ಓ ಮೆಣಸೇ...

Update: 2021-05-02 19:30 GMT

ಕೊರೋನ 2ನೇ ಅಲೆಯ ವೇಳೆ ಭಾರತ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು- ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹ ಕಾರ್ಯವಾಹ
ಅದಕ್ಕೇ ಇರಬೇಕು ಪಶ್ಚಿಮ ಬಂಗಾಳದಲ್ಲಿ ಆ ಶಕ್ತಿಗಳನ್ನು ಸೋಲಿಸಿರುವುದು.


ಕೋವಿಡ್ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ 230ಎಕರೆ ಭೂಮಿ ಒದಗಿಸಿ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ - ಆರ್.ಅಶೋಕ್, ಸಚಿವ
ಒಟ್ಟಿನಲ್ಲಿ ಸಾಯುವುದಕ್ಕೆ ಯಾವ ಅಡೆತಡೆಯೂ ಇನ್ನು ಇಲ್ಲ.


ಕೊರೋನ ಸೋಂಕು ಹಳ್ಳಿಗಳಿಗೆ ಹರಡುವುದನ್ನು ಏನಾದರೂ ಮಾಡಿ ತಡೆಯಬೇಕು - ನರೇಂದ್ರ ಮೋದಿ, ಪ್ರಧಾನಿ
ಕುಂಭಮೇಳ, ರಾಜಕೀಯ ರ್ಯಾಲಿಗಳು ನಡೆದಿರುವುದು ಅದರ ಭಾಗವಾಗಿಯೇ ಇರಬೇಕು.


ಕೊರೋನದಿಂದಾಗಿ ರಾಜ್ಯದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ - ಡಾ.ಕೆ.ಸುಧಾಕರ್, ಸಚಿವ
ಹೌದು, ಸರಕಾರದ ವ್ಯವಸ್ಥೆಯ ಜೊತೆಗೆ ಜನಸಾಮಾನ್ಯರ ಯುದ್ಧ.


ಯಡಿಯೂರಪ್ಪನವರೇ ಮದ್ಯ ಅತ್ಯವಶ್ಯಕ ಪಟ್ಟಿಗೆ ಯಾವಾಗ ಸೇರಿತು? - ಅರವಿಂದ ಬೆಲ್ಲದ, ಶಾಸಕ
ಅದು ಸರಕಾರದ ಬೊಕ್ಕಸದ ಪಾಲಿಗೆ ಅತ್ಯವಶ್ಯವಂತೆ.


ಈ ಸಂಕಷ್ಟ ಕಾಲದಲ್ಲಿ ಕೊರೋನ ಲಸಿಕೆಯನ್ನು ಉದ್ಯಮವನ್ನಾಗಿ ಬೆಳೆಯಗೊಟ್ಟಿದ್ದು ಮೋದಿ ಸರಕಾರದ ಅತಿದೊಡ್ಡ ವೈಫಲ್ಯ- ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ
ಲಸಿಕೆ ಉದ್ಯಮವನ್ನು ಲಾಭದಾಯಕವಾಗಿಸುವುದಕ್ಕಾಗಿಯೇ ಕೊರೋನ ಎರಡನೇ ಅಲೆಯನ್ನು ಸೃಷ್ಟಿಸಲು ಅವರು ರ್ಯಾಲಿಗಳನ್ನು ಮಾಡಿರುವುದಂತೆ.


ಕೇಂದ್ರ ಸರಕಾರ ಜನರಿಗೆ ಉಚಿತ ಪಡಿತರ ನೀಡುವುದರಿಂದ ಕಾರ್ಮಿಕರು ಕೆಲಸಕ್ಕೆ ಬರದೆ ಮನೆಯಲ್ಲೇ ಉಳಿಯುತ್ತಾರೆ - ವಿಜಯ ಸಂಕೇಶ್ವರ, ಉದ್ಯಮಿ
ಲಾಕ್‌ಡೌನ್‌ನ ಉದ್ದೇಶವೇ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲೇ ಇರಿ ಎನ್ನುವುದಲ್ಲವೇ?


ಕೊರೋನ ಬಗ್ಗೆ ವದಂತಿಗಳನ್ನು ಹರಡುವವರ ವಿರುದ್ಧ ಎಸ್‌ಎಸ್‌ಎ ಗೂಂಡಾ ಕಾಯ್ದೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಕೊರೋನ ಪಾಸಿಟಿವ್‌ಗಳ ವಿರುದ್ಧವೇ ಗೂಂಡಾ ಕಾಯ್ದೆ ಹಾಕಿದರೆ ಹೇಗೆ?


ಮಮತಾ ಬ್ಯಾನರ್ಜಿಗೆ ರಾಜ್ಯದ ಹಿತಕ್ಕಿಂತ ಅಹಂಕಾರವೇ ಮುಖ್ಯ. ಹಾಗಾಗಿ ಅವರು ಪ್ರಧಾನಿ ಕರೆಯುವ ಯಾವ ಸಭೆಗೂ ಹಾಜರಾಗುವುದಿಲ್ಲ- ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಜನತೆಗೆ ಲಾಭವಾಗುವಂತಹದು ಅಲ್ಲಿ ಏನೂ ಇಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿರಬೇಕು.


ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಂದ ಹಣ ವಸೂಲು ಮಾಡುವಂತಹ ಕ್ರೂರ ವರ್ತನೆಯಿಂದ ನನಗೆ ಕೆಟ್ಟ ಬೈಗುಳ, ಕೋಪ ಅನವಶ್ಯಕವಾಗಿ ಬರುತ್ತಿದೆ - ಜಗ್ಗೇಶ್, ನಟ
ಆದರೂ, ಸರಕಾರದ ಋಣ ನಾಲಗೆಯನ್ನು ಕಟ್ಟಿ ಹಾಕಿರಬೇಕು.


ಕೊರೋನ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಗಳನ್ನು ನಡೆಸದಿರಲು ಸರಕಾರ ನಿರ್ಧರಿಸಿದೆ -ಆರ್.ಅಶೋಕ್, ಸಚಿವ
ಕೊರೋನಕ್ಕಾಗಿ ಸರಕಾರ ಮಾಡಿದ ಬಹುದೊಡ್ಡ ತ್ಯಾಗವಿರಬೇಕು ಇದು.


ನರೇಂದ್ರ ಮೋದಿ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ( ಕೊರೋನ ಸಂದರ್ಭದಲ್ಲಿ) ದೇಶದ ಸ್ಥಿತಿ ಇದಕ್ಕಿಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿತ್ತು - ಸಿ.ಟಿ.ರವಿ, ಶಾಸಕ
ಮೋದಿಯ ಜಾಗದಲ್ಲಿ ಕೊರೋನ ಇದ್ದಿದ್ದರೆ ಇಷ್ಟು ಗಂಭೀರ ಸ್ಥಿತಿ ಎದುರಾಗುತ್ತಿರಲಿಲ್ಲ ಎನ್ನುತ್ತಿದ್ದಾರೆ ಕೊರೋನ ಸಂತ್ರಸ್ತರು.


ಕರ್ಫ್ಯೂ ವಿಧಿಸುವುದು ನಮ್ಮ ಸರಕಾರಕ್ಕೆ ಸಂತಸದ ವಿಷಯವಲ್ಲ, ಆದರೆ ಅನಿವಾರ್ಯ - ಲಕ್ಷ್ಮಣ ಸವದಿ, ಡಿಸಿಎಂ
ಕರ್ಫ್ಯೂ ವಿಧಿಸಿದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆಯೇ?


ಪ.ಬಂ.ದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಿಲ್ಲಿಸಿದ ಬಳಿಕ ಚುನಾವಣಾ ಆಯೋಗ ಸಾರ್ವಜನಿಕ ಸಭೆಯನ್ನು ನಿಷೇಧಿಸಿದೆ - ನುಸ್ರತ್ ಜಹಾನ್, ಟಿಎಂಸಿ ಸಂಸದೆ
ಚುನಾವಣಾ ಫಲಿತಾಂಶ, ಬಂಗಾಳದಲ್ಲಿ ಮೋದಿಯನ್ನೇ ನಿಷೇಧಿಸಿದಂತಿದೆ.


ಬದುಕಿನಲ್ಲಿ ಮದುವೆಯೇ ಎಲ್ಲ ಅಲ್ಲ - ರಮ್ಯ, ನಟಿ
ಹೌದು, ಮದುವೆಯ ಜೊತೆಗೆ ವಿಚ್ಛೇದನ ಸೇರಿದರೆ ಬದುಕು ಪರಿಪೂರ್ಣ.


ಚುನಾವಣಾ ಆಯೋಗವು ಬಿಜೆಪಿಯ ಗಿಳಿ ಹಾಗೂ ಮೈನಾ ಆಗಿದೆ - ಮಮತಾ ಬ್ಯಾನರ್ಜಿ , ಪ.ಬಂ. ಮುಖ್ಯಮಂತ್ರಿ
ಮೋದಿಯವರ ಕೈಯಲ್ಲಿರುವ ನವಿಲು ಎಂದು ಆಯುಕ್ತರು ಬಿಂಕದಿಂದ ಕುಣಿದರಂತೆ.


ಪ್ರತಿಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನು ಅಧಿಕಾರದಲ್ಲಿದ್ದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ ಸಂಸ್ಕೃತಿ - ಕುಮಾರಸ್ವಾಮಿ , ಮಾಜಿ ಮುಖ್ಯಮಂತ್ರಿ
ಅಧಿಕಾರ ಹಂಚಿಕೊಳ್ಳುವುದಾದರೆ ಬಿಜೆಪಿ ಹೇಳಿದ್ದನ್ನು ಬಹಿರಂಗವಾಗಿ ಮಾಡುವ ನಿಮ್ಮದು ಯಾವ ಸಂಸ್ಕೃತಿ?


ಪ್ರತೀ ಮನೆಗೆ ನಿರಂತರ ಕುಡಿಯುವ ನೀರು ಒದಗಿಸುವ ಪ್ರಧಾನಿ ಮೋದಿ ಕನಸು ಶೀಘ್ರದಲ್ಲಿಯೇ ನನಸಾಗಲಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಬಹುಶಃ ಆಮ್ಲಜನಕ ಇಲ್ಲದೆ ಪ್ರಾಣ ಬಿಡುತ್ತಿರುವವರ ಬಾಯಿಗೆ ಕೊನೆಯ ಬಾರಿಗೆ ಸುರಿಯುವುದಕ್ಕಾಗಿ ಇರಬಹುದು.


ನಮ್ಮ ರಾಜ್ಯದಲ್ಲಿ ಈಗ ಎಲ್ಲವೂ ಹಿಟ್ಲರ್ ಶೈಲಿಯಲ್ಲಿಯೇ ನಡೆಯುತ್ತಿದೆ - ಕೆ.ಆರ್.ರಮೇಶ್ ಕುಮಾರ್, ಮಾಜಿ ಸಚಿವ
ಹೌದು, ಗ್ಯಾಸ್ ಚೇಂಬರ್‌ನಲ್ಲಿ ನಡೆದ ಹತ್ಯಾಕಾಂಡಗಳು ಆಕ್ಸಿಜನ್ ಕೊರತೆಗಳಿಂದ ಆಸ್ಪತ್ರೆ ವಾರ್ಡ್‌ಗಳಲ್ಲಿ ನಡೆಯುತ್ತಿವೆ.


ಹನುಮ ಸಂಜೀವಿನಿ ತಂದಂತೆ ಮೋದಿ ಸರಕಾರ ಕೊರೋನ ಲಸಿಕೆ ನೀಡಿದೆ - ಡಾ.ಕೆ.ಸುಧಾಕರ್, ಸಚಿವ
ಹನುಮ ಲಂಕೆಯನ್ನು ಸುಟ್ಟಂತೆ, ಮೋದಿ ಸರಕಾರ ಕೊರೋನವನ್ನು ನಿರ್ವಹಿಸುತ್ತಿದೆ.


ಕೊರೋನ ನಿರ್ವಹಣೆ ನನಗೆ ತೃಪ್ತಿ ತಂದಿಲ್ಲ - ಸಿ.ಟಿ. ರವಿ, ಶಾಸಕ
ಕೊರೋನ ದುಡ್ಡಲ್ಲಿ ತೃಪ್ತಿಯಾಗುವಷ್ಟು ದೋಚುವುದಕ್ಕೆ ಸಾಧ್ಯವಾಗಿಲ್ಲವೋ ಏನೋ?


ಚುನಾವಣಾ ರ್ಯಾಲಿ, ಕುಂಭ ಮೇಳದಿಂದ ಕೊರೋನ ಹೆಚ್ಚಾಗಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ಅವುಗಳು ನಡೆಯದೇ ಇದ್ದಿದ್ದರೆ ಕೊರೋನ ಇನ್ನಷ್ಟು ಹೆಚ್ಚಾಗುತ್ತಿತ್ತು ಎನ್ನುವುದು ಅವರ ವಾದ.


ಕೊರೋನಕ್ಕೆ ಲಸಿಕೆ ನೀಡುವ ಬಗ್ಗೆ ಏನೇ ಕೊರತೆ ಬಂದರೂ ಅದನ್ನು ನೀಗಿಸುವ ಸಾಮರ್ಥ್ಯ ಸರಕಾರಕ್ಕಿದೆ- ಬಿ.ಸಿ.ಪಾಟೀಲ್, ಸಚಿವ
ಕೊರತೆಯ ಕುರಿತಂತೆ ಯಾವ ಮಾಹಿತಿಯೂ ನಿಮಗೆ ಬಂದಿಲ್ಲವೇ?


ಹಿಂದೆಲ್ಲ ನಾವು ರಾಮನಯುಗ, ಕೃಷ್ಣನ ಯುಗ ಎನ್ನ್ನುತ್ತಿದ್ದೆವು, ಈಗ ರೋಗದ ಯುಗ ಎನ್ನುವ ಕಾಲ ಬಂದಿದೆ- ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಸ್ವಾಮೀಜಿಗಳ ಪಾಲಿಗೆ ಭೋಗದ ಯುಗವೂ ಹೌದು.


ಸೋಪು, ಟೀ ಪುಡಿಯಂತೆ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಕಣ್ಣೀರು ಬ್ರಾಂಡ್ - ಆರ್ ಅಶೋಕ್, ಸಚಿವ
ಸೋಪು, ಟೀ ಪುಡಿ ಉಪಯೋಗಕ್ಕೆ ಬರುತ್ತದೆ.


ಕೊರೋನ ಮೊದಲನೇ ಅಲೆ ಗೆದ್ದಿದ್ದೇವೆ, ಎರಡನೇ ಅಲೆಯನ್ನ್ನೂ ಗೆಲ್ಲುತ್ತೇವೆ - ನರೇಂದ್ರ ಮೋದಿ, ಪ್ರಧಾನಿ
ಮೋದಿ ಅಲೆಯನ್ನು ಗೆಲ್ಲದೆ, ಕೊರೋನ ಅಲೆ ಗೆಲ್ಲುವುದು ಕಷ್ಟ ಎನ್ನುತ್ತಿದ್ದಾರೆ ವೈದ್ಯಕೀಯ ತಜ್ಞರು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!