ಬೊಲಿವಿಯಾದಲ್ಲಿನ ಬೆಳವಣಿಗೆಯಿಂದ ಗ್ರಹಿಸಬೇಕಾದ ಪಾಠಗಳು

Update: 2020-11-28 19:30 GMT

ಬೊಲಿವಿಯಾದ ಎಲ್ಲಾ ಬೆಳವಣಿಗೆಗಳನ್ನು ನಮ್ಮಂತಹ ದೇಶಗಳ ಜನಸಾಮಾನ್ಯರು ಸರಿಯಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಒಂದು ಜನಪರ, ನೈಜ ಪ್ರಜಾತಾಂತ್ರಿಕ, ದೇಶಪ್ರೇಮಿ ವ್ಯವಸ್ಥೆಯನ್ನು ಒಂದು ಜನಪರ ಪಕ್ಷ ಇಲ್ಲವೇ ಜನಪರ ವ್ಯಕ್ತಿಯನ್ನೋ ಚುನಾಯಿಸಿ ಕಳುಹಿಸುವುದರಿಂದ ಮಾತ್ರ ಸಾಧಿಸಲು ಇಲ್ಲವೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸೇನೆ, ಪೊಲೀಸ್ ಸೇರಿದಂತೆ ಆಡಳಿತದ ಎಲ್ಲಾ ಅಂಗಗಳಲ್ಲೂ ಮೂಲಭೂತವಾಗಿ ಜನಪರವಾದ ನೈಜ ಪ್ರಜಾತಾಂತ್ರಿಕ ಬದಲಾವಣೆ ಆಗಬೇಕು. ಜನಪರ ಹಾಗೂ ದೇಶಪರ ವ್ಯವಸ್ಥೆಯೊಂದರ ನಿರ್ಮಾಣ ಹಾಗೂ ಉಳಿಯುವಿಕೆಗೆ ಅದು ಬಲವಾದ ಒಂದು ಪೂರ್ವಶರತ್ತಾಗಿದೆ.


ಲ್ಯಾಟಿನ್ ಅಮೆರಿಕದ ರಾಷ್ಟ್ರ, ಚೆಗುವಾರರ ಕೊನೆಗಾಲದ ಕರ್ಮಭೂಮಿ ಬೊಲಿವಿಯಾ ಇದೇ ನವೆಂಬರ್ ಆರರಂದು ಮತ್ತೊಂದು ಸುದ್ದಿಗೆ ಕಾರಣವಾಗಿತ್ತು. ಅಲ್ಲಿ ಇತ್ತೀಚೆಗೆ ಚುನಾಯಿತರಾದ ಅಧ್ಯಕ್ಷರ ಮೇಲೆಯೇ ಬಾಂಬ್ ದಾಳಿ ನಡೆದಿತ್ತು. ಅಧ್ಯಕ್ಷರಾಗಿ ಚುನಾಯಿತರಾಗಿರುವ ಲೂಯಿಸ್ ಆರ್ಸ್ (Luis Arce) ತಮ್ಮ ಪಕ್ಷವಾದ ‘ಮೂವ್‌ಮೆಂಟ್ ಫಾರ್ ಸೋಷಿಯಲಿಸಂ’ (MAS)ನ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಎರಡು ದಿನಗಳಿರುವಾಗ ನಡೆದ ಈ ಘಟನೆಯಲ್ಲಿ ಯಾರಿಗೂ ಗಂಭೀರ ಅಪಾಯವೇನೂ ಸಂಭವಿಸಲಿಲ್ಲ. ಸುಮಾರು ಹನ್ನೊಂದುವರೆ ದಶಲಕ್ಷ ಜನಸಂಖ್ಯೆಯಿರುವ ಬೊಲಿವಿಯಾದಲ್ಲಿ ಕಳೆದ ವರ್ಷ ಚುನಾವಣೆ ನಡೆದು ಇವೋ ಮೊರೆಲ್ಸ್ ಭಾರೀ ಬಹುಮತದಿಂದ ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದರು. ಆದರೆ ಅಮೆರಿಕ ಮೊದಲಾದ ಸಾಮ್ರಾಜ್ಯಶಾಹಿ ಶಕ್ತಿಗಳು ಮತ್ತವರ ಏಜೆಂಟರುಗಳ ಮಸಲತ್ತಿನಿಂದಾಗಿ, ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ, ಮೊರೆಲ್ಸ್ ಪುನರಾಯ್ಕೆ ಸಿಂಧುವಲ್ಲ ಎಂದೆಲ್ಲಾ ಹುಯಿಲೆಬ್ಬಿಸಿ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿ ಮಾಡಲಾಗಿತ್ತು. ಇದರಲ್ಲಿ ‘ಆರ್ಗನೈಸೇಷನ್ ಫಾರ್ ಅಮೆರಿಕನ್ ಸ್ಟೇಟ್ಸ್’ ಎಂಬ ಸಂಘಟನೆಯು ಒಂದು ಮುಖ್ಯ ಪಾತ್ರ ವಹಿಸಿತು. ಇದು ಮೊರೆಲ್ಸ್‌ರನ್ನು ಬೆಂಬಲಿಸಿದ ಚುನಾವಣೆಯ ಫಲಿತಾಂಶವನ್ನು ಹುಸಿಯಾದುದು ಎಂದು ವರದಿ ಮಾಡಿತು.

ಈ ಸಂಘಟನೆ ಅಮೆರಿಕ ಮತ್ತಿತರ ಸಾಮ್ರಾಜ್ಯಶಾಹಿ ಶಕ್ತಿಗಳ ಮಸಲತ್ತಿನ ಭಾಗವಾಗಿ ಕಾರ್ಯ ನಿರ್ವಹಿಸಿತ್ತು ಎನ್ನುವುದಕ್ಕೆ ಅನುಮಾನವೇನೂ ಬೇಕಿಲ್ಲ. ಅಂತರ್‌ರಾಷ್ಟ್ರೀಯ ಭಾರೀ ಕಾರ್ಪೊರೇಟುಗಳ ಪರವಾಗಿರುವ ಶಕ್ತಿಗಳಿಗೆ ಕುಮ್ಮಕ್ಕು ನೀಡಿ ಕ್ಷಿಪ್ರದಂಗೆಯಂತಹ ವಾತಾವರಣ ಸೃಷ್ಟಿ ಮಾಡಿತು. ಬೊಲಿವಿಯಾದ ಭದ್ರತಾ ಪಡೆಗಳು ಹಾಗೂ ಪೊಲೀಸ್ ವ್ಯವಸ್ಥೆ ಸರಕಾರಿ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸಿ, ಸ್ವತಃ ಅಧ್ಯಕ್ಷರ ಜೀವಕ್ಕೂ ರಕ್ಷಣೆಕೊಡದೆ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿತು. ಅಂತರ್ ರಾಷ್ಟ್ರೀಯ ಶಕ್ತಿಗಳ ಕುತಂತ್ರದ ಭಾಗವಾಯಿತು. ಅದಕ್ಕೆ ನೀಡಿದ ಕಾರಣ ಬೊಲಿವಿಯಾದ ಜನರ ವಿರುದ್ಧ ತಾನು ಕಾರ್ಯಾಚರಿಸಲು ಸಾಧ್ಯವಾಗದು. ಹಾಗಾಗಿ ಅಧ್ಯಕ್ಷರು ರಾಜಿನಾಮೆ ನೀಡಿ ಬೊಲಿವಿಯನ್ನರ ರಕ್ತಪಾತವನ್ನು ತಡೆಯಬೇಕೆಂದು ಹೇಳಿತು. ರಕ್ತಪಾತ ತಪ್ಪಿಸಲು ಉದ್ದೇಶಿಸಿ ಅಧ್ಯಕ್ಷ ಮೊರೆಲ್ಸ್ ಮರುಚುನಾವಣೆ ನಡೆಸಲು ಒಪ್ಪಿದರೂ ಅದನ್ನೂ ಕೂಡ ಸಮ್ಮತಿಸದೆ ಮೊರೆಲ್ಸ್ ರಾಜೀನಾಮೆ ನೀಡಬೇಕು. ಅಧ್ಯಕ್ಷೀಯ ಚುನಾವಣೆಯಲ್ಲಿ ಇವೋ ಮೊರೆಲ್ಸ್ ಸ್ಪರ್ಧಿಸುವಂತಿಲ್ಲ ಎಂಬ ಒತ್ತಡ ಹಾಕಲಾಯಿತು. ಈ ಎಲ್ಲದರ ಹಿಂದೆ ನೇರವಾಗಿ ಆರ್ಗನೈಸೆೇಷನ್ಸ್ ಫಾರ್ ಅಮೆರಿಕನ್ ಸ್ಟೇಟ್ಸ್ ಇತ್ತು. ರಶ್ಯದ ವಿರುದ್ಧದ ಅಮೆರಿಕದ ವ್ಯೆಹತಂತ್ರದ ಭಾಗವಾಗಿ 1948ರ ಎಪ್ರಿಲ್‌ನಲ್ಲಿ ಆರಂಭವಾದ ಈ ಸಂಘಟನೆಯಲ್ಲಿ ಭೂಮಿಯ ಪಶ್ಚಿಮ ಗೋಳಾರ್ಧದ 35 ರಾಷ್ಟ್ರಗಳು ಸದಸ್ಯವಾಗಿ ಸೇರಿವೆ. ಅಮೆರಿಕದ ವಾಷಿಂಗ್ಟನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇದರ ಉದ್ದೇಶ ಸದಸ್ಯ ರಾಷ್ಟ್ರಗಳಲ್ಲಿ ಪ್ರಜಾಸತ್ತೆ ನೆಲೆಗೊಳ್ಳಲು, ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಎಂದಿದೆ. ಅದರ ಸತ್ಯಾಸತ್ಯತೆ ಬೊಲಿವಿಯಾದ ಬೆಳವಣಿಗೆಗಳು ಮತ್ತೊಮ್ಮೆ ಸಾಬೀತುಮಾಡಿದೆ.

ಇವೋ ಮೊರೆಲ್ಸ್ ತನ್ನ ಅಧಿಕಾರಾವಧಿಯಲ್ಲಿ ಅಂತರ್‌ರಾಷ್ಟ್ರೀಯ ಕಾರ್ಪೊರೇಟುಗಳ ಹಿಡಿತದಿಂದ ಬೊಲಿವಿಯಾವನ್ನು ತಪ್ಪಿಸಿದ್ದರು. ಬೊಲಿವಿಯಾದ ಭೂಮಿ, ಮೊದಲಾದ ಖನಿಜ ಸಂಪತ್ತು, ನೈಸರ್ಗಿಕ ಅನಿಲ ಮತ್ತಿತರ ಸಂಪತ್ತುಗಳನ್ನು ರಾಷ್ಟ್ರೀಕರಿಸಿದ್ದರು. ಭೂ ಹಂಚಿಕೆ ಮಾಡಿದ್ದರು. ಇದು ಅಮೆರಿಕ ಮತ್ತಿತರ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಸಹಿಸಲಾಗದ ವಿಚಾರವಾಗಿತ್ತು. ಇವೋ ಮೊರೆಲ್ಸ್‌ರ ಮೇಲೆ ಹಲವು ಕೊಲೆ ಪ್ರಯತ್ನಗಳು ಕೂಡ ನಡೆದವು. ವಿದ್ಯುನ್ಮಾನ ಉತ್ಪನ್ನಗಳಿಗೆ ಅತ್ಯಗತ್ಯವಾದ ಲೀಥಿಯಂ ನಿಕ್ಷೇಪ ಜಗತ್ತಿನಲ್ಲಿಯೇ ಅತ್ಯಂತ ಹೇರಳವಾಗಿರುವುದು ಬೊಲಿವಿಯಾದಲ್ಲಿ ಎಂಬುದು ಗಮನಾರ್ಹ. ಇದರ ಮೇಲಿನ ಹಿಡಿತ ಸಾಧಿಸಲು ಅಮೆರಿಕ ಮತ್ತಿತರ ಅಂತರ್‌ರಾಷ್ಟ್ರೀಯ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಬರುತ್ತಿವೆ.

ಆದರೆ ಇವೋ ಮೊರೆಲ್ಸರು ರಾಷ್ಟ್ರದ ಸಂಪತ್ತುಗಳನ್ನು ರಾಷ್ಟ್ರೀಕರಿಸುವ ಭರವಸೆ, ಉದ್ಯೋಗಾವಕಾಶಗಳ ಹೆಚ್ಚಳ, ರಾಷ್ಟ್ರದ ಜನಸಾಮಾನ್ಯರ ಅಭಿವೃದ್ಧಿ, ವಿಕೇಂದ್ರೀಕೃತ ಕೈಗಾರಿಕೀಕರಣ ಮೊದಲಾದ ಭರವಸೆಗಳನ್ನು ಕೊಟ್ಟಿದ್ದರಿಂದಲೇ ಬೊಲಿವಿಯಾದ ಜನಸಾಮಾನ್ಯರು ಅದರಲ್ಲೂ ಅಲ್ಲಿನ ಮೂಲನಿವಾಸಿಗಳು ಮೂ

ವ್‌ಮೆಂಟ್ ಫಾರ್ ಸೋಷಿಯಲಿಸಂ ಪಕ್ಷವನ್ನು ಭರ್ಜರಿಯಾಗಿ ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದರು. 1982ಕ್ಕೂ ಮೊದಲು ಬೊಲಿವಿಯಾ ಸೈನ್ಯಾಡಳಿತಕ್ಕೊಳಪಟ್ಟಿತ್ತು. ಆನಂತರ ಚುನಾಯಿತ ಸರಕಾರಗಳ ಶಕೆ ಪ್ರಾರಂಭವಾಗಿತ್ತು. 2006ರಿಂದ ಇವೋ ಮೊರೆಲ್ಸ್ ಅಧ್ಯಕ್ಷರಾಗಿ 2019ರವರೆಗೂ ಮುಂದುವರಿದಿದ್ದರು. ಬೊಲಿವಿಯಾದ ಇತಿಹಾಸದಲ್ಲಿ ಒಂದು ವರ್ಷದಲ್ಲಿಯೇ ಎಲ್ಲಾ ಆಡಳಿತಗಳು ಕುಸಿದು ಬೀಳುತ್ತಾ ಹೊಸ ಸರಕಾರ ಅಧಿಕಾರಕ್ಕೆ ಬರುವ ಪರಿಪಾಠವೇ ನಡೆದು ಬಂದಿತ್ತು. ಆದರೆ ಸುದೀರ್ಘಾವಧಿಯ ರಾಜಕೀಯ ಸ್ಥಿರತೆಯನ್ನು ಇವೋ ಮೊರೆಲ್ಸ್ ಕಾಲದಲ್ಲಿ ಸಾಧಿಸಲಾಗಿತ್ತು. ಬೊಲಿವಿಯಾದ ಸಂವಿಧಾನದ ಪ್ರಕಾರವೇ ಮೊರೆಲ್ಸ್ 2019ರ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗುವಂತಿರಲಿಲ್ಲ ಎಂದು ಹೇಳಲಾಗುತ್ತಿದೆ. ಇಲ್ಲಿ ಇವೋ ಮೊರೆಲ್ಸ್ ತಮ್ಮ ಅಧಿಕಾರಾವಧಿಯಲ್ಲಿಯೇ ಅಂಗೀಕೃತಗೊಂಡ ಸಂವಿಧಾನವನ್ನು ಉಲ್ಲಂಘಿಸಿದ್ದರು ಎನ್ನಲಾಗುತ್ತಿದೆ. ತಾವು ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶಕ್ಕಾಗಿ ಜನಮತಗಣನೆ ನಡೆಸಿ ಶೇಕಡಾ 51ರಷ್ಟು ಜನರು ಅದನ್ನು ತಿರಸ್ಕರಿಸಿದ ಕಾರಣ ಅದು ಸಫಲತೆ ಕಾಣಲಿಲ್ಲ. ಕೊನೆಗೆ ಬೊಲಿವಿಯಾದ ಸರ್ವೋಚ್ಚ ನ್ಯಾಯಾಲಯ ಅಧ್ಯಕ್ಷೀಯ ಅವಧಿಗಿದ್ದ ಮಿತಿಯನ್ನು ಕೊನೆಗಾಣಿಸಿದ ಬಳಿಕ 2019ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಕೆಲವು ವಲಯಗಳಲ್ಲಿ ವಿವಾದವನ್ನು ಹುಟ್ಟುಹಾಕಿತ್ತು. ಅಲ್ಲದೆ ಮತ ಎಣಿಕೆಯ ಸಂದರ್ಭದಲ್ಲೂ ಅದರ ನೇರ ಪ್ರಸಾರವನ್ನು ಹಠಾತ್ತಾಗಿ ನಿಲ್ಲಿಸಿದ್ದು, 24 ಘಂಟೆಗಳ ನಂತರ ಪ್ರಸಾರ ಆರಂಭಿಸಿ ಶೇಕಡಾ ಹತ್ತಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಮೊರೆಲ್ಸ್ ಪಡೆದರು ಎಂದು ಘೋಷಿಸಿದ್ದು ಇತ್ಯಾದಿ ಅನುಮಾನಾಸ್ಪದ ನಡೆಗಳನ್ನು ಮೊರೆಲ್ಸ್ ನಡೆಸಿದ್ದರು ಎಂಬ ಆರೋಪಗಳಿವೆ. ಈ ನೆಪಗಳನ್ನು ಹಿಡಿದೇ ಸೇನೆ ಹಾಗೂ ಪೊಲೀಸ್ ಹಾಗೂ ವಿರೋಧಿಗಳು ಇವೋ ಮೊರೆಲ್ಸ್‌ರ ಮರು ಆಯ್ಕೆಯನ್ನು ಒಪ್ಪದೆ ಅವರನ್ನು ಅಶಾಂತಿಯ ಕಾರಣ ನೀಡಿ ರಾಷ್ಟ್ರ ತೊರೆಯುವಂತೆ ಮಾಡಿದವು.

ಮೂರು ಬಾರಿ ಜನರಿಂದ ಚುನಾಯಿತರಾಗಿದ್ದ ಮೊರೆಲ್ಸ್ ಕಾಲದಲ್ಲಿ ಬೊಲಿವಿಯಾದ ಮೂಲನಿವಾಸಿಗಳು ಹಾಗೂ ಇನ್ನಿತರ ಸಾಮಾನ್ಯ ಜನರು ಜೀವನ ಮಟ್ಟದಲ್ಲಿ ಗುಣಾತ್ಮಕವಾದ ಅಭಿವೃದ್ಧಿಯನ್ನು ಸಾಧಿಸಿದ್ದರು. ನಿರುದ್ಯೋಗ ಸಮಸ್ಯೆಯನ್ನು ಗಣನೀಯ ಮಟ್ಟದಲ್ಲಿ ಪರಿಹರಿಸಿ ಕೃಷಿ, ಕೈಗಾರಿಕೆಗಳ ಬೆಳವಣಿಗೆಗೆ ಕಾರಣರಾಗಿದ್ದರು. ಅತ್ಯಂತ ಹಿಂದುಳಿದ ರಾಷ್ಟ್ರಗಳಲ್ಲಿ ಒಂದಾಗಿದ್ದ ಬೊಲಿವಿಯಾವನ್ನು ಅಂತರ್‌ರಾಷ್ಟ್ರೀಯ ಹಣಕಾಸು ಶಕ್ತಿಗಳ ಹಿಡಿತದಿಂದ ಬಿಡಿಸಿ ನೈಜ ಅರ್ಥದಲ್ಲಿ ಬೊಲಿವಿಯಾ ಸ್ವಾತಂತ್ರ್ಯವನ್ನು ಸಾಕಾರಗೊಳಿಸುವತ್ತ ರಾಷ್ಟ್ರವನ್ನು ಮುನ್ನೆಡೆಸಿದ್ದರು. ಜನಸಾಮಾನ್ಯರಿಗೆ ಉಚಿತ ಆರೋಗ್ಯ ಹಾಗೂ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಯಿತು. ಜನಸಾಮಾನ್ಯರ ಜೀವಿತಾವಧಿಯಲ್ಲಿ ಹೆಚ್ಚಳ ಕಂಡಿತು. ಬೊಲಿವಿಯಾ ರಾಷ್ಟ್ರವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯ ತೊಡಗಿದ್ದರು. ಅದರ ಪರಿಣಾಮವಾಗಿ 2017ರ ಅಂದಾಜಿನಂತೆ ಜಿಡಿಪಿ 37.78 ಬಿಲಿಯನ್ ಅಮೆರಿಕನ್ ಡಾಲರುಗಳಾಗಿದ್ದವು. ಜಿಡಿಪಿಯ ತಲಾವಾರು ಸುಮಾರು 7,600 ಡಾಲರುಗಳು. ಇದೆಲ್ಲದರಿಂದಾಗಿ 2005ರಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 35 ಮಾತ್ರವಿದ್ದ ಮಧ್ಯಮ ವರ್ಗ 2017ರ ಸಮಯಕ್ಕೆ ಶೇಕಡಾ 58ಕ್ಕೆ ಏರಿತು. ಕೊನೆಗೆ ಇವೋ ಮೊರೆಲ್ಸ್ ರಾಜೀನಾಮೆ ನೀಡಿ ರಾಷ್ಟ್ರ ತೊರೆದು ಅರ್ಜೆಂಟೀನಾದಲ್ಲಿ ಆಶ್ರಯ ಪಡೆದರು. ಮಸಲತ್ತುಗಾರರು ವಕೀಲೆಯಾಗಿದ್ದ ಜಿನೈನ್ ಅನೆಝ್ ಎಂಬ ಮಹಿಳೆಯೊಬ್ಬರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿಕೊಂಡರು. ಸೇನೆ ಹಾಗೂ ಪೊಲೀಸ್ ಈಕೆಯ ಬೆಂಬಲಕ್ಕೆ ನಿಲ್ಲುತ್ತದೆ. ಈಕೆಯ ಪಕ್ಷದ ಹೆಸರು ‘ಡೆಮಾಕ್ರಟಿಕ್ ಸೋಷಿಯಲ್ ಮೂವ್‌ಮೆಂಟ್’ ಎಂದು. ಈಕೆಯ ಆಡಳಿತದಡಿ ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆ ನಡೆಸಿ ಚುನಾಯಿತ ಸರಕಾರ ಸ್ಥಾಪಿಸುತ್ತೇವೆಂದು ಜನರಿಗೆ ಭರವಸೆ ನೀಡಲಾಗುತ್ತದೆ.

ಹಂಗಾಮಿ ಅಧ್ಯಕ್ಷರಾಗಿದ್ದರೂ ಜಿನೈನ್ ಅನೆಝ್, ಇವೋ ಮೊರೆಲ್ಸ್ ಸುಮಾರು ಹದಿನಾಲ್ಕು ವರ್ಷಗಳಿಂದ ಕಟ್ಟಿಕೊಂಡು ಬಂದಿದ್ದ ಬೊಲಿವಿಯಾದ ಬೆಳವಣಿಗೆಗೆ ವಿರುದ್ಧವಾದ ನಡೆಗಳನ್ನು ಅನುಸರಿಸತೊಡಗಿದರು. ಮೂಲನಿವಾಸಿಗಳ ವಿರುದ್ಧ ಕಾರ್ಯ ನಿರ್ವಹಿಸತೊಡಗಿದರು. ಬೊಲಿವಿಯಾದ ಶೇ.15ರಷ್ಟಿರುವ ಅಲ್ಪಸಂಖ್ಯಾತ ಬಿಳಿಯರ ಪರ ನೀತಿಗಳನ್ನು ಜಾರಿಗೊಳಿಸತೊಡಗಿದರು. ವರ್ಣಭೇದ ನೀತಿಯನ್ನು ಮೊರೆಲ್ಸ್ ರದ್ದುಗೊಳಿಸಿದ್ದರೆ ಈಕೆ ಅದನ್ನೇ ತನ್ನ ಆಡಳಿತ ನೀತಿಯಾಗಿ ಅನುಸರಿಸತೊಡಗಿದರು. ರಾಷ್ಟ್ರೀಕರಣಗೊಂಡಿದ್ದ ಭೂಮಿ ಹಾಗೂ ನೈಸರ್ಗಿಕ ಅನಿಲ, ಖನಿಜ ನಿಕ್ಷೇಪ ಮೊದಲಾದ ನೈಸರ್ಗಿಕ ಸಂಪತ್ತುಗಳನ್ನು ಖಾಸಗೀಕರಿಸಿ ಭಾರೀ ಕಾರ್ಪೊರೇಟುಗಳಿಗೆ ನೀಡತೊಡಗಿದರು. ಬೊಲಿವಿಯಾದ ಮೂಲನಿವಾಸಿ ಹಾಗೂ ಜನಸಾಮಾನ್ಯರ ಪರವಾಗಿದ್ದ ನೀತಿಗಳನ್ನು ಕಾನೂನುಗಳನ್ನು ಬದಲಾಯಿಸಿ ಭಾರೀ ಕಾರ್ಪೊರೇಟು ಪರವಾಗಿಸತೊಡಗಿದರು. ಜೊತೆಗೆ ಇವೋ ಮೊರೆಲ್ಸ್‌ರ ‘ಮೂವ್ ಮೆಂಟ್ ಫಾರ್ ಸೋಷಿಯಲಿಸಂ’ ಪಕ್ಷವನ್ನು ಗುರಿಯಾಗಿಸಿ ದಾಳಿಗಳನ್ನು, ಬೇಕಾಬಿಟ್ಟಿ ಬಂಧನಗಳನ್ನು ಮಾಡತೊಡಗಿದರು. ಚುನಾಯಿತವಲ್ಲದ ಜಿನೈನ್ ಸರಕಾರದ ಅಕ್ರಮಗಳನ್ನು ವಿರೋಧಿಸಿ ನಿಂತ ಜನರ ಮೇಲೆ ದಮನಕಾಂಡವನ್ನು ಹೇರಿದರು. ಚುನಾಯಿತ ಅಧ್ಯಕ್ಷರಾಗಿದ್ದ ಇವೋ ಮೊರೆಲ್ಸ್‌ರ ಆಜ್ಞೆಗಳನ್ನು ಪಾಲಿಸದೆ ಅವರನ್ನು ರಾಜೀನಾಮೆ ಕೊಡುವಂತೆ ಕೇಳಿದ ಸೇನೆ ಹಾಗೂ ಪೊಲೀಸ್ ಉನ್ನತಾಧಿಕಾರ ಈಗ ಚುನಾಯಿತವಲ್ಲದ ಹಂಗಾಮಿ ಅಧ್ಯಕ್ಷರ ಪರವಾಗಿ ನಿಂತು ಬೊಲಿವಿಯಾದ ಮೂಲನಿವಾಸಿಗಳು ಹಾಗೂ ಜನಸಾಮಾನ್ಯರ ವಿರುದ್ಧ ತನ್ನ ಬಲಪ್ರಯೋಗ ನಡೆಸ ತೊಡಗುತ್ತದೆ. ಬೊಲಿವಿಯಾದ ಜನಸಾಮಾನ್ಯರ ಮೇಲೆ ಬಲಪ್ರಯೋಗ ನಡೆಸಲು ತಮ್ಮಿಂದಾಗದು ಎಂದು ಹೇಳಿದ್ದ ಇವರೇ ಈಗ ಹಲವಾರು ಜನರನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ದೌರ್ಜನ್ಯ ನಡೆಸತೊಡಗುತ್ತಾರೆ. ಜಿನೈನ್ ಆಡಳಿತ ಸೇನೆ ಹಾಗೂ ಪೊಲೀಸ್ ವ್ಯವಸ್ಥೆಗೆ ಅಪರಿಮಿತ ಅಧಿಕಾರವನ್ನು ನೀಡಿ ಜನಸಾಮಾನ್ಯರ ಮೇಲೆ ದಾಳಿಗಳನ್ನು ಮಾಡಿಸುತ್ತದೆ. ಸೇನೆ ಹಾಗೂ ಪೊಲೀಸ್ ಮಾಡುವ ಯಾವುದೇ ಅತಿರೇಕಗಳಿಗೂ ಶಿಕ್ಷೆಯೇ ಇಲ್ಲವೆಂಬ ನೀತಿಯನ್ನು ಅಳವಡಿಸಲಾಗುತ್ತದೆ.

ಮೊರೆಲ್ಸ್ ಕಾಲದಲ್ಲಿ ಬೆಳೆಸಿಕೊಂಡಿದ್ದ ಕ್ಯೂಬಾ, ವೆನೆಝುವೆಲಾ ಮೊದಲಾದ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ರದ್ದು ಮಾಡಲಾಗುತ್ತದೆ. ಆದರೆ ಇವೋ ಮೊರೆಲ್ಸ್ ರದ್ದುಗೊಳಿಸಿದ್ದ ಟ್ರಂಪ್‌ನ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಜಿನೈನ್ ಪುನರ್ ಸ್ಥಾಪಿಸುತ್ತಾರೆ. ಕೊರೋನ ನಿರ್ವಹಣೆಯಲ್ಲಿ ಜಿನೈನ್ ಸರಕಾರದ ಭಾರೀ ಬೇಜವಾಬ್ದಾರಿಯ ಕಾರಣ ಹಲವರು ಸಾವಿಗೀಡಾಗುವಂತಾಯಿತು. ಅಷ್ಟು ಮಾತ್ರವಲ್ಲದೆ ಕೊರೋನ ನೆಪ ಹೂಡಿ ನಡೆಸಬೇಕಿದ್ದ ಅಧ್ಯಕ್ಷೀಯ ಚುನಾವಣೆಯನ್ನು ನಡೆಸದೆ ತಾನೇ ಅಧಿಕಾರದಲ್ಲಿ ಮುಂದುವರಿಯುವ ನಡೆಗಳನ್ನು ಜಿನೈನ್ ನಡೆಸತೊಡಗಿದರು. ಆದರೆ ಬೊಲಿವಿಯಾದ ಮೂಲನಿವಾಸಿಗಳು ಅಮೆರಿಕ ಪ್ರೇರಿತ ಜಿನೈನ್ ಆಡಳಿತವನ್ನು ತಿರಸ್ಕರಿಸಿ ಬೀದಿಗಿಳಿದರು. ಬೊಲಿವಿಯಾದ ಶೇಕಡಾ 85ರಷ್ಟಿರುವ ಮೂಲನಿವಾಸಿಗಳು ಜಿನೈನ್‌ರ ಫ್ಯಾಶಿಸ್ಟ್ ಆಡಳಿತದ ವಿರುದ್ಧ ಭಾರೀ ಹೋರಾಟಕ್ಕೆ ಇಳಿಯುತ್ತದೆ. ಬೊಲಿವಿಯಾದ ರಾಜಧಾನಿ ಲಾ ಪಾಜ್ ಸೇರಿದಂತೆ ಹಲವಾರು ನಗರಗಳಿಗೆ ಯಾವುದೇ ಸಾಮಗ್ರಿಗಳು ರವಾನೆಯಾಗದಂತೆ ತಡೆಹಿಡಿಯ ತೊಡಗುತ್ತಾರೆ. ಗ್ರಾಮೀಣ ಪ್ರದೇಶ ನಗರಗಳ ಮೇಲೆ ನಿರ್ಬಂಧಗಳನ್ನು ಹೇರಬೇಕಾದಂತಹ ಪರಿಸ್ಥಿತಿಗೆ ಹೋಗುತ್ತದೆ. ಅಗತ್ಯವಸ್ತುಗಳ ಬೆಲೆಗಳು ವಿಪರೀತವಾಗಿ ಏರತೊಡಗಿ ನಗರದ ಜನ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕೊನೆಗೆ ಅನಿವಾರ್ಯವಾಗಿ ಜಿನೈನ್ ಅಧ್ಯಕ್ಷೀಯ ಚುನಾವಣೆಯನ್ನು ಕೊರೋನ ಮಧ್ಯೆಯೇ ನಡೆಸಬೇಕಾಗುತ್ತದೆ. ಜನರು ಚುನಾವಣೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಮೂವ್ ಮೆಂಟ್ ಫಾರ್ ಸೋಷಿಯಲಿಸಂ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಭಾರೀ ಬಹುಮತದಲ್ಲಿ ಗೆಲ್ಲಿಸುತ್ತಾರೆ. ಮೊರೆಲ್ಸ್ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಹಾಗೂ ಹಿಂದೆ ಕೇಂದ್ರ ಬ್ಯಾಂಕ್ ನೌಕರನಾಗಿದ್ದ ಲೂಯಿಸ್ ಆರ್ಸ್ ಮತ್ತವರ ಪಕ್ಷ ಭಾರೀ ಬಹಮತ ಪಡೆದು ಗೆಲುವು ಸಾಧಿಸುತ್ತಾರೆ. ಬೊಲಿವಿಯಾ ಪಾರ್ಲಿಮೆಂಟಿನ ಎರಡೂ ಸದನಗಳಲ್ಲಿ ಮೂವ್‌ಮೆಂಟ್ ಫಾರ್ ಸೋಷಿಯಲಿಸಂ ಬಹುಮತ ಪಡೆದು ಅಧಿಕಾರಕ್ಕೇರಿದೆ. ಅಧ್ಯಕ್ಷರ ಹತ್ಯಾ ಪ್ರಯತ್ನವೂ ನಡೆದು ಅದು ವಿಫಲವೂ ಆಗಿದೆ.

ಬೊಲಿವಿಯಾದ ಈ ಎಲ್ಲಾ ಬೆಳವಣಿಗೆಗಳನ್ನು ನಮ್ಮಂತಹ ದೇಶಗಳ ಜನಸಾಮಾನ್ಯರು ಸರಿಯಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಒಂದು ಜನಪರ, ನೈಜ ಪ್ರಜಾತಾಂತ್ರಿಕ, ದೇಶಪ್ರೇಮಿ ವ್ಯವಸ್ಥೆಯನ್ನು ಒಂದು ಜನಪರ ಪಕ್ಷ ಇಲ್ಲವೇ ಜನಪರ ವ್ಯಕ್ತಿಯನ್ನೋ ಚುನಾಯಿಸಿ ಕಳುಹಿಸುವುದರಿಂದ ಮಾತ್ರ ಸಾಧಿಸಲು ಇಲ್ಲವೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸೇನೆ, ಪೊಲೀಸ್ ಸೇರಿದಂತೆ ಆಡಳಿತದ ಎಲ್ಲಾ ಅಂಗಗಳಲ್ಲೂ ಮೂಲಭೂತವಾಗಿ ಜನಪರವಾದ ನೈಜ ಪ್ರಜಾತಾಂತ್ರಿಕ ಬದಲಾವಣೆ ಆಗಬೇಕು. ಜನಪರ ಹಾಗೂ ದೇಶಪರ ವ್ಯವಸ್ಥೆಯೊಂದರ ನಿರ್ಮಾಣ ಹಾಗೂ ಉಳಿಯುವಿಕೆಗೆ ಅದು ಬಲವಾದ ಒಂದು ಪೂರ್ವಶರತ್ತಾಗಿದೆ.

ಈಮೇಲ್: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News