ಅಮಾಯಕರನ್ನು ಬಿಡುಗಡೆಗೊಳಿಸಿ: ಗೃಹ ಸಚಿವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮನವಿ

Update: 2020-08-17 17:44 GMT

ಬೆಂಗಳೂರು, ಆ.17: ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕೆಲವು ಅಮಾಯಕರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಕೋರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕೋರಿದ್ದಾರೆ.

ಈ ಕುರಿತು ಸಚಿರಿಗೆ ಪತ್ರ ಬರೆದಿರುವ ಅವರು, ಪ್ರಧಾನ ಮಂತ್ರಿ ಮೋದಿ ಅಭಿಮಾನಿ, ಬಿಜೆಪಿ ಕಾರ್ಯಕರ್ತ ನವೀನ್ ಎಂಬಾತ ಪ್ರವಾದಿ ಅವರ ಕುರಿತು ಅವಹೇಳನಕಾರಿ ಫೇಸ್‍ಬುಕ್ ಪೋಸ್ಟ್ ಪ್ರಕಟಿಸಿದ್ದಕ್ಕೆ ಗಲಭೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಆಸ್ತಿ ನಷ್ಟವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಗಲಭೆ ಪ್ರಕರಣದಲ್ಲಿ ಬಂಧಿಸಲಾದ ಅಮಾಯಕರ ಬಿಡುಗಡೆ ಮಾಡಬೇಕು. ಈ ಪೋಸ್ಟ್‍ನಿಂದ ನೊಂದವರು ಕೊಟ್ಟ ದೂರನ್ನು ದಾಖಲಿಸಿಕೊಂಡು ಸಂಬಂಧಿಸಿದವರನ್ನು ಬಂಧಿಸುವಲ್ಲಿ ಪೊಲೀಸ್ ಠಾಣಾಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಆ. 11ರಂದು ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಅಹಿತಕರ ಘಟನೆ ನಡೆದು ಹೋಗಿದೆ. ಈ ಗಲಭೆ ಪ್ರಕರಣದಲ್ಲಿ ರಾಜಕೀಯ ದುರುದ್ದೇಶದಿಂದ ಕೆಲವು ಅಮಾಯಕ ಯುವಕರನ್ನು ಪೊಲೀಸರು ಬಂಧಿಸಿ ಹಿಂಸಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಅಮಾಯಕ ಯುವಕರನ್ನು ಬಂಧಿಸಿರುವ ಸಂಬಂಧ ಪೋಷಕರು ಹಾಗೂ ಸ್ಥಳೀಯ ಹಿರಿಯ ನಾಗರಿಕರು ಅಸಹಾಯಕತೆಯಿಂದ, ನೋವಿನಿಂದ ನಮ್ಮಲ್ಲಿ ಮನವಿ ಮಾಡಿಕೊಂಡಿರುತ್ತಾರೆ. ಗಲಭೆಗೆ ಕಾರಣರಾದ ನಿಜವಾದ ಆರೋಪಿಗಳನ್ನು ಬಂಧಿಸಿ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ತಪ್ಪಿತಸ್ಥರಲ್ಲದ ಅಮಾಯಕರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಿರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಅಮಾಯಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಆದುದರಿಂದ ಈ ಪ್ರಕರಣ ಸಂಬಂಧ ಆರೋಪಿಗಳೆಂದು ಬಂಧಿಸಿರುವವರನ್ನು ಹಿರಿಯ ಅಧಿಕಾರಿಗಳಿಂದ ಪುನರ್ ಪರಿಶೀಲಿಸಲು ಸೂಚನೆ ನೀಡಿ. ಈ ಮೂಲಕ ಅಮಾಯಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಸಲೀಂ ಅಹ್ಮದ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News