ಜ.30ರಂದು ಬೆಂಗಳೂರಿನಲ್ಲೂ ರೈತರ ಉಪವಾಸ ಸತ್ಯಾಗ್ರಹ
ಬೆಂಗಳೂರು, ಜ.29: ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರು ಹುತಾತ್ಮರಾದ ದಿನವಾದ ನಾಳೆ(ಜ.30) ಸಂಯುಕ್ತ ಕಿಸಾನ್ ಮೋರ್ಚಾ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿರುವ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲೂ ವಿವಿಧ ಸಂಘ-ಸಂಸ್ಥೆಗಳು, ರೈತರು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಲ್ಲಿನ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಬೆಳಗ್ಗೆ 6ಗಂಟೆಯಿಂದಲೇ ಉಪವಾಸ ಸತ್ಯಾಗ್ರಹ ಆರಂಭವಾಗಲಿದ್ದು, ಜತೆಗೆ ಬೆಳಗ್ಗೆ 10 ಗಂಟೆಗೆ ಧರಣಿಯೂ ನಡೆಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಅನೇಕ ಗಣ್ಯರು ಇಲ್ಲಿ ಮಾತನಾಡಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ರೈತರ ಕರಾಳ ದಿನ: ಮತ್ತೊಂದೆಡೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯೂ ನಾಳೆ ರೈತರ ಕರಾಳದಿನಕ್ಕೆ ಕರೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದರುವ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜ.26ರ ಗಣರಾಜ್ಯೋತ್ಸವದಂದು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ನಡೆದಂತಹ ಘಟನೆಗೆ ರೈತ ಹೋರಾಟವೇ ಕಾರಣವೆಂದು, ಕೇಂದ್ರ ಸರಕಾರ ಪ್ರಮುಖ ರೈತ ಮುಖಂಡರ ಮೇಲೆ ಮೊಕದ್ದಮೆ ದಾಖಲಿಸಿದೆ. ಆದರೆ, ಇದು ಸರಕಾರಿ ನಿಯೋಜಿತ ಗೂಂಡಾಗಳನ್ನು ಬಿಟ್ಟು ರೈತರ ಮೇಲೆ ಕಲ್ಲು ಎಸೆಯುವ ಈ ಒಂದು ಕೃತ್ಯವು ಪೊಲೀಸರ ಸಮ್ಮುಖದಲ್ಲಿ ನಡೆದಿರುವುದು ಖಂಡನೀಯ ಎಂದರು.
ಈ ಘಟನೆಯೂ ಸರಕಾರದ ಪೂರ್ವನಿಯೋಜಿತ ಕಾರ್ಯಕ್ರಮ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಎಲ್ಲ ಕಾರಣಗಳಿಗಾಗಿ ಮಹಾತ್ಮಗಾಂಧಿಯವರ ಹುತಾತ್ಮ ದಿನವಾದ ನಾಳೆ, ರೈತರ ಮೇಲಿನ ದಾಳಿ ಖಂಡಿಸಿ ಕರಾಳವಾಗಿ ಆಚರಿಸುತ್ತಿದ್ದೇವೆ ಎಂದರು.
ರಾಜ್ಯ ವ್ಯಾಪ್ತಿಯಲ್ಲಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಶಿಸ್ತು ಮತ್ತು ಶಾಂತಿಯಿಂದ ಆಚರಿಸಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದ್ದಾರೆ.