ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಕೊರೋನ ಅಡ್ಡಿ

Update: 2020-08-31 04:20 GMT
ಫೋಟೊ ಕೃಪೆ: deccanherald.com

ಬೆಂಗಳೂರು, ಆ. 31: ಕೊರೋನ ಸೋಂಕಿನ ನಾಗಲೋಟ ಮುಂದುವರೆದಿರುವ ಕಾರಣದಿಂದಾಗಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಪಡೆಯಲು ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈ ಕ್ರಮದಿಂದ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುವ ಸ್ಥಿತಿ ಒಂದಡೆಯಾದರೆ, ಈಗಾಗಲೇ ಇಲಾಖೆಗೆ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇ ಆಗದೆ ಮತ್ತಷ್ಟು ತಿಂಗಳು ಕಾಯುವ ಪರಿಸ್ಥಿತಿ ಅರ್ಜಿದಾರರಿಗೆ ಎದುರಾಗಿದೆ.

ರಾಜ್ಯ ವ್ಯಾಪ್ತಿ ಆಹಾರ ಇಲಾಖೆಗೆ ರೇಷನ್ ಕಾರ್ಡ್ ಗಾಗಿ ಮೂರು ವರ್ಷಗಳಲ್ಲಿ ಸುಮಾರು 35.56 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 31.77 ಲಕ್ಷ ಅರ್ಜಿಗಳು ಮಾತ್ರ ವಿಲೇವಾರಿ ಆಗಿದೆ. ಆದರೆ, 3.78 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. 2017ರಲ್ಲಿ ಅತಿಹೆಚ್ಚು 25,28,736 ಅರ್ಜಿಗಳ ಪೈಕಿ 25,00,736 ಅರ್ಜಿಗಳು ವಿಲೇವಾರಿಯಾಗಿದ್ದು, 28 ಸಾವಿರ ಅರ್ಜಿಗಳು ಬಾಕಿ ಉಳಿದಿವೆ.

2018ರಲ್ಲಿ ಸಲ್ಲಿಕೆಯಾಗಿರುವ 6,38,154 ಅರ್ಜಿಗಳ ಪೈಕಿ 3,77,199 ಅರ್ಜಿಗಳು ವಿಲೇವಾರಿ ಆದರೆ, ಸುಮಾರು 2,60,955 ಅರ್ಜಿಗಳು ವಿಲೇವಾರಿ ಆಗಿಲ್ಲ. ಅದೇ ರೀತಿ, 2019ರಲ್ಲಿ 89,847 ಈಗಾಗಲೇ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೆಲ ಮಾತ್ರ ಅರ್ಜಿಗಳು ವಿಲೇವಾರಿ ಆಗಿದೆ ಎಂದು ಮೂಲಗಳು ತಿಳಿಸಿವೆ.

ಅರ್ಜಿದಾರರ ಅಳಲು: ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರಿಗೆ ವಿನಾಯಿತಿ ನೀಡಿದ್ದು, ಅಂಥವರಿಗೆ ತುರ್ತಾಗಿ ರೇಷನ್ ಕಾರ್ಡ್ ನೀಡಬೇಕೆಂದು ಆಹಾರ ನಿರೀಕ್ಷಕರಿಗೆ ಇಲಾಖೆ ಸೂಚಿಸಿದೆ. ಆದರೆ, ಪ್ರತಿ ತಿಂಗಳಿಗೆ ಆಯಾ ವ್ಯಾಪಿಯ ಆಹಾರ ಇಲಾಖೆಗೆ ಕಚೇರಿಗೆ ಇಂತಹ ಸಾವಿರಾರು ಅಜಿರ್ಗಳು ಸಲ್ಲಿಕೆಯಾದರೂ ಆಹಾರ ನಿರೀಕ್ಷಕ ಯಾವುದನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುವುದಿಲ್ಲ. ನಾವು ಬಡವರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಕುಟುಂಬದ ಸದಸ್ಯರೊಬ್ಬರು ಬಳಲುತ್ತಿದ್ದಾರೆ.

ಬಿಪಿಎಲ್ ಕಾರ್ಡ್ ಇದ್ದರೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಹೀಗಾಗಿ, ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ವರ್ಷವಾದರೂ ಕಾರ್ಡ್ ಬಂದಿಲ್ಲ ಎಂದು ಅರ್ಜಿದಾರರೊಬ್ಬರು `ವಾರ್ತಾಭಾರತಿ' ಪತ್ರಿಕೆ ಜೊತೆ ಅಳಲು ತೋಡಿಕೊಂಡರು.

ಏನೇನು ದಾಖಲೆಗಳು ಬೇಕು?: ರೇಷನ್ ಕಾರ್ಡ್(ಪಡಿತರ ಚೀಟಿ)ಗಾಗಿ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರ ಬೇಕು.

ಪ್ರಕ್ರಿಯೆ ಹೇಗೆ?: ಗ್ರಾಮೀಣ ಭಾಗದಲ್ಲಿ ಅರ್ಜಿದಾರರು ಗ್ರಾಮ ಪಂಚಾಯಿತಿಯಲ್ಲಿ ಹಾಗೂ ನಗರದಲ್ಲಿ ಅಜಿರ್ದಾರರು ಬೆಂಗಳೂರು ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ಆನಂತರ, ಕುಟುಂಬದ ಪ್ರತಿ ಸದಸ್ಯರ ಆಧಾರ್, ವಾರ್ಷಿಕ ಆದಾಯ ಮತ್ತು ವಾಸ ಸ್ಥಳ ದೃಢೀಕರಣ ಪತ್ರದ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನಮೂದಿಸಿದ ಬಳಿಕ ಅಜಿರ್ದಾರರಿಗೆ ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ.

ಇದನ್ನು ಅಜಿರ್ದಾರರು ಜಿಲ್ಲೆಯ ಆಹಾರ ಇಲಾಖೆ ಕಚೇರಿಗೆ ಸ್ವೀಕೃತಿ ಪತ್ರ ನೀಡಿ ನಮೂದಿಸಿಕೊಳ್ಳಬೇಕು. ಆನಂತರ, ಅರ್ಜಿದಾರರು ನೀಡಿರುವ ಮೊಬೈಲ್ ಸಂಖ್ಯೆಗೆ ಮೂರು ದಿನದಲ್ಲಿ ಅರ್ಜಿ ದೃಢೀಕರಣವಾಗಿದೆ ಎಂದು ಸಂದೇಶ ಬರುತ್ತದೆ. ಇದಾದ ಬಳಿಕ ಆಹಾರ ನಿರೀಕ್ಷಕ ಅರ್ಜಿದಾರರ  ನಿಜವಾಗಿಯೂ ಬಡವ ಅಥವಾ ಶ್ರೀಮಂತ ಎಂಬುದರ ಬಗ್ಗೆ ಪರಿಶೀಲಿಸಲು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು.

ಆನಂತರ, ಕಾರ್ಡ್ ಪಡೆಯಲು ಅಜಿರ್ದಾರರು ಅರ್ಹನಾಗಿದ್ದರೆ ಆಹಾರ ನಿರೀಕ್ಷಕ ಆನ್‍ಲೈನ್‍ನಲ್ಲಿ ನಮೂದಿಸಿ ಉಪ ನಿರ್ದೇಶಕರಿಗೆ ಕಳುಹಿಸುತ್ತೇನೆ. ಅಂತಿಮವಾಗಿ, ಉಪ ನಿರ್ದೇಶಕರು ಬಂದ ಅಜಿರ್ಗಳನ್ನು ಆನ್‍ಲೈನ್‍ನಲ್ಲಿ ಪರಿಶೀಲಿಸಿ ಅದಕ್ಕೆ ಸಹಿ ಹಾಕಿ ಪ್ರಿಂಟ್‍ಗೆ ಕಳುಹಿಸಿಕೊಡುತ್ತಾರೆ. ನಿಯಮ ಪ್ರಕಾರ ಎಲ್ಲ ದಾಖಲೆಗಳು ಸರಿಯಿದ್ದರೆ 15 ರಿಂದ 20 ದಿನದೊಳಗೆ ಅರ್ಜಿದಾರರ ವಿಳಾಸಕ್ಕೆ ಕಾರ್ಡ್(ಚೀಟಿ)? ಅಂಚೆ ಮೂಲಕ ಬರಬೇಕು.ಆದರೆ, ಮೂರು ವರ್ಷವಾದರೂ ಅರ್ಜಿದಾರರಿಗೆ ಕಾರ್ಡ್ ಸಿಗದಿರುವುದು ವಿಪರ್ಯಾಸ

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News