ಖಾತೆ ಬದಲಾವಣೆ ಅಸಮಾಧಾನ: ಸಚಿವ ಶ್ರೀರಾಮುಲು ಮುನಿಸು ಶಮನಗೊಳಿಸಿದ ಸಿಎಂ ಬಿಎಸ್‍ವೈ

Update: 2020-10-13 10:46 GMT

ಬೆಂಗಳೂರು, ಅ. 13: ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಬಿ.ಶ್ರೀರಾಮುಲು ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮಾಜ ಕಲ್ಯಾಣ ಖಾತೆಯನ್ನು ಒಪ್ಪಿಕೊಂಡು ಕೆಲಸ ಮಾಡುವಂತೆ ಇಂದಿಲ್ಲಿ ಮನವೊಲಿಸಿದ್ದಾರೆ.

ಮಂಗಳವಾರ ಇಲ್ಲಿನ ತಮ್ಮ ನಿವಾಸಕ್ಕೆ ಬಿ.ಶ್ರೀರಾಮುಲು ಮತ್ತು ಡಾ.ಕೆ.ಸುಧಾಕರ್ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ್ದು, `ರಾಜ್ಯ ಸರಕಾರ ಕೊರೋನ ಸಂಕಷ್ಟದ ಮಧ್ಯೆ ಮುನ್ನಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕಿದೆ. ಇಂತಹ ಸಂದರ್ಭದಲ್ಲಿ ಅಸಮಾಧಾನ ಸರಿಯಲ್ಲ. ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಮಾತ್ರವಲ್ಲ ಇದು ವಿಪಕ್ಷಗಳಿಗೆ ಅಸ್ತ್ರವಾಗಲಿದೆ' ಎಂದು ಮನವೊಲಿಕೆ ಮಾಡಿದ್ದಾರೆಂದು ಗೊತ್ತಾಗಿದೆ.

ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಶ್ರೀರಾಮುಲು, `ಸಂಕಷ್ಟದ ಅವಧಿಯಲ್ಲಿ ತನ್ನ ಖಾತೆ ಬದಲಾವಣೆ ಮಾಡಿದ್ದು, ಜನರಿಗೆ ತನ್ನ ಬಗ್ಗೆ ತಪ್ಪು ಭಾವನೆ ಬರಲಿದೆ. ಹೀಗಾಗಿ ತನಗೆ ನೀಡಿರುವ ಹೊಸ ಖಾತೆ ಒಪ್ಪಿಕೊಳ್ಳುವುದಿಲ್ಲ, ವರಿಷ್ಠರ ಬಳಿ ಹೋಗಿ ತಮ್ಮ ಅಳಲು ತೋಡಿಕೊಳ್ಳಲು ತೀರ್ಮಾನಿಸಿದ್ದೇನೆ' ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಇದನ್ನು ಅರಿತ ಬಿಎಸ್‍ವೈ, ಶ್ರೀರಾಮುಲು ಅವರನ್ನು ಕರೆಸಿಕೊಂಡು ಅವರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾಗಿ ಕಾರ್ಯ: `ನಾನು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಕೇಳಿದ್ದೆ. ಹಲವು ಕಾರಣದಿಂದ ನನಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಸಿಎಂ ನೀಡಿದ್ದರು. ಇದೀಗ ನನಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದು ಸಂತೋಷವಾಗಿದೆ. ನನಗೆ ಯಾವುದೇ ಅಸಮಾಧಾನವಿಲ್ಲ' ಎಂದು ಸಿಎಂ ಸಂಧಾನದ ಬಳಿಕ ಸಚಿವ ಶ್ರೀರಾಮುಲು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.

`ಡಾ.ಕೆ.ಸುಧಾಕರ್ ಸ್ವತಃ ವೈದ್ಯರಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊರೋನ ವಿರುದ್ದ ಹೋರಾಟದಲ್ಲಿ ಸುಧಾಕರ್ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ. ಈ ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಸಿಎಂ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಇದೇ ವೇಳೆ ಶ್ರೀರಾಮುಲು ತಿಳಿಸಿದರು.

ರಾಮುಲುಗೆ ದೊಡ್ಡ ಜವಾಬ್ದಾರಿ: ಸಚಿವ ಶ್ರೀರಾಮುಲು ಅವರು ನನಗಿಂತ ಹಿರಿಯರು. ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಕೆಳಹಂತದಲ್ಲಿ ಸಮನ್ವಯದ ಕೊರತೆ ಇದ್ದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪನವರು ಖಾತೆ ಬದಲಾವಣೆ ತೀರ್ಮಾನ ಮಾಡಿದ್ದಾರೆ' ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

`ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಬಹುದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ್ದಾರೆ. ಶ್ರೀರಾಮುಲು ಅವರಿಗೆ ಯಾವುದೇ ರೀತಿಯಲ್ಲಿಯೂ ಹಿನ್ನಡೆಯಾಗಿಲ್ಲ, ಬದಲಿಗೆ ಭಡ್ತಿ ಸಿಕ್ಕಿದೆ' ಎಂದು ಸುಧಾಕರ್ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News