ಓ ಮೆಣಸೇ...

Update: 2021-07-18 18:41 GMT

ಜನಸಂಖ್ಯೆಯ ಹೆಚ್ಚಳವು ಅಭಿವೃದ್ಧಿಗೆ ಮಾರಕ-ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ

ಜನರನ್ನೇ ನೀವು ಸಮಸ್ಯೆಗಳಾಗಿ ಕಾಣುವುದಾದರೆ ಕತ್ತೆಗಳ ಲೋಕದಲ್ಲಿ ಮುಖ್ಯಮಂತ್ರಿಯಾಗಬಹುದಿತ್ತು.


ತೈಲ ಬೆಲೆ ದಿನದಿಂದ ದಿನ ಹೆಚ್ಚಾಗುತ್ತಿದ್ದು, ಜನರು ಸೈಕಲ್‌ನಲ್ಲಿ ಓಡಾಡಿದರೆ ಆರೋಗ್ಯ ಹಾಗೂ ಆರ್ಥಿಕ ಲಾಭವಾಗಲಿದೆ -ಜಿ.ಎಂ. ಸಿದ್ದೇಶ್ವರ, ಸಂಸದ
ನೀವು ಓಟುಕೇಳಲು ಸೈಕಲ್ ಹೊರತು ಬೇರಾವುದೇ ವಾಹನದಲ್ಲಿ ತಿರುಗಾಡಿದರೆ ಜನರು ನಿಮ್ಮ ಆರೋಗ್ಯ ಕೆಡಿಸುವುದು ಖಚಿತ.


ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಮುಗಿದು ಹೋದ ಅಧ್ಯಾಯ - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಎಲ್ಲ ಅಧ್ಯಾಯಗಳ ರೆಕಾರ್ಡಿಂಗ್ ನಡೀತಿದೆ ಎಂಬುದನ್ನೇಕೆ ಮರೆಯುತ್ತೀರಿ?


ಪ್ರಧಾನಿ ಮೋದಿಯ ಸಮರ್ಥ ನಾಯಕತ್ವದಿಂದಾಗಿ ನಾವೀಗ ಹೊಸ ಭಾರತದಲ್ಲಿದ್ದೇವೆ - ಡಾ.ಸುಧಾಕರ್, ಸಚಿವ
ಹಳೆಯ ಸಂಪನ್ನ ಭಾರತ ಬೇಕಿದ್ದರೆ ಹೊಸ ನಾಯಕರನ್ನು ಕಂಡುಕೊಳ್ಳಬೇಕೇ?


 ಬಿಜೆಪಿ ಕಾರ್ಯಕರ್ತರು ಯಾವತ್ತೂ ಅಧಿಕಾರ ದಾಹಕ್ಕಾಗಿ ಕೆಲಸ ಮಾಡುವುದಿಲ್ಲ - ನಳಿನ್‌ಕುಮಾರ್ ಕಟೀಲು, ಸಂಸದ
ಅಧಿಕಾರಕ್ಕಾಗಿ ಬೇರೆ ಕೆಲಸವೇನೂ ಮಾಡಬೇಕಾಗಿಲ್ಲ, ಗಲಭೆಗಳನ್ನು ಮಾಡಿಸಿದರೆ ಸಾಕು ಎಂದು ಅವರಿಗೆ ಅರಿವಾಗಿದೆ.


ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಉನ್ನತ ಜವಾಬ್ದಾರಿ ನೀಡುವ ಏಕೈಕ ಪಕ್ಷ ಬಿಜೆಪಿ ಎಂಬುದಕ್ಕೆ ನಾನೇ ಉದಾಹರಣೆ -ಭಗವಂತ ಖೂಬಾ, ಕೇಂದ್ರ ಸಚಿವ
ಸಾಮಾನ್ಯ ಕಾರ್ಯಕರ್ತರ ಅಸಾಮಾನ್ಯ ದ್ವೇಷ ಭಾಷಣಗಳನ್ನು ಆಧರಿಸಿ ಗುರುತಿಸುತ್ತಾರಂತೆ.


ಯಡಿಯೂರಪ್ಪನವರು ಆರು ಸೂಟ್ ಕೇಸ್ ಹಿಡಿದುಕೊಂಡು ದಿಲ್ಲಿಗೆ ಹೋದದ್ದೇಕೆ? - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ತೊಂಭತ್ತ ನಾಲ್ಕು ಇನ್ನೂ ಇಲ್ಲೇ ಇವೆ. ನಿಮ್ಮ ಶಾಸಕರನ್ನು ಕಾವಲಿಡಿ.


ರೌಡಿ ಕೋತ್ವಾಲನ ಶಿಷ್ಯನನ್ನು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದು ದುರಂತ -ಎಸ್.ರವಿಕುಮಾರ್, ಬಿಜೆಪಿ ಕಾರ್ಯದರ್ಶಿ

ನಿಮ್ಮ ಪಕ್ಷದಲ್ಲಿ ಅಂತಹ ಸ್ಥಾನಗಳನ್ನು ರೌಡಿ ಗುರುಗಳಿಗೆ ಮೀಸಲಾಗಿ ಇಡಲಾಗುತ್ತದೆಂಬುದು ಎಲ್ಲರಿಗೆ ಗೊತ್ತಿದೆ ಬಿಡಿ.


ಹಿಂದೂ ಯುವಕನೊಬ್ಬ ಹಿಂದೂ ಯುವತಿಗೆ ಸುಳ್ಳು ಹೇಳಿ ಪುಸಲಾಯಿಸುವುದೂ ಲವ್ ಜಿಹಾದ್ - ಹಿಮಂತ ಬಿಸ್ವಾಶರ್ಮಾ, ಅಸ್ಸಾಂ ಮುಖ್ಯಮಂತ್ರಿ
ಬ್ರಾಹ್ಮಣ ಯುವಕನೊಬ್ಬ ಶೂದ್ರ ಯುವತಿಯ ತಂದೆಗೆ ದುಡ್ಡು ಕೊಟ್ಟು ಯುವತಿಯನ್ನು ಶುದ್ಧೀಕರಿಸಿ ಮದುವೆ ಆಗುವುದು ಜಿಹಾದ್ ವ್ಯಾಪ್ತಿಗೆ ಬರುತ್ತದೆಯೇ?


ಕೆಲವರು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ -ಎಂ.ಪಿ.ರೇಣುಕಾಚಾರ್ಯ, ಶಾಸಕ

ಯಾರೇನೇ ಪ್ರಚಾರ ಮಾಡಲಿ - ಬ್ರಾಹ್ಮಣ ಅಲ್ಪ ಸಂಖ್ಯಾತರು ಅದನ್ನು ಒಪ್ಪಲಾರರು.


ಅರಣ್ಯ ಸಚಿವರು ಮತದಾರರಿಗಿಂತ ಹೆಚ್ಚು ಮರಗಳು, ಕಾಡುಪ್ರಾಣಿಗಳ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ ಅವರು ಜನಪ್ರಿಯರಾಗುವುದಿಲ್ಲ - ಅರವಿಂದ ಲಿಂಬಾವಳಿ, ಸಚಿವ
ಮತದಾರರನ್ನು ಮಾರಿ ಹೆಚ್ಚು ಲಾಭ ಇದ್ದಿದ್ದರೆ ಅವರು ಆ ಕುರಿತು ಚಿಂತಿಸುತ್ತಿದ್ದರೇನೋ!



ಮನೆಯಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
ನೀವು ವೇದಿಕೆಗಳಲ್ಲಿ ಪ್ರದರ್ಶಿಸುವ ಬೆಂಕಿ ಉಗುಳುವ ಸಂಸ್ಕೃತಿಯೇ?


ಭಾರತದಲ್ಲಿರುವ ಎಲ್ಲ ಮುಸ್ಲಿಮರು, ಕ್ರೈಸ್ತರು ತಲೆಮಾರುಗಳ ಹಿಂದೆ ಹಿಂದೂಗಳೇ ಆಗಿದ್ದರು - ಹಿಮಂತ ಬಿಸ್ವಾಶರ್ಮಾ, ಅಸ್ಸಾಂ ಮುಖ್ಯಮಂತ್ರಿ

ಹಾಗಿರುವಾಗ ಅಚಾನಕ್ಕಾಗಿ ಅವರು ಬಾಂಗ್ಲಾ ಅಕ್ರಮ ವಲಸಿಗರು ಆದದ್ದು ಹೇಗೆ?


ಕಾಂಗ್ರೆಸ್‌ನಲ್ಲಿ ಇನ್ನು ಮುಂದೆ ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಪಕ್ಷವನ್ನು ದಫನ ಮಾಡುವುದು ಎಲ್ಲಿ, ಯಾವಾಗ ಎಂಬ ಪ್ರಶ್ನೆಗಳೇ ಮುಖ್ಯವಾಗಿರುವಾಗ ಇತರ ಪ್ರಶ್ನೆಗಳಿಗೆ ಔಚಿತ್ಯವೆಲ್ಲಿದೆ?


ಸಾಹಸ ಮಾಡದೇ ಸಾಧನೆ ಮಾಡಲು ಸಾಧ್ಯವಿಲ್ಲ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರಮಠ

ಆದರೆ ಸಾಧನೆಗಳು ಸಿಡಿಯಲ್ಲಿ ದಾಖಲಾಗದಂತೆ ನೋಡಿಕೊಳ್ಳಿ.


ನಟ ದಿಲೀಪ್‌ಕುಮಾರ್ ಅವರು ಒಳ್ಳೆಯ ಕುಟುಂಬದ ಮಕ್ಕಳು ನಟರಾಗಬಾರದು ಎಂದಿದ್ದರು - ನಾಸಿರುದ್ದೀನ್ ಶಾ, ನಟ
ಕೇವಲ ನಟನೆಯ ಸಾಮರ್ಥ್ಯದಿಂದ ದೊಡ್ಡ ದೊಡ್ಡ ಅಧಿಕಾರದ ಹುದ್ದೆಗಳನ್ನು ಪಡೆದವರನ್ನು ಅವರು ಬಹುಶಃ ಗಮನಿಸಿರಲಿಲ್ಲ.



ಬಿಜೆಪಿ ನನಗೆ ಕೊಟ್ಟಂತಹ ಅವಕಾಶಗಳು ಬಹುಶಃ ರಾಜ್ಯದಲ್ಲಿ ಬೇರೆ ಯಾರಿಗೂ ಸಿಕ್ಕಿಲ್ಲ - ಡಿ.ವಿ.ಸದಾನಂದಗೌಡ, ಸಂಸದ
ವೀಡಿಯೊದಲ್ಲಿ ಈ ವಿಷಯವೂ ಉಂಟೇ?


 ಕೊರೋನ ಸೋಂಕು ತಗ್ಗಿದೆ. ಆದರೆ ಜನರ ನಡವಳಿಕೆ ನೋಡಿದರೆ ಭಯವಾಗುತ್ತದೆ - ನರೇಂದ್ರ ಮೋದಿ, ಪ್ರಧಾನಿ
ಹೌದು ತಮ್ಮ ಹಂತಕರ ಬಗೆಗಿನ ಅವರ ಅಭಿಮಾನ ಇನ್ನೂ ಸಂಪೂರ್ಣ ಕುಂದಿಲ್ಲ.


   ಮುಂದಿನ ಮುಖ್ಯಮಂತ್ರಿ ಯಾರು ಎಂದು ಚರ್ಚಿಸುವುದು ಯುವ ಕಾಂಗ್ರೆಸ್‌ನ ಕೆಲಸವಲ್ಲ -ರಕ್ಷಾ ರಾಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ
ಅದು ಎಂದಾದರೂ ಅಧಿಕಾರಕ್ಕೆ ಬರಲಿರುವ ಪಕ್ಷಗಳು ಚರ್ಚಿಸಬೇಕಾದ ವಿಷಯ.


ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದು, ನ್ಯಾಯ ಒದಗಿಸುವ ಭರವಸೆ ಕೊಟ್ಟಿದ್ದಾರೆ - ಬಸವರಾಜ ಬೊಮ್ಮಾಯಿ, ಸಚಿವ

ಮೇಕೆಯನ್ನು ಬಿರಿಯಾನಿ ಮಾಡುವ ಕುರಿತಂತೆ ತಮಿಳುನಾಡು ಮುಖಂಡರ ಜೊತೆ ಕೇಂದ್ರ ಸಚಿವರು ಮಾತುಕತೆ ನಡೆಸಿದ್ದಾರಂತೆ.


ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿಯೇ ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಕಾಯ್ದೆಯ ಅಗತ್ಯವಿದೆ - ಸಿ.ಟಿ.ರವಿ, ಶಾಸಕ

ಕೆಲವು ದಶಕಗಳ ಹಿಂದೆಯೇ ಮಾಡಿದ್ದರೆ, ಇಂತಹ ಹೇಳಿಕೆಗಳನ್ನೂ ಕೇಳಬೇಕಾಗಿರಲಿಲ್ಲ.


ಮಹಿಳೆ ವೃತ್ತಿ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದ್ದರೂ ಮನೆಗೆ ಬಂದ ನಂತರ ಏನು ಅಡುಗೆ ಮಾಡಿದ್ದಿಯಾ ಎಂದು ಕೇಳುವ ಪರಿಸ್ಥಿತಿ ನಮ್ಮ ಮನೆಗಳಲ್ಲಿವೆ - ಪೂಜಾಭಟ್, ನಟಿ

ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಬಯಸುವ ಪುರುಷರು ಅಡುಗೆಯ ರಂಗದಲ್ಲಿ ಅವರ ಸಾಧನೆಯನ್ನು ಕಡೆಗಣಿಸುವಂತಿದೆಯೇ?


ಆಮ್ ಆದ್ಮಿ ಪಕ್ಷ ಪಂಜಾಬ್‌ಗಾಗಿ ನಾನು ಹೊಂದಿರುವ ದೂರದೃಷ್ಟಿ ಮತ್ತು ನನ್ನ ಕೆಲಸವನ್ನು ಗುರುತಿಸಿದೆ - ನವಜೋತ್ ಸಿಂಗ್ ಸಿಧು, ಪಂಜಾಬ್ ಶಾಸಕ
ನಿಮ್ಮ ವಿದೂಷಕ ಪ್ರತಿಭೆಯನ್ನು ಜಗತ್ತೇ ಗುರುತಿಸಿದೆ.


ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ವಿವಿಧ ಪಕ್ಷಗಳ ನಾಯಕರ ಪ್ರವಾಹ ಬರಲಿದೆ - ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಮುಖಂಡ
ನೀವು ಕೊಚ್ಚಿಹೋಗುವ ಸಾಧ್ಯತೆಯೂ ಜೊತೆಗೇ ಇದೆ. 


ಕೆಆರ್‌ಎಸ್‌ನಲ್ಲಿ ಬಿರುಕು ಕಾಣಿಸುತ್ತಿಲ್ಲ ಆದರೆ ಅಪಾಯ ಕಾಣಿಸುತ್ತಿದೆ - ಸುಮಲತಾ, ಸಂಸದೆ

 ರಾಜಕೀಯ ಬಿರುಕಿನ ಪರಿಣಾಮ ಇರಬೇಕು.


ಎಂಟು ಬಾರಿ ಶಾಸಕನಾದ ನನಗೂ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ - ಉಮೇಶ್ ಕತ್ತಿ, ಸಚಿವ
ನಿಮ್ಮ ಹೆಸರಲ್ಲಿರುವ ಕತ್ತಿಯನ್ನು ಅವರು ಕತ್ತೆ ಎಂದು ಭಾವಿಸಿ ಮುಖ್ಯಮಂತ್ರಿ ಹುದ್ದೆ ಕೊಟ್ಟಿರಲಿಕ್ಕಿಲ್ಲ.


ಕರ್ನಾಟಕ ಪೊಲೀಸ್ ಪಡೆ ದಕ್ಷತೆಗೆ ದೇಶದಲ್ಲೇ ಮಾದರಿ ಎನಿಸಿಕೊಂಡಿದೆ- ಯಡಿಯೂರಪ್ಪ, ಮುಖ್ಯಮಂತ್ರಿ
ಯಾವ ದೇಶದಲ್ಲಿ ಸಾರ್?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!