ಸರಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಂದ ಪರಿಸರ ಪೂರಕ ಪಿಪಿಇ ಕಿಟ್‍ ಸಂಶೋಧನೆ

Update: 2020-10-12 15:35 GMT

ಬೆಂಗಳೂರು, ಅ.12: ಸರಕಾರಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಂದ ಪರಿಸರಕ್ಕೆ ಪೂರಕವಾದ ಹಾಗೂ ಬಹುಬೇಗನೆ ಮಣ್ಣಿನಲ್ಲಿ ಕರಗಬಲ್ಲ ಹಸಿರು ಪಿಪಿಇ ಕಿಟ್‍ಗಳನ್ನು ಸಂಶೋಧಿಸಿದ್ದಾರೆ.

ರಾಜ್ಯದಲ್ಲಿ ಕೊರೋನ ಆರ್ಭಟ ಹೆಚ್ಚಾಗುತ್ತಲೇ ಇದ್ದು, ನಿತ್ಯ ಸಾವಿರಾರು ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇತ್ತ ಕೊರೋನ ವಿರುದ್ಧ ಹೋರಾಡಲು ವೈದ್ಯರು ಧರಿಸುವ ಪಿಪಿಇ ಕಿಟ್ ಬಳಕೆಯು ಹೆಚ್ಚಿದೆ. ಸೋಂಕಿತ ರೋಗಿಯ ಚಿಕಿತ್ಸೆಗೆ ಬಳಸಿ, ಬಳಿಕ ಎಸೆಯುವ ಈ ಪಿಪಿಇ ಕಿಟ್ ವಿಲೇವಾರಿ ಮಾಡುವುದು ಹಾಗೂ ಅದನ್ನ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಹಸಿರು ಪಿಪಿಇ ಕಿಟ್‍ಗಳನ್ನು ಸಂಶೋಧಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಪತಿ ಡಾ. ಎಸ್. ಸಚ್ಚಿದಾನಂದ, ಕೊರೋನದ ಈ ಕಾಲಘಟ್ಟದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು. ವೈದ್ಯರು, ಸಿಬ್ಬಂದಿ ವರ್ಗದವರು ಪಿಪಿಇ ಕಿಟ್ ಧರಿಸಲೇಬೇಕು. ಆದರೆ ಈ ಕಿಟ್ ಬಳಸಿದ ಬಳಿಕ ನಿಷ್ಕ್ರಿಯ ಮಾಡುವುದು ಬಹಳ ಮುಖ್ಯ. ಹೀಗಾಗಿ, ಐಡಿಯಾಥಾನ್ ಹೆಸರಲ್ಲಿ ಸುಮಾರು 200 ಸಂಶೋಧನಾ ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ 10 ಸಂಶೋಧನಾ ಪ್ರಸ್ತಾವನೆಯನ್ನು ಅಂತಿಮಗೊಳಿಸಿದ್ದು, ಅದರಲ್ಲಿ ಬೆಂಗಳೂರು ಸರಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಗ್ರೀನ್ ಪಿಪಿಇ ಕಿಟ್ ಐಡಿಯಾ ಕೂಡ ಒಂದಾಗಿತ್ತು ಎಂದು ತಿಳಿಸಿದರು.

ಕ್ಯಾಪ್ಸೂಲ್ ಸ್ಯಾನಿಟೈಸರ್?: ಕೊರೋನ ಬಂದ ಮೇಲೆ ಸ್ವಚ್ಛತೆ ಕಡೆ ಎಂದಿಗಿಂತಲೂ ಹೆಚ್ಚು ಗಮನ ಕೊಡಲಾಗುತ್ತಿದೆ. ಜನರು ಪ್ರತಿ ಗಂಟೆಗೊಮ್ಮೆ ಕೈ ಸ್ವಚ್ಛ ಮಾಡಿಕೊಳ್ತಿದ್ದಾರೆ. ಸೋಂಕು ಹತ್ತಿರಕ್ಕೆ ಬರದಂತೆ ನೋಡಿಕೊಳ್ಳಲು ಫೇಸ್ ಮಾಸ್ಕ್ ಹಾಗೂ ಸುರಕ್ಷಿತ ಅಂತರ ಎಷ್ಟು ಮುಖ್ಯವೋ, ಅಷ್ಟೇ ಕೈಗಳನ್ನ ಸ್ವಚ್ಛವಾಗಿ ಇಟ್ಟಕೊಳ್ಳುವುದು ಮುಖ್ಯ. ಹೀಗಾಗಿ ಮಾರುಕಟ್ಟೆಯಲ್ಲಿ ನೂರಾರು ಬಗೆಯ ಸ್ಯಾನಿಟೈಸರ್ ಗಳು ಬಂದಿವೆ. ಇದೀಗ ಕ್ಯಾಪ್ಸೂಲ್ ರೀತಿಯ ಸ್ಯಾನಿಟೈಸರ್‍ಅನ್ನು ಕೂಡ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. ವಿವಿಯ ಐಡಿಯಾಥಾನ್‍ನಲ್ಲಿ ಈ ಐಡಿಯಾವು ವಿಶೇಷವಾಗಿದ್ದು, ಜನರು ಮಾತ್ರೆ ರೂಪದ ಸ್ಯಾನಿಟೈಸರ್ ಅನ್ನ ಆರಾಮಾಗಿ ಎಲ್ಲಿ ಬೇಕಾದರೂ ಕ್ಯಾರಿ ಮಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News