ಚರಕದ ಸಮಸ್ಯೆ; ನನಗೆ ಕಂಡಷ್ಟು

Update: 2020-09-10 19:30 GMT

ಲಾಕ್‌ಡೌನ್ ಸಂಕಷ್ಟವೂ ಸೇರಿದಂತೆ ವಿವಿಧ ಕಾರಣಕ್ಕೆ ಹೆಗ್ಗೋಡಿನ ‘ಚರಕ ಮಹಿಳಾ ಸಹಕಾರ ಸಂಘ’ ದಿವಾಳಿಯಾಗಿದೆ ಎಂದು ರಂಗಕರ್ಮಿ ಪ್ರಸನ್ನ ಘೋಷಿಸಿದ್ದಾರೆ. ಅದನ್ನು ಮತ್ತೆ ಕಟ್ಟಲು ಸತ್ಯಾಗ್ರಹ, ಶ್ರಮದಾನದಂತಹ ಪ್ರಯತ್ನಗಳನ್ನೂ ಅವರು ಆರಂಭಿಸಿದ್ದಾರೆ. ಚರಕ ಈ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. 90ರ ದಶಕದಲ್ಲಿ ಮಲೆನಾಡಿನ ಕುಗ್ರಾಮದ ಮಹಿಳೆಯರಿಗೆ ಸ್ವಾಭಿಮಾನದ, ಸ್ವಾವಲಂಬಿ ಬದುಕಿನ ಕನಸು ತುಂಬಿದ ಈ ಚರಕದ ಬಿಕ್ಕಟ್ಟಿನ ಕುರಿತು ಈಗಾಗಲೇ ಹಲವರು ಕೆಳಗಿನಂತೆ ಗುರುತಿಸಿದ್ದಾರೆ.

 1. ಚರಕ ತನ್ನ ಉತ್ಪನ್ನಗಳನ್ನು ತಾನೇ ಮಾರಾಟ ಮಾರಾಟ ಮಾಡುವ ಹಕ್ಕು ಹೊಂದಿಲ್ಲ. ಅದು ದೇಸಿ ಸಂಸ್ಥೆಗೆ ಮಾರಬೇಕಿದೆ. ದೇಸಿ ಗರಿಷ್ಠ ಮಾರಾಟ ಬೆಲೆಯನ್ನೂ ನಿರ್ಧರಿಸಿ ಮಾರುತ್ತಿದೆ. ದೇಸಿ ಪ್ರಾಥಮಿಕ ಗ್ರಾಹಕ ಕೂಡಾ ಅಲ್ಲ, ಅದು ಎರಡನೇ ಗ್ರಾಹಕ ಎಂದು ಉಮಾ ಮಹೇಶ್ವರ ಹೆಗಡೆಯವರು ಹೇಳಿದ್ದಾರೆ. ಅಂದರೆ ಕವಿ ಕಾವ್ಯ ಟ್ರಸ್ಟ್ ಪ್ರಾಥಮಿಕವಾಗಿ ಕೊಂಡುಕೊಂಡು, ಅದರ ಮೂಲಕ ದೇಸಿ ಕೊಳ್ಳುವ ವ್ಯವಸ್ಥೆ ಇದೆ.

2. ಚರಕಕ್ಕೆ ದೇಸಿ ಅನಿವಾರ್ಯ, ಆದರೆ ದೇಸಿಗೆ ಚರಕ ಅನಿವಾರ್ಯವಲ್ಲ. ದೇಸೀ ಇತರ ಸಂಸ್ಥೆಗಳ ಉತ್ಪನ್ನಗಳನ್ನೂ ಮಾರುತ್ತದೆ; ಅಂದರೆ ಚರಕದ ಉತ್ಪನ್ನಗಳಿಗೆ ಪ್ರತಿಸ್ಪರ್ಧಿಗಳು ಸ್ವತಃ ದೇಸೀ ಮಳಿಗೆಗಳಲ್ಲೇ ಲಭ್ಯ!

3. ಚರಕದ ಮಹಿಳೆಯರಿಗೆ ಮಾರುಕಟ್ಟೆ ಪ್ರತಿಭೆ, ಸಾಮರ್ಥ್ಯ, ಅನುಭವ ಇಲ್ಲ; ಆದ್ದರಿಂದ ಅವರಿಗೆ ಸಹಾಯ ಮಾಡಲು ದೇಸಿ ಅಸ್ತಿತ್ವಕ್ಕೆ ಬಂದಿದೆ ಎಂಬುದು ಪ್ರಸನ್ನ ಅವರ ಸಮರ್ಥನೆ. ಈ ತರಹದ ಸ್ಥಳೀಯ ಸಮುದಾಯಗಳ ಸಂಸ್ಥೆ/ ಸಹಕಾರಿ ಸಂಸ್ಥೆಗಳು ಚಿಗುರಿದಾಗ ಅವುಗಳನ್ನು ಪ್ರೊಮೋಟ್ ಮಾಡಿದ ಏಜೆನ್ಸಿ ಒಂದೆರಡು ವರ್ಷಗಳ ಕಾಲ ಕೈ ಹಿಡಿದು ನಡೆಸಿ ಆ ಅವಧಿಯಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ ಕೊಡುವ ಕೆಲಸ ಮಾಡುತ್ತದೆ. ಇದು ಕೇಂದ್ರ ಸರಕಾರ ಮತ್ತು ನಬಾರ್ಡ್ ಯೋಜನೆಗಳಲ್ಲೂ, ಅಭಿವೃದ್ಧಿ ಕ್ಷೇತ್ರದ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಾಮಾನ್ಯ ನಿಯಮ. ಕಾಲು ಶತಮಾನ ಕಳೆದರೂ (ಅಂದರೆ ಚರಕ ಆರಂಭವಾದಾಗ ಇದ್ದ ಮಹಿಳೆಯ ಮಗಳೂ ದುಡಿಯುವ ವಯಸ್ಸಿಗೆ ಬಂದಿರಬಹುದು) ಇನ್ನೂ ಚರಕ ಸಂಸ್ಥೆಗೆ ಈ ಸಾಮರ್ಥ್ಯ ಇಲ್ಲ ಅಂದರೆ ಅಲ್ಲೇನೋ ನ್ಯೂನತೆ ಇದೆ; ಇದರ ಪ್ರೊಮೋಟರುಗಳು ತಮ್ಮ ಕರ್ತವ್ಯ ಮಾಡಿಲ್ಲ ಎಂದು ಅರ್ಥ

4. ಕೆ.ಎಂ.ಎಫ್. ಕೂಡಾ ಒಂದು ಸಹಕಾರಿ, ಅದೇನು ತನ್ನ ಉತ್ಪನ್ನಗಳ ಮಾರಾಟವನ್ನು ನೆಸ್ಟ್ಲೆಗೆ ವಹಿಸಿಲ್ಲವಷ್ಟೇ. ಅಲ್ಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಸ್ಥೆಗಳ ಸಾಮರ್ಥ್ಯ ವೃದ್ಧಿಗಾಗಿ ವಿಶೇಷ ಯೋಜನೆಯನ್ನೇ ರೂಪಿಸಿದೆ.

5. ಚರಕ ಮೂಲತಃ ವಿವಿಧೋದ್ದೇಶ ಸಹಕಾರಿ. ಅಂದರೆ ಚರಕ ಇತರೇ ಉತ್ಪನ್ನಗಳನ್ನೂ ಯತ್ನಿಸಿ ಮಾರುವ ಪ್ರಯತ್ನ ಮಾಡಬೇಕಿತ್ತು. ಇದನ್ನು ಬಿಝಿನೆಸ್ ಪರಿಭಾಷೆಯಲ್ಲಿ ಉತ್ನನ್ನಗಳ ವೈವಿಧ್ಯತೆ (Diversified Product Portfolio) ಎನ್ನುತ್ತಾರೆ. ಸ್ವತಃ ಪ್ರಸನ್ನ ಸ್ಥಳೀಯತೆ ಬಗ್ಗೆ ಮಾತಾಡುತ್ತಾರೆ. ‘‘ಸ್ಥಳೀಯರಿಂದ ಸ್ಥಳೀಯ ಸಂಪನ್ಮೂಲ ಬಳಸಿ ಉತ್ಪಾದನೆ’’ ಎಂಬುದನ್ನು ಧ್ಯೇಯವಾಕ್ಯವಾಗಿಸಿಕೊಂಡು ರೂಪಿಸಿದ ಪ್ರಣಾಳಿಕೆಯೊಂದರ ಭಾಗವಾಗಿ ನಾನು ಕೆಲಸ ಮಾಡಿದ್ದೆ. ಅದರ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ಚರಕದಲ್ಲಿ ವಿಭಿನ್ನ ಉತ್ಪನ್ನಗಳನ್ನು ತಯಾರಿಸಿ ಮಾರುವ ಯಾವ ಯತ್ನವೂ ಆಗಲಿಲ್ಲ. ಉದಾ: ಅಡಿಕೆ ಪಟ್ಟೆಯ ಪ್ಲೇಟು, ಸ್ಥಳೀಯ ಆಹಾರ ಇತ್ಯಾದಿ.

6. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಮಿಷನ್ನ್‌ನಲ್ಲಿ ಕೈಮಗ್ಗವನ್ನೂ ಪರಿಗಣಿಸಿ ಪೈಲಟ್ ಪ್ರಾಜೆಕ್ಟ್ ಒಂದನ್ನು ಮಾಡುವಂತೆ ಪ್ರಸನ್ನ ಅವರನ್ನು ಕೇಳಿತ್ತು. ದಿಲ್ಲಿಯಲ್ಲಿ ನಡೆದ ಸಭೆಗೆ ನಾನೂ ಹೋಗಿದ್ದೆ. ಇದರ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಯೋಜನೆ ತಯಾರಿಸಲು ನಾನು ಮತ್ತು ರಾಷ್ಟ್ರೀಯ ಮಿಷನ್‌ನ ಪ್ರತಿನಿಧಿ ರೇಖಿ ಎಂಬವರು ಜೊತೆಯಾಗಿ ಚರಕವನ್ನೂ ಅಧ್ಯಯನ ಮಾಡಿದ್ದೆವು. ಆಗ ಅವರು "one push, this will collapse’ ಅಂದಿದ್ದರು. ಅರ್ಥಾತ್ ಚರಕದಲ್ಲಿ ನಾವು ಈಗ ಕಾಣುವ ಎಲ್ಲಾ ಸಮಸ್ಯೆಗಳನ್ನು ಅವರು ಗಮನಿಸಿ ಹೇಳಿದ್ದರು. ಆಮೇಲೆ ಕಾರಣಾಂತಗಳಿಂದ ಪ್ರಸನ್ನ ಅವರು ಈ ಯೋಜನೆಯ ಬಗ್ಗೆ ಆಸಕ್ತಿ ವಹಿಸಲಿಲ್ಲ.

7. ‘‘ಮಾರ್ಕೆಟನ್ನು ನಾನು ಒಪ್ಪುತ್ತೇನೆ’’ ಎನ್ನುವ ಪ್ರಸನ್ನ ಅವರು ಆಧುನಿಕ ಪರಿಭಾಷೆಯಲ್ಲಿ ಹೇಳುವ ವ್ಯವಹಾರದ ವಿವರಗಳನ್ನು ರಿಯಲ್ ಟೈಮಿನಲ್ಲಿ ಒದಗಿಸುವ ಯಾವ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು (MIS) ಚರಕದಲ್ಲಿ ಮಾಡಿರಲೇ ಇಲ್ಲ. ಇದಕ್ಕೇನು ಲಕ್ಷಾಂತರ ರೂಪಾಯಿ ವೆಚ್ಚವಾಗುವುದಿಲ್ಲ. ಎರಡೂ ಕಡೆ ಅಂತರ್ಜಾಲ ಇದ್ದು ಅಲ್ಲಿನ ಮಾಹಿತಿ ಇವರು, ಇಲ್ಲಿನ ಮಾಹಿತಿ ಅವರು ನೋಡುವ ಕ್ರಮ ಇದು. 8. ಈಗಿರುವ ಬೇಸಿಕ್ ಪ್ರೈಸ್ ರೇಂಜಿನ ಉತ್ಪನ್ನಗಳು ಅಂದರೆ ಖಾದಿಯಲ್ಲಿ 500-600 ರೂ. ಬೆಲೆಯ ಉತ್ಪನ್ನಗಳನ್ನು ಮಾತ್ರ ಚರಕ ಉತ್ಪಾದಿಸುತ್ತಿತ್ತು. ಕನಿಷ್ಠ ಶೇ. 20ರಷ್ಟು ಮಿಡ್ ರೇಂಜ್ ಅಂದರೆ 1,000-1,200 ರೂ. ರೇಂಜಿನಲ್ಲಿ ಉತ್ಪನ್ನ ಮಾಡಿದರೆ ಶೇ. 50ರಷ್ಟು ಆದಾಯ ಅದರಲ್ಲಿ ಬರುತ್ತಿತ್ತು ಎಂದು ಪ್ರಸನ್ನ ಅವರಿಗೆ ಸಲಹೆ ನೀಡಲಾಗಿತ್ತು. ಆದರೆ ಅವರು ನಮ್ಮ ಗ್ರಾಹಕರು ಮಧ್ಯಮ ವರ್ಗದವರು ಎಂದು ಹೇಳಿ ಅದನ್ನು ತಳ್ಳಿ ಹಾಕಿದ್ದರು. ಉತ್ಪಾದನಾ ವೆಚ್ಚ ಪರಿಗಣಿಸಿ ಮಾರಾಟದ ಬೆಲೆಯನ್ನೂ ಚರಕವೇ ನಿರ್ಧರಿಸುವುದಾಗಿದ್ದರೆ ಈ ಸೆಗ್ಮೆಂಟಿನಿಂದ ಲಾಭ ಬರುತ್ತಿತ್ತು.

ಉಳಿದಂತೆ, ಇನ್ನು ಕೆಲವು ವಿಷಯಗಳು ಮಾಹಿತಿ ಲಭ್ಯದ ಮೇಲೆ ಚರ್ಚಿಸಬಹುದು. ಆದರೆ ಮಾಹಿತಿ ನೀಡುವಂತೆ ನಾವು ಒತ್ತಾಯಿಸಬೇಕಿದೆ. ಇದರಲ್ಲಿ ಪ್ರಮುಖವಾಗಿ

1. ದೇಸಿ ಸಂಸ್ಥೆ ಮತ್ತು ಕವಿ ಕಾವ್ಯ ಟ್ರಸ್ಟ್ ಪಡೆದ ಅನುದಾನ ಮತ್ತು ವೆಚ್ಚ ಮಾಡಿದ ವಿವರಗಳನ್ನು ಪ್ರಸನ್ನ ಸಾರ್ವಜನಿಕ ಅವಗಾಹನೆಗೆ ಇಡಬೇಕು. Utilization Certificate & Auditನಲ್ಲಿ ಸಮಸ್ಯೆಗಳಿವೆ ಎಂಬ ಮಾತನ್ನು ಕೆಲವರು ಹೇಳಿದ್ದಾರೆ. ಈ ದೃಷ್ಟಿಯಿಂದ ಇದು ಅಗತ್ಯ.

2. ಬೆಂಗಳೂರಿನ ದೇಸಿ ಸಂಸ್ಥೆ ಹೆಗ್ಗೋಡಿನಲ್ಲಿ ಸರಕಾರಿ ಜಮೀನು ಗ್ರಾಂಟ್ ಮಾಡಿಸಿಕೊಳ್ಳುವ ಅಗತ್ಯವೇನಿತ್ತು? ಚರಕ ಸಂಸ್ಥೆಗೆ ಅದನ್ನು ಯಾಕೆ ವರ್ಗಾಯಿಸಲಿಲ್ಲ ಎಂಬುದನ್ನೂ ದೇಸಿ ಸಂಸ್ಥೆ ಸ್ಪಷ್ಟೀಕರಿಸಬೇಕು.

3. ಶ್ರಮಜೀವಿ ಆಶ್ರಮದಿಂದ ಹಿಡಿದು ಹಲವಾರು ಭೌತಿಕ ಸಂರಚನೆಗಳಿಗೆ ವ್ಯಯ ಮಾಡಿದ ಅನುದಾನದ ಮೂಲ ಯಾವುದು? ಈ ರಚನೆಗಳಿಂದ ನಿರೀಕ್ಷಿತ ಉಪಯೋಗ ಆಗಿದೆಯೇ? ಎಂಬಿತ್ಯಾದಿ ಬಗ್ಗೆ ಆಂತರಿಕ ಪರಿಶೋಧನೆ ಆಗಬೇಕು. ಈ ಆಂತರಿಕ ಪರಿಶೋಧನೆ ಹಣಕಾಸಿನ ಪರಿಶೋಧನೆ ಅಲ್ಲ. ಒಂದು ಉದಾಹರಣೆ ಕೊಡುವೆ. ಕೋಳಿ ಸಾಕಣೆಗೆಂದು ಹತ್ತು ಕೋಳಿಗೆ 10 ಸಾವಿರ ರೂ. ಬಿಲ್ ಮಾಡಿದರೆ ಅದರ ಸಾಚಾತನವನ್ನು ಪರಿಶೋಧಿಸುವುದು ಆರ್ಥಿಕ ಲೆಕ್ಕ ಪರಿಶೋಧಕನ ಕೆಲಸ. ಈ ಹತ್ತು ಕೋಳಿ ನೀಡಿದ ಮೇಲೆ ಫಲಾನುಭವಿ ಅದನ್ನು ಸಾಕಿ ಅಭಿವೃದ್ಧಿ ಆಗಿದ್ದಾನಾ ಇಲ್ಲಾ ಚಿಕನ್ ಸಾಂಬಾರ್ ಮಾಡಿ ಮುಗಿಸಿದ್ದಾನಾ ಎಂಬುದು ಆಂತರಿಕ ಪರಿಶೋಧನೆ!! ಅಂದರೆ ಯಾವುದೇ ವಿನಿಯೋಗ ದೀರ್ಘ ಕಾಲೀನ ಘೋಷಿತ ಉದ್ದೇಶವನ್ನು ಸಾಧಿಸಿದೆಯೇ ಎಂಬ ಪ್ರಶ್ನೆ. ನಾನೇ ಮುಖ್ಯಸ್ಥನಾಗಿದ್ದ ಸಂಸ್ಥೆಯಲ್ಲಿ ಇದಕ್ಕಾಗಿ ನಾವು ಹಣ ಇಟ್ಟಿದ್ದೆವು. ಯುವ ಲೆಕ್ಕ ಪರಿಶೋಧಕನೊಬ್ಬ ನಾಟಿ ಬೀಜಗಳ ಕಿಟ್ ಪಡೆದವರು ತರಕಾರಿ ಬೆಳೆದಿದ್ದಾರೆಯೇ, ಇಲ್ಲಾ ಸುಮ್ಮನೆ ಕಿಟ್ ಹಂಚಿಕೆಯಾಗಿದೆಯೇ ಎಂದು ಮನೆ ಮನೆಗೆ ಹೋಗಿ ಪರೀಕ್ಷಿಸಿದ್ದ!!

4. ಜಿಎಸ್‌ಟಿ ಬಗ್ಗೆ ಕೂಡಾ ಪ್ರಸನ್ನ ಸಕಾರಣವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಕೈಮಗ್ಗಕ್ಕೆ ವಿನಾಯಿತಿ ಸಿಗಬೇಕು; ನಿಜ. ಆದರೆ ಈಗ ಇರುವ ಜಿಎಸ್‌ಟಿ 5 ಶೇಕಡಾ. ಮಾರುಕಟ್ಟೆ ವ್ಯವಸ್ಥೆ ಬಲ್ಲ ಒಬ್ಬರು ಈ ಜಿಎಸ್‌ಟಿ ಅಂತಹ ದುಷ್ಪರಿಣಾಮ ಬೀರುವುದಿಲ್ಲ. ಸಾವಿರ ರೂಪಾಯಿಯ ಜುಬ್ಬಾ ಕೊಳ್ಳುವವನಿಗೆ ಎಕ್ಸ್‌ಟ್ರಾ 50 ರೂಪಾಯಿ ಪ್ರಭಾವ ಬೀರುವುದಿಲ್ಲ ಎಂದು ವಾದಿಸಿದ್ದರು. ಅದು ನಿಜ ಎಂದು ನನ್ನ ಗ್ರಹಿಕೆ.

ಈ ವಿವರಗಳ ಹೊರತಾಗಿ, ಹೆಣ್ಣು ಮಕ್ಕಳಿಗೆ ಯಾಕೆ ತ್ರಾಸ ಅಂತ ಎಲ್ಲೆಡೆ ಪ್ರಸನ್ನ ಅವರೇ ಬಲಿಪಶುಗಳ ಪ್ರತಿನಿಧಿಯಾಗಿ, ಹೋರಾಟದ ಪ್ರತಿನಿಧಿಯಾಗಿ, ಸಂಸ್ಥೆಗಳ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ. ಮುಖ್ಯಮಂತ್ರಿಗೆ ಪತ್ರ ಬರೆಯುವಾಗಲೂ ಚರಕದ ಮಹಿಳೆಯರು ಬರೆಯದೆ ಸಂಸ್ಥಾಪಕ ಅಧ್ಯಕ್ಷರೇ ಪತ್ರ ಬರೆದಿದ್ದು ಕೂಡಾ ವಿಶೇಷ. ಸಂಸ್ಥಾಪಕ ಅಧ್ಯಕ್ಷರು 25 ವರ್ಷಗಳ ಬಳಿಕವೂ ಪ್ರತಿನಿಧಿಸುವ ಅಧಿಕಾರ ಪಡೆದಿರುವುದು ಗಮನಾರ್ಹ.

Writer - ಕೆ.ಪಿ. ಸುರೇಶ

contributor

Editor - ಕೆ.ಪಿ. ಸುರೇಶ

contributor

Similar News