ಹಂಪಿಯಲ್ಲಿ 1,200 ಕೋಟಿ ರೂ. ವೆಚ್ಚದಲ್ಲಿ ಹನುಮಾನ್ ವಿಗ್ರಹ ನಿರ್ಮಿಸಲಿರುವ ಖಾಸಗಿ ಟ್ರಸ್ಟ್‌

Update: 2020-08-06 14:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 6: ಹಂಪಿ ಮೂಲದ ಹನಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹನುಮನ ಜನ್ಮ ಸ್ಥಳವಾದ ಕಿಷ್ಕಿಂಧ (ಹಂಪಿ)ದಲ್ಲಿ ಅಂದಾಜು 1,200 ಕೋಟಿ ರೂಪಾಯಿ ವೆಚ್ಚದಲ್ಲಿ 215 ಮೀಟರ್ ಎತ್ತರದ ಬೃಹತ್ ಹನುಮನ ವಿಗ್ರಹವನ್ನು ಮುಂದಿನ 6 ವರ್ಷಗಳಲ್ಲಿ ನಿರ್ಮಿಸಲು ಯೋಜನೆ ರೂಪಿಸುತ್ತಿದೆ.

‘‘ಶ್ರೀರಾಮನ ವಿಗ್ರಹ 221 ಮೀಟರ್ ಎತ್ತರ ಇರಲಿದೆ. ಶ್ರೀರಾಮನ ಭಕ್ತನಾದ ಹನುಮನಂತನ ವಿಗ್ರಹವನ್ನು ಅಷ್ಟೇ ಎತ್ತರ ಮಾಡಲು ಸಾಧ್ಯವಿಲ್ಲ. ಆದುದರಿಂದ ಶ್ರೀರಾಮನಿಗಿಂತ ಹನುಮನ ವಿಗ್ರಹ 6 ಮೀಟರ್ ಕಡಿಮೆ ಇರಲಿದೆ’’ ಎಂದು ಟ್ರಸ್ಟ್‌ನ ಮುಖ್ಯಸ್ಥ ಗೋವಿಂದಾನಂದ ಸರಸ್ವತಿ ಸ್ವಾಮಿ ಹೇಳಿದ್ದಾರೆ.

ಇದುವರೆಗೆ, ಅಂಜನಾದ್ರಿ ಬೆಟ್ಟ (ಹಂಪಿ ಸಮೀಪ)ದ ತುದಿಯಲ್ಲಿ ಇರುವ ಏಕೈಕ ದೇವರು ಹನುಮಾನ್. ಈ ಹನುಮಾನ್ ದೇವಾಲಯವನ್ನು ತಲುಪಲು ಭಕ್ತರು 550 ಮೆಟ್ಟಲುಗಳನ್ನು ಏರಬೇಕಾದ ಅಗತ್ಯ ಇದೆ. ಈ ಸ್ಥಳ ಎಲ್ಲರಿಗೂ ಸುಲಭ ಸಾಧ್ಯವಾಗಂತೆ ಹಾಗೂ ಭವ್ಯವಾಗಿರುವಂತೆ ಮಾಡಲು ನಾವು ಬಯಸುತ್ತಿದ್ದೇವೆ. ಈ ಸ್ಥಳ ನಮ್ಮ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸಲಿದೆ ಎಂದು ಸ್ವಾಮಿ ಹೇಳಿದ್ದಾರೆ. ಈ ಯೋಜನೆಗೆ ಕರ್ನಾಟಕ ಸರಕಾರ ಒಂದು ಪಾಲು ನಿಧಿ ನೀಡಲಿದೆ. ಉಳಿದ ನಿಧಿಯನ್ನು ಟ್ರಸ್ಟ್ ದೇಣಿಗೆಯ ಮೂಲಕ ಸಂಗ್ರಹಿಸಲಿದೆ. ನಿಧಿ ಸಂಗ್ರಹಿಸಲು ದೇಶಾದ್ಯಂತ ಹನುಮಾನ್ ರಥಯಾತ್ರೆ ನಡೆಸಲು ಟ್ರಸ್ಟ್ ಚಿಂತಿಸುತ್ತಿದ್ದೆ ಎಂದು ಕರ್ನಾಟಕ ಸರಕಾರದ ಮೂಲಗಳು ತಿಳಿಸಿವೆ. ಈ ಯೋಜನೆಯ ಪ್ರಸ್ತಾಪವನ್ನು ಫೆಬ್ರವರಿಯಲ್ಲಿ ಸರಕಾರದೊಂದಿಗೆ ಹಂಚಿಕೊಳ್ಳಲಾಗಿತ್ತು. ಈಗ ಈ ಕುರಿತು ಕೆಲಸ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

‘‘ಸರಕಾರ ಈ ಪ್ರಸ್ತಾವ ಪರಿಗಣಿಸಿದೆ ಹಾಗೂ ಸಮಗ್ರ ವರದಿ ಕೋರಿದೆ’’ ಎಂದು ಕರ್ನಾಟಕದ ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ‘‘ನಾವು ರಾಮಾಯಣದ ಸ್ಥಳಗಳನ್ನು ಕಿಷ್ಕಿಂದೆಯೊಂದಿಗೆ ಖಂಡಿತವಾಗಿ ಜೋಡಿಸುತ್ತೇವೆ ಹಾಗೂ ಆಗಮಿಸುವ ಭಕ್ತರು ಹಾಗೂ ಇತರರಿಗೆ ಈ ಸ್ಥಳವನ್ನು ಸ್ಮರಣೀಯವನ್ನಾಗಿ ಮಾಡುತ್ತೇವೆ’’ ಎಂದು ಸಿ.ಟಿ. ರವಿ theprint.inಗೆ ತಿಳಿಸಿದ್ದಾರೆ.

ದೇಶಾದ್ಯಂತ ಇರುವ ರಾಮಾಯಣದ ಸ್ಥಳಗಳನ್ನು ಜೋಡಿಸುವ ನರೇಂದ್ರ ಮೋದಿ ನೇತೃತ್ವದ ಸರಕಾರದ ಯೋಜನೆಯನ್ನು ಅವರು ಈ ಸಂದರ್ಭ ಉಲ್ಲೇಖಿಸಿದರು. ಕಿಷ್ಕಿಂಧಾ ಸೇರಿದಂತೆ ಕರ್ನಾಟಕದಲ್ಲಿರುವ ಮೂರು ಸ್ಥಳಗಳು ರಾಮಾಯಣದೊಂದಿಗೆ ನೇರ ಸಂಬಂಧ ಇದೆ ಎಂದು ನಂಬಲಾಗಿದೆ. ಇನ್ನೆರೆಡು ಸ್ಥಳಗಳು ಗೋಕರ್ಣದ ಮಹಾಬಲೇಶ್ವರ ದೇವಾಲಯ ಹಾಗೂ ಚಿಕ್ಕಮಂಗಳೂರಿನ ಚಂದ್ರ ದ್ರೋಣ ಪರ್ವತ ಶ್ರೇಣಿ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News