ಓ ಮೆಣಸೇ...
ಒಂದಲ್ಲ ಒಂದು ದಿನ ಭಾರತ ವಿಶ್ವದ ಮೂರನೇ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆಯಾಗಲಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ
ಅದಾಗದಂತೆ ತಡೆಯಲು ಪ್ರಧಾನಿಯವರು ಗರಿಷ್ಠ ಪ್ರಯತ್ನ ನಡೆಸುತ್ತಿದ್ದಾರೆ.
ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳನ್ನು ಬಿಜೆಪಿ, ಆರೆಸ್ಸೆಸ್ ನಿಯಮಂತ್ರಿಸುತ್ತಿವೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಜೊತೆಗೆ ಕಾಂಗ್ರೆಸನ್ನು ಕೂಡ ನಿಯಂತ್ರಿಸುತ್ತಿದೆ ಎಂಬ ಆರೋಪಗಳಿವೆ.
ಡಿ.ಜೆ.ಹಳ್ಳಿ ಗಲಭೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹಾಗಾದರೆ ಸಂಬಂಧ ಇರುವ ಗಲಭೆಗಳ ಪಟ್ಟಿಯನ್ನು ಬಹಿರಂಗಪಡಿಸಿ.
ರಾಜ್ಯದಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರ ದಾಸ್ತಾನಿಗೆ ಸಮಸ್ಯೆಯಿಲ್ಲ - ಬಿ.ಸಿ.ಪಾಟೀಲ್, ಸಚಿವ
ಬಿತ್ತುವುದಕ್ಕೆ ರೈತರಿಗೆ ಭೂಮಿಯ ಸಮಸ್ಯೆಗಳಿವೆಯಂತೆ.
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟಿಂಗ್ ಹಾಕುವವರ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ - ಬಸವರಾಜ ಬೊಮ್ಮಾಯಿ, ಸಚಿವ
ಅದಕ್ಕಾಗಿಯೇ ಬಿಜೆಪಿಯಿಂದ ಎರಡು ರೂಪಾಯಿ ಸಿಗುತ್ತದೆ ಎಂಬ ವದಂತಿಗಳಿವೆ.
ನಾವು ಪಾಪನೇ ಮಾಡಿಲ್ಲ, ಇನ್ನು ಕೂಸು ಎಲ್ಲಿ ಹುಟ್ಟುತ್ತೆ - ಅರವಿಂದ ಲಿಂಬಾವಳಿ, ಮಾಜಿ ಸಚಿವ
ಗಂಡು-ಹೆಣ್ಣು ಜೊತೆ ಸೇರಿ ಪಾಪ ಮಾಡಿದರೆ ಮಾತ್ರ ಕೂಸು ಹುಟ್ಟುವುದು.
ಭಾರತದ ಪ್ರಜಾಪ್ರಭುತ್ವಕ್ಕೆ ಈಗ ಪರೀಕ್ಷೆಯ ಕಾಲ -ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
ಸರಿಯಾಗಿ ಸಂವಿಧಾನ ಪುಸ್ತಕ ಓದದೇ ಕಾಂಗ್ರೆಸ್ ಪರೀಕ್ಷೆಗೆ ಕೂತಿದೆ.
ದೇಶದ ಸಾರ್ವಭೌಮತೆ ವಿಷಯದಲ್ಲಿ ರಾಜಿ ಇಲ್ಲ - ನರೇಂದ್ರ ಮೋದಿ, ಪ್ರಧಾನಿ
ದೇಶದ ಸಾರ್ವಭೌಮತೆ ನಿಮ್ಮ ವಿಷಯದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲವಂತೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಬಂಡವಾಳಗಾರರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಂತಾಗಿದೆ - ದೇವೇಗೌಡ, ಮಾಜಿ ಪ್ರಧಾನಿ
ಬಂಡವಾಳಗಾರರಿಗೆ ಕೃಷಿ ಮಾಡಲು ಮನಸ್ಸು ಬರಲಿ ಎಂದು ತಿದ್ದುಪಡಿ ಮಾಡಲಾಗಿದೆಯಂತೆ.
ಕೈತಪ್ಪಿ ಹೋದ ಅವಕಾಶ ಎಂದೆಂದಿಗೂ ಮರಳಿಬಾರದು -ಡಾ.ಕೆ.ಸುಧಾಕರ್, ಸಚಿವ
ಕೊರೋನ ನೀಡಿರುವ ಅವಕಾಶದ ಬಗ್ಗೆ ಹೇಳುತ್ತಿರಬೇಕು.
ನಮ್ಮದೇನಿದ್ದರೂ‘ಏಕ್ ಮಾರ್ ದೋ ತುಕ್ಡಾ’ ಎಂಬಂತೆ - ಸಿ.ಟಿ.ರವಿ, ಸಚಿವ
ಹೌದು, ನಿಮ್ಮದೇನಿದ್ದರೂ ತುಕ್ಡಾ ಗ್ಯಾಂಗ್.
ಕಾಂಗ್ರೆಸ್ ಕೂಡಾ ಹಿಂದೂ ಸೆಲ್ ಆರಂಭಿಸಬೇಕಿದೆ - ಆರ್.ಧರ್ಮಸೇನ, ವಿ.ಪ.ಸದಸ್ಯ
ಆರೆಸ್ಸೆಸ್ ಶಾಖೆಗಳನ್ನೂ ತೆರೆಯುವ ಅಗತ್ಯವಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ನಿರ್ವಹಣೆಯಲ್ಲಿ ದೇಶವೇ ಮೆಚ್ಚುವ ಕೆಲಸ ಮಾಡಿದ್ದಾರೆ- ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ರಾಜ್ಯವೂ ಮೆಚ್ಚಬೇಕಲ್ಲ?
ಸ್ವಾವಲಂಬಿ ಭಾರತ ಪರಿಕಲ್ಪನೆ ಸಾಕಾರಗೊಳಿಸಲು ಚೀನಾದ ಮೇಲಿನ ಅವಲಂಬನೆಯನ್ನು ತಪ್ಪಿಸಬೇಕು - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಪಾಕಿಸ್ತಾನವನ್ನು ಅವಲಂಬಿಸುವುದನ್ನು ಬಿಟ್ಟು ಬಿಜೆಪಿ ಸ್ವಾವಲಂಬಿ ಪಕ್ಷವಾಗಿ ಬೆಳೆಯುವುದು ಯಾವಾಗ?
ಸರಕಾರ ಆನ್‌ಲೈನ್‌ನಲ್ಲಿ ಮದ್ಯ ಮಾರಾಟದಂತಹ ಮನೆಹಾಳು ಚಿಂತನೆಯನ್ನು ಕೈ ಬಿಡಬೇಕು - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಮದ್ಯವೇ ಮನೆಹಾಳು. ಹೀಗಿರುವಾಗ ಉಳಿದ ಕಡೆ ಮಾರಾಟ ಮಾಡುವುದು ಸರಿಯೇ?
ಪ್ರಕೃತಿ ಮುನಿದಾಗ ಯಾರಿಂದಲೂ ತಡೆಯಲು ಸಾಧ್ಯವಿಲ್ಲ - ಪ್ರತಾಪ ಸಿಂಹ, ಸಂಸದ
ಪ್ರಕೃತಿ ಯಾರವಳು? ಆನ್‌ಲೈನ್ ಚಾಟಿಂಗ್ ಮಾಡುವಾಗ ಎಚ್ಚರಿಕೆ ಇರಲಿ.
ಮುಂದಿನ ಎರಡು ವರ್ಷಗಳಲ್ಲಿ ಔಷಧವಲಯವು ಆತ್ಮ ನಿರ್ಭರವಾಗಿ ಹೊರಹೊಮ್ಮಲಿದೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಸೆಗಣಿ, ಗೋಮೂತ್ರಗಳ ಮೂಲಕವೇ?
ಶ್ರೀರಾಮ, ಹಿಂದುತ್ವ ನಮ್ಮ ದೇಶದ ಆಸ್ತಿ, ಅದು ಒಂದು ಪಕ್ಷದ ಸೊತ್ತಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಮುಂದೊಂದು ದಿನ ‘ಆರೆಸ್ಸೆಸ್ ನಮ್ಮ ದೇಶದ ಆಸ್ತಿ’ ಬಿಜೆಪಿಯ ಸೊತ್ತಲ್ಲ ಎಂದು ಹೇಳಿದರೆ ಅಚ್ಚರಿಯಿಲ್ಲ.
ಹತ್ತು ರಾಜ್ಯಗಳು ಕೊರೋನ ಗೆದ್ದರೆ ಇಡೀ ದೇಶ ಗೆದ್ದಂತೆ-ನರೇಂದ್ರ ಮೋದಿ, ಪ್ರಧಾನಿ
ಮತ್ತು ಆ ಹತ್ತು ರಾಜ್ಯಗಳು ಭಾರತದೊಳಗಿನದೇ ಆಗಿರಬೇಕು.
ನಾನು ಪಕ್ಷಕ್ಕೆ ಮರಳಿದ್ದೇನೆ ಎಂದು ಹೇಳಲಾಗದು. ಏಕೆಂದರೆ ನಾನು ಕಾಂಗ್ರೆಸ್ ತೊರೆದೇ ಇಲ್ಲ- ಸಚಿನ್ ಪೈಲಟ್, ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ
ಮತ್ತೆ, ಏಕಾಏಕಿ ಮಾಜಿ ಉಪಮುಖ್ಯಮಂತ್ರಿಯಾದುದೇಕೆ?
ಸ್ವದೇಶಿಯಾಗಬೇಕು ಎನ್ನುವ ಮಾತ್ರಕ್ಕೆ ಎಲ್ಲ ವಿದೇಶಿ ವಸ್ತುಗಳನ್ನು ನಿಷೇಧಿಸುವುದು ಸರಿಯಲ್ಲ -ಮೋಹನ್ ಭಾಗವತ್,ಆರೆಸ್ಸೆಸ್ ಮುಖಂಡ
ಹೌದು, ವಿದೇಶದಿಂದ ಬರುವ ಹಣವನ್ನಂತೂ ನಿರಾಕರಿಸುವುದು ಸಾಧ್ಯವೇ ಇಲ್ಲ.
ದಲಿತರು ಜಾಗೃತರಾಗಿದ್ದಾರೆ - ಹಿತೈಷಿಗಳು ಯಾರು, ಹಿತ ಶತ್ರುಗಳು ಯಾರು ಎನ್ನುವುದು ಅವರಿಗೆ ಈಗ ಗೊತ್ತಾಗಿದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನೀವು ಕೂಡ ಬೇಗ ಜಾಗೃತರಾಗಿ.