ಬೆಂಗಳೂರು: ಆಂಜನೇಯ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಾಷಾ
ಬೆಂಗಳೂರು, ಡಿ.5: ಆಂಜನೇಯ ದೇವಾಲಯ ನಿರ್ಮಾಣಕ್ಕೆ ಮುಸ್ಲಿಮ್ ಸಮುದಾಯದ ವ್ಯಕ್ತಿಯೊಬ್ಬರು ಲಕ್ಷಾಂತರ ಬೆಲೆಬಾಳುವ ತನ್ನ ಒಡೆತನದ 1.5 ಗುಂಟೆ ಭೂಮಿಯನ್ನು ದಾನ ಮಾಡಿದ್ದಾರೆ.
ನಗರದ ಕಾಡುಗೋಡಿ ಬೆಳತೂರು ಕಾಲನಿ ನಿವಾಸಿಯೂ, ಲಾರಿ ಉದ್ಯಮಿಯೂ ಆದ ಸಮಾಜ ಸೇವಕ ಎಚ್.ಎಂ.ಜಿ.ಬಾಷಾ ಅವರು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಸಮೀಪ ವಳಗೆರೆಪುರದಲ್ಲಿರುವ ತಮ್ಮ 3 ಎಕರೆ ಭೂಮಿಯಲ್ಲಿ 1.5 ಗುಂಟೆ ಭೂಮಿಯನ್ನು ಉಚಿತವಾಗಿಯೇ ಆಂಜನೇಯ ದೇವಾಲಯಕ್ಕೆ ದಾನ ಮಾಡಿದ್ದು, ಜೊತೆಗೆ ಅದರ ಮಾಲಕತ್ವವನ್ನು ಸಹ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ಗೆ ವರ್ಗಾವಣೆ ಮಾಡಿಕೊಟ್ಟಿದ್ದಾರೆ.
ಕಳೆದ ಮೂರು ದಶಕಗಳ ಹಿಂದೆ ಸಣ್ಣ ಗುಡಿಯಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ದೇವಾಲಯಕ್ಕೆ ಹೊಂದಿಕೊಂಡಂತೆ ಎಚ್.ಎಂ.ಜಿ.ಬಾಷಾ ಅವರ ಮೂರು ಎಕರೆ ಜಮೀನು ಇತ್ತು. ಇತ್ತೀಚಿಗೆ ದೇವಾಲಯಕ್ಕೆ ಕಟ್ಟಡ ನಿರ್ಮಿಸುವ ಕಾರ್ಯವನ್ನು ಗ್ರಾಮಸ್ಥರು ಕೈಗೆತ್ತಿಕೊಳ್ಳಲು ಆಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿಶಾಲವಾಗಿ ದೇವಾಲಯ ನಿರ್ಮಿಸುವಂತೆ ಸ್ವತಃ ಬಾಷಾ ಅವರು 1.5 ಗುಂಟೆ ಜಾಗವನ್ನು ಗ್ರಾಮದ ಹಿಂದೂಗಳಿಗೆ ಹಸ್ತಾಂತರಿಸಿದರು.
ಧನ ಸಹಾಯ: ಕಳೆದ ಎಂಟು ತಿಂಗಳಿನಿಂದ ದೇವಾಲಯದ ನೂತನ ಜೀಣೋದ್ಧಾರ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಬಾಷಾ ಅವರು ಭೂಮಿ ಮಾತ್ರವಲ್ಲದೆ, ಧನಸಹಾಯ ಮಾಡುವ ಮೂಲಕ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು ಗ್ರಾಮದ ಮುಖಂಡ ಬೈರೇಗೌಡ ತಿಳಿಸಿದರು.
ಪ್ರದಕ್ಷಿಣೆ ಹಾಕಲು ಜಾಗ ಇರಲಿಲ್ಲ: ಆಂಜನೇಯ ಗುಡಿ ಚಿಕ್ಕದಾಗಿದ್ದ ಹಿನ್ನೆಲೆ ಸುತ್ತಲೂ ಪ್ರದಕ್ಷಿಣೆ ಹಾಕಲು ಆಗುತ್ತಿರಲಿಲ್ಲ. ಆದರೆ, ಈಗ ಅವರು ಭೂಮಿ ದಾನ ಮಾಡಿರುವುದು ಸಂತೋಷ ತಂದಿದೆ. ಅಲ್ಲದೆ, ತಮ್ಮ ಜಾಗದಲ್ಲಿ ಹಿಂದೂ ಧರ್ಮದ ದೇವರು ಒಂದು ಇದೆ ಎಂದು ಗೊತ್ತಿದ್ದರೂ ಸಹ ಬಾಷಾ ಕುಟುಂಬಸ್ಥರು ಇದುವರೆಗೂ ಯಾವುದೇ ತೊಂದರೆ ಕೊಡದೇ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಗ್ರಾಮದ ಮತ್ತೋರ್ವ ಮುಖಂಡ ಮುನಿರಾಜು ನುಡಿದರು.
ಬ್ಯಾನರ್ ವೈರಲ್: ಆಂಜನೇಯ ದೇವಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಕುರಿತು ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರು, ಮಾಹಿತಿ ಪತ್ರವೊಂದನ್ನು ಗ್ರಾಮದ ಪ್ರವೇಶ ದ್ವಾರದಲ್ಲಿ ಹಾಕಲಾಗಿತ್ತು. ಆದರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಟ್ಟ ಸಹಾಯ
ನಮ್ಮ ಭೂಮಿಗೆ ಹೊಂದಿಕೊಂಡಂತೆ ಆಂಜನೇಯ ಗುಡಿ ಇತ್ತು. ದಿನನಿತ್ಯ ಇಲ್ಲಿಗೆ ಆಗಮಿಸುವ ಭಕ್ತರು ಸ್ಥಳದ ಕೊರೆತಯಿಂದ ತೊಂದರೆ ಅನುಭವಿಸುತ್ತಿದ್ದುದನ್ನು ಕಂಡಿದ್ದೇನೆ. ಹಾಗಾಗಿ, ನನ್ನ ಬಳಿಯ ಭೂಮಿಯಲ್ಲಿ ಸ್ವಲ್ಪ ದಾನ ಮಾಡುವ ಮೂಲಕ ಪುಟ್ಟ ಸಹಾಯ ಮಾಡಿದ್ದೇನೆ ಅಷ್ಟೇ.
-ಎಚ್.ಎಂ.ಜಿ.ಬಾಷಾ, ದಾನಿ
ಕ್ಷುಲ್ಲಕ ಕಾರಣಗಳಿಗೆ ಕೋಮುಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಎಚ್‍ಎಂಜಿ ಬಾಷಾ ಅವರು ದೇವಾಲಯಕ್ಕೆ ಭೂಮಿ ದಾನ ಮಾಡಿರುವುದಕ್ಕೆ ಗ್ರಾಮದ ಎಲ್ಲರೂ ಸಂತಸ ವ್ಯಕ್ತಪಡಿಸಿ, ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇವೆ.
-ಎಂ.ವಿ.ಮುನೇಗೌಡ, ವಳಗೆರೆಪುರ ಗ್ರಾಮದ ಮುಖಂಡ