇಣೀಕರಣದ ತರತಮಗಳು ಮತ್ತು ಮನುಜ ಜೀವದ ನಿಕೃಷ್ಟತೆ ಇವೆಲ್ಲವನ್ನೂ ಗಮನಿಸುವಾಗ ಈ ಕಾಲ್ಪನಿಕ ಪ್ರಪಂಚಕ್ಕಾಗಿ ಹಂಬಲಿಸುವುದು ತಪ್ಪುಎನಿಸುವುದಿಲ್ಲ. ಈ ದೇಶದಲ್ಲಿ ಒಂದು ಸಂವಿಧಾನ ಇದೆ. ಈ ಸಂವಿಧಾನದಡಿ ಚುನಾಯಿಸಲ್ಪಟ್ಟ ಸರಕಾರಗಳಿವೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಕಾರ್ಯಾಂಗ ಮತ್ತು ಶಾಸಕಾಂಗಗಳಿವೆ. ನಾವು ಒಂದು ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಅಪ್ಪಿಕೊಂಡಿದ್ದೇವೆ, ಒಪ್ಪಿಕೊಂಡಿದ್ದೇವೆ.

ಈ ಸಾರ್ವಭೌಮ ರಾಷ್ಟ್ರದ ಜನ-ಗಣ ಮತ್ತು ಮನ ಎಲ್ಲವೂ ಪ್ರಜಾಸತ್ತೆಯ ಕೂಸುಗಳು. ಪ್ರಜಾತಂತ್ರವನ್ನು ಸಲಹಿ ಪೋಷಿಸಲು ಈ ಮೂರೂ ಕೂಸುಗಳು ನಿಷ್ಕಲ್ಮಷವಾಗಿರಬೇಕು. ಇಲ್ಲಿ ಜೀವ, ಜೀವನ ಮತ್ತು ಜೀವನೋಪಾಯ ಈ ಮೂರರ ನಡುವಿನ ಅವಿನಾಭಾವ ಸಂಬಂಧದ ನಡುವೆ ಜೀವಪರತೆ ಜೀವಂತವಾಗಿದ್ದರೆ ಮಾತ್ರ ನಮ್ಮ ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಭಾರತದ ದುರಂತ ಎಂದರೆ ಈ ಜೀವಪರತೆ ಕ್ರಮೇಣ ಕ್ಷೀಣಿಸುತ್ತಲೇ ಇದೆ. ಹುಟ್ಟು ನಮ್ಮನ್ನು ಕ್ಷಣಮಾತ್ರದಲ್ಲಿ ಜಾಗೃತಗೊಳಿಸುತ್ತದೆ. ಏಕೆಂದರೆ ಅಲ್ಲಿ ಜಾತಿಯ ಸೋಂಕಿದೆ. ಹುಟ್ಟಿದ ಮಗು ನಮ್ಮದೋ ಅಲ್ಲವೋ ಎನ್ನುವ ಪ್ರಶ್ನೆಯೇ ಬದುಕಿಗೆ ಮೆರುಗು ನೀಡುವಂತಹ ಸಮಾಜವನ್ನು ನಾವು ಕಟ್ಟಿಕೊಂಡಿದ್ದೇವೆ. ಆದರೆ ಸಾವು ನಮ್ಮನ್ನು ಕದಡುವುದೇ ಇಲ್ಲ. ಏಕೆಂದರೆ ಸಾವಿನ ಸೂತಕ ಹುಟ್ಟಿನ ಪಾವಿತ್ರ್ಯತೆಯನ್ನೂ ತೊಡೆದುಹಾಕಿಬಿಡುತ್ತದೆ. ಇಲ್ಲಿ ಜೀವ ಮತ್ತು ಜೀವಪರತೆಯ ನಡುವಿನ ಸೂಕ್ಷ್ಮ ಸಂಬಂಧ ಮುಖ್ಯವಾಗುತ್ತದೆ.

ಭಾರತ ಕ್ರಮೇಣ ಈ ಸೂಕ್ಷ್ಮತೆಯನ್ನು ಕಳೆದುಕೊಂಡುಬಿಟ್ಟಿದೆ. ನಾವು ಹುಟ್ಟಿನ ಶ್ರೇಣೀಕರಣದಿಂದ ಸಾವಿನ ಶ್ರೇಣೀಕರಣದೆಡೆಗೆ ಸಾಗುತ್ತಿದ್ದೇವೆ. ಮನುಷ್ಯನ ಸಾವಿಗೆ ಆಧುನಿಕ ಭಾರತೀಯ ಸಮಾಜ ನೀಡುವ ನಾಮಾಂಕಿತಗಳನ್ನು ನೋಡಿದರೆ ಹುಟ್ಟಿನಲ್ಲಿ ಕಾಣುವ ಜಾತಿಗಳೇ ನೆನಪಾದರೆ ಅಚ್ಚರಿಯೇನಿಲ್ಲ. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ಸುಶಿಕ್ಷಿತ ನಾಗರಿಕ ಸಮಾಜದಲ್ಲಿ ಸಾವಿಗೆ ಮಾನ್ಯತೆ ದೊರೆಯುವುದಕ್ಕೂ ಮಾನದಂಡಗಳಿವೆ. ಹಾಗಾಗಿಯೇ ಪುಲ್ವಾಮ, ಗಲ್ವಾನ್, ಕಾರ್ಗಿಲ್ ನಮ್ಮಾಳಗೆ ಉಕ್ಕಿಸುವ ಸಂವೇದನೆ ಮತ್ತು ವೇದನೆ ನಮ್ಮ ನಡುವೆಯೇ ನಮ್ಮವರಿಂದಲೇ ಹುತಾತ್ಮರಾಗುತ್ತಿರುವ ತೂತುಕುಡಿಯ ಸ್ವದೇಶಿ ಫ್ಲಾಯ್ಡಾಗಳು ಉಕ್ಕಿಸುವುದಿಲ್ಲ.

ಜಾರ್ಜ್ ಫ್ಲಾಯ್ಡಾ ಎಂಬ ಒಬ್ಬ ಕಪ್ಪುಜನಾಂಗದ ವ್ಯಕ್ತಿಯ ಸಾವು ಇಡೀ ಅಮೆರಿಕವನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ನಮ್ಮಲ್ಲಿ ಅಂತಹ ಫ್ಲಾಯ್ಡಾಗಳು ತರಗೆಲೆಗಳಂತೆ ಉದುರುತ್ತಿದ್ದರೂ ಗುಡಿಸಿಹಾಕಲಾಗುತ್ತಿರುತ್ತದೆ. ಉತ್ತರಪ್ರದೇಶದಲ್ಲಿ ಕೆಲವು ತಿಂಗಳುಗಳ ಹಿಂದೆ ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಯನ್ನು ಕಸದ ಗಾಡಿಯಲ್ಲಿ ಎತ್ತಿ ಬಿಸಾಡಲಾಗಿತ್ತು. ಜಿಲ್ಲಾಧಿಕಾರಿಯ ವಿರುದ್ಧ ಕಾನೂನು ಕ್ರಮ, ಸಾಕಲ್ಲವೇ, ಆ ಜೀವಕ್ಕೆ ಬೆಲೆ ನಿಗದಿಪಡಿಸಲಾಯಿತು. ಮೊನ್ನೆ ಕರ್ನಾಟಕದ ಬಳ್ಳಾರಿಯಲ್ಲಿ ಮೃತಪಟ್ಟ 9 ರೋಗಿಗಳ ಶವವನ್ನು ಗುಂಡಿಯೊಳಗೆ ಎಸೆಯಲಾಗಿದುದನ್ನು ಇಡೀ ರಾಜ್ಯವೇ ಗಮನಿಸುತ್ತಿದೆ. ಇಲ್ಲಿಯೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ. ಮತ್ತೊಮ್ಮೆ ಬೆಲೆ ನಿಗದಿ. ಮಾರುಕಟ್ಟೆ ಬಂದ್.

ಎರಡು ಘಟನೆಗಳನ್ನೂ ಮೀರಿಸುವ ಒಂದು ಕ್ರೌರ್ಯವನ್ನು ತಮಿಳುನಾಡಿನ ತೂತುಕುಡಿಯಲ್ಲಿ ಕಂಡಿದ್ದೇವೆ. ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಿದ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ರಾತ್ರಿ ಎಂಟುಗಂಟೆಯ ಮೇಲೆ ಅಂಗಡಿ ತೆರೆದಿದ್ದ ತಪ್ಪಿಗೆ ಜಯರಾಜ್ ಮತ್ತು ಆತನ ಮಗ ಬೆನಿಕ್ಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಕಾಲ ಸೆರೆಮನೆಯಲ್ಲಿ ಚಿತ್ರಹಿಂಸೆ ನೀಡಿ, ಮಾರಣಾಂತಿಕ ಹಲ್ಲೆ ನಡೆಸಿ ನಂತರ ಆಸ್ಪತ್ರೆಗೆ ಕರೆತರುವ ಮೂಲಕ ಪೊಲೀಸ್ ಅಧಿಕಾರಿಗಳು ಇಬ್ಬರು ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ. ಇದು ಕೊಲೆ ಎಂದು ದೃಢಪಟ್ಟಿದೆ. ಈಗ ಮತ್ತೊಂದು ತನಿಖೆ, ಮತ್ತಿಬ್ಬರಿಗೆ ಶಿಕ್ಷೆ ಮತ್ತೊಮ್ಮೆ ಬೆಲೆ ನಿಗದಿ. ಇತಿಶ್ರೀ.

 ಆದರೆ ಇಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕಿದೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವುದು ಅಷ್ಟು ಘೋರ ಅಪರಾಧವೇ ಆಗಿದ್ದಲ್ಲಿ ಎಷ್ಟೋ ಸಚಿವರು, ರಾಜಕಾರಣಿಗಳು, ಶಾಸಕರು, ಶ್ರೀಮಂತರು, ಉದ್ಯಮಿಗಳು ಮತ್ತು ಮಧ್ಯಮ ವರ್ಗದ ಹಿತವಲಯದವರು ಬಂಧನಕ್ಕೊಳಗಾಗಬೇಕಿತ್ತು, ಅಲ್ಲವೇ? ಕಠಿಣ ಲಾಕ್‌ಡೌನ್ ನಡುವೆಯೇ ಮಗನ ಮದುವೆ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ನಮ್ಮ ನಡುವೆ ಇದ್ದಾರೆ, ಸೇಬಿನ ಹಾರ ಹಾಕಿಕೊಂಡು ಮೆರವಣಿಗೆ ನಡೆಸಿದ ಆರೋಗ್ಯ ಸಚಿವರಿದ್ದಾರೆ, ಶಿಫಾರಸುಗಳನ್ನು ಬಳಸಿ ನಿಗದಿತ ಗರಿಷ್ಠ ಜನರ ಮಿತಿಯನ್ನೂ ಮೀರಿ ಸಮಾರಂಭಗಳನ್ನು ನಡೆಸಿದ ನೂರಾರು ಕುಟುಂಬಗಳಿವೆ. ಯಾರಿಗೂ ಶಿಕ್ಷೆಯಾಗಿಲ್ಲ. ಆಗುವುದೂ ಇಲ್ಲ.

ಆದರೆ ಒಂದು ಸಣ್ಣ ಅಂಗಡಿ ನಡೆಸುವ ವ್ಯಕ್ತಿ, ಆತನ ಮಗ ಮರಣದಂಡನೆಗೆ ಗುರಿಯಾಗುತ್ತಾರೆ. ಈ ಕೊಲೆಗೆ ಯಾರು ಹೊಣೆ? ಮೇಲ್ನೋಟಕ್ಕೆ ಪೊಲೀಸರೇ ಹೌದು. ಆದರೆ ಮೂಲತಃ ಆಡಳಿತ ವ್ಯವಸ್ಥೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅಪರಾಧ ಮತ್ತು ಅಪರಾಧಿಯ ನಡುವೆ ನಮ್ಮ ಸಮಾಜದಲ್ಲಿ ಇರುವ ಸೂಕ್ಷ್ಮತಂತುಗಳು ಮನುಷ್ಯನ ಹುಟ್ಟು ಮತ್ತು ಸಾವಿನ ನಡುವೆಯೂ ಸ್ಪಷ್ಟವಾಗಿ ಕಾಣುತ್ತದೆ ಎನಿಸುವುದಿಲ್ಲವೇ? ಶ್ರೇಣೀಕೃತ ವ್ಯವಸ್ಥೆಯ ನಮ್ಮ ನಾಗರಿಕ ಸಮಾಜದಲ್ಲಿ ಹುಟ್ಟು ಬದುಕನ್ನು ನಿರ್ಧರಿಸುವಂತೆಯೇ ಸಾವಿನ ಮಾರ್ಗವನ್ನೂ ನಿರ್ಧರಿಸಿಬಿಡುತ್ತದೆ. ಹಾಗಾಗಿ ಸಾವು ನಮ್ಮ ಕಣ್ಣಿಗೆ ರಾಚುತ್ತದೆ. ಆದರೆ ಸಾವಿಗೀಡಾದ ಜೀವದ ಹುಟ್ಟಿನ ಮೂಲ ಪೊರೆಯಂತೆ ಕಣ್ಣನ್ನು ಮಸುಕು ಮಾಡಿಬಿಡುತ್ತದೆ. ಈ ಇಬ್ಬರ ಸಾವು ನಮ್ಮ ನಾಗರಿಕ ಸಮಾಜದಲ್ಲಿ ಯಾವುದೇ ಸಂಚಲನ ಉಂಟುಮಾಡದಿರುವುದನ್ನು ನೋಡಿದರೆ ಸಾವು ಎಷ್ಟು ಸಾಪೇಕ್ಷವಾಗಿದೆ ಎನಿಸುವುದಿಲ್ಲವೇ?

ಇಲ್ಲಿ ನಮಗೆ ಫ್ಲಾಯ್ಡಾ ನೆನಪಾಗುತ್ತಾನೆ. ಅಲ್ಲಿ ಫ್ಲಾಯ್ಡಾನ ಅಸಹಜ ಸಾವು ಸುಪ್ತ ಮಾನವ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಇಲ್ಲಿ ಆ ಪ್ರಜ್ಞೆಯೇ ಕಂಡುಬರುವುದಿಲ್ಲ. ಕೆಲವೇ ಬೆರಳೆಣಿಕೆಯಷ್ಟು ಸಂವೇದನಾಶೀಲ ಮನಸುಗಳು ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕಾನೂನು ಮತ್ತು ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸುತ್ತವೆ. ಸಾರ್ವಜನಿಕ ವಲಯದ ನಾಗರಿಕ ಪ್ರಜ್ಞೆ ತೆರೆಮರೆಯಲ್ಲೇ ಉಳಿದುಬಿಡುತ್ತದೆ. 1960ರ ದಶಕದಲ್ಲಿ ತೆರೆಗೆ ಬಂದ ‘ಪೂರಬ್ ಔರ್ ಪಶ್ಚಿಮ್’ ಚಿತ್ರದಲ್ಲಿ ಕವಿ ಇಂದಿವರ್ ಅವರ ಹಾಡಿನ ಸಾಲುಗಳು ಹೀಗಿವೆ : ‘‘ಕಾಲೇ ಗೋರೇ ಕಾ ಭೇದ್ ನಹಿ ಹರ್ ದಿಲ್ ಪೆ ಹಮಾರಾ ನಾಥಾ ಹೈ ...’’ (ನಮ್ಮಲ್ಲಿ ಕಪ್ಪುಬಿಳುಪಿನ ನಡುವೆ ಭೇದ ಮಾಡುವುದಿಲ್ಲ. ಎಲ್ಲ ಹೃದಯಗಳೊಡನೆಯೂ ಸಂಬಂಧ ಇಟ್ಟುಕೊಳ್ಳುತ್ತೇವೆ) ಉತ್ತಮ ಹಾಡು ಆದರೆ ಆ ಕವಿ ಸುಳ್ಳು ಹೇಳಿದ್ದರು ಎನಿಸುವುದಿಲ್ಲವೇ?

ಬಳ್ಳಾರಿಯಲ್ಲಿ ಹೂತು ಹೋದ ಶವಗಳು, ತೂತುಕುಡಿಯಲ್ಲಿ ಬೆಂದುಹೋದ ಜೀವಗಳು, ಉತ್ತರಪ್ರದೇಶದಲ್ಲಿ ಕಸದ ಬುಟ್ಟಿ ಸೇರಿದ ಶವ ಇವೆಲ್ಲವನ್ನೂ ನಾವು ಹುತಾತ್ಮ ಜೀವಗಳು ಎನ್ನಲು ಸಾಧ್ಯವೇ? ಈ ಅಮಾಯಕ ಜೀವಗಳನ್ನು ಕೊಂದಿದ್ದು ಕೋವಿಡ್ ಅಲ್ಲ ನಮ್ಮ ಆಡಳಿತ ವ್ಯವಸ್ಥೆಯ ಕೋವಿದರು ಎನಿಸುವುದಿಲ್ಲವೇ? ಆಧುನಿಕ ನಾಗರಿಕತೆಯ ವಾರಸುದಾರರಂತೆ ಬೆನ್ನು ತಟ್ಟಿಕೊಳ್ಳುವ ನಮಗೆ ಈ ಸಾವುಗಳು, ಪ್ರವಾಹದಲ್ಲಿ ಕೊಚ್ಚಿಹೋಗುವ ಸರಕುಗಳಂತೆ ಕಾಣುವುದಾದರೆ ನಾವು ನಾಗರಿಕತೆಯ ವ್ಯಾಖ್ಯಾನವನ್ನೇ ಬದಲಿಸಬೇಕಾಗುತ್ತದೆ.

ಭಾರತದಲ್ಲಿ ಹುಟ್ಟು ಮತ್ತು ಸಾವಿನ ನಡುವೆ ಇರುವ ಸೂಕ್ಷ್ಮ ತಂತುಗಳನ್ನು ಸರಿಯಾಗಿ ಗ್ರಹಿಸಬೇಕೆಂದರೆ ಲಾಕಪ್ ಸಾವು, ಕೋಮುದಂಗೆಗಳಲ್ಲಿ ಅಳಿಯುವ, ಜಾತಿ ದ್ವೇಷಕ್ಕೆ ಬಲಿಯಾಗುವ, ಮತಾಂಧತೆಗೆ ಆಹಾರವಾಗುವ ಮತ್ತು ಪ್ರಭುತ್ವದ ದಮನಕಾರಿ ಆಡಳಿತ ನೀತಿಗಳಿಗೆ ಬಲಿಯಾಗುವ ಜೀವಗಳ ಪೂರ್ವಾಪರಗಳನ್ನು ಗ್ರಹಿಸಬೇಕು. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಶೋಷಣೆಗೂ ಒಂದು ವಿಶಿಷ್ಟ ಆಯಾಮವಿದೆ, ಸಾವಿಗೂ ನಿರ್ದಿಷ್ಟ ಆಯಾಮವಿದೆ. ಶ್ರೇಣೀಕೃತ ವ್ಯವಸ್ಥೆಯ ಮೆಟ್ಟಿಲುಗಳ ಏರಿಳಿತದಂತೆಯೇ ಸಹಜ ಮತ್ತು ಅಸಹಜ ಸಾವುಗಳೂ ಸಾಪೇಕ್ಷತೆ ಪಡೆದುಬಿಡುತ್ತವೆ.

ಹಾಗಾಗಿಯೇ ಇತಿಹಾಸದ ಗಣಿಗಳಲ್ಲಿ ಸದ್ದು ಗದ್ದಲವಿಲ್ಲದೆ ಹೂತು ಹೋಗುವ ಆತ್ಮಗಳು ಎಂದಿಗೂ ಹುತಾತ್ಮ ಪಟ್ಟ ಪಡೆಯುವುದಿಲ್ಲ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News