ಉಪ್ಪಿಗಿಂತ ರುಚಿ ಬೇರೆಯಿಲ್ಲ

Update: 2020-08-10 19:30 GMT

ಊಟವೆಂದ ಮೇಲೆ ಉಪ್ಪುಇರಲೇಬೇಕು. ಅದು ‘ರುಚಿ’ ಎನ್ನುವುದರ ಅನ್ವರ್ಥನಾಮವೇ ಆಗಿಬಿಟ್ಟಿದೆ. ಅದರೊಂದಿಗೆ ಜನರ ಭಾವನಾತ್ಮಕ ಸಂಬಂಧವೂ ಬಲುಬಿಗಿಯಾದದ್ದು. ‘ಉಪ್ಪಿನ ಋಣ’ ಮನುಷ್ಯ ಸಮಾಜದೊಳಗೆ ಆಳವಾಗಿ ಬೇರೂರಿರುವ ನಿಷ್ಠೆಯ ನಂಬುಗೆ. ಹಾಗಾಗಿಯೇ ‘ಉಪ್ಪು’ ಎಂದು ಹೆಸರು ಹೇಳಿ ಅದನ್ನು ಪಡೆಯಲು ಕೂಡ ಜನ ಅಳುಕಿ ‘ರುಚಿ ಕೊಡಿ, ರುಚಿ ಕಡಿಮೆ’ ಎನ್ನುವ ಪರ್ಯಾಯ ಪದ ಪ್ರಯೋಗ ಮಾಡುತ್ತಾರೆ. ಮಾನವನ ಸಂಘಟಿತ ಸಮಾಜದಲ್ಲಿ ಉಪ್ಪುಮಾಡಿದ ಬದಲಾವಣೆಗಳು ಮಹತ್ತರವಾದವು. ಆಹಾರ ಮತ್ತು ವಸ್ತು ವಿನಿಮಯ ಪದ್ಧ್ದತಿಯಲ್ಲಿ ಮುಖ್ಯ ಪಾತ್ರ ವಹಿಸಿತ್ತು. ನಂತರ ಹಲವಾರು ಔಷಧ, ರಾಸಾಯನಿಕ ಪ್ರಯೋಗಗಳಿಗೆ ಬಳಕೆಯಾಯಿತು. ಇಷ್ಟು ಸಾವಿರ ವರ್ಷಗಳ ನಂತರವೂ ಅದಕ್ಕೆ ನಾವು ಪರ್ಯಾಯ ಸೃಷ್ಟಿ ಅಥವಾ ಆಯ್ಕೆಗೆ ಹೋಗದಷ್ಟು ವಿಪುಲವಾಗಿ ಸಿಗುವ ಜೊತೆಗೆ ನಮ್ಮ ನಾಲಗೆ ಮತ್ತು ಮನಸ್ಸಿಗೆ ಅದು ಹಿತವಾಗಿ ಉಳಿದುಬಿಟ್ಟಿದೆ. ಇನ್ನು ಸಿಹಿ ಅಡುಗೆ ಮಾಡಿದಾಗ ಉಪ್ಪುಬೇಕಿಲ್ಲ ಅನ್ನಬಹುದು. ಆದರೆ ಸಿಹಿಯು ಊಟದ ಒಂದು ಭಾಗವೇ ಹೊರತು ಸಿಹಿಯೇ ಊಟವಾಗುವುದಿಲ್ಲ. ಆಮೇಲೆ ಸಪ್ಪೆಊಟ ತಿನ್ನುವುದು ಕೂಡ ಒಂದು ಪಥ್ಯವೇ ಹೊರತು ನಿತ್ಯದ ಅಭ್ಯಾಸವಲ್ಲ. ಈ ಪ್ರಪಂಚದ ಎರಡು ಧ್ರುವಗಳನ್ನು ಬಳಸಿ ಏಳು ಸಮುದ್ರಗಳನ್ನು ದಾಟಿದರೂ ಉಪ್ಪುಬಳಸದ ಅಡುಗೆ, ಅಡುಗೆಯೇ ಆಗುವುದಿಲ್ಲ, ಮನುಷ್ಯ ಕಂಚಿನ ಯುಗದಲ್ಲಿ ಮೊದಲಿಗೆ ಉಪ್ಪುಬಳಸಿರಬಹುದು ಎಂಬುದು ಬಲ್ಲವರ ಊಹೆ.

ಆ ನಂತರ ರುಚಿ ಹತ್ತಿಸಿಕೊಂಡವನು ಸಮುದ್ರ, ನೆಲಗಳಲ್ಲಿ ಸಿಗುವ ವಿವಿಧ ಬಗೆಯ ಉಪ್ಪುಗಳನ್ನು ಅನ್ವೇಷಿಸಿ, ಸಂಸ್ಕರಿಸಿ ಬಳಸತೊಡಗಿದ. ಕ್ರಿ.ಪೂ. 6,000ದಲ್ಲಿ ಉಪ್ಪನ್ನು ಸಂಸ್ಕರಿಸುವ ಕುರಿತಾದ ಪುರಾವೆಗಳು ದೊರೆತಿವೆ. ಮುಂದುವರಿದು ಮನುಷ್ಯ ಇದನ್ನು ಬಹುದೊಡ್ಡ ವ್ಯಾಪಾರದ ವಸ್ತು ಮಾಡಿಕೊಂಡ. ಉಪ್ಪಿನ ಗಣಿಗಳು, ಗದ್ದೆಗಳು ಶುರುವಾದವು. ಯೂರೋಪಿನ ಹಲವು ಸಾಮ್ರಾಜ್ಯಗಳನ್ನು ಏಳಿಸಿದ, ಬೀಳಿಸಿದ ಕೀರ್ತಿ ಉಪ್ಪಿನದು.. ದಕ್ಷಿಣದ ಏಶ್ಯದ ರೇಷ್ಮೆ ಮಾರ್ಗದಂತೆ (Silk Route) ಯುರೋಪಿನಲ್ಲಿ ಉಪ್ಪಿನ ಮಾರ್ಗವೂ (Salt Route) ಇತ್ತು. ಈ ಮಾರ್ಗದಲ್ಲಿ ನಗರಗಳಲ್ಲಿ ಅಧಿಕ ಪ್ರಮಾಣದ ಸುಂಕವನ್ನು ಉಪ್ಪಿನ ಸಾಗಣೆಯಿಂದ ವಸೂಲಿ ಮಾಡಲಾಗುತ್ತಿತ್ತು. ಮತ್ತು 12 -13 ಶತಮಾನದ ಕಾಲದಿಂದಲೇ ಫ್ರಾನ್ಸ್ ಮೊದಲಾದ ರಾಷ್ಟ್ರಗಳಲ್ಲಿ ಉಪ್ಪಿನ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಇದನ್ನೇ ಬ್ರಿಟಿಷರು 1930ರಲ್ಲಿ ಭಾರತದಲ್ಲಿ ಜಾರಿಗೆ ತಂದದ್ದು. ಆಗ ಕಾಂಗ್ರೆಸ್ ಸಮಿತಿಯು ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಅಸಹಕಾರ ಚಳವಳಿ ಮೊದಲ ಭಾಗವಾಗಿ ‘ದಂಡಿ ಸತ್ಯಾಗ್ರಹ’ ಶುರು ಮಾಡಿದರು. ತೆರಿಗೆಯನ್ನು ಪಾವತಿಸದೆ ದಂಡಿ ಎಂಬ ಊರಿನ ಸಮುದ್ರ ತೀರದಲ್ಲಿ ಗಾಂಧಿಯೂ ಸೇರಿ ಹಲವರು ಸ್ವಾತಂತ್ರ್ಯ ಹೋರಾಟಗಾರರು ಉಪ್ಪಿನ ಹರಳುಗಳನ್ನು ಹೆಕ್ಕುವ ಮೂಲಕ ಕಾನೂನು ಮುರಿದಿದ್ದರು. ಹೀಗೆ ಉಪ್ಪುಬರಿಯ ರುಚಿ ಮತ್ತು ಅಡುಗೆಯ ವಸ್ತುವಾಗಿ ಉಳಿಯದೆ ಸಾಮ್ರಾಜ್ಯಗಳ ಅವನತಿಗೆ, ರಾಜಕೀಯದ ಹಿತಾಸಕ್ತಿಗಳಿಗೆ ಕೂಡ ಕಾರಣವಾಗಿತ್ತು.

ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ ಎಂಬುದಾಗಿ ಆಹಾರದ ರುಚಿಪ್ರಜ್ಞೆಯನ್ನು ಆರು ರಸಗಳಾಗಿ ಹಿರೀಕರು ವಿಭಾಗಿಸಿದ್ದರು. ಅವುಗಳಲ್ಲಿ ಒಗರು ವೈನ್, ಸಾರಾಯಿ ಮೊದಲಾದ ಮಾದಕ ಪಾನೀಯಗಳಲ್ಲಿ, ಕಹಿ ಎಂಬುದು ಮದ್ದು/ ಔಷಧಗಳಲ್ಲಿ ಹೆಚ್ಚು ರುಚಿಸಿದ್ದು ಬಿಟ್ಟರೆ ತಿನ್ನುವ ಪದಾರ್ಥಗಳಲ್ಲಿ ನೇರವಾಗಿ ಈ ರಸಗಳನ್ನು ಆಸ್ವಾದಿಸುವುದು ಕಷ್ಟ. ಉಳಿದಂತೆ ಸಿಹಿ, ಹುಳಿ, ಉಪ್ಪು, ಖಾರಗಳನ್ನು ಒಂದೊಂದಾಗಿಯೂ ಅಥವಾ ಮಿಶ್ರಣವಾಗಿಯೂ ಬಳಸಬಹುದು. ಈ ನಾಲ್ಕು ರಸಗಳನ್ನು ತರಕಾರಿ, ಮಾಂಸ, ಸೊಪ್ಪು, ಕಾಳು, ಧಾನ್ಯಗಳ ಜೊತೆಗೆ ಎಷ್ಟೆಷ್ಟು ಪ್ರಮಾಣದಲ್ಲಿ ಬಳಸಿ ಕಲಸಿದರೆ, ಬೇಯಿಸಿದರೆ, ನೆನೆ ಹಾಕಿದರೆ, ಸುಟ್ಟರೆ, ಕರಿದರೆ ಮುಂತಾದ ಕ್ರಿಯೆಗಳನ್ನು ಮಾಡಿದರೆ ಹೊರಬರುವ ಪದಾರ್ಥವೇ ‘ಊಟ’ ಆ ಪೂರ್ಣ ಕ್ರಿಯೆಯೇ ‘ಅಡುಗೆ’. ಉಪ್ಪು,ಹುಳಿ, ಖಾರಗಳು ಪರಸ್ಪರ ಹೊಂದುವಷ್ಟು ಸಿಹಿ ಇವುಗಳ ಜೊತೆಗೆ ಹೊಂದುವುದಿಲ್ಲ. ಅದರ ಗುಣವೇ ಬೇರೆ. ಸದಾ ಅದು ಒಂಟಿ ರುಚಿಯಾಗಿರಲು ಇಷ್ಟಪಟ್ಟಂತೆ ತೋರುತ್ತದೆ. ನಾವು ಆಗಾಗ ಸಿಹಿಯಾದ ಹಣ್ಣಿಗೆ, ಕಾಯಿಗೆ ಖಾರ ಪುಡಿ ಉಪ್ಪು ಹಾಕಿ ಸವಿಯುವುದು, ಹಲವು ಸಾಂಬಾರು, ಗೊಜ್ಜುಗಳಿಗೆ ಚೂರು ಸಿಹಿಬೆಲ್ಲವನ್ನು ಹಾಕುವುದು ಉಂಟು. ಆದರೆ ಉಪ್ಪು, ಹುಳಿ, ಖಾರದ ಜೊತೆಗಾರಿಕೆಯನ್ನು ಮತ್ತಾವ ರುಚಿ ರಸಗಳ ಜೊತೆಗಾರಿಕೆಯೂ ಮೀರಿಸಲಾಗದು. ಇದೊಂದು ರೀತಿಯ ರಸಗಣಿತ. ಒಬೊಬ್ಬ ಬಾಣಸಿಗನೂ ಅವನದೇ ಆದ ಸೂತ್ರಗಳನ್ನು ಪ್ರಮೇಯಗಳನ್ನು ಹೊಂದಿರುತ್ತಾನೆ. ಅಭಿರುಚಿಗೆ ತಕ್ಕಂತೆ ಈ ರಸಗಣಿತದ ಫಲಿತಾಂಶವು ದೊರೆಯುತ್ತದೆ. ಆಯುರ್ವೇದ ಮೊದಲಾದ ಗ್ರಂಥಗಳಲ್ಲಿ ‘‘ರೋಮಕ, ಸೈಂಧವ, ಸಮುದ್ರ, ವಿಡಾ, ಸೌವರ್ಚಲ’’ ಎಂಬುವ ಪಂಚಲವಣಗಳ ಉಲ್ಲೇಖವಿದೆ. ‘ರೋಮಕ’ ಎಂದು ಕರೆಯುವ ಉಪ್ಪನ್ನು ರಾಜಸ್ಥಾನದ ಸಂಭಾರ್ ಸರೋವರದ ದಂಡೆಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಬಿಳಿ ಮತ್ತು ಕಂದು ಮಿಶ್ರಿತ ಬಣ್ಣವುಳ್ಳದ್ದಾಗಿದೆ. ಸಮುದ್ರದ ಉಪ್ಪನ್ನು ಕಡಲ ತಡಿಗಳಲ್ಲಿ ಪಾತಿಗಳನ್ನು ಮಾಡಿ ಅಲ್ಲಿ ಸಮುದ್ರದ ನೀರು ತಡೆಗಟ್ಟಿ ಒಣಗಿಸಿ ತಯಾರಿಸಲಾಗುತ್ತದೆ. ಜಗತ್ತಿನಲ್ಲಿ ಈ ಉಪ್ಪೇ ಹೆಚ್ಚು ಬಳಕೆಯಲ್ಲಿರುವುದು.

ವಿಡಾ, ಸೌವರ್ಚಲ ಉಪ್ಪುಗಳನ್ನು ರೋಮಕ ಮತ್ತು ಸೈಂಧವ ಲವಣಗಳನ್ನು ಕೆಲವು ಚೂರ್ಣ ಮೂಲಿಕೆಗಳ ಜೊತೆಗೆ ಸುಟ್ಟು ತಯಾರಿಸಲಾಗುತ್ತದೆ. ಇವುಗಳನ್ನು ಅಡುಗೆಗಳಿಗಿಂತ ಹೆಚ್ಚಾಗಿ ಆಯುರ್ವೇದದ ಔಷಧಗಳಿಗಾಗಿ ಬಳಸುತ್ತಾರೆ. ಹಿಮಾಲಯದ ತಪ್ಪಲಿನ ಸಿಂಧ್ ಪ್ರಾಂತ್ಯದಲ್ಲಿನ ನೈಸರ್ಗಿಕ ಗುಲಾಬಿ ಬಣ್ಣದ ಉಪ್ಪಿನ ಶಿಲಾಪದರಗಳಿಂದ ಹೆಕ್ಕುವ ‘ಸೈಂಧವ ಉಪ್ಪು’ ಬಹಳ ಹೆಸರುವಾಸಿ. ಆಯುರ್ವೇದದಲ್ಲಿ ಐದು ಉಪ್ಪುಗಳಲ್ಲಿ ಇದನ್ನೇ ಹೆಚ್ಚು ಉತ್ತಮ ಎಂದು ಹೇಳಲಾಗಿದೆ. ‘ಹಿಮಾಲಯನ್ ಪಿಂಕ್ ಸಾಲ್ಟ್’ ಎಂದೇ ಮಾರುಕಟ್ಟೆಯಲ್ಲಿ ಈ ಉಪ್ಪುಪರಿಚಿತ. ನೋಡಲು ಕೂಡ ಆಕರ್ಷಕ. ಇದೇ ತರಹದ ಉಪ್ಪಿನ ವೈವಿಧ್ಯವು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲೂ ಇವೆ. ಅವನ್ನು ಸಮುದ್ರದ ಉಪ್ಪು, ಬಂಡೆಪದರಗಳ ಉಪ್ಪು, ಹಿಮಾಲಯದ ಗುಲಾಬಿ ಬಣ್ಣದ ಉಪ್ಪುಮತ್ತು ಕಪ್ಪುಉಪ್ಪು, ಯಹೂದಿಯರು ಅಡುಗೆಗೆಂದು ಬಳಸುವ ವಿಶೇಷವಾದ ಕೋಶರ್ ಉಪ್ಪು, ಹವಾಯಿ ದ್ವೀಪಗಳಲ್ಲಿ ಸಿಗುವ ಕೆಂಪುಬಣ್ಣದ ಉಪ್ಪುಮತ್ತು ಲಾವಾದ ಕಪ್ಪುಉಪ್ಪುಸೇರಿದಂತೆ ಪ್ರಪಂಚದ ಹಲವು ಸಮುದ್ರಗಳಲ್ಲಿ ಆಲ್ಲಿಂದ ತೆಗೆದ ನೀರಿನಿಂದ ತಯಾರಿಸಿದ ಉಪ್ಪುಗಳು ಬೇಕಾದಷ್ಟು ಸಿಗುತ್ತವೆ. ಇವೆಲ್ಲವೂ ನೈಸರ್ಗಿಕವಾದ ಉಪ್ಪುಗಳೇ ಆಗಿವೆ. ಇವುಗಳನ್ನು ತೆಗೆದು ಸಂಸ್ಕರಿಸಿ ಮಾರುಕಟ್ಟೆಗೆ ಕಳಿಸುವ ಜೊತೆಗೆ ಸಮುದ್ರದ ಉಪ್ಪಿಗೆ ಕೃತಕವಾಗಿ ವಿವಿಧ ರೀತಿಯ ಫ್ಲೇವರ್ (ವಾಸನೆ/ಉದಾ: ಕಿತ್ತಳೆ, ನಿಂಬೆ ಹಣ್ಣಿನ ರೀತಿಯ ವಾಸನೆ)ಸೇರಿಸಿದವು, ಹೆಚ್ಚು ನುಣುಪಾದ ಬಿಳಿಯಾದ ಉಪ್ಪು, ಬೇರೆ ಬೇರೆ ಖನಿಜಾಂಶಗಳನ್ನು ಸೇರಿಸಿದ ಉಪ್ಪುಗಳನ್ನು ಕೂಡ ಈಗ ತಯಾರಿಸಲಾಗುತ್ತಿದೆ. ಇವುಗಳೊಂದಿಗೆ ನಿಂಬೆ ಉಪ್ಪು, ಮೆಣಸುಪ್ಪುಗಳು ಕೂಡ ಚಾಲ್ತಿಯಲ್ಲಿವೆ.

ಇವೆಲ್ಲವೂ ಅಡುಗೆಯ ರುಚಿಯನ್ನು ಹೆಚ್ಚಿಸುವ ದೃಷ್ಟಿಯಿಂದ ತಯಾರಿಸಲಾದ ಉತ್ಪನ್ನಗಳು. ಸಮುದ್ರದ ಹೊರತಾಗಿ ಹಲವಾರು ಉಪ್ಪುನೀರಿನ ಸರೋವರಗಳು ಭೂಮಿಯಲ್ಲಿವೆ. ಮೃತ ಸಮುದ್ರ ಎಂದು ಕರೆಯಲಾಗುವ ಜೋರ್ಡನ್ ದೇಶದ ಉಪ್ಪಿನ ಸರೋವರದಲ್ಲಿರುವ ಅತ್ಯಧಿಕವಾದ ಲವಣಾಂಶದ ದೆಸೆಯಿಂದ ಮನುಷ್ಯ ಅದರೊಳಕ್ಕೆ ಬಿದ್ದರೂ ಮುಳುಗದೆ ತೇಲುತ್ತಾನೆ. ಭಾರತದಲ್ಲಿ ರಾಜಸ್ಥಾನದ ಸಂಭಾರ್ ಮತ್ತು ಒಡಿಶಾದ ಚಿಲ್ಕಾ ಎರಡು ಪ್ರಸಿದ್ಧ ಉಪ್ಪಿನ ಸರೋವರಗಳು. ಉಪ್ಪುಬರಿಯ ರುಚಿ ವಸ್ತು ಮಾತ್ರವಲ್ಲ ಆಹಾರ ಪದಾರ್ಥಗಳನ್ನು ಬಹುಕಾಲ ಕೆಡದಂತೆ ಸಂರಕ್ಷಿಸುವ ರಾಸಯನಿಕವೂ ಹೌದು. ಉಪ್ಪಿನಲ್ಲಿ ಹುದುಗಿಸಿ ಒಣಗಿಸಿದ ಮಾಂಸದ ತುಂಡುಗಳನ್ನು ವರ್ಷಾಂತರ ಕಾಲ ಬಳಸಬಹುದು. ಹಾಗೆಯೇ ಸಮುದ್ರದಲ್ಲಿ ಸಿಗುವ ಮೀನುಗಳಲ್ಲಿ ನೈಸರ್ಗಿಕವಾಗಿ ಉಪ್ಪಿನ ಅಂಶವಿರುವುದರಿಂದ ಅವನ್ನು ನೇರವಾಗಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳಬಹುದು.

ಈಜಿಪ್ಟಿನ ಪ್ರಾಚೀನ ಜನರು ಮಮ್ಮಿಗಳನ್ನು ಸಂರಕ್ಷಿಸಲು ಕೂಡ ಉಪ್ಪನ್ನು ಬಹುವಾಗಿ ಬಳಸುತ್ತಿದ್ದರು. ಇವತ್ತಿನ ಆಧುನಿಕ ಕಾಲದ ಕೈಗಾರಿಕೆಗಳಲ್ಲಿ ನಾನಾ ರೀತಿಯ ರಾಸಾಯನಿಕ ಪ್ರಕ್ರಿಯೆಗಳಿಗೆ ಹೆಚ್ಚು ಬಳಕೆಯಾಗುತ್ತದೆ, ಪೇಂಟಿಂಗ್‌ನಲ್ಲೂ ಉಪ್ಪುಬಳಸಿ ‘ವರ್ಣಚಿತ್ರ’ಗಳನ್ನೂ ರಚಿಸಲಾಗುತ್ತದೆ. ಇಷ್ಟೆಲ್ಲಾ ವಿವರಣೆಗಳ ಕೊನೆಯಲ್ಲಿ ಇವತ್ತು ನಾವು ಬಳಸುತ್ತಿರುವ ಬೆಳ್ಳನೆಯ ನುಣುಪಾದ ಉಪ್ಪುನೈಸರ್ಗಿಕವೇ, ಕೃತಕವೇ? ಸುಸ್ಥಿರವೇ? ಅಥವಾ ಆರೋಗ್ಯಕ್ಕೆ ಒಳ್ಳೆಯದೇ ಎಂದೆಲ್ಲ ಚಿಂತಿಸಲು ಶುರುಮಾಡಿದರೆ ತಲೆ ಕೆಡುತ್ತದೆ. ಉಪ್ಪಿನ ಗದ್ದೆಗಳಿಂದ ಸಂಗ್ರಹಿಸಿದ ಹರಳು, ಗೆಡ್ಡೆಗಳನ್ನು ಕಾರ್ಖಾನೆಗಳಿಗೆ ಸಾಗಿಸಿ ಸಂಸ್ಕರಿಸಿ ಪ್ಯಾಕ್ ಮಾಡುವ ವೇಳೆಗೆ ಉಪ್ಪು ಫಳಫಳನೆ ಹೊಳೆಯುವ ಬಿಳಿಯ ಬಣ್ಣವನ್ನು ಬಳಿದುಕೊಂಡು ಬಂದಿರುತ್ತದೆ. ಸಂಸ್ಕರಣೆ ಅನ್ನುವುದು ಕಲ್ಮಶವನ್ನು ತೆಗೆದು ಹಾಕುವುದು, ಒಳ್ಳೆಯದನ್ನು ಸೇರಿಸುವುದು ಇತ್ಯಾದಿಗಳಿಗಿಂತ ಪದಾರ್ಥವನ್ನು ಬಿಳಿಯಾಗಿಸುವುದು ಮತ್ತು ಆಕರ್ಷಕವಾಗಿಸುವುದು ಎಂದಾಗಿಬಿಟ್ಟಿದೆ. ಅದೃಷ್ಟಕ್ಕೆ ‘ಸಾವಯವ ಉಪ್ಪು’ ಎನ್ನುವುದು ಮಾರುಕಟ್ಟೆಗೆ ಬಂದಿಲ್ಲ ಅಂದುಕೊಂಡಿದ್ದೀನಿ!

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News