ಓ ಮೆಣಸೇ...

Update: 2021-05-30 19:30 GMT

ಕೊರೋನದಿಂದ ಸಾವನ್ನಪ್ಪಿದವರ ಅಸ್ಥಿ 15 ದಿನದೊಳಗೆ ಪಡೆದುಕೊಳ್ಳದಿದ್ದರೆ ಸರಕಾರದಿಂದಲೇ ವಿಸರ್ಜನೆ ಮಾಡಲಾಗುವುದು - ಆರ್.ಅಶೋಕ್, ಸಚಿವ
ಸದ್ಯದ ಸರಕಾರವನ್ನೇ ವಿಸರ್ಜಿಸಿ ಬಿಟ್ಟರೆ ಉಳಿದೆಲ್ಲಾ ಕೆಲಸಗಳನ್ನು ಜನರೇ ಚೆನ್ನಾಗಿ ಮಾಡಿಕೊಳ್ಳುತ್ತಾರೆ.


ವರ್ಷದೊಳಗೆ ದೇಶದ ಎಲ್ಲರಿಗೂ ಕೊರೋನ ಲಸಿಕೆ ದೊರೆಯಲಿದೆ- ಬಿ.ಎಲ್.ಸಂತೋಷ್, ಬಿಜೆಪಿ ಪ್ರ.ಕಾರ್ಯದರ್ಶಿ
ಈಗಿನ ಸ್ಥಿತಿ ನೋಡಿದರೆ, ಲಸಿಕೆ ದೊರೆಯದಿದ್ದರೂ ಕೊರೋನ ಮಾತ್ರ ಎಲ್ಲರಿಗೆ ದೊರೆಯುವುದು ಖಚಿತ, ಆಗ ನನ್ನ ಆಶ್ವಾಸನೆ ಅರ್ಧ ಪೂರ್ತಿಯಾಗಿದೆ ಎಂದು ನೀವು ಸಂಭ್ರಮಿಸಬಹುದು.


ಕೊರೋನ ಲಸಿಕೆ ಕಂಡು ಹಿಡಿದ ತಕ್ಷಣ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದ್ದರಿಂದ ಜನ ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಆ ಕಾರಣಕ್ಕೆ ಅದನ್ನು ನೆರೆ ರಾಷ್ಟ್ರಗಳಿಗೆ ಕೊಡಲಾಯಿತು - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮೋದಿಯ ವಿರುದ್ಧವೂ ಆ ಕಾಂಗ್ರೆಸಿಗರು ಅಪಪ್ರಚಾರ ಮಾಡುತ್ತಿದ್ದಾರಲ್ಲ! ಅವರನ್ನು ಏನು ಮಾಡುತ್ತೀರಿ?


ರೈತರು ದ್ವಿಚಕ್ರ ವಾಹನದಲ್ಲಿ ಮರಳು ಸಾಗಿಸಿದರೆ ಇನ್ನು ಮುಂದೆ ಶಿಕ್ಷೆ ಇರುವುದಿಲ್ಲ - ಮುರುಗೇಶ್ ನಿರಾಣಿ, ಸಚಿವ
ಆನೆ ಕಳ್ಳರು ಸೈಕಲ್‌ನಲ್ಲಿ ಆನೆ ಸಾಗಿಸಿದರೆ? 


ನನ್ನ ಅಪ್ಪ ಬೋನಿ ಕಪೂರ್ ನನ್ನ ಅಮ್ಮನನ್ನು ತೊರೆದು ಶ್ರೀದೇವಿಯನ್ನು ಮದುವೆಯಾಗಿದ್ದು ನನಗೆ ಒಂದು ಚೂರೂ ಇಷ್ಟವಿರಲಿಲ್ಲ - ಅರ್ಜುನ್ ಕಪೂರ್, ನಟ
ಪತ್ನಿಯನ್ನು ಬಿಟ್ಟವರು ಪ್ರಧಾನಿಯಾಗುತ್ತಾರೆಂದು ಯಾರೋ ನಿಮ್ಮಪ್ಪನಿಗೆ ಹೇಳಿರಬೇಕು.


ಮೊಸಳೆ ಕಣ್ಣೀರಿಗಾಗಿ ಆಸ್ಕರ್ ಪ್ರಶಸ್ತಿ ಕೊಡುವುದಾದರೆ ಅದನ್ನು ಪ್ರಧಾನಿ ಮೋದಿಗೇ ಕೊಡಬೇಕು - ಪ್ರಕಾಶ್ ರಾಥೋಡ್, ಕೆಪಿಸಿಸಿ ವಕ್ತಾರ
ಮೊಸಳೆಗೆ ಏನೂ ಇಲ್ಲವೇ?


ಯಡಿಯೂರಪ್ಪರನ್ನು ಬಿಟ್ಟರೆ ರಾಜ್ಯ ಬಿಜೆಪಿಯಲ್ಲಿ ಸ್ಟಾರ್ ನಾಯಕರು ಯಾರಿದ್ದಾರೆ? - ಎಂ.ಪಿ.ಕುಮಾರಸ್ವಾಮಿ, ಶಾಸಕ
ಆದರೂ ಅವರು ಆ ಪಟ್ಟವನ್ನು ನಿಮಗೆ ಬಿಟ್ಟು ಕೊಡುವ ಸಾಧ್ಯತೆ ಇಲ್ಲ.


ಕೊರೋನ ವಿಷಯದಲ್ಲಿ ಕಾಂಗ್ರೆಸ್ ಸಲ್ಲದ ರಾಜಕಾರಣ ಮಾಡುತ್ತಿದೆ - ಈಶ್ವರಪ್ಪ, ಸಚಿವ
ಮಲ, ಮೂತ್ರ ಸಮೇತ ಎಲ್ಲವನ್ನೂ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಹಕ್ಕು ಸಂಪೂರ್ಣವಾಗಿ ಬಿಜೆಪಿಗೆ ಸೇರಿರುವಾಗ ಬೇರಾವುದೇ ಪಕ್ಷ ಕೊರೋನದಂತಹ ವಿಷಯಗಳ ಬಗ್ಗೆ ಮಾತನಾಡುವುದು ಹಕ್ಕುಚ್ಯುತಿಯಾಗುತ್ತದೆ.


ಕೊರೋನ ಸಾವಿನ ಲೆಕ್ಕ ಮುಚ್ಚಿಡುವಂತಹ ಪ್ರಮೇಯ ಬಂದಿಲ್ಲ- ಡಾ.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ
ಮತ್ತೇಕೆ ಮುಚ್ಚಿಡುತ್ತಿದ್ದೀರಿ?


ನಾನು ಈ ರಾಜ್ಯದ ಮುಖ್ಯಮಂತ್ರಿಯಾದರೆ ಹಗಲೂ ರಾತ್ರಿ ಕಷ್ಟ ಪಟ್ಟು ಸುವರ್ಣ ಕರ್ನಾಟಕ ಮಾಡುತ್ತೇನೆ- ಉಪೇಂದ್ರ, ನಟ
ಆ ತನಕ ಬೇರೇನಾದರೂ ಮಾಡಬಹುದಲ್ಲಾ?


ಸರಕಾರಿ ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡುವ ಕುರಿತು ಚಿಂತನೆ ನಡೆದಿದೆ - ಸುರೇಶ್ ಕುಮಾರ್, ಸಚಿವ
ಅವರಿಗೆಲ್ಲ ಮಾರುತಿ ಕಾರು ಕೊಡಿಸುವ ಯೋಜನೆ ಘೋಷಿಸಿದರೆ ಇನ್ನಷ್ಟು ಸಂಪಾದಿಸಬಹುದಲ್ಲಾ?


ಮಾರಣಾಂತಿಕ ಕಾಯಿಲೆಗೆ ಔಷಧಿ ಇಲ್ಲ ಎಂದರೆ ಅದು ಕೊಲೆಗೆ ಸಮಾನ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನೇರವಾಗಿ ಕೊಲೆಗಳನ್ನು ವೈಭವೀಕರಿಸುವವರಿಗೆ ಇಂತಹ ಟಾಂಟ್‌ಗಳು ಎಲ್ಲಿ ತಾಗುತ್ತವೆ?


ಕೊರೋನದಂತಹ ದುರಂತದ ಸಂದರ್ಭದಲ್ಲಿ ಕೇಂದ್ರ ಸರಕಾರ ಹಿಂದಿಯೇತರ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ - ವಿ.ಎಸ್.ಉಗ್ರಪ್ಪ, ಮಾಜಿ ಸಂಸದ
ದುರಂತವೇ ಬಂಡವಾಳವಾಗಿ ಬಿಟ್ಟರೆ ಇದೆಲ್ಲಾ ಸಹಜ.


ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ವದಂತಿ - ಜಗದೀಶ್ ಶೆಟ್ಟರ್, ಸಚಿವ
ಬದಲಾಗುವುದಿಲ್ಲ ಎಂಬುದೂ ಅಷ್ಟೇ.


ಇನ್ನು ಮುಂದೆ ಯಾರೊಬ್ಬರಿಗೂ ಹೋಮ್ ಐಸೋಲೇಶನ್‌ಗೆ ಅವಕಾಶ ನೀಡುವುದಿಲ್ಲ- ಕೆ.ಎಸ್.ಈಶ್ವರಪ್ಪ, ಸಚಿವ
ಆಸ್ಪತ್ರೆಗೆ ಹೋಗಿ ಆಕ್ಸಿಜನ್ ಇಲ್ಲದೆ ಸಾಯುವುದನ್ನು ಕಡ್ಡಾಯಗೊಳಿಸುತ್ತೀರಾ?


ಕಾಂಗ್ರೆಸ್ 50ವರ್ಷ ಅಧಿಕಾರ ನಡೆಸಿದರೂ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಸ್ವಲ್ಪ ಹಿಂದೆ ಹೋಗಿ ಈ ವಿಷಯದಲ್ಲಿ ಬ್ರಿಟಿಷರ ಮತ್ತು ಮೊಗಲ್ ದೊರೆಗಳ ವೈಫಲ್ಯವನ್ನೂ ವಿವರಿಸಲಾರಿರಾ?


ಕೋವಿಡ್ ಲಸಿಕೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು- ಬಸವರಾಜ ಬೊಮ್ಮಾಯಿ, ಸಚಿವ
ಹಾಗೆ ಅಕ್ರಮವಾಗಿ ಸಂಗ್ರಹಿಸಿಟ್ಟು ದಂಧೆ ನಡೆಸುವುದನ್ನು ಅನುಮತಿಸುವುದಕ್ಕೆ ಲಸಿಕೆಗಳೇನು ಶಾಸಕರೇ?


ಕೊರೋನದಿಂದ ಸಾವನ್ನಪ್ಪುವವರ ಮನೆ ಮಗನಾಗಿ ಅಂತಿಮ ಸಂಸ್ಕಾರದ ಉಸ್ತುವಾರಿ ವಹಿಸುವೆ - ಆರ್.ಅಶೋಕ್, ಸಚಿವ
ಅದಕ್ಕಾಗಿಯೇ ಯಾರಾದರೂ ಸಾಯಬೇಕೇ?


ಕಾಂಗ್ರೆಸ್ ನಾಯಕರು ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು - ಶ್ರೀರಾಮುಲು, ಸಚಿವ
ಹಾಗೆ ಮಾಡುವ ಹಕ್ಕಿನ ಮೇಲೆ ಬಿಜೆಪಿಗೇನು ಏಕ ಸ್ವಾಮ್ಯ ಇದೆಯೇ?


ರಾಜ್ಯದಲ್ಲಿ ಕೊರೋನ ಎರಡನೇ ಅಲೆಯಲ್ಲಿ ಇದುವರೆಗೆ 3.6ಲಕ್ಷ ಜನರಿಗೆ ಸೇವೆ ಒದಗಿಸಲಾಗಿದೆ - ಡಾ.ಸಿ.ಎಸ್.ಅಶ್ವತ್ಥನಾರಾಯಣ, ಡಿಸಿಎಂ
ಹಾಗಾದರೆ ಸೇವೆ ಸಿಕ್ಕಿಲ್ಲದವರ ಸಂಖ್ಯೆ ಎಷ್ಟು ದೊಡ್ಡದಿರಬಹುದು?


ಮೊದಲ ಪಶು ಸಂಗೋಪನಾ ವಾರ್ ರೂಂ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ - ಪ್ರಭು ಚೌಹಾಣ್, ಸಚಿವ
ಮಾನವರ ನಡುವೆ ವಾರ್ ಮಾಡಿಸಿದ್ದು ಸಾಲದೇ?


ಮರ್ಯಾದೆಗೆ ಅಂಜಿ ಸೀಡಿ ಲೇಡಿಗೆ ನಾನು ಅಲ್ಪ ಪ್ರಮಾಣದ ಹಣ ನೀಡಿದ್ದೆ - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಹಂತ ಬರುವ ಮುನ್ನವೇ ಮರ್ಯಾದೆಗೆ ಒಂದಿಷ್ಟು ಅಂಜಿದ್ದರೆ ಈ ಅವಸ್ಥೆ ಬರುತ್ತಿತ್ತೇ?


ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಜನನಾಯಕರು ತಮ್ಮ ಮಕ್ಕಳಿಂದ ಈ ಪ್ರಯೋಗ ಆರಂಭಿಸಿದ್ದರೆ ಜನರ ವಿಶ್ವಾಸವಾದರೂ ಪ್ರಾಪ್ತವಾಗುತ್ತಿತ್ತು.


ಇಡೀ ದೇಶವನ್ನು ಕ್ರಿಶ್ಚಿಯಾನಿಟಿ ದೇಶವಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ - ಆಚಾರ್ಯ ಬಾಲಕೃಷ್ಣ , ಬಾಬಾ ರಾಮದೇವ್ ಆಪ್ತ
ಅದನ್ನು ತಡೆಯುವ ಹೆಸರಲ್ಲಿ ಪತಂಜಲಿಯ ಮೂಲಕ ಹೊಸ ಲಸಿಕೆ ತಯಾರಿಸಿ ಮಾರುವುದಕ್ಕೆ ಪೂರ್ವ ಸಿದ್ಧತೆಯೇ?


ಭಾರತದ ಪ್ರಸಕ್ತ ಸರಕಾರವನ್ನು ನಿರ್ದಿಷ್ಟ ರೀತಿಯಲ್ಲಿ ಬಿಂಬಿಸಲು ‘ರಾಜಕೀಯ ಪ್ರಯತ್ನ’ವೊಂದು ನಡೆಯುತ್ತಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ
ಈ ಪ್ರಯತ್ನಕ್ಕೆ ಅತ್ಯಧಿಕ ಕೊಡುಗೆ ನೀಡುತ್ತಿರುವುದು ಸರಕಾರವೇ ತಾನೇ?


ಬಿಜೆಪಿಯವರಿಗೆ ಪ್ರಧಾನಿ ಮೋದಿಯ ವರ್ಚಿಸ್ಸಿನದ್ದೇ ಚಿಂತೆ- ರಮಾನಾಥ ರೈ , ಮಾಜಿ ಸಚಿವ
ಮತ್ತೆ ಅವರೇನು, ಕಾಂಗ್ರೆಸಿಗರಂತೆ ತಮ್ಮ ಪಕ್ಷ ಹಾಗೂ ನಾಯಕನ ವರ್ಚಸ್ಸಿನ ಬಗ್ಗೆ ನಿಶ್ಚಿಂತರಾಗಿರಬೇಕೇ?


ಯಾರೋ ಇಬ್ಬರು ದಿಲ್ಲಿಗೆ ಹೋಗಿ ಬಂದ ಕೂಡಲೇ ಸಿಎಂ ಬದಲಾವಣೆ ಆಗುವುದಿಲ್ಲ- ಎಂ.ಪಿ.ರೇಣುಕಾಚಾರ್ಯ, ಶಾಸಕ
ಆದ್ದರಿಂದ ಮುಂದಿನ ವಾರ ಇನ್ನಷ್ಟು ಮಂದಿಯನ್ನು ಕಳಿಸುತ್ತೀರಾ?


ನಮ್ಮ ಯಾವ ಶಾಸಕರೂ ಮುಖ್ಯಮಂತ್ರಿಯ ಕನಸು ಕಾಣುತ್ತಾ ಹೊಸ ಬಟ್ಟೆ ಹೊಲಿಸಿಕೊಂಡಿಲ್ಲ - ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷ
ಇದು ಶಾಸಕರಲ್ಲದವರೂ ಪಟ್ಟಕ್ಕೇರುವರು ಎಂಬುದರ ಮುನ್ಸೂಚನೆ ಅಲ್ಲ ತಾನೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!