ತಿನ್ನುವುದು ಬದನೆಕಾಯಿ...

Update: 2020-07-20 19:30 GMT

ದಿನನಿತ್ಯದ ನಮ್ಮ ಮಾತುಗಳ ನಡುವೆ ವಸ್ತು-ವಿಷಯದ ಅವಗಣನೆಗೋ ಮತ್ತೊಂದಕ್ಕೋ ‘ಬದನೆಕಾಯಿ’ ಎನ್ನುವ ಮಾತು ಆಗಾಗ ನಮ್ಮ ಬಾಯಿಂದ ಹೊರಡುತ್ತಲೇ ಇರುತ್ತದೆ. ಬೈಗುಳಕ್ಕೆ ಅಥವಾ ಅವಗಣನೆಗೆ ಬಳಕೆಯಾಗುವ ತರಕಾರಿ ಇದೊಂದೇ ಅನ್ನಿಸುತ್ತೆ. ಎಷ್ಟರ ಮಟ್ಟಿಗೆ ಅಂದರೆ ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಅನ್ನುವ ಗಾದೆಮಾತು ಪ್ರಚಲಿತವಾಗುವಷ್ಟು. ಇದನ್ನು ಗಮನಿಸಿದರೆ ಒಂದು ಕಾಲಕ್ಕೆ ಬದನೆಕಾಯಿ ತಿನ್ನೋದು ನಿಷಿದ್ಧವಾಗಿರಬೇಕು ಅಥವಾ ಅದನ್ನು ಕನಿಷ್ಠವಾಗಿ ಕಂಡಿದ್ದಿರಬೇಕು. ಈಗಲೂ ಹಲವು ಜಾತಿ - ಪಂಥಗಳ ಜನರು ಬದನೆಕಾಯಿ ತಿನ್ನುವುದಿಲ್ಲ, ಕೆಲವರು ‘ನಿರ್ದಿಷ್ಟ ಜಾತಿಯ ಬದನೆಕಾಯಿ’ ಮಾತ್ರ ತಿನ್ನುತ್ತಾರೆ. ಹಲವರಿಗೆ ಇದನ್ನು ತಿಂದರೆ ಅಲರ್ಜಿ. ಮತ್ತೆ ಕೆಲವರಿಗೆ ದಿನನಿತ್ಯದ ಆಹಾರದ ಒಂದು ಭಾಗ. ಒಟ್ಟಿನಲ್ಲಿ ಇದು ಊಟದಷ್ಟೇ, ಉಗಿತಕ್ಕೂ ಬಳಕೆಯಾಗುತ್ತದೆ.

ಬದನೆಕಾಯಿ ನಮ್ಮ ಮನೆ ಹಿತ್ತಿಲು, ತೋಟ, ಹೊಲಗಳಲ್ಲಿ ಸಮೃದ್ಧಿಯಾಗಿ ಬೆಳೆಯುವ ತರಕಾರಿ. ಉದ್ದನೆಯ ಬದನೆ, ಗುಂಡು ಬದನೆ, ಬಿಳಿ-ಹಸಿರು-ನೇರಳೆ ಬಣ್ಣದ ಬದನೆ, ಮುಳ್ಳುಬದನೆ ಮುಂತಾದವು ಆಕಾರ, ಬಣ್ಣ, ಪ್ರಕಾರಗಳಲ್ಲಿ ಈ ತರಕಾರಿ ಲಭ್ಯ. ಭಾರತವೇ ಬದನೆ ಕಾಯಿಯ ಮೂಲ ಸ್ಥಳ ಎಂದು ಗುರುತಿಸಲಾಗಿದೆ. (ಆಥವಾ ಆಫ್ರಿಕಾ ಇರಬಹುದು ಎಂಬ ಅನುಮಾನವೂ ಇದೆ) ಇಲ್ಲಿಂದ ದಕ್ಷಿಣ ಮತ್ತು ಪಶ್ಚಿಮ ಏಶ್ಯ, ಆಫ್ರಿಕಾ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್‌ಗಳಿಗೆ ಕಾಲಾಂತರಗಳಲ್ಲಿ ಮನುಷ್ಯ, ಪ್ರಾಣಿ-ಪಕ್ಷಿಗಳ ಪ್ರಯಾಣದೊಂದಿಗೆ ಇದು ಕೂಡ ವಲಸೆ ಹೋಗಿದೆ. ಆದಾಗ್ಯೂ ಭಾರತ ಮತ್ತು ಚೀನಾ ದೇಶಗಳು ಪ್ರಪಂಚದ ಒಟ್ಟು ಬದನೆಯ ಶೇ.87ರಷ್ಟು ಉತ್ಪಾದಿಸುತ್ತವೆ ಮತ್ತು ಅಧಿಕವಾಗಿ ದಿನನಿತ್ಯದ ಆಹಾರದಲ್ಲಿ ಬಳಸುತ್ತಿವೆ ಕೂಡ. ಅಮೆರಿಕನ್ನರು ‘Egg Plant'’(ಎಗ್ ಪ್ಲಾಂಟ್ )ಎಂದು ಕರೆದರೆ ಏಶ್ಯನ್ನರು 'Brinjal' (ಬ್ರಿಂಜಾಲ್) ಎಂದು ಕರೆವರು.

ಬದನೆಕಾಯಿ ಪ್ರಪಂಚದ ಬೇರೆ ಬೇರೆ ಭಾಗಗಳ ಅಡುಗೆಗಳಲ್ಲಿ ಚಾಲ್ತಿಯಲ್ಲಿರುವ ಕುರಿತು ಹಲವಾರು ಐತಿಹಾಸಿಕ ದಾಖಲೆಗಳು ಲಭ್ಯವಿವೆ. ಫ್ರೆಂಚ್, ಪರ್ಷಿಯಾ ಮತ್ತು ಜಪಾನೀ ಭಾಷೆಯ ಮಧ್ಯಕಾಲೀನ ಸಂದರ್ಭದ ದಾಖಲೆಗಳಲ್ಲಿ ಬದನೆ ಗಿಡದ ಚಿತ್ರ ಮತ್ತು ವಿವರಗಳಿವೆ. ದಕ್ಷಿಣ ಭಾರತದ ಹಳ್ಳಿ ಹಳ್ಳಿಯಲ್ಲೂ ವಿಧ ವಿಧವಾದ ಬದನೆಯ ತಳಿಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಊರಿನ ಬದನೆ ಬೇರೆ ಕಾಡಿನ ಬದನೆ ಬೇರೆ. ಬದನೆ ಜಾತಿಯ ಹಲವು ಸಸ್ಯಗಳಿದ್ದು ಬೊಗಸೆ ಗಾತ್ರದ ಕಾಯಿಯಿಂದ ಹಿಡಿದು ಬಟಾಣಿ ಗಾತ್ರದ ವರೆಗೆ ಹಲವು ವಿಧದ ಕಾಯಿಗಳಿವೆ. ಬಣ್ಣಗಳು ಕೂಡ ಬದಲಾಗುತ್ತವೆ, ಮಿಶ್ರವಾಗುತ್ತವೆ. ಕೆಲವು ಕಾಯಿ ನುಣ್ಣನೆಯ ಮೇಲ್ಪದರ ಹೊಂದಿದ್ದರೆ, ಕೆಲವು ಸಣ್ಣನೆಯ ಮುಳ್ಳಿನ ಪದರ ಹೊಂದಿರುತ್ತವೆ. ಕೆಲವದರ ಸಿಪ್ಪೆ ತೆಳುವಾಗಿದ್ದರೆ ಕೆಲವದರದ್ದು ಬಹಳ ದಪ್ಪನಾಗಿರುತ್ತದೆ. ಜಪಾನ್ ಮತ್ತು ಚೀನಾದಲ್ಲಿ ಬೆಳೆಯುವ ಬದನೆಕಾಯಿಗಳ ಸಿಪ್ಪೆಬಹಳ ದಪ್ಪದ್ದು. ಬದನೆಯ ಮೂಲ ರುಚಿಯಲ್ಲೇ ಚೂರು ಒಗರು ಮತ್ತು ಕಹಿ ಆದರೆ ತುಂಬಾ ಮೃದು. ಹೆಚ್ಚು ಹೊತ್ತು ಬೇಯಿಸುವ ಅಗತ್ಯವಿಲ್ಲ. ಹಾಗೆಯೆ ಕತ್ತರಿಸಿ ಇಡುವ ಹಾಗೂ ಇಲ್ಲ. ಅಡುಗೆ ಶುರುವಾಗಿದೆ ಎಂದರೆ ಅಲ್ಲೇ ಕತ್ತರಿಸಿ ಅಲ್ಲೇ ಬಳಸಬೇಕು. ಹತ್ತು ನಿಮಿಷ ಹಾಗೆ ವಾತಾವರಣಕ್ಕೆ ತೆರೆದು ಇಟ್ಟರೆ ಕತ್ತರಿಸಿದ ಬದನೆ ಕಪ್ಪುಬಣ್ಣಕ್ಕೆ ತಿರುಗಿ ಬಿಡುತ್ತದೆ.

ಬದನೆಯನ್ನು ಗೊಜ್ಜು, ಪಲ್ಯ, ಭಾತು, ಎಣ್ಣೆಗಾಯಿ ಮತ್ತು ಸಾಂಬಾರಿಗೆ ಬಳಸುವುದು ನಮ್ಮಲ್ಲಿ ರೂಢಿ. ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇವುಗಳಿಂದ ಮಾಡಿದ ಸ್ಥಳೀಯ ವಾದ ಗೊಜ್ಜು, ಪಲ್ಯ, ಉಪ್ಪಿನಕಾಯಿಯ ಹಲವಾರು ವಿಧಗಳಿವೆ. ಹಳೇ ಮೈಸೂರು ಭಾಗದಲ್ಲಿ ಬದನೆ ಬಹಳ ಅಡುಗೆಗಳಲ್ಲಿ ಬಳಸಲ್ಪಡುತ್ತದೆ. ತೊಗರಿಬೇಳೆ ಮತ್ತು ಬದನೆಕಾಯಿ ಹಾಕಿ ಮಾಡಿದ ಉಪ್ಸಾರು ವರ್ಷದ ಬಹುತೇಕ ದಿನ ನಮ್ಮ ಮನೆಗಳ ಖಾಯಂ ಅಡುಗೆ, ಮೊಳಕೆ ಬರಿಸಿದ ಕಾಳುಗಳ (ಕಡಲೆ, ಹೆಸರು, ಹುರುಳಿ, ಅಲಸಂದೆ) ಜೊತೆಗೆ ತೆಂಗಿನ ಮಸಾಲೆ ಹಾಕಿ, ಆಲೂಗಡ್ಡೆ, ಬದನೆಕಾಯಿ ಸೇರಿಸಿ ಮಾಡಿದ ‘ಮೊಳಕೆ ಕಾಳಿನ ಸಾರು’ ಬಲು ರುಚಿ.. ಇದು ಮಾಂಸದ ಸಾರಿನಂತೆ ಘಮ ರುಚಿ. ತೆಳುವಾದ ಸಾರು ರಾಗಿಮುದ್ದೆಗೆ, ಗಟ್ಟಿಯಾದ ಸಾರು ರೊಟ್ಟಿ, ಚಪಾತಿಗೆ ಒಳ್ಳೆಯ ಜೋಡಿ. ರೊಟ್ಟಿ ಅಥವಾ ಅನ್ನದ ಜೊತೆಗೆ ಕಾಳು ಮತ್ತು ಮಸಾಲೆಯ ಜೊತೆ ಬೆಂದ ಬದನೆ ಒಳ್ಳೆಯ ರುಚಿ ಕೊಡುತ್ತದೆ. ಮತ್ತೊಂದು ಸಾರು ‘ಕರಿಮೀನಿನ ಸಾರು’; ನದಿ ಅಥವಾ ಕೆರೆಗಳಲ್ಲಿ ಸಿಕ್ಕುವ ಎಳೆಯ ಮೀನುಗಳನ್ನು ಒಣಗಿಸಿ ಸಂಗ್ರಹಿಸಿ ಇಟ್ಟಿರುತ್ತಾರೆ. ಅವನ್ನು ಸಂತೆಗಳಲ್ಲಿ ಮಾರುತ್ತಾರೆ.

ಇವಕ್ಕೆಂದೇ ನಮ್ಮಲ್ಲಿ ಅಂಗಡಿಗಳೇನು ಇಲ್ಲ. ಕೆಲವು ಸಲ ಬೆಸ್ತರ ಹೆಣ್ಣುಮಕ್ಕಳು ಬುಟ್ಟಿಗಳಲ್ಲಿ ಹೊತ್ತುಕೊಂಡು ಹಳ್ಳಿ ಮತ್ತು ನಗರಗಳಲ್ಲಿ ಮಾರುತ್ತಾರೆ. ಈ ಭಾಗದಲ್ಲಿ ಇವನ್ನು ‘ಕರಿಮೀನು’ ಎಂದು ಕರೆಯುತ್ತಾರೆ. ಇದರ ಸಾರು ಮಾಡಲು ನೆನೆಸಿ ಅಥವಾ ಹುರಿದು ಹಾಕಿದ ಅವರೇಕಾಳು, ತೆಂಗಿನ ಮಸಾಲೆ, ಸಾರಿನ ಪುಡಿ ಜೊತೆಗೆ ಆಲೂಗಡ್ಡೆ ಮತ್ತು ಬದನೆಕಾಯಿ ಇರಲೇಬೇಕು. ಸೌದೆ ಒಲೆಯಲ್ಲಿ ಇತ್ತಮಡಿಕೆಯಲ್ಲಿ ಬೇಯುವ ಕರಿಮೀನಿನ ಸಾರಿನ ರುಚಿ ಮತ್ತು ಘಮ ವರ್ಣಿಸಲು ಸಾಧ್ಯವಿಲ್ಲ. ಹಾಗೆಯೇ ಮಸೆದ ಸೊಪ್ಪಿನ ಸಾರಿಗೂ ಆಲೂಗಡ್ಡೆ ಮತ್ತು ಬದನೆಕಾಯಿ ಇರಲೇಬೇಕು. ಹಲವಾರು ತರಹದ ಸೊಪ್ಪುಮತ್ತು ತೊಗರಿ ಬೇಳೆಯನ್ನು ಬೇಯಿಸಿಕೊಂಡು ಶುಂಠಿ ಬೆಳ್ಳುಳ್ಳಿಯ ಜೊತೆಗೆ ರುಬ್ಬಿಕೊಂಡು ಮಾಡುವ ಇದಕ್ಕೂ ಬದನೆಕಾಯಿ ಕಡ್ಡಾಯ. ಇವೆರಡು ತರಕಾರಿ ಹಲವು ಸಾರುಗಳಿಗೆ ಒಳ್ಳೆಯ ಜೋಡಿಯಾಗಿವೆ. ಬದನೆ ಇಲ್ಲದ ವಾಂಗಿಭಾತು ಸಾಧ್ಯವೇ? ಇದಕ್ಕೆ ಬದನೆಯೇ ಬಹುಮುಖ್ಯ ಪದಾರ್ಥ. ಬೆಳಗಿನ ತಿಂಡಿಗೆ, ಸಮಾರಂಭಗಳಿಗೆ ಇದು ಇದ್ದೇ ಇರುತ್ತದೆ. ಆದರೆ ಅಷ್ಟೇನೂ ಜನಪ್ರಿಯವಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇವೆಲ್ಲ ಬಿಳಿ ಹಸಿರು ಬಣ್ಣದ ಉದ್ದ ಬದನೆಕಾಯಿಯನ್ನೇ ಬಳಸಿ ಮಾಡುವ ಅಡುಗೆಗಳು. ದುಂಡು ಬದನೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿ ಇಲ್ಲ. (ಮದುವೆ, ಜಾತ್ರೆ ಸಮಾರಂಭಗಳ ಅಡುಗೆಯಲ್ಲಿ ಬಳಸುವುದರ ಹೊರತಾಗಿ) ಉತ್ತರದ ಕರ್ನಾಟಕದ ಬದನೆಕಾಯಿ ಎಣ್ಣೆಗಾಯಿ ಜೋಳದ ರೊಟ್ಟಿ ಜೋಡಿಯ ಜನಪ್ರಿಯತೆಯನ್ನು ಹೇಳಬೇಕಿಲ್ಲ. ಹೆಸರು ಕೇಳಿದಾಗಲೇ ಬಾಯಲ್ಲಿ ನೀರೂರುತ್ತದೆ.

ದುಂಡು ಬದನೆಯನ್ನು ಮಧ್ಯಕ್ಕೆ ಸೀಳಿ ಅದರೊಳಕ್ಕೆ ಮಸಾಲೆಯನ್ನು ತುಂಬಿ ಎಣ್ಣೆಯಲ್ಲಿ ಕರಿದು ನಂತರ ಬೇಯಿಸುವುದು. ಮಸಾಲೆ ಮತ್ತು ಬದನೆಯು ಬೆಂದು ಎಣ್ಣೆಯ ಜೊತೆ ಮಿಳಿತಗೊಂಡು ಜೋಳ ಅಥವಾ ಅಕ್ಕಿ ರೊಟ್ಟಿಯ ಜೊತೆಯ ಅದ್ಭುತವಾದ ರುಚಿಯನ್ನು ಕೊಡುತ್ತದೆ. ಈ ದುಂಡು ಬದನೆಯನ್ನು ಕೆಂಡ/ ಉರಿಯಲ್ಲಿ ಸುಟ್ಟು ನಂತರ ಸಿಪ್ಪೆ ತೆಗೆದು ಹಾಕಿ ಮಸಾಲೆ ಪುಡಿ, ಚೂರು ಹುಣಸೆರಸ, ಬೆಳ್ಳುಳ್ಳಿ ಹಾಕಿ ಅರೆದು ಚಟ್ನಿ ಮಾಡಬಹುದು, ಈಗಂತೂ ಇನ್ನಷ್ಟು ಮುಂದುವರಿದು ಬದನೆಯನ್ನು ತೆಳುವಾಗಿ ಕತ್ತರಿಸಿ ಬಜ್ಜಿ ಮಾಡುವುದು, ಮಾಂಸಕ್ಕೆ ಬಳಸುವ ಸಾಂಬಾರ ಪದಾರ್ಥಗಳನ್ನು ಹಾಕಿ ‘ಬದನೆ ಮಸಾಲೆ’ ಮಾಡುವುದೆಲ್ಲಾ ನಡೆಯುತ್ತಿದೆ. ಆದರೆ ಇವು ಜನಬಳಕೆಗೆ ಬರುವಷ್ಟು ಜನಪ್ರಿಯವಾಗಿಲ್ಲ. ಆಗುವ ಸಾಧ್ಯತೆಯೂ ಕಡಿಮೆ. ಇನ್ನು ಚೀನಾ ಮತ್ತು ಕೊರಿಯಾ ದೇಶಗಳಲ್ಲಿ ಫಿಶ್ ಸಾಸ್ ಮತ್ತು ಅಣಬೆಗಳ ಜೊತೆಗೆ ಸುಟ್ಟು ಬೇಯಿಸುವ ಅಡುಗೆಗಳಿವೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಬದನೆಯನ್ನು ಸುಟ್ಟು ಮತ್ತು ಕರಿದು ಹೇರಳವಾದ ಸಸ್ಯ ಮತ್ತು ಮಾಂಸಾಹಾರದ ಅಡುಗೆಗಳಲ್ಲಿ ಬಳಸುತ್ತಾರೆ. ಟರ್ಕಿ ಮತ್ತು ಇರಾನಿನ ಆಹಾರಗಳಲ್ಲಿ ದಪ್ಪಗೆ ದುಂಡಾಗಿ ಕತ್ತರಿಸಿದ ಬದನೆಯನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹುರಿದು ಹುಣಸೆ ಮತ್ತು ಟೊಮ್ಯಾಟೊ ಸಾಸ್‌ಗಳ ಜೊತೆಗೆ ಬಡಿಸುತ್ತಾರೆ. ಹೀಗೆ ಹುರಿದ ಬದನೆಯ ತುಂಡನ್ನು ಮೊಸರಿನಲ್ಲಿ ಅದ್ದಿ ತಿನ್ನುವ ಕ್ರಮವೂ ಉಂಟು.

ಸ್ಪೇನ್‌ನಲ್ಲಿ ತೆಳುವಾಗಿ ಕತ್ತರಿಸಿದ ಬದನೆಯ ತುಂಡನ್ನು ಆಲಿವ್ ಎಣ್ಣೆಯಲ್ಲಿ ಕರಿದು ಬಿಸಿಯಾದ ಜೇನುತುಪ್ಪದ ಜೊತೆಗೆ ಸೇವಿಸುತ್ತಾರೆ. ಹಾಗೆಯೆ ಸಣ್ಣ ಸಣ್ಣ ಬದನೆಗಳನ್ನು ವಿನಿಗರ್ ನಲ್ಲಿ ನೆನೆಹಾಕಿ ನಂತರ ಅವನ್ನು ಕೆಂಪು ಮೆಣಸಿನಕಾಯಿಯ ಜೊತೆಗೆ ಆಲಿವ್ ಎಣ್ಣೆಯಲ್ಲಿ ಹುರಿದು ತಿನ್ನಲು ಬಳಸುತ್ತಾರೆ. ಫಿಲಿಪ್ಪೀನ್ಸ್‌ನಲ್ಲಿ ಕತ್ತರಿಸಿ ಹುರಿದ ಬದನೆಯನ್ನು ಅಮ್ಲೆಟ್ ಮಾಡಲು, ಸಲಾಡ್ ಮಾಡಲು ಹಾಗೆಯೆ ಮಾಂಸ ಮತ್ತು ಸಮುದ್ರ ಸಿಗಡಿ ಜೊತೆ ಹುರಿದು ತಿನ್ನಲು ಬಳಸುತ್ತಾರೆ. ಕೊನೆಯಲ್ಲಿ ಇನ್ನೊಂದು ಸಾರು ಹೇಳಿಬಿಡ್ತೀನಿ. ತಮಿಳುನಾಡಿನಲ್ಲಿ ಮಾವಿನಕಾಯಿ ಮತ್ತು ಬದನೆಕಾಯಿ ಹಾಕಿ ಸಾರು ಮಾಡುತ್ತಾರೆ. ಇದಕ್ಕೆ ನುಗ್ಗೆಕಾಯಿ ಕೂಡ ಹಾಕುವುದು ಉಂಟು. ಈ ಮಾಂಗೈ-ಬದನೆ ಸಾರಿನ ಹುಳಿ ಮತ್ತು ಮಸಾಲೆಯ ವಾಸನೆ ಬೇರೆಯದೇ ತರದ ರುಚಿಯನ್ನು ನಾಲಗೆಗೆ ಒದಗಿಸುತ್ತದೆ. ಇವಾಗ ಹೇಳಿ ನಾವು ತಿನ್ನುವುದು ಬದನೆಕಾಯಿಯೇ. ಏನೀಗ? 

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News