ದಿಢೀರ್ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳಿಸಿದ ಮೋದಿ ಸರಕಾರ?: ರಾಜ್ಯದ 1.78 ಕೋಟಿ ಗ್ರಾಹಕರು ಕಂಗಾಲು

Update: 2020-08-23 17:44 GMT

ಬೆಂಗಳೂರು, ಆ. 23: ಮೂರು ತಿಂಗಳಿಂದ ಗ್ರಾಹಕರಿಗೆ ಲಭ್ಯವಾಗುತ್ತಿದ್ದ ಅಲ್ಪ-ಸ್ವಲ್ಪ ಅಡುಗೆ ಅನಿಲ (ಗ್ಯಾಸ್) ಸಬ್ಸಿಡಿ ಹಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದಿಢೀರ್ ಸ್ಥಗಿತಗೊಳಿಸಿರುವ ಪರಿಣಾಮ ಕೊರೋನ ಸಂಕಷ್ಟದಲ್ಲಿ ಇದನ್ನೇ ನೆಚ್ಚಿಕೊಂಡಿರುವ ಸಾವಿರಾರು ಗ್ರಾಹಕರು ಕಂಗಾಲಾಗಿದ್ದಾರೆ.

ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ(ಐಒಸಿಎಲ್)62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನ(ಎಚ್‍ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್( ಬಿಪಿಸಿಎಲ್)35.59 ಲಕ್ಷ ಸೇರಿ ಒಟ್ಟಾರೆ 1,46,07,900 ಗ್ರಾಹಕರು ಎಲ್‍ಪಿಜಿ ಸಂಪರ್ಕ ಹೊಂದಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‍ನ 13,93,748, ಬಿಪಿಸಿಎಲ್‍ನ 7,40,897, ಹಾಗೂ ಎಚ್‍ಪಿಸಿಎಲ್‍ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. ಆದರೆ, 3 ತಿಂಗಳಿಂದ ಇವರಿಗೆ ಸಬ್ಸಿಡಿ ಹಣ ಬಾರದಿರುವುದು ವಿಪರ್ಯಾಸ.

ಗ್ಯಾಸ್ ಏಜೆನ್ಸಿ ಹೇಳುವುದೇನು?: ಪ್ರಸಕ್ತ ರಾಜ್ಯದಲ್ಲಿ 14.2 ಕೆಜಿಯ ಸಿಲಿಂಡರ್ ಗೆ 597 ರೂ.ಇದೆ. ತಿಂಗಳಿನ ಕೊನೆಯ ದಿನದಲ್ಲಿ ಕೇಂದ್ರ ಸರಕಾರದಿಂದ ಸಬ್ಸಿಡಿ ಹಣವನ್ನು ಲೆಕ್ಕಹಾಕಿ ಗ್ಯಾಸ್ ಏಜೆನ್ಸಿಗಳಿಗೆ ಬಿಲ್ ಕಳುಹಿಸಲಾಗುತ್ತಿತ್ತು. ಆದರೆ, ಕಳೆದ 3 ತಿಂಗಳಿಂದ ಸಬ್ಸಿಡಿ ಬಿಲ್ ಕಳುಹಿಸಿಲ್ಲ. ಕೊರೋನ ಹಿನ್ನೆಲೆಯಲ್ಲಿ ಬಿಲ್ ಕಳುಹಿಸಲು ತಡವಾಗಿರಬಹುದು ಹಾಗೂ ಮುಂದಿನ ದಿನಗಳಲ್ಲಿ ಬರಬಹುದು ಎನ್ನಲಾಗಿತ್ತು. ಆದರೆ, ಏಕಾಏಕಿ ಗ್ರಾಹಕರಿಗೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಬಂತು. ಪ್ರತಿ ನಿತ್ಯ ಗ್ರಾಹಕರು ಕಚೇರಿಗೆ ಬಂದು ಸಬ್ಸಿಡಿ ಹಣ ಬರುತ್ತಿಲ್ಲವೆಂದು ದೂರುಗಳು ನೀಡುತ್ತಿದ್ದಾರೆ ಎನ್ನುತ್ತಾರೆ ಗ್ಯಾಸ್ ಏಜೆನ್ಸಿಯವರು.

''ಗ್ಯಾಸ್ ತುಂಬಿಸಿಕೊಳ್ಳುವುದು ಎಷ್ಟು ಕಷ್ಟವೋ ಸಬ್ಸಿಡಿ ಹಣ ಪಡೆಯಲು ಅಷ್ಟೇ ಕಷ್ಟ ಇದೆ. ಒಂದೊಮ್ಮೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಅಪ್‍ಡೇಟ್ ಮಾಡಿಸಿದ್ದರೂ ಹಲವು ಬಾರಿ ಕಮಿಷನ್ ಹಣ ಬರುವುದಿಲ್ಲ. ಗ್ಯಾಸ್ ಏಜೆನ್ಸಿಯವರು ವಿಚಾರಿಸಿದರೆ ಬ್ಯಾಂಕ್‍ನಲ್ಲಿ ಕೇಳಿ ಎನ್ನುತ್ತಾರೆ. ಬ್ಯಾಂಕ್‍ನವರು ಕೇಳಿದರೆ ಸರಿಯಾಗಿ ನೀವು ಮಾಹಿತಿ ಕೊಟ್ಟಿಲ್ಲ ಎನ್ನುತ್ತಾರೆ. ಆದರೂ, ಸಬ್ಸಿಡಿ ಹಣ ಪಡೆಯಲು ಹರಸಾಹಸ ಪಡಬೇಕು. ಇದೀಗ ಯಾವುದೇ ಮಾಹಿತಿ ನೀಡಿದೆ ಏಕಾಏಕಿ ಸಬ್ಸಿಡಿ ಹಣ ಕಡಿತ ಮಾಡಿರುವುದು ಸರಿಯಲ್ಲ'' ಎನ್ನುತ್ತಾರೆ ಎಲ್‍ಪಿಜಿ ಗ್ರಾಹಕ ಮಂಜುನಾಥ್ ಗೌಡ.

''ಮಾರ್ಚ್ ನಲ್ಲಿ ನನಗೆ 158 ರೂ.ಸಬ್ಸಿಡಿ ಬಂತು. ಆದರೆ, ಕಳೆದ 3 ತಿಂಗಳಿಂದ ಸಬ್ಸಿಡಿ ಹಣ ಏಕೆ ಬಂದಿಲ್ಲವೆಂದು ಈ ಬಗ್ಗೆ ಗ್ಯಾಸ್ ಕಂಪೆನಿಗಳಿಗೆ ಪ್ರಶ್ನಿಸಿದರೆ, ಮರುಪೂರಣ ವೆಚ್ಚ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದೇವೆ ಎಂದು ಉತ್ತರಿಸಿದರು'' ಎಂದು ಮತ್ತೋರ್ವ ಗ್ರಾಹಕ ರಾಮಚಂದ್ರರಾವ್ ಹೇಳಿದರು.

ಆಯಿಲ್ ಕಂಪೆನಿಗಳು ಹೇಳುವುದೇನು?   

ಸಿಲಿಂಡರ್ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತಿದ್ದ ಸಬ್ಸಿಡಿ ಪ್ರಮಾಣ ಕಡಿಮೆಯಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸಿಲಿಂಡರ್ ಬೆಲೆ ಹೆಚ್ಚಳವಾದರೆ ಗ್ರಾಹಕರಿಗೆ ಸಬ್ಸಿಡಿ ಹಣ ಸಿಗುತ್ತದೆ. 3 ತಿಂಗಳ ಹಿಂದೆ ಸಿಲಿಂಡರ್ ಬೆಲೆ ಕಡಿಮೆಯಾಗಿತ್ತು. ಆದ್ದರಿಂದ ಮೇ, ಜೂನ್ ಹಾಗೂ ಜುಲೈ ತಿಂಗಳಿನ ಸಬ್ಸಿಡಿ ಹಣ ಬಂದಿಲ್ಲ. ಆದರೆ, ಕೇಂದ್ರವು ಬೇರೆ ಯಾವ ಕಾರಣಕ್ಕಾಗಿ ಸಬ್ಸಿಡಿ ಹಣ ಸ್ಥಗಿತಗೊಳಿಸಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಲಾಗುವುದು ಎಂದು ಆಯಿಲ್ ಕಂಪೆನಿಗಳು ಪ್ರತಿಕ್ರಿಯಿಸಿವೆ.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News