ದೃಷ್ಟಿಹೀನ, ಮಾನಸಿಕ ಅಸ್ವಸ್ಥ ಮಗನನ್ನು ಎಳೆದೊಯ್ದರು: ಠಾಣೆಯ ಬಳಿ ತಾಯಂದಿರ ಆಕ್ರಂದನ

Update: 2020-08-16 13:59 GMT

ಬೆಂಗಳೂರು, ಆ.16: ‘ಕಾವಲ್ ಭೈರಸಂದ್ರ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಯುವಕರ ಗುಂಪಿನಲ್ಲಿ ನನ್ನ ಮಗನೂ ಇದ್ದು, ಆತ ಅಮಾಯಕ’ ಎಂದು ತಾಯಿಯೊಬ್ಬಾಕೆ ಕಣ್ಣೀರು ಹಾಕಿದರೆ, ಮತ್ತೋರ್ವ ಮಹಿಳೆ ‘ನನ್ನ ಮಗ ದಿನಗೂಲಿಗಾರ. ಆತ ಯಾವುದೇ ತಪ್ಪು ಮಾಡಲು ಸಾಧ್ಯವಿಲ್ಲ’ ಎನ್ನುವ ಕೂಗು. ಹೀಗೆ, ಹತ್ತಾರು ಮಹಿಳೆಯರು ತಮ್ಮ ಮಕ್ಕಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಬಿಟ್ಟುಬಿಡಿ ಎಂದು ಅಳಲು ತೋಡಿಕೊಂಡ ದೃಶ್ಯಗಳು ಇಲ್ಲಿನ ಡಿಜೆ ಮತ್ತು ಕೆಜಿ ಹಳ್ಳಿ ಠಾಣೆ ಮುಂಭಾಗ ಕಾಣಿಸಿದವು.

ರವಿವಾರ ಮುಂಜಾನೆಯಿಂದಲೇ ಜಮಾಯಿಸಿದ ಹತ್ತಾರು ಮಹಿಳೆಯರು, ಗಲಾಟೆ ಸಂದರ್ಭದಲ್ಲಿ ತಮ್ಮ ಮಕ್ಕಳು ಹೋಗಿಲ್ಲ. ಆದರೂ, ಉದ್ದೇಶಪೂರ್ವಕವಾಗಿ ಎಳೆದೊಯ್ದರು. ಈ ಬಗ್ಗೆ ಪ್ರಶ್ನಿಸಿದರೆ, ಠಾಣೆಗೆ ಬಂದು ಮಾತನಾಡಿ ಎಂದು ಉತ್ತರಿಸಿದರು. ಇಲ್ಲಿಗೆ ಬಂದರೆ, ನಿಮ್ಮ ಮಗನನ್ನು ಬಳ್ಳಾರಿಗೆ ಕಳುಹಿಸಿದ್ದೇವೆ. ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಯಾರು ಸಹ ಸರಿಯಾದ ಉತ್ತರವನ್ನೇ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದರು.

ದೃಷ್ಟಿಹೀನ, ಮಾನಸಿಕ ಅಸ್ವಸ್ಥ: ನಮ್ಮ ಮನೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಹಿಂಭಾಗವೇ ಇದೆ. ನಾವು ಘಟನೆಯಿಂದ ಹೆದರಿ ಮಂಗಳವಾರ ರಾತ್ರಿ ಮನೆ ಬಿಟ್ಟು ಹೋಗಿದ್ದೆವು. ಬುಧವಾರ ಸಂಜೆ ವಾಪಸ್ಸು ಬಂದಿದ್ದು, ರಾತ್ರಿ 9 ಗಂಟೆಗೆ ಬಂದ ಪೊಲೀಸರು, 19 ವರ್ಷದ ನನ್ನ ಮಗ ಸುಹನ್ ನನ್ನು ಎಳೆದೊಯ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಠಾಣೆಗೆ ಬನ್ನಿ ಎಲ್ಲವೂ ಗೊತ್ತಾಗುತ್ತದೆ ಎಂದರು.

ಗುರುವಾರವೇ ನಾವು ಠಾಣೆಗೆ ಹೋದಾಗ, ಇಲ್ಲಿ ಯಾರೂ ಇಲ್ಲ, ಶುಕ್ರವಾರ ಬನ್ನಿ ಎಂದರು. ಬಳಿಕ, ಮರುದಿನ ತೆರಳಿದಾಗ ಠಾಣೆಯಲ್ಲಿ ನಿಮ್ಮ ಮಗನಿಲ್ಲ. ಆತನನ್ನು ಬಂಧಿಸಿದ್ದೇವೆ, ನೀವು ಯಾರಾದರೂ ವಕೀಲರನ್ನು ಸಂಪರ್ಕಿಸಿ ಎಂದು ಉತ್ತರಿಸಿದರು ಎಂದು 49 ವರ್ಷದ ಅಮೀನಾ ವಿವರಿಸಿದರು.

ನನ್ನ ಮಗನಿಗೆ ದೃಷ್ಟಿ ಸಮಸ್ಯೆ ಇದ್ದು, ಮಾನಸಿಕ ಅಸ್ವಸ್ಥನಾಗಿದ್ದಾನೆ. ಇಲ್ಲಿಯೇ ಸ್ಥಳೀಯ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸಕ್ಕೆ ಹೋಗುತ್ತಿದ್ದ. ಆತ ನಿರಾಪರಾಧಿ ಎನ್ನುವುದು ನಮ್ಮ ಅಕ್ಕಪಕ್ಕದ ಮನೆಯವರಿಗೂ ಗೊತ್ತು ಎಂದು ಅವರು ಕಣ್ಣೀರು ಹಾಕಿದರು.

ದಿನಕೂಲಿಗಾರ: ನನ್ನ ತಂದೆ ಕಳೆದ ಒಂದು ವರ್ಷದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದರು. ಬಳಿಕ, ಸಹೋದರನೇ ಕುಟುಂಬದ ಜವಾಬ್ದಾರಿ ಹೊತ್ತು, ಕಲಾಸಿಪಾಳ್ಯದಲ್ಲಿ ಮರಗೆಲಸಕ್ಕೆ ಹೋಗುತ್ತಿದ್ದ. ಘಟನೆ ನಡೆದ ದಿನದಂದು ಕೆಲಸಕ್ಕೆ ಹೋಗಿ, ರಾತ್ರಿ ಮನೆಗೆ ಬಂದಿದ್ದ. ಆದರೆ, ಮರುದಿನ ಆತನನ್ನು ಪೊಲೀಸರು ಕರೆದುಕೊಂಡು ಹೋಗಿದ್ದು, ಈವರೆಗೂ ಬಂದಿಲ್ಲ. ಆತನೇ ನಮ್ಮ ಕುಟುಂಬಕ್ಕೆ ಆಸರೆಯಾಗಿದ್ದು, ಆತನನ್ನು ಬಿಟ್ಟುಬಿಡಿ ಎಂದು 23 ವರ್ಷದ ಬಂಧಿತ ಆರೋಪಿ ಎನ್ನಲಾದ ಸಾದಿಕ್ ಸಹೋದರಿ ಸಮೀನಾ(ಹೆಸರು ಬದಲಾಯಿಸಲಾಗಿದೆ) ಮನವಿ ಮಾಡಿಕೊಂಡರು.

"ಅಮಾಯಕರನ್ನು ವಿಚಾರಣೆ ನಡೆಸಿ, ಮನೆಗೆ ಕಳುಹಿಸಲಿ"

ನಾನು ಆರ್‍ಟಿ ನಗರದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಸೀನಾ(ಹೆಸರು ಬದಲಾಯಿಸಲಾಗಿದೆ). ನನ್ನ ಪುತ್ರ 19 ವರ್ಷದ ಯುಸೂಫ್ ಖಾನ್ ಅನ್ನು ಗುರುವಾರ ತಡರಾತ್ರಿ ಬಂದ ಪೊಲೀಸರ ತಂಡ ಇಲ್ಲಿನ ಡಿಜೆಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಡಿಜೆಹಳ್ಳಿ ಸಮೀಪದ ಶಾಂಪುರ ಮುಖ್ಯರಸ್ತೆಯಲ್ಲಿಯೇ ನೆಲೆಸಿದ್ದೇ ತಪ್ಪಾಯಿತು. ಇದೇ ಕಾರಣಕ್ಕೆ ನನ್ನ ಮಗನನ್ನು ವಶಕ್ಕೆ ಪಡೆದು, ಪೊಲೀಸರು ದಂಡಿಸಿದ್ದಾರೆ. ಅಲ್ಲದೆ, ನಮಗೆ ಈ ಘಟನೆಯ ಬಗ್ಗೆ ಗೊತ್ತೇ ಇರಲಿಲ್ಲ. ನನ್ನ ಮಗ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಹೊರಗಡೆ ಸುತ್ತುವ ಹವ್ಯಾಸವೇ ಇಲ್ಲ. ಆದರೂ, ಸ್ಥಳೀಯರನ್ನೇ ಗುರಿಯಾಗಿಸಿಕೊಂಡು ವಶಕ್ಕೆ ಪಡೆದಿರುವುದು ಸರಿಯಲ್ಲ. ಪೊಲೀಸರು, ಅಮಾಯಕ ಮಕ್ಕಳನ್ನು ವಿಚಾರಣೆ ನಡೆಸಿ, ಮನೆಗೆ ಕಳುಹಿಸಲಿ ಎಂದು ಶಿಕ್ಷಕಿ ಠಾಣೆ ಮುಂಭಾಗ ಕಣ್ಣೀರು ಹಾಕಿದರು.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News