ಓ ಮೆಣಸೇ...

Update: 2021-07-04 19:30 GMT

ಶ್ರೀರಾಮ ಮಾಡಿದ ರೀತಿಯಲ್ಲಿಯೇ ಅಯೋಧ್ಯೆಯನ್ನು ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದ್ದೇನೆ - ನರೇಂದ್ರ ಮೋದಿ, ಪ್ರಧಾನಿ
ಸದ್ಯ ಅಲ್ಲಿರುವ ರಾವಣ ಇನ್ನೊಬ್ಬ ರಾವಣನ ಮಾತನ್ನು ಕೇಳಿಸಿಕೊಳ್ಳುತ್ತಾನೆಯೇ?


ನಾನು ಕೂಡಾ ರೈತನ ಮಗ, ನನಗೂ ಬೇಸಾಯ, ಕೃಷಿ ಮಾಡಿ, ಎತ್ತು ಕಟ್ಟಿ, ಉಳುಮೆ ಮಾಡಿ ಅನುಭವ ಇದೆ - ಬಿ.ಸಿ.ಪಾಟೀಲ್, ಸಚಿವ
ಅದನ್ನೇ ಮುಂದುವರಿಸಿದ್ದರೆ ಸಮಾಜ ಸುರಕ್ಷಿತವಾಗಿರುತ್ತಿತ್ತು.


ಹೆಚ್ಚು ಮಾತನಾಡದಂತೆ ಹಿರಿಯರು ನನಗೆ ಸ್ವಲ್ಪ ಖಾರವಾಗಿಯೇ ಹೇಳಿದ್ದಾರೆ. ಹಾಗಾಗಿ ಮುಂದಿನ 8-10 ದಿನ ಮಾಧ್ಯಮದವರ ಜೊತೆ ಮಾತನಾಡುವುದಿಲ್ಲ -ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಹಿರಿಯರ ಕಾಲದಲ್ಲಿ ವೀಡಿಯೊ ಇದ್ದಿದ್ದರೆ ಅದರ ಬಗ್ಗೆ ಎಚ್ಚರವಹಿಸುವಂತೆಯೂ ಅವರು ಉಪದೇಶಿಸುತ್ತಿದ್ದರು.


ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಲವು ಬೆಳವಣಿಗೆಗಳಿಂದ ನೋವಾಗಿದೆ -ಡಾ.ಸುಧಾಕರ್, ಸಚಿವ
ಅಂತಹ ನೋವುಗಳಿಗೆಲ್ಲಾ ಮಸಾಜ್ ಪರಿಹಾರವಲ್ಲ ಎಂದು ತಿಳಿಸಿ ಬಿಡಿ.


ಕೋವಿಡ್‌ಗೆ ಒಳಗಾಗಿ ಮೃತಪಟ್ಟವರ ಶವಸಂಸ್ಕಾರ ಮಾಡಿದವರನ್ನು ಸನ್ಮಾನಿಸಲಾಗುವುದು - ನಳಿನ್‌ಕುಮಾರ್ ಕಟೀಲು, ಸಂಸದ
ಇದು, ಸಕ್ರಿಯರಿಗೆ ಸಲ್ಲಬೇಕಾದ ಕಿರೀಟವನ್ನು ನಿಷ್ಕ್ರಿಯರಿಗೆ ತೊಡಿಸಿ ವೈಭವೀಕರಿಸುವ ಉಪಾಯ ಅಲ್ಲ ತಾನೇ?


ಕಾಂಗ್ರೆಸ್‌ನ ಕೀಲಿಕೈ ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಯಲ್ಲಿದೆ - ಸಿಎಂ ಇಬ್ರಾಹೀಮ್, ಶಾಸಕ
ಬೀಗ ಬೇರೆಯವರ ಕೈಯಲ್ಲಿರುವಾಗ ಕೀಲಿಕೈ ಹಿಡಿದುಕೊಂಡು ಮೈತುರಿಸಿಕೊಳ್ಳಬೇಕಷ್ಟೆ.


ಫಲಿತಾಂಶ ಬಂದ ಬಳಿಕವೂ ಮಾತನಾಡಿದರೆ ನಮ್ಮಂತಹ ಮೂರ್ಖರು ಯಾರೂ ಇಲ್ಲ - ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ
ನೀವು ಮಾತನಾಡಿದರೂ ಮಾತನಾಡದಿದ್ದರೂ ನಿಮ್ಮ ಮೂರ್ಖತನದ ಬಗ್ಗೆ ಯಾವ ಮೂರ್ಖರು ತಾನೇ ಸಂಶಯಿಸುತ್ತಾರೆ?


ಮೇನಕಾಗಾಂಧಿ ನಮ್ಮ ಪಕ್ಷದ ಸಂಸದೆ ಎಂದು ಹೇಳಲು ಅವಮಾನವಾಗುತ್ತದೆ -ಅಜಯ್ ವಿಷ್ಣೋಯಿ, ಉ.ಪ್ರ. ಬಿಜೆಪಿ ಶಾಸಕ
ಮಾನ ಇದ್ದವರಿಗೆ ಆ ಪಕ್ಷದಲ್ಲಿ ಅವಮಾನ ಅನುಭವಿಸುವುದಕ್ಕೆ ಬೇರೆ ಸಾವಿರ ಕಾರಣಗಳೂ ಇವೆಯಲ್ಲ?


ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿ ಜಾರಿಗೆ ಬದ್ಧ -ಅಮಿತ್ ಶಾ, ಕೇಂದ್ರ ಸಚಿವ
ಅಂದರೆ ಮಾದಕ ದ್ರವ್ಯಗಳನ್ನು ಮೂಲಭೂತ ಮಾನವ ಹಕ್ಕುಗಳೆಂದು ಪರಿಗಣಿಸಿ ಆರೀತಿ ವ್ಯವಹರಿಸುವಿರಾ?


ಸಿದ್ದರಾಮಯ್ಯ ನಾಯಕ, ನಾನು ಹಿನ್ನೆಲೆ ಗಾಯಕ - ಸಿ.ಎಂ.ಇಬ್ರಾಹೀಮ್, ಶಾಸಕ
ಹಾಗೆಲ್ಲ ಹೇಳಿ ಜನರನ್ನು ಹೆದರಿಸಿ ಅವರಿಂದ ದೂರ ಓಡಿಸಬೇಡಿ.


ರಮೇಶ್ ಜಾರಕಿಹೊಳಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ - ಬೈರತಿ ಬಸವರಾಜ್, ಸಚಿವ
ಅವುಗಳನ್ನು ನೋಡಿದ ಜನ ಸಾಮಾನ್ಯರಿಗಷ್ಟೇ ಮುಜುಗರ.


ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಆಗುವುದೋ ಇಲ್ಲವೋ ಎಂದು ಹೇಳುವಷ್ಟು ನಾನು ದೊಡ್ಡವನಲ್ಲ -ಸಿ.ಟಿ.ರವಿ, ಶಾಸಕ
ದಡ್ಡನಲ್ಲ ಎಂದಿರಬೇಕು.


ಕೊರೋನ 3ನೇ ಅಲೆ ಹಿನ್ನೆಲೆಯಲ್ಲಿ ಗುಜರಿ ಬಸ್‌ಗಳನ್ನು ಐಸಿಯು ಬೆಡ್ ಹಾಗೂ ಮೊಬೈಲ್ ಫೀವರ್ ಕ್ಲಿನಿಕ್‌ಗಳಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ - ಲಕ್ಷ್ಮಣ ಸವದಿ, ಡಿಸಿಎಂ
ಅವುಗಳನ್ನು ಮೊದಲ ಆರು ತಿಂಗಳ ಮಟ್ಟಿಗಾದರೂ ಕೇವಲ ಸಚಿವರ ಬಳಕೆಗೆ ಮೀಸಲಾಗಿಡಬೇಕು.


ನಾನು ಮತ್ತು ಪತ್ನಿ ಐಶ್ವರ್ಯಾ ರೈ ಜೊತೆಯಾಗಿ ನಟಿಸಿದ ಚಿತ್ರಗಳ ಪೈಕಿ 8ರಲ್ಲಿ ನನಗೆ ಅವಳಿಗಿಂತ ಕಡಿಮೆ ಸಂಭಾವನೆ ದೊರೆತಿತ್ತು - ಅಭಿಷೇಕ್ ಬಚ್ಚನ್, ನಟ
ಅಮಿತಾಬ್ ಅವರ ಬಚ್ಚ ಆಗದಿದ್ದರೆ, ಐಶ್ವರ್ಯ ರೈ ದೊರೆಯುವುದೇ ಕಷ್ಟವಿತ್ತು.


ಭಾರತದ ಆರ್ಥಿಕತೆಯ ಇತಿಹಾಸದಲ್ಲೇ ಜಿಎಸ್‌ಟಿಯು ಒಂದು ಮಹತ್ವದ ಮೈಲಿಗಲ್ಲು -ನರೇಂದ್ರ ಮೋದಿ, ಪ್ರಧಾನಿ
ವಿನಾಶದ ದಾರಿಯಲ್ಲೂ ಮೈಲುಗಲ್ಲುಗಳು ಇರುತ್ತವೆ, ಅಲ್ಲವೇ?


ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಶ್ವಾಸಕೋಶ ಸರಿಯಾಗಿದೆ, ಸರಕಾರ ಸಹಜವಾಗಿ ಉಸಿರಾಡುತ್ತಿದೆ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಸತ್ತಿರುವುದು ಮಿದುಳು ಮಾತ್ರ ಎಂದು ಸ್ಪಷ್ಟವಾಗಿ ಹೇಳಿ ಸಾರ್.


ನಾನು ಮತ್ತು 100 ವರ್ಷ ಆಸುಪಾಸಿನ ನನ್ನ ತಾಯಿ ಕೂಡಾ ಎರಡು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ನೀವು ನಿಮ್ಮ ತಾಯಿ ತೆಗೆದುಕೊಂಡರೆ ಸಾಕೆ? ಉಳಿದ ತಾಯಂದಿರಿಗೆ ಎಷ್ಟರಮಟ್ಟಿಗೆ ಒದಗಿಸಿದ್ದೀರಿ ಎನ್ನುವ ಲೆಕ್ಕ ಕೊಡಿ.


ದುಷ್ಟರ ಸಂಹಾರ ಆಗಬೇಕು. ಆದರಿಂದ ದೇಶ, ರಾಜ್ಯ ಮತ್ತು ಬಿಜೆಪಿ ಪಕ್ಷಕ್ಕೆ ಒಳ್ಳೆಯದಾಗುತ್ತದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಆದರೆ ಎಲ್ಲ ದುಷ್ಟರ ಸಂಹಾರವಾಗಿ ಬಿಟ್ಟರೆ ಮತ್ತೆ ಪಕ್ಷದಲ್ಲಿ ಎಷ್ಟು ಮಂದಿ ತಾನೇ ಉಳಿಯುತ್ತಾರೆ?


ಹಾದಿ -ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ - ಮುರುಗೇಶ್ ನಿರಾಣಿ, ಸಚಿವ
ನೀವೇನು ಮೂಗರ ನಾಯಕರೇ?


ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸವಾಲು ನನ್ನ ಮುಂದಿದೆ - ಯಡಿಯೂರಪ್ಪ, ಮುಖ್ಯಮಂತ್ರಿ
ಸರಿ, ದೀರ್ಘಾಯುಷ್ಯಕ್ಕಾಗಿ ಪ್ರಯತ್ನಿಸೋಣ.


ಸಿಎಂ ಯಡಿಯೂರಪ್ಪ ಹಾಗೂ ನಳಿನ್‌ಕುಮಾರ್ ಕಟೀಲು ನಮ್ಮ ಕ್ಯಾಪ್ಟನ್ - ಎಸ್.ಟಿ.ಸೋಮಶೇಖರ್, ಸಚಿವ
ಟೈಟಾನಿಕ್ ಹಡಗಿನ ಕತೆ ಹೇಳುತ್ತಿರಬೇಕು.


ದೇಶಭಕ್ತಿ ಕುರಿತ ಸಿನೆಮಾ ನೋಡಿದವರೆಲ್ಲ ದೇಶಭಕ್ತರಾಗಿಲ್ಲ - ಗಿರೀಶ್ ಕಾಸರವಳ್ಳಿ, ನಿರ್ದೇಶಕ
ತಮ್ಮ ಪ್ರಶಸ್ತಿ ವಿಜೇತ ಚಿತ್ರಗಳನ್ನು ಜನರು ಆ ಕಾರಣಕ್ಕೆ ನೋಡುತ್ತಿಲ್ಲ ಇರಬೇಕು.


ಕಾಂಗ್ರೆಸ್ ನಾಯಕರಿಗೂ ಮುಖ್ಯಮಂತ್ರಿ ಸ್ಥಾನದ ವೈರಸ್ ಅಂಟಿದೆ - ಶ್ರೀರಾಮುಲು, ಸಚಿವ
ನೀವೇನು ವ್ಯಾಕ್ಸಿನ್ ತೆಗೆದುಕೊಂಡು ಆ ವೈರಸ್‌ನಿಂದ ಮುಕ್ತಿ ಪಡೆದಿದ್ದೀರಾ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!