ಗೆಲುವಿನ ಪಯಣದಲ್ಲಿ ಅಂಬಾರ್ ಸಂಭ್ರಮ

Update: 2020-10-10 19:30 GMT

ಕಿರುತೆರೆ ಬೆಳ್ಳಿ ಪರದೆಗೆ ಎಂತೆಂತಹ ಪ್ರತಿಭಾವಂತರನ್ನು ನೀಡಿದೆ ಎಂದು ಲೆಕ್ಕ ಮಾಡಲು ಹೊರಟರೆ ಪ್ರಕಾಶ್ ರಾಜ್, ರಮೇಶ್ ಅರವಿಂದ್ ಅವರಿಂದ ಹಿಡಿದು ಗಣೇಶ್, ಯಶ್ ತನಕ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ರಸ್ತುತ ‘ದಿಯಾ’ ಸಿನೆಮಾದ ಮೂಲಕ ಜನಪ್ರಿಯ ತಾರೆಯಾಗಿರುವ ಪೃಥ್ವಿ ಅಂಬಾರ್ ಅವರು ಕೂಡ ಒಂದು ಕಾಲದಲ್ಲಿ ‘ರಾಧಾ ಕಲ್ಯಾಣ’ ಎನ್ನುವ ಧಾರಾವಾಹಿಯ ಮೂಲಕ ಗುರುತಿಸಿಕೊಂಡಿದ್ದವರೇ. ಅಂದು ನಾಗರಾಜ್ ಆಗಿದ್ದ ಇವರ ಹೆಸರು ಇಂದು ಪೃಥ್ವಿ ಎಂದು ಬದಲಾಗಿದೆ.

ದಶಕದ ಹಿಂದೆ ಖಾಸಗಿ ವಾಹಿನಿಯೊಂದು ನಡೆಸಿದ್ದ ‘ಗ್ರೇಟ್ ಕರ್ನಾಟಕ ಡ್ಯಾನ್ಸ್ ಲೀಗ್’ ರಿಯಾಲಿಟಿ ಶೋನಲ್ಲಿ ವಿಜೇತರಾದವರು ಪೃಥ್ವಿ ಅಂಬಾರ್. ಟೈಟಲ್ ಜತೆಗೆ ಅಲ್ಲೇ ಇನ್ನೊಂದು ತಂಡದಲ್ಲಿ ಸ್ಪರ್ಧೆಯಲ್ಲಿದ್ದ ಪಾರುಲ್ ಶುಕ್ಲಾ ಎನ್ನುವ ನೃತ್ಯಗಾತಿಯ ಹೃದಯವನ್ನೂ ಅವರು ಗೆದ್ದರು. ಕಳೆದ ವರ್ಷಾಂತ್ಯದಲ್ಲಿ ಪೃಥ್ವಿ ಅಂಬಾರ್ ವಿವಾಹವೂ ಆಯಿತು. ಪಾರುಲ್ ಪ್ರವೇಶವಾದ ಅದೃಷ್ಟವೋ ಗೊತ್ತಿಲ್ಲ; ಆ ಬಳಿಕ ತೆರೆಕಂಡ ಪೃಥ್ವಿ ನಟನೆಯ ‘ದಿಯಾ’ ಚಿತ್ರ ಅಪಾರ ಜನಪ್ರಿಯತೆ ಪಡೆದುಕೊಂಡಿತು. ಅದಕ್ಕೆ ನಿರ್ದೇಶಕ ಅಶೋಕ್ ಅವರೇ ಕಾರಣ ಎನ್ನುವುದನ್ನು ಸ್ವತಃ ಪೃಥ್ವಿ ಅಂಬಾರ್ ಹೇಳುತ್ತಿರುತ್ತಾರೆ. ಅದುವರೆಗೆ ಒಬ್ಬ ಉತ್ತಮ ನೃತ್ಯಪಟುವಾಗಿ, ಗಂಭೀರ ಕಂಠದ ನಿರೂಪಕನಾಗಿ, ಸಹಜ ಅಭಿನಯದ ಕಲಾವಿದನಾಗಿದ್ದರೂ ಅವರಿಗೆ ಒಂದೊಳ್ಳೆಯ ಬ್ರೇಕ್ ಸಿಗಬೇಕಾದರೆ ಅಷ್ಟು ಕಾಯಬೇಕಾಯಿತು. ಆದರೆ ಇವರ ಹಿನ್ನೆಲೆಯ ಬಗ್ಗೆ ಅರಿಯದ ಮಂದಿಗೆ ಪೃಥ್ವಿ ನಾಯಕನಾದ ಮೊದಲ ಚಿತ್ರದಲ್ಲೇ ಅಮೋಘ ಅಭಿನಯ ನೀಡಿದ ಕಲಾವಿದನೆಂದು ಅಚ್ಚರಿ ಮೂಡಿಸಿದ್ದರು. ಆದರೆ ಪೃಥ್ವಿಯನ್ನು ನಾಯಕನನ್ನಾಗಿಸಿ ಅದಾಗಲೇ ತುಳುವಲ್ಲಿ ಐದು ಚಿತ್ರಗಳು ಬಿಡುಗಡೆಗೆ ತಯಾರಾಗಿ ನಿಂತಿತ್ತು ಎನ್ನುವುದು ಕರಾವಳಿಯ ಮಂದಿಗೆ ಮಾತ್ರ ಗೊತ್ತಿದ್ದ ಸತ್ಯ. ಇಂದು ಕಾಲ ಬದಲಾಗಿದೆ. ಕೋವಿಡ್-19 ಬಂದು ಹಲವರು ಮಕಾಡೆ ಮಲಗುವಂತಾದಾಗಲೂ ಎದ್ದು ನಿಂತ ಒಂದಷ್ಟು ಮಂದಿ ಅದೃಷ್ಟವಂತರಲ್ಲಿ ಪೃಥ್ವಿ ಅಂಬಾರ್ ಕೂಡ ಒಬ್ಬರು. ಯಾಕೆಂದರೆ ಪ್ರಸ್ತುತ ಇವರ ಕೈಯಲ್ಲಿ ಐದು ಕನ್ನಡ ಚಿತ್ರಗಳಿವೆ!

ಕತೆಗಾರನಾದ ಪೃಥ್ವಿ
ದಿಯಾ ಎನ್ನುವ ಒಂದೇ ಒಂದು ಸಿನೆಮಾ ಪೃಥ್ವಿ ಅಂಬಾರ್ ಎನ್ನುವ ನಟನನ್ನು ನ್ಯಾಶನಲ್ ಸ್ಟಾರ್ ಮಾಡಿತು ಎನ್ನಬಹುದು. ಅದಕ್ಕೆ ಅಮೆಝಾನ್ ಪ್ರೈಮಲ್ಲಿ ಚಿತ್ರ ನೋಡಿ ಮೆಚ್ಚಿದಂತಹ ದೇಶದ ವಿವಿಧ ರಾಜ್ಯಗಳ ಜನರೇ ಸಾಕ್ಷಿ. ಅದಾಗಲೇ ‘ಫಾರ್ ರಿಜಿಸ್ಟ್ರೇಶನ್’ ಎನ್ನುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದ ಪೃಥ್ವಿಗೆ ಈಗ ಆ ಚಿತ್ರದಲ್ಲಿ ಜೋಡಿಯಾಗುವಾಕೆಯ ಹೆಸರನ್ನು ಕೂಡ ರಿವೀಲ್ ಮಾಡಲಾಗಿದೆ.

‘ದಿಯಾ’ ಚಿತ್ರದ ಜೊತೆಯಲ್ಲೇ ತೆರೆಕಂಡು ಹೆಸರು ಮಾಡಿದ ಮತ್ತೊಂದು ಚಿತ್ರ ‘ಲವ್ ಮಾಕ್ಟೇಲ್’. ಅದರ ನಾಯಕಿ ಮಿಲನಾ ನಾಗರಾಜ್ ಈ ಬಾರಿ ಪೃಥ್ವಿ ಅಂಬಾರ್‌ಗೆ ಜೋಡಿಯಾಗಲಿದ್ದಾರೆ. ಆದರೆ ಅದಕ್ಕೂ ಮುನ್ನ ಅಂಬಾರ್ ನಟಿಸುತ್ತಿರುವ ‘ಶುಗರ್‌ಲೆಸ್’ ಚಿತ್ರದ ಚಿತ್ರೀಕರಣ ಪೂರ್ತಿಯಾಗಬೇಕಿದೆ. ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅಂಬಾರ್, ‘‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಅದರ ಚಿತ್ರೀಕರಣ ಮುಗಿದಿರುತ್ತಿತ್ತು. ಆದರೆ ಲಾಕ್‌ಡೌನ್ ಇನ್ನಷ್ಟು ಹೊಸ ಚಿತ್ರಗಳ ಕುರಿತಾದ ಚರ್ಚೆಗೆ ವೇದಿಕೆ ನೀಡಿತು. ಹಾಗಾಗಿ ಹೊಸದಾದ ಮೂರು ಸಿನೆಮಾಗಳಿಗೆ ನಾಯಕನಾಗುವ ಅವಕಾಶ ಬಂದಿದೆ. ವೈವಿಧ್ಯತೆಯ ಪಾತ್ರಗಳನ್ನು ಆಯ್ಕೆ ಮಾಡುವತ್ತ ಗಮನಹರಿಸಿದ್ದೇನೆ. ಇದರ ನಡುವೆ ನಾನೇ ಒಂದು ಕತೆ ಬರೆದಿದ್ದೇನೆ’’ ಎಂದಿದ್ದಾರೆ. ಅಂದಹಾಗೆ ಪೃಥ್ವಿ ಬರೆದಿರುವ ಕತೆಯಲ್ಲಿ ಮತ್ತೆ ದಿಯಾ ಜೋಡಿಯೇ ಕಾಣಿಸಿಕೊಳ್ಳಲಿದ್ದಾರಂತೆ.

ಅಂದರೆ ಪೃಥ್ವಿಗೆ ದಿಯಾ ‘ಖುಷಿ’ ನಾಯಕಿಯಾಗಲಿದ್ದಾರೆ. ಇವಲ್ಲದೆ ಮಲಯಾಳಂನ ಜೋಡಿ ನಿರ್ದೇಶಕರಿಬ್ಬರು ಸೇರಿಕೊಂಡು ‘ಲೈಫ್ ಈಸ್ ಬ್ಯೂಟಿಫುಲ್’ ಎನ್ನುವ ಚಿತ್ರವನ್ನು ಪೃಥ್ವಿಗಾಗಿ ನಿರ್ದೇಶಿಸಲಿದ್ದಾರೆ! ಪೃಥ್ವಿ ಬರೆದಿರುವ ಕತೆಯು ಕರಾವಳಿಯ ಕಡಲ ತೀರದಲ್ಲಿ ನಡೆಯುವ ಘಟನೆಯನ್ನು ಆಧರಿಸಿದೆಯಂತೆ. ಉಡುಪಿ ಕಡಲ ತೀರದಲ್ಲಿ ಹುಟ್ಟಿ; ಕಾಸರಗೋಡು ಕಡಲ ತೀರವಾದ ಉಪ್ಪಳದಲ್ಲಿ ಬೆಳೆದ ಪೃಥ್ವಿ ಅಂಬಾರ್ ಕತೆಯಲ್ಲಿ ಕರಾವಳಿ ಇರಲೇ ಬೇಕಲ್ಲವೇ? ಹಾಗಂತ ಇದು ನೈಜ ಘಟನೆ ಅಲ್ಲವಂತೆ. ಆದರೆ ನೈಜತೆಯಿಂದ ಕೂಡಿದ ಕತೆ ಎಂದು ಭರವಸೆ ನೀಡುತ್ತಾರೆ. ಸ್ಥಳೀಯತೆಗೆ ಪ್ರಾಮುಖ್ಯತೆ ನೀಡಿರುವ ಕತೆಯಲ್ಲಿ ಪ್ರೀತಿ, ಪ್ರೇಮ, ಹಾಸ್ಯ ಎಲ್ಲವೂ ಇದೆ.

‘ಉಡುಪಿ ಕನ್ನಡ’ ಚಿತ್ರದ ವಿಶೇಷ ಆಕರ್ಷಣೆ ಎನ್ನುತ್ತಾರೆ ಪೃಥ್ವಿ. ಪೃಥ್ವಿಯವರು ವೀರಪ್ಪಅಂಬಾರ್ ಮತ್ತು ಸುಜಾತಾ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯವರು. ವರುಣ್ ಮತ್ತು ಅರುಣ್ ಇವರ ತಮ್ಮಂದಿರು. ಬಿಬಿಎಮ್ ಬಳಿಕ ಕಮ್ಯುನಿಕೇಶನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ವೃತ್ತಿ ಶುರು ಮಾಡಿದ್ದು ರೇಡಿಯೋ ಜಾಕಿಯಾಗಿ. ಆದರೆ ಇಂದು ಅವೇ ರೇಡಿಯೋಗಳು ಇವರ ಚಿತ್ರದ ಹಾಡನ್ನು ಪ್ರಸಾರ ಮಾಡುವಷ್ಟು ಪ್ರಥ್ವಿ ಬೆಳೆದಿದ್ದಾರೆ. ಪೃಥ್ವಿಗೆ ಗುಡ್‌ಲಕ್.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News