ಓ ಮೆಣಸೇ...

Update: 2020-08-30 19:30 GMT

ಸರಕಾರದ ಆದೇಶದಂತೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು
-ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
ಮೊದಲು ವೈದ್ಯರಿಗೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಇಂಗ್ಲಿಷ್ ಭಾಷೆಯಲ್ಲಿ ಬರೆಯಲು ಕಲಿಸಬೇಕಾಗಿದೆ. 


ನಾನು ರಾಜಕೀಯ ವ್ಯಕ್ತಿಯಲ್ಲ

- ರಂಜನ್ ಗೊಗೊಯಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

 ಅತ್ತ ನ್ಯಾಯಾಂಗದ ವ್ಯಕ್ತಿಯೂ ಅಲ್ಲ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದೀರಿ.


ಆತ್ಮನಿರ್ಭರ ಭಾರತ್ ಅಭಿಯಾನದಡಿ ಪ್ಲಾಸ್ಟಿಕ್ ಆಟಿಕೆಗಳನ್ನು ದೇಶೀಯವಾಗಿ ತಯಾರಿಸಬೇಕು
- ನರೇಂದ್ರ ಮೋದಿ, ಪ್ರಧಾನಿ
 ಇವಿಎಂ ಬಗ್ಗೆ ಮಾತನಾಡುತ್ತಿರಬೇಕು.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಯಾವುದೇ ಸಿದ್ಧಾಂತಗಳಿಲ್ಲ, ಅವರೊಬ್ಬ ಕಟುಕ

- ಮಿರಿಯಾನಿ ಟ್ರಂಪ್, ಡೊನಾಲ್ಡ್ ಟ್ರಂಪ್ ಸಹೋದರಿ
  ಕಟುಕರಿಗಷ್ಟೇ ಅಮೆರಿಕದಲ್ಲಿ ಮಾರುಕಟ್ಟೆಯಿರುವುದು.


ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
 ಪ್ರಶ್ನೆಗಳಿಗೆ ಗಾಂಧಿ ಕುಟುಂಬ ಉತ್ತರ ಕೊಡದೇ ಇರುವುದೂ ದುರದೃಷ್ಟಕರವೇ ಆಗಿದೆ.


ಫೋನ್ ಟಾಪಿಂಗ್‌ನಲ್ಲಿ ಬಿಜೆಪಿಯವರು ಎಕ್ಸ್‌ಪರ್ಟ್

-ಡಿ.ಕೆ.ಸುರೇಶ್, ಸಂಸದ
 ಜನರಿಗೆ ಗೊತ್ತಾಗಬಾರದ್ದು ಅಂತಹದೇನು ಮಾತನಾಡಿದ್ದೀರಿ ಫೋನ್‌ನಲ್ಲಿ?


 ಕಾಂಗ್ರೆಸ್‌ಗೆ ಸರ್ವರೂ ಒಪ್ಪುವಂತಹ ನಾಯಕತ್ವ ಬೇಕೇ ಹೊರತು ಯಾರೋ ಕೆಲವರು ಒಪ್ಪಿದಂತಹ ನಾಯಕರಲ್ಲ
-ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ
  ಎಲ್ಲರೂ ಒಪ್ಪುವ ಒಂದು ಸಿದ್ಧಾಂತದ ಅಗತ್ಯವೂ ಕಾಂಗ್ರೆಸ್‌ಗಿದೆ.


ಅಪ್ಪಾಜಿ ಹೇಳಿರುವಂತೆ ಕಲಿಯೋಕೆ ಕೋಟಿಭಾಷೆ, ಆಡೋಕೆ ಒಂದೇ ಭಾಷೆ. ಅದು ಕನ್ನಡ

- ಶಿವರಾಜ್ ಕುಮಾರ್, ನಟ

 ಅದಕ್ಕೇ ಬಹುಶಃ ಕನ್ನಡ ಕಲಿಯುವುದಕ್ಕೆ ಅಡ್ಡಿ ಪಡಿಸುತ್ತಿರಬೇಕು, ಬರೇ ಆಡಿದರೆ ಸಾಕು, ಕಲಿಯುವುದು ಬೇಡ ಅಂತ.


ರಾಜ್ಯ ಕಾಂಗ್ರೆಸ್ ಸೋನಿಯಾ ಗಾಂಧಿ ನಾಯಕತ್ವ ಮತ್ತು ಗಾಂಧಿ ಕುಟುಂಬದ ಬೆನ್ನಿಗೆ ನಿಲ್ಲಲಿದೆ
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
 ಗಾಂಧಿ ಕುಟುಂಬದ ಬೆನ್ನು ತುಂಬಾ ಚೂರಿ ಹಾಕಿದ ಗಾಯಗಳಿವೆ, ಎಚ್ಚರಿಕೆ.


ಬಿಹಾರದ ಮತದಾರರು ಜಿಜೆಪಿ ಮೇಲೆ ಮಾತ್ರ ಅಪಾರ ಆಶಾ ಭಾವನೆ ಹೊಂದಿದ್ದಾರೆ

- ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಸುಖಸಂತೋಷಗಳನ್ನು ಮತ್ತೊಮ್ಮೆ ಅನುಭವಿಸುವ ಆಸೆಯಿರಬೇಕು ಅವರಿಗೆ.


ಬಿ.ಎಲ್. ಸಂತೋಷ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿಯ ಸಂದರ್ಭದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ

- ಬಿ.ವೈ. ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ

ಚರ್ಚೆ ಮಾಡದೆಯೇ ಸಿಎಂನ್ನು ಕಿತ್ತು ಹಾಕುವ ಸಂಚು ನಡೆಯುತ್ತಿರಬೇಕು.


ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯ ದೇಶವನ್ನು ಹಾಳುಮಾಡುತ್ತಿದೆ

-ಜಗದೀಶ್ ಶೆಟ್ಟರ್, ಸಚಿವ
  ಈಗಲೂ ದೇಶವನ್ನು ಕಾಂಗ್ರೆಸ್ ಆಳುತ್ತಿದೆಯೇ?


 ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಗೊಳ್ಳಿ ರಾಯಣ್ಣ ನಮಗೆಲ್ಲ ಮಾದರಿ ವ್ಯಕ್ತಿ
-ರಮೇಶ್ ಜಾರಕಿಹೊಳಿ, ಸಚಿವ
 ಆದರೆ ಬ್ರಿಟಿಷರ ವಿರುದ್ಧ ಹೋರಾಡದವರಿಗೆ ಒಂದಿಷ್ಟು ತಕರಾರುಗಳಿವೆ.


ನನಗೆ ಬಿಜೆಪಿ ಜೊತೆ ಸಂಬಂಧವಿದೆ ಎಂದು ಸಾಬೀತು ಪಡಿಸಿದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ

- ಗುಲಾಂ ನಬಿ ಆಝಾದ್, ಕಾಂಗ್ರೆಸ್ ಮುಖಂಡ
  ಈವರೆಗೆ ಕಾಂಗ್ರೆಸ್‌ನೊಳಗಿದ್ದೇ ಪಕ್ಷವನ್ನು ನಾಶ ಪಡಿಸಿರುವುದು ಬಿಜೆಪಿಯ ಜೊತೆಗಿರುವ ಸಂಬಂಧಕ್ಕೆ ಸಾಕ್ಷಿಯಲ್ಲವೇ?


 ಕಾಂಗ್ರೆಸ್ ಮುನ್ನಡೆಸಲು ಗಾಂಧಿ ಕುಟುಂಬವೇ ಸೂಕ್ತ
- ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
  
 ದೇಶವನ್ನು ಮುನ್ನಡೆಸಲು ಮಾತ್ರ ಮೋದಿ ಸಾಕು ಎನ್ನುವ ಇಂಗಿತವಿರಬಹುದು.


ನನ್ನ ಕೆಲಸದಲ್ಲಿ ಬಿ.ಎಲ್. ಸಂತೋಷ್ ಹಸ್ತಕ್ಷೇಪ ನಡೆಸುತ್ತಿಲ್ಲ
- ನಳಿನ್‌ಕುಮಾರ್ ಕಟೀಲು, ಸಂಸದ

ಅವರೇ ನೇರವಾಗಿ ನಿಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದು ಸುದ್ದಿ.


ಕರಾವಳಿ ಭಾಗದಲ್ಲಿ ಯುವಕರು ಮತ್ತು ವಿದ್ಯಾವಂತರು ಅಮಲು ಪದಾರ್ಥಗಳ ವ್ಯಸನಿಗಳಾಗಬಾರದು

- ಬಸವರಾಜ್ ಬೊಮ್ಮಾಯಿ, ಸಚಿವ
 ಮುಖ್ಯವಾಗಿ ಕೋಮು ಅಮಲು ವ್ಯಸನಿಗಳಾಗಬಾರದು.


ಮೆಕಾಲೆ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳುವ ಕ್ಷಣ ಸನ್ನಿಹಿತವಾಗಿದೆ

- ಸುರೇಶ್ ಕುಮಾರ್, ಸಚಿವ
  ಅಂದರೆ ಶೂದ್ರ, ದಲಿತರಿಗೆ ಮತ್ತೆ ಶಿಕ್ಷಣ ಗಗನ ಕುಸುಮವೇ?


 ನಾನು ಹುಚ್ಚ. ನಾನೇ ಬೇರೆ, ನನ್ನ ದಾರಿನೇ ಬೇರೆ, ನನ್ನ ಸ್ಟೈಲೇ ಬೇರೆ
- ವಿ.ಸೋಮಣ್ಣ, ಸಚಿವ
  ಎಲ್ಲ ಹುಚ್ಚರ ದಾರಿ, ಸ್ಟೈಲ್ ಬೇರೆಯೇ ಆಗಿರುತ್ತದೆ.


ನೆರೆ ಸಂತ್ರಸ್ತರಿಗೆ ಸಾಲ ತಂದಾದರೂ ಪರಿಹಾರ ಕೊಡುವೆ

-ಯಡಿಯೂರಪ್ಪ, ಮುಖ್ಯಮಂತ್ರಿ
 ಅದಕ್ಕಿಂತ, ಕರ್ನಾಟಕಕ್ಕೆ ಸಿಗಬೇಕಾಗಿರುವ ತೆರಿಗೆ ಹಣವನ್ನು ಕೇಂದ್ರದಿಂದ ವಸೂಲಿ ಮಾಡಿ ತನ್ನಿ.


ರಾಜ್ಯದಲ್ಲಿ ಪ್ರವಾಹ, ಕೋವಿಡ್ ನಿರ್ವಹಣೆಗೆ ಹಣದ ಕೊರತೆ ಇಲ್ಲ

- ಆರ್. ಅಶೋಕ್, ಸಚಿವ
  ಬಹುಶಃ ಹೆಣದ ಕೊರತೆಯಿಲ್ಲ ಎಂದಿರಬೇಕು. ಮುದ್ರಣ ದೋಷ.


ಸೋನಿಯಾ ಗಾಂಧಿ ನಮಗೆ ತಾಯಿ ಇದ್ದಂತೆ

- ವೀರಪ್ಪ ಮೊಯ್ಲಿ, ಕಾಂಗ್ರೆಸ್ ಮುಖಂಡ
  ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಉದ್ದೇಶವೇನಾದರೂ ಇದೆಯೇ?


  ಬಿಜೆಪಿಯಲ್ಲಿರುವ ಕಮ್ಯುನಿಸ್ಟ್ ಪಕ್ಷದವ ಎಂದು ಕಮ್ಯುನಿಸ್ಟರು ಯಾವಾಗಲೂ ನನ್ನನ್ನು ತಮಾಷೆ ಮಾಡುತ್ತಿರುತ್ತಾರೆ

  - ವರುಣ್ ಗಾಂಧಿ, ಸಂಸದ

ಬಹುಶಃ ಕಮ್ಯುನಿಸ್ಟ್ ಪಕ್ಷದಲ್ಲಿರುವ ಬಿಜೆಪಿಯವರು ಹಾಗೆ ತಮಾಷೆ ಮಾಡುತ್ತಿರಬೇಕು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!