ಕೋವಿಡ್-19 ಕರಿನೆರಳು: ಬನ್ನೇರುಘಟ್ಟ ಉದ್ಯಾನವನದ ಪ್ರಾಣಿಗಳಿಗೆ ಮಾಂಸದ ಕೊರತೆ !

Update: 2020-07-30 17:10 GMT

ಬೆಂಗಳೂರು, ಜು.29: ದಿನೇ ದಿನೇ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೂ ಇದರ ಬಿಸಿ ತಟ್ಟಿದ್ದು ಮುಖ್ಯವಾಗಿ ಪ್ರಾಣಿ, ಪಕ್ಷಿಗಳಿಗೆ ಮಾಂಸಾಹಾರದ ಭಾರೀ ಕೊರತೆ ಉಂಟಾಗಿದ್ದು, ಪ್ರಾಣಿಗಳ ಮಾಂಸ ಲಭಿಸದ ಕಾರಣ ಹುಲಿ, ಸಿಂಹ, ಚಿರತೆ ಸೇರಿದಂತೆ ಮಾಂಸಾಹಾರಿ ಪ್ರಾಣಿಗಳಿಗೆ ಕೇವಲ ಕೋಳಿ ಮಾಂಸ ನೀಡಲಾಗುತ್ತಿದೆ.

ದೇಶದ ಪ್ರತಿಷ್ಠಿತ ಉದ್ಯಾನವನಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನ 260.51 ಚದರ ವಿಸ್ತೀರ್ಣ ಹೊಂದಿದ್ದು, ಇದು ವನ್ಯ ಜೀವಿಗಳ ನೆಚ್ಚಿನ ತಾಣವೂ ಆಗಿದೆ. ಅಷ್ಟೇ ಅಲ್ಲದೆ, ಮೃಗಾಲಯ, ಸಫಾರಿಗಳು ಹಾಗೂ ಚಿಟ್ಟೆ ಉದ್ಯಾನವನಕ್ಕೆ ಬನ್ನೇರುಘಟ್ಟ ಹೆಸರುವಾಸಿಯಾಗಿದೆ.

ಇಲ್ಲಿ 1500ಕ್ಕೂ ಅಧಿಕ ಪ್ರಾಣಿ, ಪಕ್ಷಿಗಳಿವೆ. ಮುಖ್ಯವಾಗಿ 5 ಹೆಕ್ಟೇರ್ ಪ್ರದೇಶದಲ್ಲಿ 19 ಸಿಂಹಗಳನ್ನು ಇರಿಸಲಾಗಿದೆ. ಅದೇ ರೀತಿ, 7 ಬಿಳಿ ಹುಲಿಗಳು ಸೇರಿದಂತೆ ಒಟ್ಟು 33 ಹುಲಿಗಳಿವೆ. ಇನ್ನು, ಚಿರತೆ, ಪುನುಗು ಬೆಕ್ಕು, ಮೊಸಳೆಗಳು, ನರಿ, ಕಾಡು ನಾಯಿಗಳಿದ್ದು ಇವುಗಳೆಲ್ಲವೂ ಮಾಂಸಾಹಾರಿಗಳಾಗಿದ್ದು, ಪ್ರತಿನಿತ್ಯ 900ಕ್ಕೂ ಅಧಿಕ ಕೆಜಿ ಮಾಂಸಗಳು ಬೇಕಾಗುತ್ತದೆ. ಆದರೆ ಲಾಕ್‍ಡೌನ್ ಹಿನ್ನಲೆಯಲ್ಲಿ ಮಾಂಸ ಸರಬರಾಜು ಸಂಪೂರ್ಣ ನಿಂತ ಕಾರಣ ಮಾಂಸದ ಕೊರತೆ ಉಂಟಾಗಿದೆ. ಅಲ್ಲದೆ, ಲಾಕ್‍ಡೌನ್ ಆರಂಭದ ದಿನದಿಂದಲೂ ಪ್ರಾಣಿಗಳಿಗೆ ಕೋಳಿ ಮಾಂಸಗಳನ್ನು ಮಾತ್ರ ನೀಡಲಾಗುತ್ತಿದೆ. ಇದರಿಂದ ಪ್ರಾಣಿಗಳ ಶಕ್ತಿ ಕುಗ್ಗಿ, ರೋಗಕ್ಕೆ ತುತ್ತಾಗಲಿವೆ ಎನ್ನುತ್ತಾರೆ ಪ್ರಾಣಿಪ್ರಿಯರು.

ಆರೋಗ್ಯಕ್ಕೆ ಒಳ್ಳೆಯದಲ್ಲ: ಸದ್ಯಕ್ಕೆ ಮಾಂಸಾಹಾರಿ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗುತ್ತಿದೆ. ಆದರೆ, ವಾಸ್ತವವಾಗಿ ಅದು ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಈ ಪ್ರಾಣಿಗಳು ಸಾಮಾನ್ಯ ಕೆಂಪು ಮಾಂಸ ತಿನ್ನುವಂತಹುಗಳು. ಕೋಳಿ ಮಾಂಸದಿಂದ ಅದರ ದೇಹದ ಸಾಮರ್ಥ್ಯದಲ್ಲಿ ವ್ಯತ್ಯಯವಾಗುತ್ತದೆ ಎಂದು ಪಶುಸಂಗೋಪನೆ ಮಾಜಿ ಜಂಟಿ ನಿರ್ದೇಶಕ ಡಾ.ಪರ್ವೇಝ್ ಅಹ್ಮದ್ ಪಿರಾನೆ 'ವಾರ್ತಾಭಾರತಿ ಪತ್ರಿಕೆಗೆ' ತಿಳಿಸಿದರು.

'ವಿಶೇಷ ನಿಗಾ ಇಡಲಾಗಿದೆ'

ಕೋವಿಡ್-19 ಸಂಬಂಧ ಉದ್ಯಾನವನದ ಮೇಲೆ ನಿಗಾ ವಹಿಸಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲೂ ನಿತ್ಯ ಕೆಲ ಸಿಬ್ಬಂದಿಗಳು ಪ್ರಾಣಿ, ಪಕ್ಷಿಗಳಿಗೆ ಆಹಾರ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆರೈಕೆ ಮಾಡುವ ಸಿಬ್ಬಂದಿಗೂ ಶುಚಿತ್ವಕ್ಕೆ ವಿಶೇಷ ಗಮನ ನೀಡಲು ಸೂಚನೆ ನೀಡಲಾಗಿದ್ದು, ಕೈಕಾಲು ತೊಳೆದೇ ಪ್ರಾಣಿಗಳ ಬಳಿ ಹೋಗಬೇಕು. ಗ್ಲೌಸ್ ಮತ್ತು ಮಾಸ್ಕ್ ಧರಿಸಿರಬೇಕು. ಯಾವುದೇ ರೀತಿಯಿಂದ ಅಸೌಖ್ಯಕ್ಕಿಡಾದ ಸಿಬ್ಬಂದಿ ಪ್ರಾಣಿಗಳ ಬಳಿ ಹೋಗುವಂತಿಲ್ಲ ಎಂದು ಸೂಚನೆ ನೀಡಲಾಗಿತ್ತು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನ ಕಾರ್ಯ ನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಹೇಳಿದರು.

ಟೆಂಡರ್ ಪ್ರಕ್ರಿಯೆ ಶೀಘ್ರ ಆರಂಭ

ಜೈವಿಕ ಉದ್ಯಾನವನದಲ್ಲಿರುವ ಹುಲಿ, ಸಿಂಹ, ಚಿರತೆಗಳಿಗೆ ಮಾಂಸವೇ ಅನಿವಾರ್ಯವಾಗಿದೆ. ಆದರೆ, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಪ್ರಾಣಿಗಳಿಗೆ ಅಗತ್ಯಕ್ಕೆ ತಕ್ಕಂತೆ, ಆಹಾರ ಪೂರೈಕೆ ಮಾಡಲಾಗುವುದು.

-ವನಶ್ರೀ ವಿಪಿನ್ ಸಿಂಗ್, ಕಾರ್ಯ ನಿರ್ವಹಕ ನಿರ್ದೇಶಕಿ

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನ

ದರ ಹೆಚ್ಚಿದ ಕಾರಣ, ಕೋಳಿ ಮಾಂಸ?

ದನದ ಮಾಂಸ ಹೆಚ್ಚು ಪ್ರೋಟೀನ್‍ನಿಂದ ಕೂಡಿರುವುದರಿಂದ ಸಿಂಹ, ಚಿರತೆ ಮೊದಲಾದ ಮಾಂಸಾಹಾರಿ ಪ್ರಾಣಿಗಳಿಗೆ ಇದೇ ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆಯೇ ಪ್ರತಿದಿನ ಸುಮಾರು ಎರಡು ಸಾವಿರ ಮಾಂಸಾಹಾರಿ ಪ್ರಾಣಿಗಳಿಗೆ ದನದ ಮಾಂಸ ನೀಡಲಾಗುತ್ತಿದೆ. ಆದರೆ, ದನದ ಮಾಂಸ ದರ ಹೆಚ್ಚಳವಾಗಿರುವ ಕಾರಣ ಕೋಳಿ ಮಾಂಸ ನೀಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಉದ್ಯಾನದಲ್ಲಿ ಪ್ರತಿದಿನ ಸುಮಾರು 900 ಕೆ.ಜಿ. ದನದ ಮಾಂಸವನ್ನು ಪ್ರಾಣಿಗಳಿಗೆ ನೀಡಲಾಗುತ್ತಿದೆ. ದನದ ಮಾಂಸ ಹೆಚ್ಚು ಪ್ರೋಟೀನ್‍ನಿಂದ ಕೂಡಿದ್ದು, ಇದಕ್ಕೆ ಪರ್ಯಾಯವಾಗಿ ಎಮ್ಮೆ ಮಾಂಸ ನೀಡಲು ಸಾಧ್ಯವಿದೆ. ಆದರೆ ಈ ಮಾಂಸವನ್ನು ದೊಡ್ಡ ಪ್ರಮಾಣದಲ್ಲಿ ಸರಬರಾಜು ಮಾಡುವವರ ಕೊರತೆಯಿದೆ. ಅಲ್ಲದೆ ಕುರಿ ಮಾಂಸ ಖರೀದಿಸಲು ಕೂಡ ಉದ್ಯಾನಕ್ಕೆ ಅವಕಾಶವಿದೆ. ದನದ ಮಾಂಸಕ್ಕಿಂತ ಕುರಿ ಮಾಂಸಕ್ಕೆ ಅಧಿಕ ದರವಿದೆ. ಇಷ್ಟೊಂದು ಮೊತ್ತವನ್ನು ನೀಡಿ ಕುರಿ ಮಾಂಸ ಖರೀದಿಸಿದರೆ ಉದ್ಯಾನದ ಆದಾಯಕ್ಕೆ ತೀವ್ರ ಹೊಡೆತ ಬೀಳಲಿದೆ. ಇದೀಗ ದನದ ಮಾಂಸ ದರವೂ ಹೆಚ್ಚಳ ಕಾರಣದಿಂದಾಗಿ, ಕೋಳಿ ಮಾಂಸ ಖರೀದಿಗೆ ಮುಂದಾಗಿದ್ದಾರೆ ಎನ್ನುವುದು ಕೆಲವರ ಆರೋಪ.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News