ನಾನೊಂಥರ: ಇದು ಕುಡುಕನ ಗಂಡಾಂತರ
'ನಾನೊಂಥರ' ಎಂದು ಚಿತ್ರದ ಶೀರ್ಷಿಕೆಯೇ ಹೇಳುತ್ತಿದೆ. ‘ಹಾಗೆಂದರೆ ಯಾವ್ತರ’ ಎಂದುಕೊಂಡು ಚಿತ್ರಮಂದಿರಕ್ಕೆ ಹೋದಲ್ಲಿ ನಿಮಗೆ ಒಂದು ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ ಒಂಥರಾ ಇರುವ ವರಿಂದ ದೂರವಿದ್ದರೇನೇ ಆರೋಗ್ಯಕ್ಕೆ ಒಳ್ಳೆಯದು.
ಚಿತ್ರದಲ್ಲಿ ತಾರಕ್ ನಾಯಕ. ನಾಯಕನ ಪಾತ್ರದ ಹೆಸರೂ ತಾರಕ. ಆದರೆ ತಾರಕ್‌ಗೆ ಗೊತ್ತಿಲ್ಲದ ವಿಚಾರ ಕುಡಿತ ಜೀವನಕ್ಕೆ ಮಾರಕ! ಹಾಗಾಗಿ ನಾಯಕನ ಇಂಟ್ರಡಕ್ಷನ್ ಬಾರ್‌ನಲ್ಲೇ ನಡೆಯುತ್ತದೆ. ಮಾತ್ರವಲ್ಲ, ಇಂಟರ್‌ವೆಲ್ ದಾಟಿದರೂ ನಾಯಕ ಬಾರ್‌ನಿಂದಾಚೆ ದಾಟುವುದಿಲ್ಲ! ಆದರೆ ಅಷ್ಟು ಹೊತ್ತಿಗೆ ಇನ್ನೊಂದಷ್ಟು ಮಂದಿಯ ಕೈಗೆ ಫುಲ್ ಬಾಟಲ್ ಹಿಡಿಸಿರುತ್ತಾರೆ ನಿರ್ದೇಶಕರು. ಮನೆ ಕೆಲಸದ ರುಕ್ಕಮ್ಮ ತಾರಕ್ ಜೊತೆ ಸೇರಿ ಮನೆಯಲ್ಲೇ ಟೈಟಮ್ಮ ಆಗುತ್ತಾಳೆ. ಅನಾಥ ಅಜ್ಜಿಯ ಮನೆಗೆ ಹೋದರೆ ಆಕೆಯೂ ಮಜ್ಜಿಗೆಯಂತೆ ಮದ್ಯ ಹೀರುತ್ತಾರೆ. ಒಟ್ಟಿನಲ್ಲಿ ರಮ್ಮು,ಬೀರು ಒಳ್ಳೆಯದು ಎನ್ನುವಂಥ ಪ್ರಭಾವ ಬೀರುತ್ತಾರೆ. ಯಾಕೆಂದರೆ ಈ ನಾಯಕ ಕುಡುಕನಾದ ಮೇಲೆಯೇ ಸಮಾಜ ಸೇವಕ! ಆತನ ಈ ಕಾಯಕ ಕಂಡು ಪ್ರೇಮಿಸುತ್ತಾಳೆ ಡಾಕ್ಟರ್ ಪ್ರೇಮ. ಪ್ರೇಮವೆಂದ ಮೇೆ ಒಂದು ಬ್ರೇಕಪ್ ಇರಲೇಬೇಕು. ಬ್ರೇಕಪ್ ಆದಮೇಲೆ ಜೋಡಿ ಒಂದಾಗುತ್ತಾರ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ಇಪ್ಪತ್ತನಾಲ್ಕು ಗಂಟೆಯೂ ಅಮಲಿನಲ್ಲೇ ಇರುವ ನಾಯಕ ಪ್ರತಿ ಬಾರಿ ಬಾರ್‌ನಿಂದ ಹೊರಟಾಗಲು ಯಾರಿಗಾದರೂ ಸಂದೇಶ ನೀಡಲು ಮರೆಯುವುದಿಲ್ಲ! ಗಂಡ ಹೆಂಡತಿ ಜಗಳಕ್ಕೆ ವಿಚ್ಛೇದನದ ಸಲಹೆ, ಪ್ರೇಮಿಗಳಿಗೆ ರಾತ್ರಿ ತಿರುಗಾಡದಿರಲು ಸೂಚನೆ, ಪೊಲೀಸರಿಗೆ ಲಂಚ ಪಡೆಯದಂತೆ ಸಂದೇಶ ಎಲ್ಲವನ್ನೂ ನೀಡುತ್ತಾನೆ. ಆದರೆ ತಾನು ಮಾತ್ರ ಕುಡಿತಕ್ಕೆ ದಾಸನಾಗಿರುತ್ತಾನೆ. ವಿಚಿತ್ರ ಎಂದರೆ ಆತನ ತಂದೆ ಕೂಡ ಮಗನನ್ನು ನಿಯಂತ್ರಿಸುವುದರ ಬದಲು, ಬರುವ ಸೊಸೆಯೇ ಸರಿ ಮಾಡಲೆಂದು ಕಾಯುತ್ತಾನೆ! ಒಟ್ಟಿನಲ್ಲಿ ತಾಯಿಯ ಸನಿಹವಿರದ ಬೆಳವಣಿಗೆ ಮಗನನ್ನು ಈ ರೀತಿ ಮಾಡಿರಬಹುದು ಎಂದು ಪ್ರೇಕ್ಷಕ ಅಂದುಕೊಳ್ಳುತ್ತಿದ್ದರೆ ಫ್ಲಾಶ್‌ಬ್ಯಾಕ್‌ನಲ್ಲಿ ಮತ್ತೊಂದು ಅನಗತ್ಯ ಘಟನೆ ತೂರಿಸಿದ್ದಾರೆ ನಿರ್ದೇಶಕರು.
ಒಟ್ಟಿನಲ್ಲಿ ಕುಡಿತಕ್ಕೊಂದು, ಮೈ ತೋರುವ ಕುಣಿತಕ್ಕೊಂದು, ಹೊಡೆದಾಟದ ಗಣಿತಕ್ಕೊಂದು ಎನ್ನುವಂತೆ ಹಾಡು, ಫೈಟ್‌ಗಳ ದೃಶ್ಯ ಜೋಡಿಸಲಾಗಿದೆ. ನಾಯಕನಾಗಿ ತಾರಕ್ ಯಶ್, ಸುದೀಪ್ ಅಥವಾ ದರ್ಶನ್ ಯಾರನ್ನು ಅನುಕರಿಸಲಿ ಎಂದು ಗೊಂದಲಕ್ಕೊಳಗಾದ ಹಾಗಿದೆ. ನಾಯಕಿ ರಕ್ಷಿಕಾ ಯಾರದೋ ಒತ್ತಡಕ್ಕೆ ನಟಿಸಿದಂತಿದೆ. ಕುಡುಕನ ಕೈಲಾಗದ ತಂದೆ, ಆದರೆ ಸದಾ ಸಂತೃಪ್ತನಂತಿರುವ ಪಾತ್ರ ದೇವರಾಜ್‌ಗೆ ಅಗತ್ಯವಾ ಎಂದು ಅನಿಸುತ್ತದೆ. ಇತ್ತೀಚೆಗಷ್ಟೇ ನಿಧನರಾದ ರಾಕ್ಲೈನ್ ಸುಧಾಕರ್ ಕುಡುಕನ ಪಾತ್ರವೊಂದರಲ್ಲಿದ್ದಾರೆ.
ಸೂರಿ ಎನ್ನುವ ವಿಲನ್ ಪಾತ್ರದ ಎಂಟ್ರಿಗೆ ವಿನು ಮನಸು ನೀಡಿರುವ ಹಿನ್ನೆಲೆ ಸಂಗೀತ ಮನಸೆಳೆಯುತ್ತದೆ. ಉಳಿದಂತೆ ಸಂಗೀತ, ಛಾಯಾಗ್ರಹಣ ಮತ್ತು ಸಂಕಲನ ಚಿತ್ರದ ಗುಣಮಟ್ಟವನ್ನೇ ವ್ಯವಕಲನಗೊಳಿಸಿದೆ. ಚಿತ್ರದ ಬಹುತೇಕ ದೃಶ್ಯಗಳು ಮಬ್ಬಾಗಿರುವುದು ಮತ್ತೊಂದು ಅವಾಂತರ. ಒಟ್ಟಿನಲ್ಲಿ ಒಳ್ಳೆಯ ಕತೆ, ನಿರ್ದೇಶಕರು ದೊರಕಿದರಷ್ಟೇ ಈ ಯುವ ನಾಯಕ,ನಾಯಕಿಯರ ನೈಜ ಪ್ರತಿಭೆ ಕನ್ನಡಿಗರಿಗೆ ಕಾಣಲು ಸಾಧ್ಯ. ಆದರೆ ಅನಗತ್ಯ ಮದ್ಯ, ಪದ್ಯಗಳ ‘ನಾನೊಂಥರ’ ಒಂಥರ ವಿಚಿತ್ರವಾಗಿಯೇ ಉಳಿದು ಬಿಡುತ್ತದೆ. ಚಿತ್ರ ನೋಡುತ್ತಿದ್ದರೆ ಕುಡುಕ ನಾಯಕ ನಿಗೂ ಮೊದಲು ಪ್ರೇಕ್ಷಕನ ಆರೋ ಗ್ಯವೇ ಕೆಡುತ್ತದೆ.
ಚಿತ್ರ: ನಾನೊಂಥರ
ತಾರಾಗಣ: ತಾರಕ್, ರಕ್ಷಿಕಾ, ದೇವರಾಜ್
ನಿರ್ದೇಶನ: ಯು.ರಮೇಶ್ ಕಗ್ಗಲು
ನಿರ್ಮಾಣ: ಡಾ. ಜಾಕ್ಲಿನ್ ಫ್ರಾನ್ಸಿಸ್