ಶೋಷಿತರ ಕೊರಳ ದನಿಯಾಗಿ ಮೂಡಿಬಂದ ನಾರಾಯಣ ಗುರು ಚಳವಳಿ

Update: 2020-09-01 19:30 GMT

1930ರಲ್ಲಿಯೇ ನಾರಾಯಣ ಗುರುಗಳ ಶಿಷ್ಯರು ನಡೆಸಿದ್ದ ರಾಜಕೀಯ ಹೋರಾಟದ ‘ಕೇರಳದ ಮಾದರಿ’ ಮಾತ್ರ ಜಾತ್ಯತೀತ ಸಮಾಜದ ಗತವೈಭವದ ದಿನಗಳತ್ತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊಂಡೊಯ್ಯಬಹುದು ಮಾತ್ರವಲ್ಲ, ಬಿಲ್ಲವರನ್ನು ರಾಜಕೀಯ ಪ್ರಾತಿನಿಧ್ಯದ ಅಜ್ಞಾತವಾಸದಿಂದ ಬಿಡುಗಡೆಗೊಳಿಸಬಹುದು. ಇದಕ್ಕಾಗಿ ಅರ್ಧ ದಾರಿಯಲ್ಲಿಯೇ ನಿಲ್ಲಿಸಲಾಗಿರುವ ನಾರಾಯಣ ಗುರುಗಳ ಚಿಂತನೆಯ ರಥವನ್ನು ಗುರಿ ಮುಟ್ಟಿಸುವ ಪ್ರಯತ್ನ ನಡೆಯಬೇಕು.


ನಾರಾಯಣ ಗುರು ಚಳವಳಿಯನ್ನು ಧಾರ್ಮಿಕ ಕ್ಷೇತ್ರಕ್ಕಷ್ಟೇ ಹೆಚ್ಚು ಸೀಮಿತಗೊಳಿಸಿರುವ ಕಾರಣದಿಂದಾಗಿ ಆ ಚಳವಳಿ ಕೇರಳದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ನೀಡಿದ ಫಲದ ಬಗ್ಗೆ ನಡೆಯಬೇಕಾದಷ್ಟು ಚರ್ಚೆ ನಡೆದಿಲ್ಲ. ಇದರಿಂದಾಗಿ ನಾರಾಯಣ ಗುರುಗಳು, ಅವರ ಶಿಷ್ಯರು ಮತ್ತು ಅವರು ಮುನ್ನಡೆಸಿದ್ದ ಚಳವಳಿಗೆ ಅನ್ಯಾಯವಾಗಿರುವುದು ಮಾತ್ರವಲ್ಲ, ಸಮಕಾಲೀನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸವಾಲುಗಳನ್ನು ಎದುರಿಸಲು ನಾರಾಯಣ ಗುರು ಚಳವಳಿಯಿಂದ ಪ್ರೇರಣೆ, ಮಾರ್ಗದರ್ಶನ ಪಡೆಯುವುದು ಕೂಡಾ ಸಾಧ್ಯವಾಗಿಲ್ಲ.

ಧಾರ್ಮಿಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರು ಚಳವಳಿ ತನ್ನ ಸೀಮೆಗಳನ್ನು ವಿಸ್ತರಿಸಿಕೊಂಡು ಬೆಳೆಯುತ್ತಾ ಹೋಗಿದ್ದು ಆಕಸ್ಮಿಕವಾಗಿರಲಿಕ್ಕಿಲ್ಲ. ಇದು ನಾರಾಯಣ ಗುರುಗಳ ಕಾರ್ಯತಂತ್ರವಾಗಿತ್ತು ಎನ್ನುವುದಕ್ಕೆ ವಿವಿಧ ಕ್ಷೇತ್ರಗಳಲ್ಲಿ ಬೇರು-ಬಿಳಲುಗಳನ್ನು ಬಿಟ್ಟುಕೊಂಡು ಚಳವಳಿ ಬೆಳೆದಿರುವುದು ಸಾಕ್ಷಿಯಾಗಿದೆ.

ನಾರಾಯಣ ಗುರು ಚಳವಳಿ ಪ್ರಮುಖವಾಗಿ ಐದು ಹಂತಗಳಲ್ಲಿ ನಡೆದಿತ್ತು. ಮೊದಲ ಹಂತದಲ್ಲಿ ಡಾ. ಪದ್ಮನಾಭ ಪಲ್ಪುನೇತೃತ್ವದಲ್ಲಿ ನಡೆದ ಸಾಮಾಜಿಕ ಜಾಗೃತಿ. ಎರಡನೇ ಹಂತದಲ್ಲಿ ನಾರಾಯಣ ಗುರುಗಳ ನೇತೃತ್ವದಲ್ಲಿ ನಡೆದ ಧಾರ್ಮಿಕ ಸುಧಾರಣೆ, ಮೂರನೇ ಹಂತದಲ್ಲಿ ಕುಮಾರನ್ ಆಶಾನ್ ನೇತೃತ್ವದಲ್ಲಿ ಶಾಲೆಗಳ ಪ್ರವೇಶಕ್ಕಾಗಿ ನಡೆದ ಹೋರಾಟ, ನಾಲ್ಕನೇ ಹಂತದಲ್ಲಿ ಟಿ.ಕೆ.ಮಾಧವನ್ ನೇತೃತ್ವದಲ್ಲಿ ನಡೆದ ಅಸ್ಪೃಶ್ಯತೆ ಮತ್ತು ದೇವಸ್ಥಾನದ ರಸ್ತೆ ಪ್ರವೇಶಕ್ಕಾಗಿ ನಡೆದ ಚಳವಳಿ ಮತ್ತು ಐದನೇ ಹಂತದಲ್ಲಿ ತಿರುವಾಂಕೂರು ವಿಧಾನಸಭೆಯಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಿ.ಕೇಶವನ್ ನೇತೃತ್ವದಲ್ಲಿ ಪ್ರಾರಂಭವಾದ ಹೋರಾಟ.

ಮೊದಲ ದೇವಾಲಯ ಸ್ಥಾಪನೆಯಾದ ನಂತರದ 48 ವರ್ಷಗಳ ಕಾಲ ಕೇರಳದ ಶೋಷಿತರ ಕೊರಳ ದನಿಯಾಗಿ ಮೂಡಿಬಂದ ನಾರಾಯಣ ಗುರು ಚಳವಳಿ ಅಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಚಿತ್ರವನ್ನೇ ಬದಲಾಯಿಸಿತ್ತು. ಈ ಚಳವಳಿಯ ಮೊದಲ 40 ವರ್ಷಗಳಲ್ಲಿ ನಾರಾಯಣ ಗುರುಗಳು ಜೊತೆಯಲ್ಲಿದ್ದುಕೊಂಡು ಮಾರ್ಗದರ್ಶನ ನೀಡಿದರೆ ಅವರ ಸಾವಿನ ನಂತರದ ಎಂಟು ವರ್ಷಗಳ ಹೋರಾಟಕ್ಕೆ ಅವರ ತತ್ವಗಳೇ ಚಳವಳಿಗೆ ದಾರಿದೀಪವಾಗಿತ್ತು. ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವ ಮತ್ತು ತಳಸಮುದಾಯಗಳಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡುವ ತಿರುವಾಂಕೂರು ಸಂಸ್ಥಾನದ ಘೋಷಣೆ ಹೊರಬಿದ್ದಾಗ ಆ ದಿನವನ್ನು ನೋಡಲು ನಾರಾಯಣ ಗುರುಗಳು ಬದುಕಿರಲಿಲ್ಲ.

ಕೇರಳದ ರಾಜಕೀಯ ಪ್ರಾತಿನಿಧ್ಯದ ಚಳವಳಿಯನ್ನು ಹುಟ್ಟುಹಾಕಿ ದಡಮುಟ್ಟಿಸಿದವರು ನಾರಾಯಣ ಗುರುಗಳ ಶಿಷ್ಯ ಸಿ.ಕೇಶವನ್. ತಿರುವಾಂಕೂರಿನ ಪ್ರತಿಷ್ಠಿತ ಮಯ್ಯಿನತ್ ಕುಟುಂಬಕ್ಕೆ ಸೇರಿದ್ದ ಕೇಶವನ್ ನಾರಾಯಣ ಗುರು ಚಳವಳಿಯ ಭಾಗವಾಗಿ ನಡೆದ ಶೈಕ್ಷಣಿಕ ಜಾಗೃತಿಯ ಫಲವಾಗಿ ಇಂಗ್ಲಿಷ್ ಮತ್ತು ಕಾನೂನು ಅಭ್ಯಾಸ ಮಾಡಿ ನಾರಾಯಣ ಗುರು ಧರ್ಮಪರಿಪಾಲನ ಯೋಗಂ (ಎಸ್‌ಎನ್‌ಡಿಪಿ)ಗೆ ತಮ್ಮನ್ನು ಅರ್ಪಿಸಿಕೊಂಡವರು.

ದೇಶದಲ್ಲಿದ್ದ ಸುಮಾರು 600 ರಾಜ ಸಂಸ್ಥಾನಗಳ ಪೈಕಿ 1883ರಲ್ಲಿಯೇ ಮೊದಲು ಅಸೆಂಬ್ಲಿಯನ್ನು ಸ್ಥಾಪಿಸಿದ್ದು ತಿರುವಾಂಕೂರು ಸಂಸ್ಥಾನ. ಪ್ರಾರಂಭದಲ್ಲಿ ಎಂಟು ಸದಸ್ಯರನ್ನು ಹೊಂದಿದ್ದ ಅಲ್ಲಿನ ವಿಧಾನಸಭೆಯ ಬಲ ಕ್ರಮೇಣ ಹೆಚ್ಚುತ್ತಾ 1921ರಲ್ಲಿ 50 ತಲುಪಿತ್ತು. ಇದರಲ್ಲಿ 28 ಸದಸ್ಯರು ಚುನಾವಣೆಯ ಮೂಲಕ ಆಯ್ಕೆಯಾಗಬೇಕಾಗಿತ್ತು, ಉಳಿದವರು ನಾಮನಿರ್ದೇಶನದ ಸದಸ್ಯರು. ಆದರೆ ತಿರುವಾಂಕೂರು ವಿಧಾನಸಭಾ ಚುನಾವಣೆಯಲ್ಲಿ ಸಂಸ್ಥಾನದ ಸುಮಾರು ಶೇಕಡಾ 80ರಷ್ಟು ಜನರಿಗೆ ಮತದಾನ ಮಾಡುವ ಅವಕಾಶವೇ ಇರಲಿಲ್ಲ. ಇದಕ್ಕೆ ಕಾರಣ 50 ರೂಪಾಯಿ ಭೂ ತೆರಿಗೆ ಪಾವತಿಸಿದವರಷ್ಟೇ ಮತದಾರರಾಗಬಹುದೆಂಬ ಕಾಯ್ದೆ. ಇದರಿಂದಾಗಿ ಭೂ ಒಡೆತನವೇ ಇಲ್ಲದೆ ಇದ್ದ ಈಳವರು ಮತ್ತಿತರ ಹಿಂದೂ ತಳಸಮುದಾಯದ ಜಾತಿಗಳಿಗೆ ಮಾತ್ರವಲ್ಲ ಮುಸ್ಲಿಮ್, ಕ್ರಿಶ್ಚಿಯನ್ನರಲ್ಲಿ ಬಹುಸಂಖ್ಯಾತರು ಚುನಾವಣೆಯಲ್ಲಿ ಭಾಗವಹಿಸಲು ಅನರ್ಹರಾಗಿದ್ದರು. ಪ್ರಾರಂಭದಲ್ಲಿ ಈ ಅನ್ಯಾಯದ ವಿರುದ್ಧ ಪ್ರತಿಭಟನೆಯ ನಂತರ ಭೂತೆರಿಗೆಯ ಮಿತಿಯನ್ನು ಐದು ರೂಪಾಯಿಗೆ ಇಳಿಸಲಾಗಿತ್ತು.

ಈ ರಿಯಾಯಿತಿಯ ನಂತರವೂ ಶೇಕಡಾ 1.4ರಷ್ಟು ಈಳವರು ಮಾತ್ರ ಮತದಾರರಾಗಿದ್ದರೆ, ನಾಯರ್‌ಗಳು ಶೇಕಡಾ ಆರರಷ್ಟು ಮತದಾರರಾಗಿದ್ದರು. 1922, 1925, 1928 ಮತ್ತು 1931ರ ಚುನಾವಣೆಗಳಲ್ಲಿ ಈಳವ ಮತ್ತಿತರ ಹಿಂದುಳಿದ ಜಾತಿಗಳ ಯಾವ ಸದಸ್ಯರೂ ವಿಧಾನಸಭೆಗೆ ಆಯ್ಕೆಯಾಗಿರಲಿಲ್ಲ. 1928ರಲ್ಲಿ ಒಬ್ಬ ಮುಸ್ಲಿಮ್ ಸದಸ್ಯ ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿರುವವರು ಕ್ರಮವಾಗಿ 7,7, 6 ಮತ್ತು 4 ಸದಸ್ಯರು ನಾಲ್ಕು ಚುನಾವಣೆಗಳಲ್ಲಿ ಆಯ್ಕೆಯಾಗಿದ್ದರು. ಆದರೆ ಈ ನಾಲ್ಕು ಚುನಾವಣೆಗಳಲ್ಲಿ ನಾಯರ್ ಜಾತಿಗೆ ಸೇರಿದವರು ಕ್ರಮವಾಗಿ 12,13,14 ಮತ್ತು 15 ಪ್ರತಿನಿಧಿಗಳು ಆಯ್ಕೆಯಾಗಿದ್ದರು. ಕೇರಳದ ಜನಸಂಖ್ಯೆಯಲ್ಲಿ ಶೇಕಡಾ 26ರಷ್ಟು ಮುಸ್ಲಿಮರು, ಶೇಕಡಾ 30ರಷ್ಟು ಈಳವರು, ಶೇಕಡಾ 18ರಷ್ಟು ಕ್ರಿಶ್ಚಿಯನ್ನರು, ಶೇಕಡಾ 16ರಷ್ಟು ನಾಯರ್ ಮತ್ತು ಶೇಕಡಾ ಒಂದರಷ್ಟು ನಂಬೂದಿರಿಗಳಿದ್ದಾರೆ.

ಬ್ರಿಟಿಷರು 1909ರಲ್ಲಿ ಮಾರ್ಲೆ ಮಿಂಟೋ ಸುಧಾರಣೆಯ ಮೂಲಕ ಪ್ರಾತಿನಿಧ್ಯ ಸ್ವರೂಪದ ಸರಕಾರವನ್ನು ಜಾರಿಗೆ ತಂದಿದ್ದರು. 1919ರಲ್ಲಿ ಮಾಂಟೆಗೋ ಕ್ಲೆಮ್ಸ್ ಪೋರ್ಡ್ ಸ್ವಂಯಾಡಳಿತ ಅಧಿಕಾರವನ್ನು ನೀಡುವ ಶಿಫಾರಸು ಮಾಡಿದ್ದರು. ಈ ಶಿಫಾರಸುಗಳ್ಯಾವುದೂ ತಿರುವಾಂಕೂರು ಸಂಸ್ಥಾನದಲ್ಲಿ ಜಾರಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾರಂಭವಾಗಿದ್ದು ಈಳವರ ರಾಜಕೀಯ ಪ್ರಾತಿನಿಧ್ಯದ ಹೋರಾಟ.

  ಈ ಹೋರಾಟವನ್ನು ರಾಜಕೀಯವಾಗಿ ನಡೆಸಬೇಕಾಗಿರುವುದರಿಂದ ಯೋಗಂ ಸದಸ್ಯರು 1932ರಲ್ಲಿ ಈಳವ ರಾಷ್ಟ್ರೀಯ ಸಭಾವನ್ನು ಸ್ಥಾಪಿಸಿದ್ದರು. ಈ ಸಂಘಟನೆ 1932ರಲ್ಲಿಯೇ ಜನಸಂಖ್ಯೆ ಆಧಾರಿತ ರಾಜಕೀಯ ಪ್ರಾತಿನಿಧ್ಯ ಕೋರಿ ತಿರುವಾಂಕೂರು ಸಂಸ್ಥಾನಕ್ಕೆ ಮನವಿ ಸಲ್ಲಿಸಿತ್ತು. ಭೂ ತೆರಿಗೆ ಪಾವತಿಯ ಷರತ್ತನ್ನು ಹಿಂದೆಗೆದುಕೊಂಡು ವಯಸ್ಕರೆಲ್ಲರಿಗೂ ಮತದಾನದ ಹಕ್ಕು ನೀಡಬೇಕು ಮತ್ತು ಶೇಕಡಾ 17ರಷ್ಟು ಸ್ಥಾನಗಳನ್ನು ಈಳವರಿಗೆ ಮೀಸಲಿಡಬೇಕೆಂಬುದು ಯೋಗಂನ ಮುಖ್ಯ ಬೇಡಿಕೆಯಾಗಿತ್ತು. ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರನ್ನು ಜೊತೆಯಲ್ಲಿ ಸೇರಿಸಿಕೊಂಡು ಹೋರಾಟವನ್ನು ನಡೆಸಬೇಕೆಂಬ ‘ಈಳವ ರಾಷ್ಟ್ರೀಯ ಸಭಾ’ದ ತೀರ್ಮಾನ ಕೇರಳದ ರಾಜಕೀಯ ಪ್ರಾತಿನಿಧ್ಯದ ಚಳವಳಿಯಲ್ಲೊಂದು ನಿರ್ಣಾಯಕ ತಿರುವು.. ಈ ತೀರ್ಮಾನವನ್ನು ಯೋಗಂ ಸಂಪೂರ್ಣವಾಗಿ ಬೆಂಬಲಿಸಿತ್ತು. ಇದರಂತೆ 1932ರ ಡಿಸೆಂಬರ್ 18ರಂದು ತ್ರಿವೇಂಡ್ರಮ್‌ನಲ್ಲಿ ಸೇರಿದ ಈ ಮೂರು ಸಮುದಾಯಗಳ ನಾಯಕರು ಸಂಯುಕ್ತ ರಾಷ್ಟ್ರೀಯ ಸಮಿತಿ ರಚಿಸಿಕೊಂಡರು. ಆ ಸಭೆಯಲ್ಲಿ ಅಂಗೀಕರಿಸಿದ ಗೊತ್ತುವಳಿಯನ್ನು ಈಳವ ನಾಯಕ ಸಿ.ಕೇಶವನ್, ಮುಸ್ಲಿಮ್ ನಾಯಕ ಪಿ.ಕೆ.ಕುಂಜು ಮತ್ತು ಕ್ರಿಶ್ಚಿಯನ್ ನಾಯಕ ಎನ್.ವಿ.ಜೋಸೆಫ್ ಜಂಟಿಯಾಗಿ ತಿರುವಾಂಕೂರು ದಿವಾನರಿಗೆ ಅರ್ಪಿಸಿದರು. ಇದು ಈ ಮೂರು ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ಚಳವಳಿಯಾಗಿದ್ದರೂ ಇದನ್ನು ತಮ್ಮ ರಾಜಕೀಯ ಆಧಿಪತ್ಯಕ್ಕೆ ಹಾಕಿರುವ ಸವಾಲು ಎಂದೇ ನಾಯರ್ ಸಮುದಾಯ ಪರಿಗಣಿಸಿತ್ತು. ಜಾಗೃತಗೊಂಡ ನಾಯರ್‌ಗಳು ನಂಬೂದಿರಿಗಳ ಜೊತೆ ಸೇರಿ ಪ್ರತಿ ರಾಜಕೀಯ ಸಮ್ಮೇಳನ ನಡೆಸಿ ಜಾತಿ ಸಂಖ್ಯೆ ಆಧರಿತ ರಾಜಕೀಯ ಮೀಸಲಾತಿಯನ್ನು ವಿರೋಧಿಸಿ ಗೊತ್ತುವಳಿಯನ್ನು ಅಂಗೀಕರಿಸಿತು. ಇದನ್ನು ಅಷ್ಟೇ ತೀವ್ರವಾಗಿ ವಿರೋಧಿಸಿದ ‘ಸಂಯುಕ್ತ ರಾಷ್ಟ್ರೀಯ ಸಮಿತಿ’ 1933ರ ಜೂನ್ 25ರಂದು ಸಭೆ ಸೇರಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿತು. ಸಮಿತಿಯ ಬೇಡಿಕೆಗಳನ್ನು ತಿರಸ್ಕರಿಸಿದ ದಿವಾನ ಸಿ.ಪಿ.ರಾಮಸ್ವಾಮಿ ಅಯ್ಯರ್, ಈ ಮೂರು ಸಮುದಾಯಗಳ ಒಗ್ಗಟ್ಟನ್ನು ಮುರಿಯಲು ಅನೇಕ ತಂತ್ರ -ಕುತಂತ್ರಗಳನ್ನು ನಡೆಸಿದರು. ಮೊದಲು ನಾಯರ್‌ಗಳನ್ನು ಎತ್ತಿಕಟ್ಟಿ ಬೆದರಿಸಲಾಯಿತು. ಇದರ ಜತೆಗೆ ಪ್ರಮುಖ ಈಳವ ನಾಯಕರನ್ನು ಒಲಿಸಿಕೊಂಡು ಯೋಗಂನೊಳಗೆ ಬಿರುಕು ಮೂಡಿಸುವ ಪ್ರಯತ್ನ ಕೂಡಾ ನಡೆಯಿತು. ಬಹಳ ಮುಖ್ಯವಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರನ್ನು ಜೊತೆಯಲ್ಲಿ ಸೇರಿಸಿಕೊಂಡ ಬಗ್ಗೆ ಯೋಗಂನೊಳಗಿನ ಕೆಲವು ನಾಯಕರು ಆಕ್ಷೇಪ ಎತ್ತಿದ್ದರು. ಈ ಸಂದರ್ಭದಲ್ಲಿ ನಾರಾಯಣ ಗುರುಗಳ ಇನ್ನೊಬ್ಬ ಶಿಷ್ಯ ಸಹೋದರ ಅಯ್ಯಪ್ಪನ್ ಅವರು ಸಿ.ಕೇಶವನ್ ಅವರಿಗೆ ಬೆಂಬಲವಾಗಿ ನಿಂತರು.

1933ರ ಮಾರ್ಚ್ 12ರಂದು ನಾಯರ್ ಸೇವಾ ಸೊಸೈಟಿಯ ಕೇಂದ್ರ ಕಚೇರಿ ಇರುವ ಚಂಗನಚೇರಿಯಲ್ಲಿಯೇ ಸಭೆ ನಡೆಸಿದ ಯೋಗಂ, ಚುನಾವಣಾ ಬಹಿಷ್ಕಾರ ಗೊತ್ತುವಳಿಯನ್ನು ಬೆಂಬಲಿಸಿತು. ಈ ಸಭೆಯ ಅಧ್ಯಕ್ಷತೆಯನ್ನು ಸಹೋದರ ಅಯ್ಯಪ್ಪನ್ ವಹಿಸಿದ್ದರೆ, ಗೊತ್ತುವಳಿಯನ್ನು ತಾಲವ ಕೇಶವನ್ ಮಂಡಿಸಿದರು, ಸಿ.ಕೇಶವನ್ ಅನುಮೋದಿಸಿದರು. 1,500 ಸದಸ್ಯರು ಗೊತ್ತುವಳಿಯ ಪರವಾಗಿ ಮತಚಲಾಯಿಸಿದ್ದರು, ಭಿನ್ನಮತೀಯ ಕುಂಜುರಾಮನ್ ನೇತೃತ್ವದಲ್ಲಿ 80 ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಇದೇ ವೇಳೆ ಕ್ವಿಲಾನ್‌ನಲ್ಲಿ ಸಭೆ ಸೇರಿದ ಈಳವ ವಕೀಲರು ‘ಈಳವ ರಾಜಕೀಯ ಕ್ಲಬ್’ ಸ್ಥಾಪಿಸಿ ಬಹಿಷ್ಕಾರ ಗೊತ್ತುವಳಿಯನ್ನು ಬೆಂಬಲಿಸಿದರು. ಇದೇ ರೀತಿ ತಿರುವಾಂಕೂರಿನ ಹಲವಾರು ಕಡೆಗಳಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರು ಸಭೆ ಸೇರಿ ಗೊತ್ತುವಳಿಯನ್ನು ಬೆಂಬಲಿಸಿದರು. ಈ ಪ್ರತಿರೋಧದ ಹೊರತಾಗಿಯೂ ತಿರುವಾಂಕೂರು ದಿವಾನರು ಚುನಾವಣೆಯನ್ನು ನಡೆಸಿಯೇ ಬಿಟ್ಟರು.

ಚುನಾವಣೆಯ ನಂತರ ‘ಸಂಯುಕ್ತ ರಾಜಕೀಯ ಸಮಿತಿ’ ವಿಧಾನಸಭೆಯ ವಿಸರ್ಜನೆಗಾಗಿ ಹೋರಾಟವನ್ನು ಮುಂದುವರಿಸಿತು. ಯೋಗಂ ರಾಜ್ಯದಾದ್ಯಂತ ಚಳವಳಿಯನ್ನು ಪ್ರಾರಂಭಿಸಿತು. ಇದರ ಬಿಸಿ ಸಂಸತ್‌ನ ವರೆಗೆ ಮುಟ್ಟಿತು. ರಾಷ್ಟ್ರಮಟ್ಟದಲ್ಲಿ ಇದರ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಮೂರೂ ಸಮುದಾಯಗಳ ಸದಸ್ಯರು ಸಾಮೂಹಿಕ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಮಹಾರಾಜರ ಸಲಹೆಗಾರನ ಸ್ಥಾನದಿಂದ ತಮ್ಮನ್ನು ಕಿತ್ತೊಗೆಯಲು ಪ್ರಾರಂಭವಾದ ಪ್ರಯತ್ನದ ಅಪಾಯವನ್ನು ಮನಗಂಡ ಸರ್ ಸಿ.ಪಿ. ಅವರು ಉದ್ರೇಕಕಾರಿ ಭಾಷಣದ ಆರೋಪದ ಮೇಲೆ ಕೇಶವನ್ ಅವರನ್ನು ಬಂಧಿಸಿದರು. ಇದರಿಂದ ಕೆರಳಿದ ಈಳವ ನಾಯಕರು ಮತ್ತೊಮ್ಮೆ ಮತಾಂತರದ ಬಗ್ಗೆ ಚರ್ಚೆ ಪ್ರಾರಂಭಿಸಿದರು.

ಈ ಹಂತದಲ್ಲಿ ಚುನಾವಣಾ ಬಹಿಷ್ಕಾರ ಚಳವಳಿಯಿಂದ ಈಳವರ ಗಮನ, ಮತಾಂತರದ ಕಡೆ ಸರಿಯಿತು. ಮತಾಂತರದ ಚರ್ಚೆ ಈಳವರಲ್ಲಿ ಪ್ರಾರಂಭವಾಗಿದ್ದು ಇದೇ ಮೊದಲಲ್ಲ. 19ನೇ ಶತಮಾನದ ಕೊನೆಭಾಗದಲ್ಲಿ ಈಳವರಲ್ಲಿ ಮತಾಂತರದ ಬಗ್ಗೆ ಗಂಭೀರವಾದ ಚಿಂತನೆ ಪ್ರಾರಂಭವಾಗಿತ್ತು. ಮತಾಂತರದ ನಿರ್ಧಾರಕ್ಕೆ ಇಂಗ್ಲಿಷ್ ಶಿಕ್ಷಣ, ಸರಕಾರಿ ಉದ್ಯೋಗ ಮತ್ತು ಮೂಢ ಹಿಂದೂಗಳಿಂದ ಬಿಡುಗಡೆ ಪ್ರಮುಖ ಆಕರ್ಷಣೆಗಳಾಗಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಈಳವರೇ ಕೇರಳದಲ್ಲಿ ‘ರವಿಕೆ’ ಕ್ರಾಂತಿಯನ್ನು ಪ್ರಾರಂಭಿಸಿರುವುದು ಎನ್ನುವುದು ಗಮನಾರ್ಹ. ಇದರಿಂದಾಗಿ ಈಳವ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳುವ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗಿದ್ದು. ಇವೆಲ್ಲವೂ ಮತಾಂತರಕ್ಕೆ ಒತ್ತಾಸೆಗಳಾಗಿದ್ದವು.

ಮತಾಂತರದಲ್ಲಿ ಆಸಕ್ತಿ ಹೊಂದಿರುವ ಈಳವರಲ್ಲಿ ಕ್ರೈಸ್ತ ಮತ್ತು ಬೌದ್ಧ ಧರ್ಮಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಗೊಂದಲಗಳಿದ್ದವು. ಕ್ರಿಶ್ಚಿಯನ್ನರಾದರೆ ಅನೇಕ ಪ್ರಾಯೋಗಿಕವಾದ ಲಾಭಗಳಿದ್ದವು, ಆದರೆ ಬೌದ್ಧ ಧರ್ಮದಲ್ಲಿ ಆ ಅನುಕೂಲತೆಗಳಿರಲಿಲ್ಲ. ಆದರೆ ಬೌದ್ಧ ಧರ್ಮದಲ್ಲಿರುವ ಮಾನವೀಯ ಮೌಲ್ಯಗಳು ಮತ್ತು ಕರುಣೆ ಭಾವನಾತ್ಮಕವಾಗಿ ಈಳವರನ್ನು ಸೆಳೆದಿದ್ದವು. ಗುರುಗಳ ಪ್ರಮುಖ ಶಿಷ್ಯರಾದ ಸಹೋದರ ಅಯ್ಯಪ್ಪನ್, ಸಿ.ಕೇಶವನ್ ಅವರು ಪ್ರಾರಂಭದಿಂದಲೂ ಬೌದ್ಧ ಧರ್ಮದ ಪರವಾಗಿದ್ದರು. ಇವರಿಗಿಂತ ಮೊದಲು ಮೂಲರ್ ಎಂಬ ಖ್ಯಾತ ಈಳವ ಕವಿ ಧಮ್ಮಪದವನ್ನು ಮಲೆಯಾಳಿ ಭಾಷೆಗೆ ಭಾಷಾಂತರ ಮಾಡಿದ್ದ. ಆದರೆ ನಾರಾಯಣ ಗುರುಗಳ ಧಾರ್ಮಿಕ ಸುಧಾರಣೆಗಳಿಂದಾಗಿ ಹಿಂದೂ ಧರ್ಮದ ಚೌಕಟ್ಟಿನೊಳಗಡೆಯೇ ಈಳವರಿಗೆ ಸ್ವಾಭಿಮಾನದ ಬದುಕು ಸಾಧ್ಯವಾಗಿದ್ದ ಕಾರಣ ಮತಾಂತರ ಆಕರ್ಷಣೆ ಕಳೆದುಕೊಂಡಿತ್ತು. ಮತಾಂತರವನ್ನು ವಿರೋಧಿಸುತ್ತಿದ್ದ ಟಿ.ಕೆ.ಮಾಧವನ್ ಅವರಿಗೆ ನಾರಾಯಣ ಗುರುಗಳ ಬೆಂಬಲ ಇತ್ತು.

ವೈಕಂ ಸತ್ಯಾಗ್ರಹದ ಕಾಲದಲ್ಲಿ ಪುಟಿದೆದ್ದಿದ್ದ ಮತಾಂತರದ ಬೇಡಿಕೆ ಹತ್ತು ವರ್ಷಗಳ ನಂತರ ಮತ್ತೆ ಬಹಿಷ್ಕಾರ ಚಳವಳಿಯ ಕಾಲದಲ್ಲಿ ಕಾಣಿಸಿಕೊಂಡು ಸಂಚಲನ ಉಂಟುಮಾಡಿತ್ತು. ಎಸ್‌ಎನ್‌ಡಿಪಿ ಸಂಘಟನೆಯಿಂದಾಗಿರುವ ಜಾಗೃತಿಯಿಂದಾಗಿ ಈಳವ ಯುವಕರು ಹೆಚ್ಚು ಜಾಗೃತರಾಗಿದ್ದರು. ತಮ್ಮ ಹಕ್ಕುಗಳ ಭಿಕ್ಷೆ ಕೇಳಲು ಅವರು ಸಿದ್ಧ ಇರಲಿಲ್ಲ. ಅವರೆಲ್ಲರೂ ಸೇರಿ 1933ರ ಜುಲೈ 31 ರಂದು ಅಖಿಲ ತ್ರಿವಾಂಕೂರು ಈಳವ ಯುವ ಲೀಗ್ ಸ್ಥಾಪನೆ ಮಾಡುತ್ತಾರೆ. ಅದರ ಅಧ್ಯಕ್ಷರಾಗಿ ಸಿ.ಕೇಶವನ್ ಮತ್ತು ಕಾರ್ಯದರ್ಶಿಯಾಗಿ ಕೆ.ಸಿ.ಕುಟ್ಟನ್ ನೇಮಕಗೊಳ್ಳುತ್ತಾರೆ. ಈಳವರನ್ನು ಹಿಂದೂಯೇತರರು ಎಂದು ಯೋಗಂ ಘೋಷಿಸಬೇಕೆಂಬುದು ಲೀಗ್‌ನ ಪ್ರಮುಖ ಬೇಡಿಕೆಯಾಗಿತ್ತು. ಈ ಬಗ್ಗೆ ಲೀಗ್ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿತ್ತು. ಸ್ವಾಭಿಮಾನವನ್ನು ಬಲಿಕೊಟ್ಟು ಇನ್ನಷ್ಟು ಕಾಲ ಹಿಂದೂ ಧರ್ಮವನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಅನೇಕ ಹಿರಿಯ ಈಳವ ನಾಯಕರು ಬಂದು ಬಿಟ್ಟಿದ್ದರು. ಯೂತ್ ಲೀಗ್‌ನ ಸಭೆಯಲ್ಲಿ ಸಹೋದರ ಅಯ್ಯಪ್ಪನ್ ಭಾಷಣ ಮಾಡಿ ಮೇಲ್ಜಾತಿ ಜನರು ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವನ್ನು ಪ್ರತಿಭಟಿಸಿ ಈಳವರು ಹಿಂದೂ ಧರ್ಮದಿಂದ ಹೊರಬರುವಂತೆ ಕರೆ ನೀಡಿದ್ದರು. ಬಹಿಷ್ಕಾರ ಚಳವಳಿ ಬಗ್ಗೆ ಸಿ.ಕೇಶವನ್ ಮತ್ತು ಕುಂಜುರಾಮನ್‌ನಂತಹ ಯೋಗಂ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿದ್ದಿದ್ದರೂ ಮತಾಂತರದ ಬಗ್ಗೆ ಅವರ ನಡುವೆ ಒಮ್ಮತ ಇತ್ತು. ಸಿ.ವಿ. ಕುಂಜುರಾಮನ್ ಅವರು ಆಗಲೇ ಕ್ರಿಶ್ಚಿಯನ್ ಮಿಷನರಿಗಳ ಜತೆ ಸಂಪರ್ಕದಲ್ಲಿದ್ದರೆ, ಸಿ.ಕೃಷ್ಣನ್ ಕೋಲ್ಕತ್ತಾದ ಮಹಾಬೋಧಿ ಮಿಷನ್‌ನ ಮೂಲಕ ಬೌದ್ಧ ಭಿಕ್ಕುಗಳನ್ನು ತಿರುವಾಂಕೂರಿಗೆ ಆಹ್ವಾನಿಸಿ ಪ್ರಚಾರ ಪ್ರಾರಂಭ ಮಾಡಿಯೇ ಬಿಟ್ಟಿದ್ದರು. ಕೃಷ್ಣನ್ ಅವರು ಕಲ್ಲಿಕೋಟೆಯಲ್ಲಿ ಬೌದ್ಧ ದೇವಾಲಯವನ್ನು ಸ್ಥಾಪಿಸಿದ್ದರು. ಮತಾಂತರವನ್ನು ವಿರೋಧಿಸುವ ನಾಯಕರು ಯೋಗಂನಲ್ಲಿರಲಿಲ್ಲ. 1934ರ ಜುಲೈನಲ್ಲಿ ನಡೆದ ಯೋಗಂ ಸಮಾವೇಶದಲ್ಲಿ ಭಾಗವಹಿಸಿದ ಬಹುತೇಕ ಈಳವ ನಾಯಕರು ಹಿಂದೂ ಧರ್ಮದ ಬಗ್ಗೆ ತೀವ್ರವಾದ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಲೇ ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಬೌದ್ಧ ನಾಯಕರು ತೆರೆದ ಬಾಹುಗಳೊಂದಿಗೆ ಈಳವರನ್ನು ತಮ್ಮ ಜತೆಯಲ್ಲಿ ಸೇರಿಸಿಕೊಳ್ಳಲು ಸಿದ್ಧರಾಗಿ ನಿಂತಿದ್ದರು. ಅಖಿಲ ಕೇರಳ ಈಳವ ಯುವ ಪರಿಷತ್‌ನ ಕಾರ್ಯದರ್ಶಿ ಕೆ.ಸಿ.ಕುಟ್ಟನ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪರಿಷತ್‌ನ ಸಭೆಗೆ ಆಹ್ವಾನಿಸಿದ್ದರು.

ಅಸ್ಪೃಶ್ಯರ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಗಾಂಧೀಜಿಯವರ ಚಿಂತನೆಗಳಿಗಿಂತಲೂ ಅಂಬೇಡ್ಕರ್ ಚಿಂತನೆ ಈಳವ ಯುವಕರಿಗೆ ಹೆಚ್ಚು ಅಪ್ಯಾಯಮಾನವಾಗಿತ್ತು. ಅಂಬೇಡ್ಕರ್ ಒಪ್ಪಿದರೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಕೂಡಾ ಸಿದ್ಧ ಇದ್ದರು. ಶ್ರೀಲಂಕಾದಿಂದ ಕೆಲವು ಬೌದ್ಧ ಸನ್ಯಾಸಿಗಳು ಆಗಮಿಸಿದ್ದರು. ಐವರು ತಿಯಾ ಯುವಕರು ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಮಗ ಅಬ್ದುಲ್ಲಾ ಗಾಂಧಿ ಇಸ್ಲಾಂ ಧರ್ಮದ ಪ್ರಚಾರಕ್ಕಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳು ಈಳವರನ್ನು ಗೊಂದಲಕ್ಕೆ ನೂಕಿತ್ತು. ಹಿಂದೂ ಧರ್ಮವನ್ನು ತ್ಯಜಿಸುವ ವಿಚಾರವನ್ನು ಮಲಬಾರ್, ಕೊಚ್ಚಿ ಮತ್ತು ತಿರುವಾಂಕೂರಿನ ಬಹುಸಂಖ್ಯಾತ ಈಳವರು ಒಪ್ಪಿಕೊಂಡಿದ್ದರೂ, ಯಾವ ಧರ್ಮ ಸೇರಬೇಕೆಂಬ ಬಗ್ಗೆ ಪರಸ್ಪರ ಭಿನ್ನಾಭಿಪ್ರಾಯಗಳಿದ್ದವು.

ಈ ಅಪಾಯವನ್ನು ಮೊದಲು ಮನಗಂಡವರು ದಿವಾನರಾಗಿದ್ದ ಸರ್ ಸಿ.ಪಿ.ರಾಮಸ್ವಾಮಿ ಅಯ್ಯರ್. ಹಿಂದೂ ಧರ್ಮದ ಪ್ರಬಲ ಬೆಂಬಲಿಗರಾಗಿದ್ದ ಅಯ್ಯರ್ ಕ್ರಿಶ್ಚಿಯನ್ ಧರ್ಮವನ್ನು ಅಷ್ಟೇ ಪ್ರಬಲವಾಗಿ ವಿರೋಧಿಸುತ್ತಿದ್ದರು. ಈ ಹಂತದಲ್ಲಿ ರಾಜಕೀಯ ಪ್ರಾತಿನಿಧ್ಯ ಚಳವಳಿಗಿಂತಲೂ ಈ ಮತಾಂತರದ ವಿಚಾರವನ್ನು ಇತ್ಯರ್ಥಗೊಳಿಸಬೇಕೆಂದು ಅವರಿಗೆ ಅನಿಸಿತ್ತು. ಈ ಕಾರಣಕ್ಕಾಗಿ ದೇವಾಲಯ ಪ್ರವೇಶ ಚಳವಳಿಯನ್ನು ಬೇರೆಯೇ ದೃಷ್ಟಿಯಲ್ಲಿ ಮರುಪರಿಶೀಲನೆ ನಡೆಸಿದ ಅಯ್ಯರ್, ಈಳವರ ಗಮನವನ್ನು ಮತಾಂತರದಿಂದ ಬೇರೆಡೆ ಸೆಳೆಯಲು ಈಳವ ಮತ್ತಿತರ ಹಿಂದುಳಿದ ಜಾತಿಗಳಿಗೆ ಸವರ್ಣೀಯರ ದೇವಸ್ಥಾನಕ್ಕೆ ಪ್ರವೇಶ ನೀಡುವ ಆದೇಶವನ್ನು 1936ರ ನವೆಂಬರ್ 12ರಂದು ಹೊರಡಿಸುತ್ತಾರೆ. ಇದು ರಾಜ್ಯದಾದ್ಯಂತ ವಿಜಯೋತ್ಸವಕ್ಕೆ ಕಾರಣವಾಗುತ್ತದೆ. ಯೋಗಂ ಆಗಿನ ಕಾರ್ಯದರ್ಶಿ ವೇಲಾಯುಧನ್ ನೇತೃತ್ವದಲ್ಲಿ ದಿವಾನ ರಾಮಸ್ವಾಮಿ ಅವರಿಗೆ ನಾಗರಿಕ ಸನ್ಮಾನವನ್ನು ಏರ್ಪಡಿಸುತ್ತದೆ. ಎರಡು ವರ್ಷಗಳ ಅವಧಿಗೆ ಜೈಲು ಸೇರಿದ್ದ ಸಿ.ಕೇಶವನ್ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಅವರಿಗೆ ವೀರೋಚಿತ ಸ್ವಾಗತ ನೀಡಲಾಗುತ್ತದೆ.

ಇದೇ ವೇಳೆ ಮೇಲ್ಜಾತಿ ಮತ್ತು ಸರಕಾರದ ಬಗ್ಗೆ ಇದ್ದ ಅಸಮಾಧಾನವನ್ನು ತಣಿಸುವ ಇನ್ನೆರಡು ಬೆಳವಣಿಗೆಗಳು ನಡೆಯುತ್ತದೆ. ಸರಕಾರಿ ಉದ್ಯೋಗದಲ್ಲಿ ಜಾತಿ ಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ನೀಡಲು ತಾತ್ವಿಕವಾಗಿ ಒಪ್ಪುವ ಇನ್ನೊಂದು ಆದೇಶ ಕೂಡಾ ಹೊರಬೀಳುತ್ತದೆ. ಡಾ.ಜಿ.ಡಿ.ನೊಕ್ಸ್ ಲೋಕ ಸೇವಾ ನಿಯಮಗಳನ್ನು ರೂಪಿಸಿ ಲೋಕಸೇವಾ ಆಯುಕ್ತರನ್ನು ನೇಮಿಸುತ್ತಾರೆ. 1936ರ ಸೆಪ್ಟ್ಟಂಬರ್ 16ರಂದು ಜಾರಿಗೆ ಬಂದ ಈ ಆದೇಶದ ಪ್ರಕಾರ ಮಧ್ಯಮ ಶ್ರೇಣಿಯ ಶೇಕಡಾ 40ರಷ್ಟು ಹುದ್ದೆಗಳನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಡಲಾಗಿತ್ತು. ಅದಕ್ಕಿಂತ ಕೆಳಗಿನ ಶ್ರೇಣಿಯ ಎಲ್ಲ ಹುದ್ದೆಗಳನ್ನು ಜಾತಿ ಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಮೀಸಲಿಡಲು ನಿರ್ಧರಿಸಲಾಗುತ್ತದೆ. ಉನ್ನತ ಶ್ರೇಣಿಗಳ ಹುದ್ದೆಗಳಿಗೆ ಮೀಸಲಾತಿ ಅನ್ವಯಿಸದೆ ಇದ್ದರೂ ಅಲ್ಲಿಯೂ ಜಾತಿ ಸಂಖ್ಯೆ ಪ್ರಮಾಣಕ್ಕೆ ಸರಿಯಾಗಿ ಹುದ್ದೆಗಳನ್ನು ಮೀಸಲಿಡಲು ಶಿಫಾರಸು ಮಾಡಲಾಗಿತ್ತು. ಇಷ್ಟು ಮಾತ್ರವಲ್ಲ ಬ್ರಿಟಿಷ್ ಭಾರತೀಯ ಸೇನೆಗೆ ಅಲ್ಲಿಯ ವರೆಗೆ ನಾಯರ್ ಗಳಿಗಷ್ಟೇ ಸೇರ್ಪಡೆಯಾಗುವ ಅವಕಾಶವನ್ನು ವಿಸ್ತರಿಸಿ ಎಲ್ಲ ಜಾತಿಗಳಿಗೂ ಅವಕಾಶ ನೀಡಲಾಗುತ್ತದೆ.

ಸರಕಾರಿ ಹುದ್ದೆಗಳಲ್ಲಿ ಜಾತಿ ಸಂಖ್ಯೆ ಆಧಾರದ ಪ್ರಾತಿನಿಧ್ಯ, ಅಲ್ಲ�

Writer - ದಿನೇಶ್ ಅಮೀನ್, ಮಟ್ಟು

contributor

Editor - ದಿನೇಶ್ ಅಮೀನ್, ಮಟ್ಟು

contributor

Similar News