ಖಾಸಗೀಕರಣದತ್ತ ಸರಕಾರಿ ಬ್ಯಾಂಕುಗಳು?

Update: 2020-08-16 06:42 GMT

ಭಾಗ-2

ಹಿಂದಿನ ಭಾಗದಲ್ಲಿ ಹೇಳಿದ ಪರಿಣಾಮಗಳು ಸಂಭವನೀಯ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಮೊದಲಾಗಿ ನಮ್ಮ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ಸಂಭವಿಸಿದ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಉದಾರೀಕರಣದ ಆರಂಭದಲ್ಲಿ (1994) ಬಾಜಾಬಜಂತ್ರಿಯ ಮೂಲಕ ಸೆಕುಂದರಾಬಾದಿನಲ್ಲಿ ಸ್ಥಾಪಿಸಲ್ಪಟ್ಟ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಅನ್ನು ಭಾರತದ ಹಣಕಾಸು ರಂಗದ ಧ್ರುವತಾರೆ ಎಂದು ಬಿಂಬಿಸಲಾಯಿತು. ಆದರೆ ಅದರ ಪ್ರವರ್ತಕರ ಅನೈತಿಕ ವ್ಯವಹಾರಗಳಿಂದಾಗಿ ಅಗಾಧ ನಷ್ಟವನ್ನು ಅನುಭವಿಸಿ 2004ರಲ್ಲಿ ಇನ್ನೇನು ಮುಳುಗುವ ಹಂತಕ್ಕೆ ಬಂದಾಗ ದಕ್ಷತೆಗೆ ಹೆಸರಾಗಿದ್ದ ಸರಕಾರಿ ರಂಗದ ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಜೊತೆ ಅದನ್ನು ವಿಲೀನಗೊಳಿಸಲಾಯಿತು. ಈ ಹೊಡೆತದಿಂದ ಚೇತರಿಸಿಕೊಳ್ಳಲು ಒಬಿಸಿಗೆ ಮೂರು ವರ್ಷ ಬೇಕಾಯಿತು.

ದೇಶದ ಪ್ರತಿಷ್ಠಿತ ಹಾಗೂ ಅತಿ ದೊಡ್ಡ ಖಾಸಗಿ ಬ್ಯಾಂಕೆಂಬ ಹೆಗ್ಗಳಿಕೆ ಹೊಂದಿದ ಐಸಿಐಸಿಐ ಬ್ಯಾಂಕು 2017-19ರ ಅವಧಿಯಲ್ಲಿ ‘ವೀಡಿಯೋಕಾನ್’ (VideoCon) ಕಂಪೆನಿಗೆ ಕೊಟ್ಟ ಸಾಲಕ್ಕೆ ಸಂಬಂಧಿಸಿದಂತೆ ಗಂಭೀರವಾದ ಸಮಸ್ಯೆಗಳನ್ನು ಎದುರಿಸಿತು. ಬ್ಯಾಂಕಿನ ಮುಖ್ಯಸ್ಥೆ ಚಂದಾ ಕೊಚ್ಚರ್ ಅವರ ಅಧಿಕಾರಾವಧಿಯಲ್ಲಿ ಸಾಲ ಕೊಡುವಾಗ ನಡೆಯಿತೆನ್ನಲಾದ ಅವ್ಯವಹಾರಗಳು ಬೆಳಕಿಗೆ ಬಂದವು. ನ್ಯಾಯಮೂರ್ತಿ ಶ್ರೀಕೃಷ್ಣ ಆಯೋಗವು ನಡೆಸಿದ ವಿಚಾರಣೆಯಲ್ಲಿ ಚಂದಾ ಅವರ ಪಾತ್ರ ಹೊರಬಂದು ಅವರನ್ನು ಕೆಲಸದಿಂದ ವಜಾಮಾಡಬೇಕಾಗಿ ಬಂತು. ಕೇಂದ್ರೀಯ ವಿಚಾರಣಾ ಆಯೋಗವು (ಸಿಬಿಐಯು), ಚಂದಾ, ಅವರ ಪತಿ ದೀಪಕ್ ಮತ್ತು ವೀಡಿಯೋಕಾನ್ ಕಂಪೆನಿಯ ಮುಖ್ಯಸ್ಥ ವೇಣುಗೋಪಾಲ ಧೂತ್ ಅವರ ಅವ್ಯವಹಾರಗಳ ಕುರಿತು ಕೇಸು ದಾಖಲಿಸಿ ತನಿಖೆಯನ್ನು ಆರಂಭಿಸಿತು. ಇನ್ನೊಂದು ಖಾಸಗಿ ಬ್ಯಾಂಕು- ಯೆಸ್ ಬ್ಯಾಂಕು-ಅದರ ಪ್ರವರ್ತಕರಾದ ಕಪೂರ್ ಕುಟುಂಬದ ದಾಯಾದಿ ಕಲಹ ಹಾಗೂ ಅಕ್ರಮಗಳು 2018-19ರಲ್ಲಿ ಬೆಳಕಿಗೆ ಬಂದು ಈಗ ಬ್ಯಾಂಕನ್ನು ತೀವ್ರವಾದ ಸಂಕಷ್ಟಕ್ಕೆ ತಳ್ಳಿವೆ. ಬಂಡವಾಳದ ಕೊರತೆಯನ್ನು ತುಂಬಿಸಲು ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ರೂ.10,000 ಕೋಟಿ ಸಹಾಯ ನೀಡಬೇಕಾಯಿತು. ಅದೇ ಸಂದರ್ಭದಲ್ಲಿ (2018-19ಕ್ಕೆ) ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆ ಎನ್ನಲಾದ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ತನ್ನ ಹಿರಿಯ ಅಧಿಕಾರಿಗಳ ಅಕ್ರಮ ವ್ಯವಹಾರಗಳಿಂದ ತತ್ತರಿಸಿದೆ. ಅದೇ ರೀತಿ ಮುಖ್ಯ ಪ್ರವರ್ತಕರ ಅಕ್ರಮಗಳಿಂದ ನಷ್ಟ ಅನುಭವಿಸಿದ ಸಹಕಾರಿ ರಂಗದ ದೊಡ್ಡ ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ 2019ರಲ್ಲಿ ತನ್ನ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿ ಬಂತು.

ಗ್ರಾಹಕರ ಹಿತರಕ್ಷಣೆ ಗೌಣ?

ಗ್ರಾಹಕರ ದೃಷ್ಟಿಯಿಂದ ನೋಡಿದಾಗ ಖಾಸಗಿ ರಂಗದ ಬ್ಯಾಂಕುಗಳ ಧೋರಣೆಗಳು ಪ್ರಶ್ನಾರ್ಹವಾಗುತ್ತವೆ. ಖಾತೆಗಳನ್ನು ತೆರೆಯುವಾಗ, ಸಾಲದ ಅರ್ಜಿಯನ್ನು ಸಲ್ಲಿಸುವಾಗ ಮತ್ತು ಇನ್ನಿತರ ಸೇವೆಯನ್ನು ಒದಗಿಸುವಾಗ ಪ್ರತ್ಯಕ್ಷವಾಗಿ ಹೇಳದೆ ಒಪ್ಪಂದಗಳಲ್ಲಿ ನಿಬಂಧನೆಗಳನ್ನು ‘ಸಣ್ಣ ಅಕ್ಷರಗಳಲ್ಲಿ’ ನಮೂದಿಸಿ ಕಾಲಕಾಲಕ್ಕೆ ವಿಭಿನ್ನ ನೆಪದಲ್ಲಿ ಶುಲ್ಕವನ್ನು ಹೇರುತ್ತವೆ. ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಶುಲ್ಕ ಮತ್ತು ಬಡ್ಡಿಯ ದರ, ಚೆಕ್ಕು ವಾಪಸಾದರೆ ಸಂಗ್ರಹಿಸುವ ಜುಲ್ಮಾನೆ, ಸಾಲದ ಅರ್ಜಿ ಪರಿಶೀಲನಾ ಶುಲ್ಕ, ಕಂತು ಕೊಡುವಾಗ ತಡವಾದರೆ ವಿಧಿಸುವ ಚಕ್ರಬಡ್ಡಿ-ಇವೇ ಮುಂತಾದ ವ್ಯವಹಾರಗಳು ಪಾರದರ್ಶಕವೆನ್ನಲು ಸಾಧ್ಯವಿಲ್ಲ. ಯಾವುದೇ ಸಾಲದ ಮರುಪಾವತಿಯಲ್ಲಿ ತುಸು ವಿಳಂಬವಾದರೂ ನೋಟಿಸ್ ಇಲ್ಲದೆ ಅಡವಿಟ್ಟ ವಾಹನವನ್ನು ಅಥವಾ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಂಡ ಅನೇಕ ಘಟನೆಗಳು ನಡೆದಿವೆ-ಬಲಪ್ರಯೋಗ ಮಾಡಿದ್ದೂ ಇದೆ.

ಹಾಗೆಂದು ಸಾಲದ ಅಗತ್ಯವೇ ಇಲ್ಲದ ಶ್ರೀಮಂತ ಉದ್ದಿಮೆದಾರರಿಗೆ ತಾವಾಗಿಯೇ ಸಾಲ ನೀಡುವ ಕ್ರಮವೂ ಚಾಲ್ತಿಯಲ್ಲಿದೆ. ತದ್ವಿರುದ್ಧವಾಗಿ ಒಬ್ಬರು ಸ್ವಂತ ಸಣ್ಣ ಉದ್ದಿಮೆ ಆರಂಭಿಸಲು ಅಥವಾ ಆಟೊರಿಕ್ಷಾ ಕೊಳ್ಳಲು ಸಾಲ ಯಾಚಿಸಿ ಬಂದರೆ ಸುಲಭದಲ್ಲಿ ಒದಗಿಸುತ್ತಾರೆಯೇ? ದೊಡ್ಡ ಬ್ಯಾಂಕುಗಳು ತಮ್ಮ ಆದಾಯವನ್ನು ಹೆಚ್ಚಿಸಲು ಪ್ರಶ್ನಾರ್ಹ ಮಾರ್ಗಗಳನ್ನು ತುಳಿಯುತ್ತವೆ. ತಾವು ಮಾರುವ ಬೇರೆ ಬೇರೆ ಸೇವೆಗಳನ್ನು-ಉದಾಹರಣೆಗೆ ಜೀವ ವಿಮೆ ಮತ್ತು ಸಾಮಾನ್ಯ ವಿಮೆ ಪಾಲಿಸಿಗಳು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಒತ್ತಾಯದಿಂದ ಗ್ರಾಹಕರಿಗೆ ಮಾರುವ ಅನೇಕ ಘಟನೆಗಳು ವರದಿಯಾಗಿವೆ. ಮುಂಬೈಯ ‘ಮನಿಲೈಫ್’ ಅಂತರ್ಜಾಲ ಪತ್ರಿಕೆಯ ಅಕ್ಟೋಬರ್ 2018ರ ಒಂದು ವರದಿಯು ದೇಶದ ದೊಡ್ಡ ದೊಡ್ಡ ಬ್ಯಾಂಕುಗಳು ವಿಮೆಗಳ ವ್ಯವಹಾರದಲ್ಲಿ ಮಾಡಿದ ಅಕ್ರಮಗಳನ್ನು ಮತ್ತು ಹಿರಿಯ ನಾಗರಿಕರನ್ನು ವಂಚಿಸಿದ ಸನ್ನಿವೇಶಗಳು ತೆರೆದಿಟ್ಟಿದೆ. ಅದರ ಮಾತೃ ಸಂಸ್ಥೆ ‘ಮನಿಲೈಫ್ ಫೌಂಡೇಶನ್’ ಎಂಬ ಸರಕಾರೇತರ ಸಂಸ್ಥೆಯು ಎಪ್ರಿಲ್ 2013ರಲ್ಲಿಯೇ ಆರ್‌ಬಿಐಗೆ ಈ ಬಗ್ಗೆ ವಿಸ್ತೃತವಾದ ಮನವಿ ಸಲ್ಲಿಸಿತ್ತು. ಅದಾದ ಬಳಿಕ ಬ್ಯಾಂಕು ಅಧಿಕಾರಿಗಳ ರಾಷ್ಟ್ರೀಯ ಸಂಘಟನೆಗಳು ಆರ್‌ಬಿಐಗೆ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿಯೂ ಫಲಕಾರಿಯಾಗಿರಲಿಲ್ಲ. ಈ ತರದ ಅವ್ಯವಹಾರಗಳಲ್ಲಿ ಎರಡೂ ಕ್ಷೇತ್ರಗಳ ಬ್ಯಾಂಕುಗಳು ತೊಡಗಿಸಿಕೊಂಡಿದ್ದವು!

ವಿದೇಶಗಳಲ್ಲಿನ ಅನುಭವ:

ಜಾಗತಿಕ ಮಟ್ಟದಲ್ಲಿಯೂ ಈ ರೀತಿಯ ಅ(?)ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. 2007-08ರ ಆರ್ಥಿಕ ಬಿಕ್ಕಟ್ಟಿನಿಂದ ಬ್ಯಾಂಕುಗಳನ್ನು ಉಳಿಸಲು ಸರಕಾರಗಳು ಹಣಸಹಾಯ ನೀಡಬೇಕಾಯಿತು. ಆದರೆ ಸರಕಾರ ಕೊಡಮಾಡಿದ ಗಂಟಿನ ಬಹುಭಾಗ ನಷ್ಟಕ್ಕೊಳಗಾದ ಬ್ಯಾಂಕುಗಳ ಹಿರಿಯ ಅಧಿಕಾರಿಗಳ ಬೋನಸ್ ಮತ್ತು ಇತರ ಸಂಭಾವನೆಗಳನ್ನು ಕೊಡಲು ಉಪಯೋಗಿಸಲಾದ ವರದಿಗಳು ಬಂದಿವೆ. ಉದ್ಯೋಗ ಕಳಕೊಂಡು ಜೀವನವೇ ದುರ್ಭರವಾದ ಸಹಸ್ರಾರು ನೌಕರರು ಪರಿಹಾರಗಳಿಂದ ವಂಚಿತರಾಗಿದ್ದರು. ಈ ಅನುಭವದ ಬಳಿಕವೂ ಖಾಸಗಿ ಬ್ಯಾಂಕುಗಳು ತಮ್ಮ ನೀತಿಯನ್ನು ಬದಲಾಯಿಸಿಲ್ಲ. 2016-19ರಲ್ಲಿ ಜಗತ್ತಿನ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಅಮೆರಿಕದ ವೆಲ್ಸ್ ಫಾರ್ಗೋದ ಅವ್ಯವಹಾರಗಳಿಂದ ಅದರ ಮೂವರು ಮುಖ್ಯಸ್ಥರು ಉದ್ಯೋಗ ಕಳೆದುಕೊಳ್ಳಬೇಕಾಯಿತು, ಆ ದೇಶದ ಸಂಸತ್ತಿನ (ಕಾಂಗ್ರೆಸ್‌ನ) ಉನ್ನತ ತನಿಖಾ ಸಮಿತಿ ಬ್ಯಾಂಕಿನ ಮುಖ್ಯಸ್ಥರ ಮೇಲೆ ತೀವ್ರವಾದ ಶಾಸನಾತ್ಮಕ ಕ್ರಮವನ್ನು ಕೈಗೊಳ್ಳುವಂತೆ ನಿರ್ದೇಶಿಸಿತು. ದುಬಾರಿ ಜುಲ್ಮಾನೆಯನ್ನೂ ಬ್ಯಾಂಕು ತೆರಬೇಕಾಗಿ ಬಂತು. ಜರ್ಮನಿ ಮೂಲದ ಡಾಯಶ್ ಬ್ಯಾಂಕು ಕಾನೂನುಗಳ ಉಲ್ಲಂಘನೆ ಮಾಡಿದ ಆಪಾದನೆಯನ್ನು ಎದುರಿಸಬೇಕಾಗಿ ಬಂತು. ಆಸ್ಟ್ರೇಲಿಯಾದ ಬ್ಯಾಂಕುಗಳ ಅಕ್ರಮವನ್ನು ದೇಶದ ಅತ್ಯುಚ್ಚಮಟ್ಟದ ಆಯೋಗವು ವಿಚಾರಣೆ ನಡೆಸಿ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರಕಾರಕ್ಕೆ ಆದೇಶ ನೀಡಿತು.

2019ರ ಆರಂಭದಲ್ಲಿ ಬಂದ ಆ ಕಮಿಶನ್ ವರದಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ಆಮೂಲಾಗ್ರ ಬದಲಾವಣೆ ಮಾಡಬೇಕೆಂಬ ಶಿಫಾರಸುಗಳು ಬಂದವು. ಸೋವಿಯೆತ್ ಒಕ್ಕೂಟ ವಿಭಜನೆಯಾದ ಬಳಿಕ ಹೊರಹೊಮ್ಮಿದ ಉಕ್ರೇನ್ ದೇಶದ ಸರಕಾರವು 2016ರ ಡಿಸೆಂಬರ್‌ನಲ್ಲಿ ದೇಶದ ಅತ್ಯಂತ ದೊಡ್ಡ ಬ್ಯಾಂಕು ಎಂಬ ಹಿರಿಮೆ ಹೊಂದಿದ್ದ ‘ಪ್ರೈವೆಟ್ ಬ್ಯಾಂಕ್’ ಅನ್ನು ರಾಷ್ಟ್ರೀಕರಣ ಮಾಡಿತು. ತನ್ನ ವಿವೇಚನಾಶೂನ್ಯ ಸಾಲದ ನೀತಿಯಿಂದಾಗಿ ಬ್ಯಾಂಕು ಮುಳುಗುವ ಹಂತಕ್ಕೆ ತಲುಪಿತ್ತು, ಆಗ ದೇಶದ ಅರ್ಥವ್ಯವಸ್ಥೆಯ ಹತೋಟಿಗೆ ಹಾಗೂ 2 ಕೋಟಿ ಗ್ರಾಹಕರ ಹಿತರಕ್ಷಣೆಯನ್ನು ಮಾಡಲು ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಬೇಕಾಯಿತು ಎಂಬುದಾಗಿ ಸರಕಾರ ಹೇಳಿತು. ಈ ಬ್ಯಾಂಕಿನ ಒಡೆತನ ಆಗರ್ಭ ಶ್ರೀಮಂತನಾದ ಐಹೊರ್ ಕೊಲೊಮೊಸ್ಕಿಗೆ ಸೇರಿತ್ತು. ಸಮೂಹ ಮಾಧ್ಯಮ, ಇಂಧನ ಹಾಗೂ ಇನ್ನು ಹಲವಾರು ಉದ್ದಿಮೆಗಳಲ್ಲಿ ತೊಡಗಿಸಿಕೊಂಡು ದೇಶದಲ್ಲಿ ಅತಿ ದೊಡ್ಡದೆನಿಸಿದ ಕಂಪೆನಿಯ ಒಡೆಯ ಆತ. (ಹಿಂದಿನ ಸೋವಿಯೆತ್ ಗಣರಾಜ್ಯದಲ್ಲಿ ಬ್ಯಾಂಕುಗಳು ಸರಕಾರದ ಅಧೀನವಿದ್ದು ಒಕ್ಕೂಟ ವಿಭಜನೆಯಾದಾಗ ಅವುಗಳನ್ನು ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡಲಾಗಿತ್ತು.) ಖಾಸಗಿ ರಂಗದ ಬ್ಯಾಂಕುಗಳಲ್ಲಿ ಹೆಚ್ಚು ದಕ್ಷತೆ ಮತ್ತು ನೈತಿಕತೆ ಇದ್ದಿದ್ದರೆ ಈ ಪರಿಸ್ಥಿತಿ ಒದಗುತ್ತಿತ್ತೇ?

2017ರಲ್ಲಿ ಲಂಡನ್‌ನ ಪ್ರತಿಷ್ಠಿತ ಸಾಪ್ತಾಹಿಕ ‘ದ ಎಕನಾಮಿಸ್ಟ್’ ವರದಿಯಂತೆ 2007-08ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಸರಕಾರದ ಬೆಂಬಲವಿದ್ದಾಗ್ಯೂ ಸುಮಾರು 10,000 ಬ್ಯಾಂಕು ಶಾಖೆಗಳನ್ನು ಅಮೆರಿಕದಲ್ಲಿ ಮುಚ್ಚಲಾಯಿತು. ಇದರಿಂದಾಗಿ ಅನೇಕ ಗ್ರಾಮೀಣ ಮತ್ತು ಅರೆಪಟ್ಟಣಗಳ ಜನಸಾಮಾನ್ಯರು ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾದರು.

ಮುಂದುವರಿದ ದೇಶಗಳಲ್ಲಿ ಕಟ್ಟುನಿಟ್ಟಾದ ಶಾಸನಗಳು, ನಿಯಂತ್ರಕರು, ಸ್ವತಂತ್ರ ವಿಚಾರಣಾ ಕ್ರಮಗಳು-ಇವೆಲ್ಲ ಇದ್ದೇ ಬೃಹತ್ ಬ್ಯಾಂಕುಗಳು ಅಕ್ರಮಗಳಲ್ಲಿ ಭಾಗಿಯಾಗಿವೆ. ಅಲ್ಲಿನ ವ್ಯವಸ್ಥೆಗೆ ಹೋಲಿಸಲು ಸಾಧ್ಯವಿಲ್ಲದ ನಮ್ಮ ದೇಶದಲ್ಲಿ ಹಣಕಾಸು ರಂಗವು ಖಾಸಗಿ ಪ್ರವರ್ತಕರ ಸುಪರ್ದಿಗೆ ಬಂದಾಗ ನಮ್ಮಿಂದ ಕಡಿವಾಣ ಹಾಕಲು ಸಾಧ್ಯವೇ? ನಿಯಂತ್ರಣ ಸಾಧ್ಯವಿಲ್ಲದಾಗ ಅದರ ಪರಿಣಾಮ ಅಸಂಖ್ಯಾತ ಠೇವಣಿದಾರರ ಮೇಲೆ ಹಾಗೂ ಒಟ್ಟು ಸಮಾಜದ ಮೇಲೆ ಆಗುತ್ತದೆ.

ಉಳಿದ ರಂಗಗಳ ಸರಕಾರದ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡಿದಾಗಲೂ ಸುಮಾರಾಗಿ ಇದೇ ತರದ ಅನುಭವಗಳಾಗಿವೆ. ಮುಂಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಮೊದಲು ಕೇಂದ್ರದ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿತ್ತು. ಕೆಲವು ವರ್ಷಗಳ ಹಿಂದೆ ಅದನ್ನು ಖಾಸಗೀಕರಣಗೊಳಿಸಿ ದೇಶದ ಒಂದು ಬಹುದೊಡ್ಡ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಂಪೆನಿಯಾದ ಜಿವಿಕೆ ಸಮೂಹಕ್ಕೆ ಒಪ್ಪಿಸಲಾಯಿತು. ಆ ಸಮೂಹ ಒಂದು ವಂಚನೆಯ ಆರೋಪದಲ್ಲಿ ಕೇಂದ್ರದ ಜಾರಿ ನಿರ್ದೇಶನಾಲಯ (ಉ್ಞ್ಛಟ್ಟ್ಚಛಿಞಛ್ಞಿಠಿ ಈಜ್ಟಿಛ್ಚಿಠಿಟ್ಟಠಿಛಿ)ದ ಜಾಲದಲ್ಲಿ ಸಿಕ್ಕಿ ಬಿದ್ದು ಅದರ ಅನೇಕ ಕಚೇರಿಗಳಿಗೆ ದಾಳಿ ನಡೆಸಲಾಗಿದೆ. ಬೆಂಗಳೂರು, ದಿಲ್ಲಿ ಮತ್ತು ಹೈದರಾಬಾದ್ ನಿಲ್ದಾಣವನ್ನು ಇನ್ನೊಂದು ಖಾಸಗಿ ಕಂಪೆನಿಯಾದ ಜಿಎಂಆರ್ ಗ್ರೂಪ್‌ಗೆ ಕೊಡಲಾಯಿತು. ಆ ಕಂಪೆನಿಯು ಬೆಂಗಳೂರು ನಿಲ್ದಾಣದ ಮೇಲೆ ತನಗಿರುವ ಅಧಿಕಾರ ವನ್ನು ಕೆನಡದ ಫೇರ್ ಫೇಕ್ಸ್ ಸಂಸ್ಥೆಗೆ ಬಿಟ್ಟುಕೊಟ್ಟಿದೆ. ದಿಲ್ಲಿಯ ನಿಲ್ದಾಣವನ್ನು ಫ್ರಾನ್ಸ್‌ನ ವಿದೇಶಿ ಕಂಪೆನಿಗೆ ಹಸ್ತಾಂತರಿಸುವ ಮಾತುಕತೆ ನಡೆಯುತ್ತಿದೆ.

ವಿಶ್ವಬ್ಯಾಂಕಿನ ಅಧ್ಯಯನ:
2018ರಲ್ಲಿ ವಿಶ್ವಬ್ಯಾಂಕಿನ ತಜ್ಞರ ಒಂದು ತಂಡ ಅನೇಕ ವರ್ಷಗಳಿಂದೀಚೆಗೆ ಬೇರೆ ಬೇರೆ ದೇಶಗಳಲ್ಲಿ ನಡೆದ ಖಾಸಗೀಕರಣದ ಪರಿಣಾಮಗಳನ್ನು ಅಧ್ಯಯನ ಮಾಡಿತು. ಅದು ಮೂರು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದೆ.

ಮೊದಲನೆಯದಾಗಿ, ಮುಂದುವರಿದ ರಾಷ್ಟ್ರದಲ್ಲಿ ಆದಷ್ಟು ಪ್ರಯೋಜನಗಳು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಆಗಿಲ್ಲ. ಖಾಸಗೀಕರಣ ಒಂದು ದೇಶದ ಆರ್ಥಿಕ ಸಮಸ್ಯೆಗಳಿಗೆ ರಾಮಬಾಣವಲ್ಲ. ಅದರ ವಿಧಾನ ಅಸಮರ್ಪಕವಾಗಿದ್ದರೆ ಅಥವಾ ಸ್ಪರ್ಧಾತ್ಮಕ ಮಾರುಕಟ್ಟೆ ಇಲ್ಲದಿದ್ದಾಗ ಖಾಸಗೀಕರಣಗೊಂಡ ಉದ್ದಿಮೆಗಳ ದಕ್ಷತೆ ಹೆಚ್ಚಿದ ನಿದರ್ಶನಗಳಿಲ್ಲ. ಬದಲಾಗಿ ಮಾರಲಾಗುವ ಕಂಪೆನಿಯ ಆಸ್ತಿಗಳ ಮೌಲ್ಯಮಾಪನಗಳಲ್ಲಿ ಅಕ್ರಮಗಳು ನಡೆದು ಸಂಪತ್ತಿನ ಅಸಮಾನತೆಗಳು ಆಳವಾದವು.

ಎರಡನೆಯದಾಗಿ, ಏಕಸ್ವಾಮ್ಯದ ವಹಿವಾಟುಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣವಿಲ್ಲದ ಸಂದರ್ಭಗಳಲ್ಲಿ ಖಾಸಗೀಕರಣದ ಹೇಳಿಕೊಂಡ ಪ್ರಯೋಜನಗಳು ಲಭ್ಯವಾಗಿಲ್ಲ. ಮೂರನೆಯದಾಗಿ, ಖಾಸಗೀಕರಣದ ಬಳಿಕ ಸಂಪತ್ತಿನ ನ್ಯಾಯಯುತ ವಿತರಣೆಯಾಗುತ್ತಿಲ್ಲ. ಕೊನೆಯದಾಗಿ ರಾಜಕೀಯ ಒಮ್ಮತವಿಲ್ಲದ ಸನ್ನಿವೇಶಗಳಲ್ಲಿ ಖಾಸಗೀಕರಣದ ನಿರ್ಧಾರದ ಹಿಂದೆ ರಾಜಕೀಯ ಶಕ್ತಿಗಳ ಮತ್ತು ಸ್ಥಿತಿವಂತರ ಕೈವಾಡವಿದ್ದು ದೇಶದ ಆರ್ಥಿಕ ವ್ಯವಸ್ಥೆಗೆ ಸಮಸ್ಯೆಗಳುಂಟಾಗುತ್ತವೆ.

ಉದ್ದೇಶಿತ ಖಾಸಗೀಕರಣದ ಅಗತ್ಯವಿದೆಯೇ? ದೇಶವಿದೇಶಗಳ ಅನುಭವ, ನಮ್ಮದೇಶದ ಆರ್ಥಿಕ ಪರಿಸ್ಥಿತಿ ಹಾಗೂ ತುರ್ತಾಗಿ ಆಗಬೇಕಾದ ಸುಧಾರಣೆಗಳನ್ನು ಗಮನದಲ್ಲಿರಿಸಿ ಹೇಳುವುದಾದರೆ ಈಗ ಕೇಂದ್ರ ಸರಕಾರ ಮಾಡಲು ಹೊರಟ ಖಾಸಗೀಕರಣ ದೇಶದ ಆರ್ಥಿಕತೆಯ ಚೇತರಿಕೆಗೆ ಮತ್ತು ಪ್ರಗತಿಗೆ ಪೂರಕವಾಗುವ ಸಾಧ್ಯತೆ ಬಹಳ ಕಡಿಮೆ. ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆಯನ್ನು ಈ ಸರಕಾರ ಮಾಡಿಲ್ಲ-ಹೋದ ಆರು ವರ್ಷಗಳಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳ ಹಿಂದೆಯೂ ವಸ್ತುನಿಷ್ಠ ಚರ್ಚೆ ಆಗಿರಲಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಹಣಕಾಸು ರಂಗದ ಉದ್ದಿಮೆಗಳ ಖಾಸಗೀಕರಣ ಮುಂದುವರಿದರೆ ದೇಶದ ಅಭಿವೃದ್ಧ್ದಿಯ ಗಡಿಯಾರವನ್ನು ಹಿಂದಕ್ಕೆ ತಿರುಗಿಸದಂತೆ ಆಗುವುದು ನಿಸ್ಸಂಶಯ.
ಕಾಲಮಿಂಚುವ ಮೊದಲೇ ಜನರು ಎಚ್ಚೆತ್ತುಕೊಳ್ಳುವ ತುರ್ತು ಈಗ ದೇಶದ ಮುಂದಿದೆ.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News