ಹಿರೀಕರ ಹಬ್ಬದ ಅಡುಗೆ

Update: 2020-10-19 19:30 GMT

ಸೆಪ್ಟಂಬರ್, ಅಕ್ಟೋಬರ್ ದಿನಗಳು ಬಂತೆಂದರೆ ಹಬ್ಬಗಳ ಸಾಲು ಸಿದ್ಧ. ಹಬ್ಬವೆಂದರೆ ಹೊಸ ಬಟ್ಟೆ, ವಿವಿಧ ಬಗೆಯ ಅಡುಗೆ ಊಟ ಸಂಭ್ರಮ ಎಂದೇ ಅರ್ಥ. ಉಳಿದ ದಿನಗಳ ಪಾಡು ವರ್ಷ ವಿಡೀ ಇದ್ದದ್ದೇ. ಸಂಕ್ರಾಂತಿ ಬಂತೆಂದರೆ ಪೊಂಗಲ್, ಕಿಚಡಿ ಯುಗಾದಿ ಬಂದರೆ ಹೋಳಿಗೆ, ದೀಪಾವಳಿ ಬಂದರೆ ಕಜ್ಜಾಯ, ರಮಝಾನ್‌ನಲ್ಲಿ ಬಿರಿಯಾನಿ, ಕ್ರಿಸ್ಮಸ್‌ನಲ್ಲಿ ಕೇಕ್ ಹೀಗೆ ಹಲವು ಹಬ್ಬಗಳು ವಿಶೇಷವಾದ ಅಡುಗೆ ಮತ್ತು ತಿನಿಸುಗಳ ಜೊತೆಗೆ ತಳುಕು ಹಾಕಿಕೊಂಡಿವೆ. ಇವುಗಳಲ್ಲಿ ಜಾತಿ ಧರ್ಮಗಳು ಕೂಡ ಅಂಟಿಕೊಂಡಿವೆ ಎಂಬುದು ನಿರ್ವಿವಾದದ ಮಾತು. ಈ ಉಪಖಂಡದ ಪ್ರತಿ ಸಂಗತಿಯೂ ಜಾತಿಯ ಚೌಕಟ್ಟುಗಳಲ್ಲೇ ನಿರೂಪಿತವಾಗಿವೆ. ಆದಾಗ್ಯೂ ಅಂತಹ ಚೌಕಟ್ಟು ಒಡೆದು ಜನರ ಬೆಸೆಯುವ ಸಂಸ್ಕೃತಿಯೂ ಕೂಡ ಅದರ ಜೊತೆಗೆ ಹುಟ್ಟಿಬಂದಿದೆ. ಹಬ್ಬದ ಸಿಹಿಗಳನ್ನು ಹಂಚಿಕೊಳ್ಳುವುದು, ನೆಂಟರನ್ನು - ಪರಿಚಿತರನ್ನು ಊಟಕ್ಕೆ ಆಹ್ವಾನಿಸುವುದು ತಾವು ಅವರ ಮನೆಗೆ ಹೋಗಿ ಆತಿಥ್ಯ ಸ್ವಿಕರಿಸುವುದು ಮುಂತಾದ ನಡಿಗೆಗಳು ಸಾಮರಸ್ಯದ ನಮ್ಮ ಭರವಸೆಯನ್ನು ಜೀವಂತವಾಗಿಟ್ಟಿವೆ.

ಹಳೇ ಮೈಸೂರು ಭಾಗದಲ್ಲಿ ದಸರಾ ಬಹಳ ಪ್ರಸಿದ್ಧಿಯಾದರೂ ಅದು ಮೈಸೂರು ನಗರಕ್ಕೆ ಸೀಮಿತ. ಆ ಭಾಗದ ಇತರ ನಗರ-ಹಳ್ಳಿಗಳಲ್ಲಿ ಅಂತಹ ಆಚರಣೆಗಳು ಇರುವುದಿಲ್ಲ. ಕೆಲವು ದೇವಸ್ಥಾನಗಳಲ್ಲಿ ನಡೆಯುವ ನವರಾತ್ರಿ ಪೂಜೆಗಳನ್ನು ಹೊರತುಪಡಿಸಿ. ದಸರಾ ಆರಂಭಕ್ಕೂ ಮುನ್ನ ಬರುವ ಪಿತೃಪಕ್ಷ ನಮಗೆ ಹೆಚ್ಚು ಪ್ರಿಯ. ಕಾರಣ ಅದು ನಮಗೆ ತಿಂಡಿ ಹಬ್ಬ, ಹಿರಿಯರಿಗೆ ಅವರ ಹಿರೀಕರ ನೆನೆದುಕೊಳ್ಳುವ ಹಬ್ಬ. ಮೈಸೂರಿನ ದಸರಾ ಸುದ್ದಿಯಾಗಿ ಅಷ್ಟೇ ನಮ್ಮನ್ನು ತಲುಪುತ್ತಿರುತ್ತದೆ, ಆದರೆ ಪಿತೃಪಕ್ಷ ಮಾತ್ರ ನಮ್ಮ ಬುದ್ಧಿ ನಾಲಗೆ ಮತ್ತು ಹೊಟ್ಟೆ ಎಲ್ಲ ಕಡೆಯೂ ಪಾದರಸದ ಹಾಗೆ ಓಡಾಡುತ್ತಾ ಹಬ್ಬದ ಊಟಕ್ಕೆ ಕಾಯುತ್ತಿರುತ್ತದೆ. ಪಿತೃಪಕ್ಷ ಎನ್ನುವುದು ಕುಟುಂಬದ ಸತ್ತು ಹೋದ ಪೂರ್ವಿಕರನ್ನು ನೆನೆದು ಅವರ ಹೆಸರಿನಲ್ಲಿ ಎಡೆಯಿಟ್ಟು, ಧೂಪ ಹಾಕುವುದು ಇಲ್ಲಿನ ಜನರ ಸಂಪ್ರದಾಯ. ಇಂತಹ ಸಂಪ್ರದಾಯವು ವರ್ಷವಿಡೀ ಬೇರೆ ಬೇರೆ ದಿನಗಳಲ್ಲಿ ನಡೆಯುತ್ತಲೇ ಇರುತ್ತದೆ. ಕೆಲವರು ಸಂಕ್ರಾತಿಗೆ, ಕೆಲವರು ಯುಗಾದಿ, ಗೌರಿ ಹಬ್ಬಕ್ಕೆ, ಇನ್ನು ಕೆಲವರು ದೀಪಾವಳಿಗೆ ಎಡೆ ಇಡುವುದು ಉಂಟು. ಆದರೆ ಪಿತೃಪಕ್ಷ ಹೊರತಾದ ಎಲ್ಲ ಸಂದರ್ಭಗಳಲ್ಲು ಸಸ್ಯಾಹಾರದ ಊಟವೇ ಪ್ರಧಾನವಾಗಿರುತ್ತದೆ. ಆದರೆ ಪಿತೃಪಕ್ಷದಲ್ಲಿ ಬಹುತೇಕ ಮಾಂಸಾಹಾರದ ಅಡುಗೆ ಹೆಚ್ಚು ಜನಪ್ರಿಯ ಮತ್ತು ರೂಢಿಗತ.

ಹಬ್ಬದ ಸಂಭ್ರಮ ತಿಂಗಳಿಗೂ ಮೊದಲೇ ಶುರುವಾಗಿ ಬಿಡುತ್ತದೆ. ಅಡುಗೆಗಾಗಿ ಹೊಸದಾದ ಸಾಂಬಾರ ಪುಡಿ ಮಾಡಿಸುವುದು ಅದರಲ್ಲಿ ಮುಖ್ಯವಾದುದು. ನಮ್ಮಲ್ಲಿ ತರಕಾರಿ ಮತ್ತು ಮಾಂಸ ಎರಡಕ್ಕೂ ಒಂದೇ ರೀತಿಯ ಸಾಂಬಾರ ಪುಡಿ ಬಳಸುವುದಿಲ್ಲ. ಎರಡಕ್ಕೂ ಬಳಸುವ ದನಿಯ, ಒಣಮೆಣಸಿನಕಾಯಿ ಮತ್ತಿತರ ಸಾಮಗ್ರಿಗಳಲ್ಲಿ ಬಹುತರನಾದ ವ್ಯತ್ಯಾಸಗಳಿವೆ. ಬೇಕಾಗುವ ಖಾರ, ಬಣ್ಣ ಮತ್ತು ರುಚಿ ಬೇರೆ ಬೇರೆ. ಅಲ್ಲದೆ ಮಾಂಸಾಹಾರದ ಪುಡಿಯನ್ನು ವರ್ಷ ಪೂರ್ತಿ ಇಟ್ಟು ಬಳಸಲಾಗದು. ಹುಳ ಬಂದು ಹಾಳಾಗಿ ಬಿಡುತ್ತದೆ. ಹಾಗಾಗಿ ಹಬ್ಬದ ಹೊತ್ತಿನಲ್ಲಿ ಹೆಚ್ಚು ಪುಡಿ ಮಾಡಿಸುವುದು ವಾಡಿಕೆ. ಸಾಂಬಾರ ಪದಾರ್ಥಗಳನ್ನು ತಂದು ಒಣಗಿಸಿ ಹದವಾಗಿ ಹುರಿದು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಪ್ಲೋರ್ ಮಿಲ್ಲುಗಳಲ್ಲಿ ಪುಡಿ ಮಾಡಿಸಲಾಗುತ್ತದೆ. ಈ ಸಮಯದಲ್ಲಿ ಮಿಲ್ಲುಗಳು ದಿನವಿಡೀ ಬರ್ರೋ ಎಂದು ಮಿಶಿನುಗಳನ್ನು ಓಡಿಸುತ್ತಿರುತ್ತವೆ. ಮಿಲ್ಲು ಇರುವ ಬೀದಿಗಳು ಸಾಂಬಾರ ಪುಡಿ ಘಮದಿಂದ ತುಂಬಿ ಹೋಗಿರುತ್ತವೆ.

ಈ ಪುಡಿಯು ಒಂದೊಂದು ಮನೆತನಗಳು ಅನುಸರಿಸಿಕೊಂಡು ಬಂದಿರುವ ಪದಾರ್ಥಗಳ ಪರಿಮಾಣದ ಮೇಲೆ ಅವಲಂಬಿತವಾದ ರುಚಿಯನ್ನು ಕೊಡುತ್ತವೆ. ಬಣ್ಣ ಕೂಡ ಬದಲಾಗುತ್ತದೆ. ಕೆಲವರ ಪುಡಿಯು ಹೆಚ್ಚು ಅರಿಶಿಣವಾಗಿದ್ದರೆ, ಹಲವರಲ್ಲಿ ಕಡುಗೆಂಪು ಬಣ್ಣ ಉಳ್ಳದ್ದಾಗಿರುತ್ತದೆ. ಇಂತಹ ಬಣ್ಣದ ಕಾರಣಕ್ಕಾಗಿಯೇ ಬ್ಯಾಡಗಿ ಮೆಣಸಿನಕಾಯಿ ಬಳಸುತ್ತಾರೆ. ಈ ಪುಡಿಯ ಜೊತೆಗೆ ಹಬ್ಬದ ತಿನಿಸುಗಳನ್ನು ಮಾಡುವ ಬೇರೆ ಬೇರೆ ಹಿಟ್ಟುಗಳು ಕೂಡ ಸಿದ್ಧವಾಗಬೇಕು. ಅವನ್ನೆಲ್ಲಾ ಮನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ. ಒಂದೊಂದು ಮನೆಯೂ ಇಪ್ಪತ್ತು-ಮೂವತ್ತು ಮನೆಗಳಿಗೆ ಆಗುವಷ್ಟು ಸಿಹಿ ಮತ್ತು ಕುರುಕು ತಿಂಡಿಗಳನ್ನು ಮಾಡುತ್ತವೆ. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಚಿರೋಟಿ, ಕರ್ಜಿಕಾಯಿ, ಎಳ್ಳು ಉಂಡೆ, ಮಸಾಲೆ ವಡೆ ಮತ್ತು ಕಜ್ಜಾಯ ಇವುಗಳಲ್ಲಿ ಮುಖ್ಯವಾದುವು. ಅದಕ್ಕಾಗಿ ನೆನೆಸಿ ಒಣಗಿಸಿದ ಅಕ್ಕಿ, ಕಡಲೆ, ಉದ್ದು ಮೊದಲಾದ ಪದಾರ್ಥಗಳ ಹಿಟ್ಟು, ಮುದ್ದೆ ಮಾಡಲು ಬೇಕಾದ ರಾಗಿ ಹಿಟ್ಟು ಮೊದಲಾದವು ಸಿದ್ಧವಾಗಬೇಕು. ಹಾಗಾಗಿ ಹಬ್ಬದ ಮೊದಲ ಮೂರು ನಾಲ್ಕು ವಾರಗಳು ಪದಾರ್ಥಗಳ ಕೊಳ್ಳುವಿಕೆ, ಹದ ಮಾಡುವುದು, ಹಿಟ್ಟು ಮಾಡುವ ಕಾರ್ಯಗಳಲ್ಲಿ ನಿರತವಾಗಿರುತ್ತವೆ.

ಸಿದ್ಧವಾದ ಸಾಂಬಾರ ಪುಡಿಯನ್ನು ಬಾಕ್ಸ್‌ಗಳಲ್ಲಿ ಇಂಗು, ಕರಿಬೇವಿನ ಜೊತೆಗೆ ಮುಚ್ಚಿಟ್ಟು ಉಳಿದ ತಿನಿಸುಗಳ ಕಾರ್ಯದಲ್ಲಿ ಮುಳುಗಿ ಬಿಡುತ್ತ್ತಾರೆ. ಮೊದಮೊದಲಿಗೆ ಗಟ್ಟಿಯಾದ ಕುರುಕು ತಿಂಡಿಗಳು ಸಿದ್ಧವಾಗುತ್ತವೆ. ಹದವಾದ ನೀರು, ತುಪ್ಪಗಳ ಮಿಶ್ರಣದಲ್ಲಿ ಕಲಸಿದ ಹಿಟ್ಟನ್ನು ವಿವಿಧಾಕಾರದ ಚಕ್ಕುಲಿ ಒರಳುಗಳಲ್ಲಿ ಒತ್ತಿಕೊಂಡು ಎಣ್ಣೆಯಲ್ಲಿ ಕರಿಯಬೇಕು, ಅದು ಮುಗಿದ ಮೇಲೆ ಅದೇ ತರಹದ ಹಿಟ್ಟಿನಲ್ಲಿ ಪುಟ್ಟದಾಗಿ ತಟ್ಟಿದ ನಿಪ್ಪಟ್ಟು, ಕೈಯಲ್ಲಿ ಹೊಸೆದು ನುಲಿದ ಕೋಡುಬಳೆ ಹೀಗೆ ಹಂತ ಹಂತವಾಗಿ ತಿಂಡಿ ಸಿದ್ಧವಾಗುತ್ತದೆ. ಈಚೆಗೆ ಇಂತಹ ತಿಂಡಿಗಳನ್ನು ಮಾಡುವ ಪ್ರಮಾಣ ಕಡಿಮೆಯಾಗಿದೆ. ಎರಡು ದಶಕಗಳ ಹಿಂದೆ ನನ್ನ ಬಾಲ್ಯದಲ್ಲಿ ಕಂಡಿದ್ದಷ್ಟು ತಿಂಡಿಗಳ ಪ್ರಮಾಣ ಈಗ ಇಲ್ಲವೇ ಇಲ್ಲ. ಮನೆ ಮನೆಯ ಅಂಗಳ, ಪಡಸಾಲೆ, ಕೊಟ್ಟಿಗೆಗಳಲ್ಲಿ ಸೌದೆ ಓಲೆ, ಸೀಮೆ ಎಣ್ಣೆ ಸ್ಟವ್‌ಗಳ ಮೇಲೆ ದೊಡ್ಡ ದೊಡ್ಡ ಬಾಣಲೆಗಳನ್ನು ಇಟ್ಟುಕೊಂಡು ಜಾತ್ರೆಯಲ್ಲಿ ಅಡುಗೆ ಮಾಡುವ ತರದಲ್ಲಿ ತಿಂಡಿ ಬೇಯಿಸುತ್ತಿದ್ದರು. ಅವುಗಳನ್ನು ತುಂಬಿಡಲು ಕೂಡ ದೊಡ್ಡ ಪಾತ್ರೆಗಳು, ಗುಡಾಣಗಳು ಇದ್ದುವು. ಹೀಗೆ ಬೇಯಿಸುವ ತಿಂಡಿಗಳನ್ನು ಎಡೆಗೆ, ಸಂಬಂಧಿಕರಿಗೆ ಕೊಡಲೆಂದು ಬಹಳಷ್ಟು ಎತ್ತಿಟ್ಟು ಉಳಿದ ಮುರುಕುಗಳನ್ನು ಮಾತ್ರ ಮಕ್ಕಳು ತಿನ್ನಲು ಕೊಡುತ್ತಿದ್ದರು. ತಿಂಡಿ ತುಂಬಿರುವ ಜಾಗಕ್ಕೆ ಮಕ್ಕಳು ಹೋಗುವುದು ಕೂಡ ನಿಷೇಧ. ಆದಾಗ್ಯೂ ಕದ್ದು ತಿಂದ ಘಟನೆಗಳು ಅದೆಷ್ಟು ಇಮೋ! ಇವುಗಳಲ್ಲಿ ತುಂಬಾ ಸಂಕೀರ್ಣವೂ, ಸಮೃದ್ಧ್ದವೂ ಆದ ತಿನಿಸು ‘ಕಜ್ಜಾಯ’.

ಆದರೆ ಅದನ್ನು ಮಾಡುವ ವಿಧಾನದಲ್ಲಿ ಚೂರು ಏರುಪೇರಾದರೆ ಮುಗೀತು. ಆ ಕಜ್ಜಾಯದ ಅವಸ್ಥೆ ಹೇಳತೀರದು. ಸಕ್ಕರೆಯ ಬಿಳಿ ಕಜ್ಜಾಯ ಮತ್ತು ಬೆಲ್ಲದ ಕೆಂಪು ಕಜ್ಜಾಯ ಎರಡೂ ಚಾಲ್ತಿಯಲ್ಲಿವೆ. ಆದರೆ ಕಜ್ಜಾಯ ಎಂದರೆ ಹೆಚ್ಚು ಜನಪ್ರಿಯವಾಗಿರುವುದು ‘ಕಂದು ಬಣ್ಣದ’ ಬೆಲ್ಲದ ಕಜ್ಜಾಯವೇ. ದೊಡ್ಡ ಪಾತ್ರೆಯ ತಳದಲ್ಲಿ ಬಿದಿರು ಕಡ್ಡಿಗಳ ಜೋಡಿಸಿ ಆದರೆ ಮೇಲೆ ಕಜ್ಜಾಯಗಳ ಜೋಡಣೆ. ಹಬ್ಬ ಮುಗಿದು ತಿಂಡಿ ಖಾಲಿಯಾಗುವಾಗ ನೋಡಿದರೆ ತಳದ ತುಂಬಾ ಸೋರಿ ನಿಂತ ಎಣ್ಣೆ! ಈ ಎಲ್ಲ ತಿಂಡಿಗಳ ಜೊತೆಗೆ ಪೂರ್ವಿಕರ ಮತ್ತು ಈಚಿನ ತಲೆಮಾರುಗಳಲ್ಲಿ ತೀರಿಹೋದ ಜನರು ಇಷ್ಟಪಡುತ್ತಿದ್ದ ಪಾಯಸ, ಜಾಮೂನು, ಮೈಸೂರು ಪಾಕು, ಜಿಲೇಬಿ ಹಾಗೆಯೆ ವಿವಿಧ ತರಹದ ಹಣ್ಣುಗಳು, ಸಿಹಿ ಮಿಠಾಯಿಗಳು, ಕಬ್ಬು, ಎಳನೀರು, ಕಡಲೆಪುರಿ (ಮಂಡಕ್ಕಿ) ಎಲ್ಲವನ್ನೂ ಎಡೆಗೆ ಇಡಲಾಗುತ್ತದೆ. ಇದೆಲ್ಲವನ್ನು ಜೋಡಿಸಲು ನಾಲ್ಕೈದು ದೊಡ್ಡ ಬಾಳೆಲೆ ಬೇಕು. ಸಿದ್ಧವಾದ ತಿಂಡಿ ತಿನಿಸುಗಳ ಪಟ್ಟಿ ಒಂದಾದರೆ, ಅಂದು ಮಾಡುವ ಅಡುಗೆಯ ಪಟ್ಟಿಯೇ ಬೇರೆ. ಈ ಪಿತೃಪಕ್ಷದ ಎಡೆಹಬ್ಬವನ್ನು ಹಲವು ಜಾತಿ, ಮತದವರು ಮಾಡುವುದರಿಂದ ಅವರವರ ಸಮುದಾಯದ ಆಹಾರ ಕ್ರಮವನ್ನೇ ಇಲ್ಲೂ ಅನುಸರಿಸಲಾಗುತ್ತದೆ. ಸ್ವತಃ ಮಾಂಸಾಹಾರಿ ಆಗಿರುವವರು ಕೂಡ ಎಡೆಗೆ ಮಾಂಸ ಇಡುವುದಿಲ್ಲ.

ಕೆಲವರು ಮಾಂಸದ ಹೊರತಾಗಿ ಬೇರೆ ಏನೂ ಇಡುವುದಿಲ್ಲ. ಕೆಲವರು ನಾನಾ ಬಗೆಯ ಆಹಾರವನ್ನು ಇಡುತ್ತಾರೆ ಮತ್ತು ನೆಂಟರಿಷ್ಟರಿಗೆ ಬಡಿಸುತ್ತಾರೆ. ಇಷ್ಟೆಲ್ಲಾ ವೈರುಧ್ಯಗಳು ಇದ್ದೂ ಹೆಚ್ಚು ಚಾಲ್ತಿಯಲ್ಲಿರುವ ಅಡುಗೆ ಮಾಂಸಾಹಾರವೇ ಆಗಿದೆ. ಸಸ್ಯಾಹಾರವು ಒಂದೆರಡು ಪಲ್ಯ, ಅನ್ನ ಸಾರು, ಪಾಯಸ, ವಡೆ, ಸಿಹಿತಿನಿಸು, ಮಜ್ಜಿಗೆಗಳಿಗೆ ಮುಗಿದು ಹೋದರೆ ಮಾಂಸಾಹಾರವು ಹಲವು ತರಹದ ಅಡುಗೆ ಆಗಬೇಕಾಗುತ್ತದೆ ಮತ್ತು ವ್ಯಕ್ತಿಗೆ ಇಷ್ಟವಾಗಿದ್ದ ಮಾಂಸದ ಭಾಗಗಳನ್ನೂ ಕೂಡ ಎಡೆಗೆ ಇಡಲಾಗುತ್ತದೆ. ಎಡೆಗೆ ಹೆಚ್ಚು ಬಳಕೆ ಆಗುವುದು ಕುರಿಮಾಂಸ ಮಾತ್ರ. ಕುರಿಯ ತಲೆಮಾಂಸ, ಕಾಲಿಂದ ಮಾಡಿದ ಕಾಲು ಸೂಪು, ಲಿವರ್ ಫ್ರೈ, ಮೆದುಳು ಫ್ರೈ, ಬೇರೆ ಬೇರೆ ಅಂಗಾಂಗಗಳನ್ನು ಕತ್ತರಿಸಿ, ತರಕಾರಿ ಮಸಾಲೆಗಳನ್ನೂ ಸೇರಿಸಿ ಮಾಡಿದ ಬೋಟಿ ಗೊಜ್ಜು, ಮಾಂಸದ ಸಾರು, ರಾಗಿ ಮುದ್ದೆ, ಅನ್ನ ಬಹಳ ಮುಖ್ಯವಾಗಿ ಅವತ್ತು ಎಡೆಗೆ ಮತ್ತು ಊಟಕ್ಕೆ ಮಾಡುವ ಅಡುಗೆ ಆಗಿರುತ್ತದೆ.

ಎಡೆಗೆ ಫಾರಂಗಳಲ್ಲಿ ಬೆಳೆದ ಹೈಬ್ರಿಡ್ ಕೋಳಿಯ ಮಾಂಸವನ್ನು ಬಳಸಲು ಹಲವು ಕಟ್ಟುಪಾಡುಗಳು ಇವೆ. ಹಾಗಾಗಿ ಬಳಸುವುದು ತೀರ ಕಡಿಮೆ. ಬಳಸಿದರೂ ನಾಟಿಕೋಳಿಗೆ ಹೆಚ್ಚು ಪ್ರಾಶಸ್ತ್ಯ. ಆದರೆ ಮನೆಯವರ ಮತ್ತು ನೆಂಟರಿಷ್ಟರ ಊಟಕ್ಕೆ ಆ ದಿನ ಕೋಳಿ, ಮೀನು ಮೊದಲಾದ ಮಾಂಸ, ತರಕಾರಿ, ಸೊಪ್ಪುಗಳನ್ನು ಬಳಸಲಾಗುತ್ತದೆ. ಹಿರೀಕರ ಹಬ್ಬದಲ್ಲಿ ಬಹುತರಹದ ಅಡುಗೆಗಳು, ತಿನಿಸುಗಳು, ಪದ್ಧತಿಗಳು ಇವೆ. ಕಾಲ ಬದಲಾದಂತೆ ಆಚರಣೆಯ ವೈಭವ, ಜನಸ್ತೋಮ ಕಡಿಮೆ ಆಗಿದ್ದು ಉಂಟು. ಆದರೆ ಅದರಲ್ಲಿರುವ ಬಹುತರದ ಆಹಾರ ಸಂಸ್ಕೃತಿಗಳನ್ನು ಒಳಗೊಳ್ಳುವ ಮನಃಸ್ಥಿತಿ ನಮಗೆಲ್ಲಾ ನೆನಪಾಗಬೇಕಿದೆ. ಇದೇ ತರಹ ಹಿರೀಕರ ಹಬ್ಬವನ್ನು ಕೊರಿಯನ್ನರು ಕೂಡ ‘ಜೆಸಾ ದಿನ’ ಎಂದು ಆಚರಿಸುತ್ತಾರೆ 

Writer - ರಾಜೇಂದ್ರ ಪ್ರಸಾದ್

contributor

Editor - ರಾಜೇಂದ್ರ ಪ್ರಸಾದ್

contributor

Similar News