ಜಾಗತಿಕ ಆರ್ಥಿಕ ಕ್ಷೋಭೆಯ ಮುಂದುವರಿಕೆ... ದುರಂತಮಯ ಪರಿಸ್ಥಿತಿಯಲ್ಲಿ ದೇಶ

Update: 2021-04-26 19:30 GMT

ಇರುವ ಸಾರ್ವಜನಿಕ ಆಸ್ಪತ್ರೆಗಳನ್ನೇ ನಡೆಸಲಾಗದೆ ಮುಚ್ಚಿಬಿಡುವ ಪರಿಸ್ಥಿತಿಗೆ ಒಕ್ಕೂಟ ಹಾಗೂ ರಾಜ್ಯಗಳ ಸರಕಾರಗಳು ಬಂದು ತಲುಪಿವೆ. ಸರಕಾರಗಳು ಕೇವಲ ನಾಮ ಮಾತ್ರದ್ದಾಗಿ ಬಿಡುತ್ತಿವೆ. ಸಂಸತ್ತು, ವಿಧಾನ ಸಭೆ ಕೇವಲ ಆಲಂಕಾರಿಕವಾಗುತ್ತಿವೆ. ಇದುವರೆಗೂ ಬಿಂಬಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವ, ಸಂವಿಧಾನಗಳನ್ನು ತೋರುಗಾಣಿಕೆಗಾದರೂ ಒಂದು ಮಟ್ಟದಲ್ಲಿ ಅಳವಡಿಸಿಕೊಳ್ಳಲಾಗದ ಮಟ್ಟದಲ್ಲಿ ಆಳುವ ವ್ಯವಸ್ಥೆ ಬಂದು ನಿಂತಿದೆ.


ಅದು 2008ರ ಕಾಲ. ಮಾಹಿತಿ ತಂತ್ರಜ್ಞಾನದ ಮನಮೋಹಕ ಪರದೆಯಾಗಲೇ ಹರಿದಿತ್ತು. ಆದರೆ ಈ ಹೊತ್ತಿಗಾಗಲೇ ಐಟಿ ಇಂಜಿನಿಯರ್‌ಗಳಿಗೆ ತಮ್ಮ ಮಕ್ಕಳನ್ನು ಕೊಟ್ಟು ಮದುವೆ ಮಾಡಬೇಕೆಂಬ ಬಹಳಷ್ಟು ಅಕ್ಷರಸ್ಥ ತಂದೆ ತಾಯಂದಿರು ತಮ್ಮ ಈ ನಿಲುವಿನಿಂದ ಹಿಂದೆ ಸರಿದು ಯೋಚಿಸುವಂತಾಗಿ ಬಿಟ್ಟಿತ್ತು. ಇಂಡಿಯಾದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಲಕ್ಷಾಂತರ ಉದ್ಯೋಗಿಗಳು ನಿರುದ್ಯೋಗಿಗಳಾದರು. ಅದರಲ್ಲೂ ಕಾಲ್ ಸೆಂಟರ್ ಉದ್ಯೋಗಿಗಳು ಬೀದಿಪಾಲಾಗಬೇಕಾಯಿತು. ಜೊತೆಗೆ ಇತರ ಹಲವಾರು ಉದ್ಯಮಗಳು ಸಾವಿರ ಲಕ್ಷಗಳ ಸಂಖ್ಯೆಯಲ್ಲಿ ಜಾಗತಿಕಮಟ್ಟದಲ್ಲಿ ನೆಲಕಚ್ಚತೊಡಗಿದ್ದವು.

ಇದೇ ಸಂದರ್ಭದಲ್ಲೇ ಅಮೆರಿಕದಲ್ಲಿ ಸಾಮಾನ್ಯ ಜನರಿಗೆ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸತೊಡಗಿತು. ಅಮೆರಿಕದ ಆರ್ಥಿಕತೆ ಕುಸಿತದ ನಡುವೆ ಇತ್ತು. ಅಮೆರಿಕದ ಕರಿಯ ಜನಾಂಗವು ಇದರ ಮೊದಲ ಗುರಿಯಾಗಿತ್ತು. ನಂತರವೇ ಇತರ ಜನಸಮುದಾಯಗಳಿಗೆ ಇದರ ಸುಡುತ್ತಿರುವ ಕಾವು ತಟ್ಟಿ ಹೈರಾಣಾಗಿದ್ದರು. ಆದರೆ ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡಾ ಒಂದರಷ್ಟು ಇರುವ ಕಾರ್ಪೊರೇಟ್‌ಗಳು ತಮ್ಮ ಆಸ್ತಿ ಸಂಪತ್ತುಗಳನ್ನು ಅಮೆರಿಕದ ಒಟ್ಟು ಆಸ್ತಿಯ ಶೇಕಡಾ 33ಕ್ಕೂ ಹೆಚ್ಚು ಹೆಚ್ಚಿಸಿಕೊಂಡಿದ್ದರು. ಈ ಪ್ರಕ್ರಿಯೆ ಬಿರುಸಿನಿಂದಲೇ ಸಾಗುತ್ತಿತ್ತು. ಅದೇ ಸಂದರ್ಭದಲ್ಲೇ ಅಮೆರಿಕದ ಅಧ್ಯಕ್ಷರ ಚುನಾವಣೆಯಿತ್ತು. ಆಫ್ರಿಕಾ ಖಂಡ ಮೂಲದ ಬರಾಕ್ ಒಬಾಮರನ್ನು ಅಧ್ಯಕ್ಷರನ್ನಾಗಿ ಆರಿಸಿಕೊಳ್ಳುವ ಸಂದರ್ಭದಲ್ಲಿ ಅಮೆರಿಕವಿತ್ತು. ಬರಾಕ್ ಒಬಾಮರ ‘ವಿ ಕ್ಯಾನ್ ಡೂ’ ಎಂಬ ಪದವಿಶೇಷಣದ ಭಾಷಣವನ್ನು ಭಾರೀ ಮಟ್ಟದಲ್ಲಿ ಬಿಂಬಿಸಲಾಗಿತ್ತು. ಹತಾಷ ಸ್ಥಿತಿಗೆ ಜಾರಿದ್ದ ಯುವ ಸಮೂಹಕ್ಕೆ ಬರಾಕ್ ಒಬಾಮ ಭರವಸೆಯಂತೆ ಬಿಂಬಿಸಲಾಯಿತು. ಒಬಾಮರು ತಮ್ಮ ಚುನಾವಣಾ ಭಾಷಣದಲ್ಲಿ ಅಮೆರಿಕ ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ಭಾರೀ ಭರವಸೆಗಳನ್ನು ಆಕರ್ಷಕವಾಗಿ ಮನಮುಟ್ಟುವಂತೆ ಮಾತನಾಡುತ್ತಿದ್ದರು. ಇವರ ಭಾಷಣಗಳಿಗೆ ಭಾರೀ ಪ್ರಚಾರ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ದಿವಾಳಿಯಾಗಿದ್ದ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಗೆ ಪುನರುಜ್ಜೀವನ ಯೋಜನೆಯ ಭರವಸೆ ಬಗ್ಗೆ ಮಾತನಾಡುತ್ತಿದ್ದರು. ನಂತರ 2008ರ ಅಕ್ಟೋಬರ್‌ನಲ್ಲಿ ಟ್ರಬಲ್ಡ್ ರಿಲೀಫ್ ಪ್ರೋಗ್ರಾಮ್ ಅಡಿ ಬ್ಯಾಂಕುಗಳಿಗೆ ಸುಮಾರು ಹದಿನಾರು ಟ್ರಿಲಿಯನ್ ಡಾಲರುಗಳಷ್ಟು (ಒಂದು ಟ್ರಿಲಿಯನ್ ಅಂದರೆ ಸಾವಿರ ಕೋಟಿಗಳು) ಅಮೆರಿಕದ ಸಾರ್ವಜನಿಕರ ಹಣವನ್ನು ತುಂಬಿಸಲಾಯಿತು.

ಆದರೆ ಇದು ಅಮೆರಿಕದ ಸುಮಾರು ಒಂಭತ್ತು ದಶಲಕ್ಷದಷ್ಟು ಉದ್ಯೋಗ ನಷ್ಟಗಳನ್ನು ತಡೆಯಲಿಲ್ಲ. ನಾಲ್ಕು ದಶಲಕ್ಷದಷ್ಟು ಉದ್ದಿಮೆಗಳು ನೆಲಕಚ್ಚುವುದನ್ನು ತಡೆಯಲಿಲ್ಲ. ಬಡವರ, ಕಾರ್ಮಿಕರ ಮತ್ತು ಮಧ್ಯಮ ವರ್ಗದವರ ಸಂಪತ್ತು ತೀವ್ರವಾಗಿ ಕುಸಿಯುವುದನ್ನು ತಡೆಯಲಿಲ್ಲ. ಆದರೆ ಬ್ಯಾಂಕಿಂಗ್ ವ್ಯವಸ್ಥೆಯ ಕುಸಿತವನ್ನು ತಡೆದಿತ್ತು. ಅದರ ಸಂಪೂರ್ಣ ಲಾಭ ಶೇಕಡಾ ಒಂದರಷ್ಟಿರುವ ಭಾರೀ ಕಾರ್ಪೊರೇಟ್ ವಲಯ ಪಡೆದಿತ್ತು. ಹೀಗೆ ಅಮೆರಿಕದ ಸಾರ್ವಜನಿಕರನ್ನು ನಿರಂತರವಾಗಿ ವಂಚಿಸಿ ಮೋಸಮಾಡುತ್ತಾ ಭಾರೀ ಆಸ್ತಿ ಒಟ್ಟುಗೂಡಿಸಿಕೊಂಡು ಬಂದಿದ್ದ ಈ ಶೇಕಡಾ ಒಂದರಷ್ಟು ಕಾರ್ಪೊರೇಟ್ ಸಮುದಾಯ ಬಹುಸಂಖ್ಯಾತ ಜನಸಮುದಾಯದ ತೆರಿಗೆ ಉಳಿತಾಯಗಳನ್ನು ತಾವೇ ಸೃಷ್ಟಿಸಿದ್ದ ಆರ್ಥಿಕ ಸಂಕಷ್ಟದ ನೆಪದಲ್ಲಿ ಮತ್ತೊಮ್ಮೆ ಕಬಳಿಸಿ ಬಿಟ್ಟಿತ್ತು. ಇದಕ್ಕೆ ಅಲ್ಲಿನ ಸರಕಾರಿ ವ್ಯವಸ್ಥೆ ಅನುಕೂಲ ಕಲ್ಪಿಸಿ ಕೊಟ್ಟಿತ್ತು. ಈ ಅಂಶವನ್ನೇ ಕೇಂದ್ರವಾಗಿಸಿಕೊಂಡು ‘ವಾಲ್ ಸ್ಟ್ರೀಟ್ ಆಕ್ರಮಿಸಿ’ ಚಳವಳಿ ಸಿಡಿದು ಹರಡಿತ್ತು.

ಅಂದಿನಿಂದ ಆರಂಭವಾದ ಜಾಗತಿಕ ಆರ್ಥಿಕ ಬಿಕ್ಕಟ್ಟು ಈಗಲೂ ಮುಂದುವರಿದಿದೆ. ಅದರ ಮೂಲ ಕಾರಣವಾದ ಕಾರ್ಪೊರೇಟ್‌ಗಳ ಜಾಗತಿಕ ಹಿಡಿತ ಮತ್ತು ಸೂಪರ್ ಲಾಭದ ಕೊಳ್ಳೆ ಇಂದಿಗೂ ಮುಂದುವರಿದಿವೆ. ಇಂತಹ ಬಿಕ್ಕಟ್ಟುಗಳಿಂದ ಪಾರಾಗಲು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಜಾಗತಿಕವಾಗಿ ಹೇರಿ ಮೂರು ದಶಕಗಳಿಗೂ ಹೆಚ್ಚು ಕಾಲವಾಗಿದ್ದರೂ ಇಂತಹ ಬಿಕ್ಕಟ್ಟುಗಳನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಇದು ಸೃಷ್ಟಿಸಿ ಜಾಗತಿಕಗೊಳಿಸಿದ ಅನುಭೋಗಿತನದ ರೋಗವ್ಯಸನಗಳು ಇಂದು ಜಾಗತಿಕವಾಗಿ ವ್ಯಾಪಕವಾಗಿಯೂ ಜನಸಾಮಾನ್ಯರನ್ನು ಹಿಂಡಿ ಹಿಪ್ಪೆಮಾಡುತ್ತಿವೆ. ನಮ್ಮಂತಹ ದೇಶಗಳಲ್ಲಿ ಅದರಲ್ಲೂ ಮಧ್ಯಮವರ್ಗದ ಜನಸಾಮಾನ್ಯರು ಇದರ ಹೆಚ್ಚು ಬಾಧಿತರೂ ಆಗಿದ್ದಾರೆ.

ನಮ್ಮ ದೇಶದ ಇಂದಿನ ದುರಂತಗಳ ಕಾರಣಕರ್ತರೂ ಕೂಡ ಜಾಗತಿಕವಾಗಿ ಶೇಕಡಾ ಒಂದರಷ್ಟು ಇರಬಹುದಾದ ಈ ಭಾರೀ ಕಾರ್ಪೊರೇಟ್‌ಗಳು ಮತ್ತು ಅವರ ಸ್ಥಳೀಯ ಪ್ರತಿನಿಧಿಗಳೇ ಆಗಿದ್ದಾರೆ. ಆಳುತ್ತಾ ಬಂದ ಸರಕಾರಗಳೆಲ್ಲಾ ಇವರ ಆಣತಿಯಂತೆ ನೀತಿ ನಿರೂಪಣೆ ಮಾಡಿ ಆಳುತ್ತಾ ಬಂದಿದ್ದರ ಪರಾಕಾಷ್ಠೆಯ ಸ್ಥಿತಿ ಇದಾಗಿದೆ. ನಮ್ಮ ದೇಶವನ್ನು ಗ್ಯಾಟ್, ಡಂಕೆಲ್ ಒಪ್ಪಂದಗಳಿಗೆ ಅಡವಿಟ್ಟಿದ್ದು, ನಂತರ ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಗಳ ಸಾಲ ಸಹಾಯಗಳ ವಿಷಕೂಪದೊಳಗೆ ದೇಶವನ್ನು ಸಿಲುಕಿಸಿದ್ದು, ನಂತರ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ವಿಷ ವರ್ತುಲದೊಳಗೆ ದೇಶವನ್ನು ಸಿಲುಕಿಸಿ, ನೂರಾರು ಅಸಮಾನ ಹಾಗೂ ಅನ್ಯಾಯದ ಒಪ್ಪಂದಗಳಿಗೆ ಸಹಿಮಾಡಿ, ವಿಶ್ವ ವ್ಯಾಪಾರ ಸಂಘಟನೆಯಡಿ ಇಡೀ ದೇಶವನ್ನು ಸಿಲುಕಿಸಿ, ಇಂದು ದಿನಗೂಲಿ ಮಾಡುವವರ ಕನಿಷ್ಠ ಆದಾಯವನ್ನು ಕೂಡ ಈ ಭಾರೀ ಕಾರ್ಪೊರೇಟ್‌ಗಳಿಗೆ ಎತ್ತಿಕೊಡುವ ಕೆಲಸಗಳನ್ನು ಮಾಡಲು ಮಾತ್ರ ಒಕ್ಕೂಟದ ಹಾಗೂ ರಾಜ್ಯಗಳ ಸರಕಾರಗಳಿವೆ ಎಂಬಂತಾಗಿದೆ.

ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿ ಕಳೆದ ವರ್ಷದ ಕೊರೋನ ಲಾಕ್‌ಡೌನ್ ಪ್ರಕ್ರಿಯೆಯಲ್ಲಿ ನಮ್ಮ ದೇಶದ ಜನಸಾಮಾನ್ಯರ ಸಂಪತ್ತು ಹೇಗೆಲ್ಲಾ ಬೆರಳೆಣಿಕೆಯಷ್ಟಿರುವ ಭಾರೀ ಕಾರ್ಪೊರೇಟ್‌ಗಳ ಕೈಗಳಿಗೆ ಸಲೀಸಾಗಿ ದಾಟಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಇತ್ತೀಚಿನ ವರದಿಯಂತೆ ಕೇವಲ ಐದು ಬಿಲಿಯನೇರ್‌ಗಳು 56 ಬಿಲಿಯನ್ ಡಾಲರುಗಳ ದೇಶದ ಸಂಪತ್ತನ್ನು ಕೇವಲ ಕಳೆದ ಒಂದು ವರ್ಷದಲ್ಲಿ ತಮ್ಮ ಸುಪರ್ದಿಗೊಳಪಡಿಸಿಕೊಂಡಿವೆ. (ಒಂದು ಬಿಲಿಯನ್ ಎಂದರೆ ನೂರು ಕೋಟಿಗಳು. ಒಂದು ಡಾಲರು ಎಂದರೆ ಇಂದಿನ ಇಂಡಿಯಾದ 74.93 ರೂಪಾಯಿಗಳು) ಅದರಲ್ಲಿ 37.3 ಬಿಲಿಯನ್ ಡಾಲರುಗಳ ಸಂಪತ್ತನ್ನು ಶೇಖರಿಸಿಕೊಂಡಿರುವ ಮುಕೇಶ್ ಅಂಬಾನಿ ಅತ್ಯುನ್ನತ ಸ್ಥಾನ ಹೊಂದಿ ಕೊರೋನ ಲಾಕ್‌ಡೌನ್ ಸಮಯದಲ್ಲಿ ಕಳೆದ ವರ್ಷ ಗಂಟೆಗೆ ಸರಾಸರಿ ಸುಮಾರು 90 ಕೋಟಿಗಳಷ್ಟು ಸಂಪತ್ತು ಶೇಖರಿಸುತ್ತಿದ್ದರು ಎಂಬ ವರದಿಯಿದೆ. 25.2 ಬಿಲಿಯನ್ ಡಾಲರುಗಳನ್ನು ಶೇಖರಿಸಿಕೊಂಡು ಗೌತಮ್ ಅದಾನಿ ಎರಡನೇ ಅತೀ ದೊಡ್ಡ ಶ್ರೀಮಂತನೆಂಬ ಸ್ಥಾನ ಪಡೆದಿದ್ದಾರೆ. ಕಳೆದ ಒಂದು ವರ್ಷದಲ್ಲೇ ಇವರು 9.5 ಬಿಲಿಯನ್ ಡಾಲರುಗಳನ್ನು ತನ್ನ ಸಂಪತ್ತಿಗೆ ಸೇರಿಸಿಕೊಂಡಿದ್ದಾರೆ. ಅದರಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಕಟ್ಟಿ ಬೆಳೆಸಿದ್ದ ಸಾರ್ವಜನಿಕ ವಲಯದ ವಿಮಾನ ನಿಲ್ದಾಣಗಳು, ಬಂದರುಗಳು, ಗಣಿ ಉದ್ಯಮಗಳನ್ನು ಅದಾನಿ ಸಲೀಸಾಗಿ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು ಇದೇ ಅವಧಿಯಲ್ಲೇ.

ಕಳೆದ ವರ್ಷ ಇವರ ಸಂಪತ್ತಿನ ಬೆಳವಣಿಗೆ ಶೇ. 61ರಷ್ಟು ಎಂಬ ವರದಿಯಿದೆ. ಮಾಹಿತಿ ತಂತ್ರಜ್ಞಾನ ರಂಗದ ಶಿವನಾಡಾರ್ 20.4 ಬಿಲಿಯನ್ ಡಾಲರುಗಳನ್ನು ಶೇಖರಿಸಿಕೊಂಡು ಮೂರನೇ ಅತೀ ದೊಡ್ಡ ಶ್ರೀಮಂತನ ಸ್ಥಾನಕ್ಕೆ ಜಿಗಿದಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಎಸ್. ಪೂನಾವಾಲ ಎಂಬ ಜಾಗತಿಕವಾಗಿ ದೊಡ್ಡ ಚುಚ್ಚು ಮದ್ದು ಉತ್ಪಾದಕ, ಸದ್ಯ ದೇಶಕ್ಕೆ ಕೋವಿಶೀಲ್ಡ್ ಎಂಬ ಕೊರೋನ ವಿರೋಧಿ ಎಂದು ಹೇಳಲಾಗುತ್ತಿರುವ ಲಸಿಕೆಯನ್ನು ಪೂರೈಸುತ್ತಿರುವ ಭಾರೀ ಕಾರ್ಪೊರೇಟ್, 11.5 ಬಿಲಿಯನ್ ಡಾಲರುಗಳನ್ನು ಹೊಂದಿ ಆರನೇ ಅತೀ ದೊಡ್ಡ ಶ್ರೀಮಂತ ಪಟ್ಟಕ್ಕೆ ತಲುಪಿದ್ದಾರೆ. ಕಳೆದ ವರ್ಷ ಇವರು ಎರಡು ಸ್ಥಾನಗಳನ್ನು ಏರಿಸಿಕೊಂಡಿದ್ದಾರೆ. ಈ ಮುಖಗಳು ಅಂತರ್‌ರಾಷ್ಟ್ರೀಯ ಭಾರೀ ಕಾರ್ಪೊರೇಟ್ ಕೂಟದ ಸ್ಥಳೀಯ ದಲ್ಲಾಳಿ ಮುಖಗಳು ಎನ್ನುವುದನ್ನು ಗಮನಿಸಬೇಕಾಗಿದೆ. ಯಾಕೆಂದರೆ ಇವರ ಕಂಪೆನಿಗಳಲ್ಲಿ ಚೀನಾ, ಅಮೆರಿಕ ಯೂರೋಪುಗಳ ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಹೂಡಿಕೆ ಪ್ರಧಾನವಾಗಿದೆ.

 ಆದರೆ ಇದೇ ವೇಳೆಯಲ್ಲಿ ದೇಶದ ಜನಸಾಮಾನ್ಯರನ್ನು ಇನ್ನಿಲ್ಲದ ಸಂಕಷ್ಟಗಳಿಗೆ ದೂಡಲಾಗಿದೆ. ನಿರುದ್ಯೋಗದ ಮಟ್ಟ ಶೇಕಡಾ 25ಕ್ಕೂ ಹೆಚ್ಚು ದಾಟಿತ್ತು. 2020ರಲ್ಲಿ ಸುಮಾರು 10.9 ದಶಲಕ್ಷಗಳಷ್ಟು ಉದ್ಯೋಗಗಳು ನಷ್ಟವಾಗಿದ್ದವು. ಅಸಂಘಟಿತ ವಲಯದ ನಷ್ಟಗಳ ಬಗ್ಗೆ ಸರಿಯಾದ ಅಂಕಿ ಅಂಶಗಳೇ ಇಲ್ಲ. ಮುಂಬೈನ ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ಹಾಗೂ ಚಿಕಾಗೋದ ವಿಶ್ವ ವಿದ್ಯಾನಿಲಯಗಳ ಅಧ್ಯಯನದ ಪ್ರಕಾರ ಸುಮಾರು ಶೇಕಡಾ 84ರಷ್ಟು ಕುಟುಂಬಗಳು ತಮ್ಮ ಆದಾಯವನ್ನು ತೀವ್ರ ಮಟ್ಟದಲ್ಲಿ ಕಳೆದುಕೊಂಡಿದ್ದವು. ಇದೇ ಅವಧಿಯಲ್ಲಿ ಮಧ್ಯಮವರ್ಗದ ಜನ ಸಂಖ್ಯೆಯಲ್ಲಿ 33 ದಶಲಕ್ಷದಷ್ಟು ಜನರು ಕೆಳಮಟ್ಟಕ್ಕೆ ತಳ್ಳಲ್ಪಟ್ಟಿದ್ದರು. ಇವೆಲ್ಲದರ ಪರಿಣಾಮವಾಗಿ ಬಡವರ ಜನಸಂಖ್ಯೆ ಗಾಬರಿ ಮಟ್ಟದಲ್ಲಿ ಏರುತ್ತಲೇ ಹೋಗುತ್ತಿದೆ.

ಸಾಮಾಜಿಕ ಅಸಮಾನತೆ ಬೆಳೆಯುತ್ತಾ ಸಾಮಾಜಿಕ ಭದ್ರತೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕೊರೋನದಂತಹ ಒಂದು ಸಾಮಾನ್ಯ ವೈರಸ್ ಅನ್ನು ಕೂಡ ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಆಳುವ ಸರಕಾರಗಳಿವೆ. ಜನಸಾಮಾನ್ಯರ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಕನಿಷ್ಠ ಆಮ್ಲಜನಕವನ್ನು ಕೂಡ ಉತ್ಪಾದಿಸಿ ಪೂರೈಸಲಾಗದ ಪರಿಸ್ಥಿತಿಯಲ್ಲಿ ಸರಕಾರಗಳಿವೆ. ಇರುವ ಸಾರ್ವಜನಿಕ ಆಸ್ಪತ್ರೆಗಳನ್ನೇ ನಡೆಸಲಾಗದೆ ಮುಚ್ಚಿಬಿಡುವ ಪರಿಸ್ಥಿತಿಗೆ ಒಕ್ಕೂಟ ಹಾಗೂ ರಾಜ್ಯಗಳ ಸರಕಾರಗಳು ಬಂದು ತಲುಪಿವೆ. ಸರಕಾರಗಳು ಕೇವಲ ನಾಮ ಮಾತ್ರದ್ದಾಗಿ ಬಿಡುತ್ತಿವೆ. ಸಂಸತ್ತು, ವಿಧಾನ ಸಭೆ ಕೇವಲ ಆಲಂಕಾರಿಕವಾಗುತ್ತಿವೆ. ಇದುವರೆಗೂ ಬಿಂಬಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವ, ಸಂವಿಧಾನಗಳನ್ನು ತೋರುಗಾಣಿಕೆಗಾದರೂ ಒಂದು ಮಟ್ಟದಲ್ಲಿ ಅಳವಡಿಸಿಕೊಳ್ಳಲಾಗದ ಮಟ್ಟದಲ್ಲಿ ಆಳುವ ವ್ಯವಸ್ಥೆ ಬಂದು ನಿಂತಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News