ಮನೆಯ ಆವರಣದ ಸಂಪ್‍ನಲ್ಲಿ ಮಹಿಳೆಯ ಶವ ಪತ್ತೆ
Update: 2020-11-05 12:30 GMT
ಬೆಂಗಳೂರು, ನ.5: ಮನೆಯ ಆವರಣದ ಸಂಪ್‍ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಕೆಲಸ ಮಾಡುತ್ತಿದ್ದ ಸಾಕಮ್ಮ(57) ಎಂಬಾಕೆ ಮೃತಪಟ್ಟ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಸರಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಇರುವ ಉದ್ಯಮಿಯೊಬ್ಬರ ಮನೆಯಲ್ಲಿ ಈಕೆ ಕೆಲಸ ಮಾಡುತ್ತಿದ್ದರು. ದುರ್ವಾಸನೆ ಬರುತ್ತಿರುವುದನ್ನು ಮನೆಯ ಸಿಬ್ಬಂದಿ ಗಮನಿಸಿ, ನೀರಿನ ಸಂಪ್ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ತಾಯಿ ಕಾಣೆಯಾಗಿದ್ದಾರೆ ಎಂದು ಮೃತರ ಮಗ ಎರಡು ದಿನದ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಸಾಕಮ್ಮ ಕಾಲು ಜಾರಿ ಸಂಪ್‍ನೊಳಗೆ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಪ್ರಕರಣ ದಾಖಲಿಸಿರುವ ಬಾಗಲಗುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.