ಓ ಮೆಣಸೇ...
ಸಂಸತ್ತು ಪ್ರಜಾಪ್ರಭುತ್ವದ ದೇಗುಲ - ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಅದನ್ನು ಸದ್ಯ ಆಕ್ರಮಿಸಿರುವ ದುಷ್ಟಶಕ್ತಿಗಳ ಕೈಯಿಂದ ವಿಮೋಚಿಸುವ ಅಗತ್ಯವಿದೆ.
ಜನಪ್ರಿಯವಾಗುವುದಕ್ಕಿಂತ ಜನೋಪಯೋಗಿ ಆಗುವುದು ಬಹಳ ಮುಖ್ಯ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಹೀಗೆಲ್ಲ ಹೇಳಿದ್ದ ಭಾರೀ ಜನಪ್ರಿಯರೊಬ್ಬರು ಕೊನೆಗೆ ಕಾರ್ಪೊರೇಟ್ ದಾಸರಾಗಿ ಬಿಟ್ಟರಲ್ಲಾ ಸಾರ್!
ಸಾವರ್ಕರ್ ಬಗ್ಗೆ ಗೊತ್ತಿಲ್ಲದವರಿಗೆ ತಮ್ಮ ಹುಟ್ಟಿನ ಬಗ್ಗೆಯೂ ಸಂಶಯವಿರಬಹುದು - ಸಿ.ಟಿ.ರವಿ, ಶಾಸಕ
ವಿಶೇಷವಾಗಿ, ಅವರ ಕ್ಷಮಾಪಣಾ ಪತ್ರಗಳ ಬಗ್ಗೆ ಗೊತ್ತಿಲ್ಲದಿದ್ದರೆ, ಸ್ಫೂರ್ತಿ ಎಲ್ಲಿಂದ ಸಿಗಬೇಕು?
ರಾಜಕೀಯದಲ್ಲಿ ಶೂರರ ಹಿಂದೆ ಸದಾ ಷಡ್ಯಂತ್ರ ನಡೆಯುತ್ತಿರುತ್ತದೆ - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಷಡ್ಯಂತ್ರ ಹೂಡುವವರು ಶೂರರ ಶೌರ್ಯದ ವೀಡಿಯೊ ರೆಕಾರ್ಡಿಂಗ್ ಮಾಡುತ್ತಿರುತ್ತಾರೆ.
ಜಿಎಸ್‌ಟಿ ರಾಜಕೀಯ ಮಾಡುವ ವಿಚಾರವಲ್ಲ - ಭಗವಂತ ಖೂಬಾ, ಸಚಿವ
ಅದು ಕೇವಲ ದೋಚುವ ಅಸ್ತ್ರ ಅಷ್ಟೇ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ - ಅರುಣ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ
ನಿಮ್ಮ ಹೈಕಮಾಂಡ್ ಸಾವಿರಾರು ಬಾರಿ ಇದೇ ಮಾತನ್ನು ಯಡಿಯೂರಪ್ಪನವರ ಕುರಿತು ಹೇಳಿತ್ತೆಂಬುದನ್ನು ಮರೆತವರು ಮಾತ್ರ ಇದನ್ನು ನಂಬಬಹುದು.
ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳದಿದ್ದರೆ ಮುಂದೊಂದು ದಿನ ಆ ದೇಶದ ಎದುರು ಮಂಡಿಯೂರಬೇಕಾದ ಅನಿವಾರ್ಯತೆ ಎದುರಾಗುತ್ತದೆ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಮಂಡೆ ಊರಿಯಾದ ಮೇಲೆ ಮಂಡಿ ಯಾವ ಲೆಕ್ಕ?
ಕೊಟ್ಟ ಕುದುರೆ ಇಳಿದರೆ ಶೂರನಾಗುವುದಿಲ್ಲ ಎನ್ನುವ ಕಾರಣಕ್ಕೆ ಗೃಹ ಖಾತೆ ನಿಭಾಯಿಸುತ್ತಿರುವೆ -ಆರಗ ಜ್ಞಾನೇಂದ್ರ, ಸಚಿವ
ಕೆಲವರು ಕುದುರೆಯೆಂದು ಕತ್ತೆಯನ್ನು ಕೊಡುತ್ತಾರೆ, ಎಚ್ಚರಿಕೆ.
ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಯಾವುದೇ ಸಂದರ್ಭದಲ್ಲಿಯೂ ಪತನಗೊಳ್ಳಬಹುದು- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಬಹಳ ಹಿಂದೆಯೇ ಪತನಗೊಂಡು ಛಿದ್ರರಾಗಿರುವ ಸೋಮಾರಿಗಳಿಗೆ ಅದರಿಂದೇನು ಲಾಭ?
ಪ್ರಧಾನಿ ಮೋದಿ ಘೋಷಿಸಿದ ಯಾವ ಯೋಜನೆಯೂ ಜಾರಿಗೆ ಬರುವುದಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಕಾರ್ಪೊರೇಟ್ ಏಕಸ್ವಾಮ್ಯ, ಸರ್ವವ್ಯಾಪಿ ಭ್ರಷ್ಟಾಚಾರ, ಅರಾಜಕತೆ ಮುಂತಾದ ಅವರು ಘೋಷಿಸದೆ ಇದ್ದ ಹಲವು ಯೋಜನೆಗಳು ಜಾರಿ ಆಗಿವೆಯಲ್ಲ!
ಬಿಜೆಪಿ ಗೆಲುವಷ್ಟೇ ನನ್ನ ಉದ್ದೇಶ, ಮಂತ್ರಿಗಿರಿಯಲ್ಲ - ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ
ಮುಖ್ಯಮಂತ್ರಿ ಆಗುವ ಗುರಿ ಅಷ್ಟೇ.
ಕಾಂಗ್ರೆಸ್‌ನವರದ್ದು ಕಟ್ಟುವ ಪರಂಪರೆ, ಬಿಜೆಪಿಯವರದ್ದು ಕೆಡಹುವ ಪರಂಪರೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕಟ್ಟುವುದೆಂದರೆ ನಾಯಕರು ಪರಸ್ಪರರ ಕೈಕಾಲು ಕಟ್ಟುವುದು ತಾನೇ?
ಚುನಾವಣೆಯಲ್ಲಿ ಸ್ಪರ್ಧಿಸಲು ಗೋಸಾಕಣೆ ಕಡ್ಡಾಯಗೊಳಿಸಬೇಕು - ಹರ್ದಿಪ್ ಸಿಂಗ್ ಡಾಂಗ್, ಮ.ಪ್ರ.ಸಚಿವ
ಮುಂದೆ ಸೆಗಣಿ ಭೋಜನವನ್ನೂ ಕಡ್ಡಾಯಗೊಳಿಸಬಹುದು.
ಸಿಎಂ ಬೊಮ್ಮಾಯಿ ಅವರ ತಂದೆಯ ಮಾರ್ಗದರ್ಶನ ಪಡೆಯಲಿ, ಆದರೆ ಅತ್ತೆಯ ಮಾರ್ಗದರ್ಶನ ಪಡೆಯಬಾರದು - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಅವರು ಕತ್ತೆಗಳಿಂದ ಸಲಹೆ ಪಡೆಯುವುದು ನಿಲ್ಲಿಸಿದ್ದಾರಂತೆ.
ರಾಜ್ಯ ಬಿಜೆಪಿ ಸರಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ - ಬಿ.ಸಿ.ಪಾಟೀಲ್, ಸಚಿವ
ಸಾಮಾನ್ಯವಾಗಿ ಅಲುಗಾಡುವಾಗ ಬರುವ ಸ್ಪಷ್ಟೀಕರಣಗಳು ಇವು.
ಇಂಧನ ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರ ಕಾರಣ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಹಾಗಾದರೆ ನಿಮ್ಮ ಸರಕಾರದಲ್ಲೂ ನಿರ್ಧಾರಗಳನ್ನೆಲ್ಲಾ ಕೈಗೊಳ್ಳುವವರು ಯುಪಿಎ ಸರಕಾರದವರೇ?
ನಾನು ಬದುಕಿದರೆ ಇದೇ ಅವಧಿಯಲ್ಲಿ, ಸತ್ತರೆ ಮುಂದಿನ ಜನ್ಮದಲ್ಲಿ ಮುಖ್ಯಮಂತ್ರಿಯಾಗುತ್ತೇನೆ - ಉಮೇಶ್ ಕತ್ತಿ, ಶಾಸಕ
ಮನುಷ್ಯನಾಗುವುದಕ್ಕೆ ಇಷ್ಟು ಕಾತರ ಇದ್ದಿದ್ದರೆ ಈ ಜನ್ಮದಲ್ಲೇ ಆಗಿಬಿಡುವ ಸಾಧ್ಯತೆ ಇತ್ತು.
ಮೋದಿ ಸರಕಾರದ 7 ವರ್ಷದ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ - ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ
ಪುಟವೆಲ್ಲಾ ಕಪ್ಪಾಗಿದ್ದರೆ ಕಪ್ಪುಚುಕ್ಕಿಗಳು ಕಾಣಿಸುವುದಿಲ್ಲ.
ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರನ್ನು ಗ್ರಾಹಕರ ರೀತಿಯಲ್ಲಿ ಕಾಣಬಾರದು - ಬಿ.ಸಿ.ಪಾಟೀಲ್, ಸಚಿವ
ಮತ್ತೇನು, ಪುಡಾರಿಗಳು ಮತದಾರರನ್ನು ಕಾಣುವಂತೆ ಕುರಿಗಳಾಗಿ ಕಾಣಬೇಕೇನು?
ಶಾಸಕ ಸಿ.ಟಿ.ರವಿ ಎದುರಿಗೆ ಸಿಕ್ಕವರನ್ನು, ಅಡ್ಡ ಬಂದವರನ್ನು ಕಚ್ಚುವುದಕ್ಕೆ ಆರಂಭಿಸಿದ್ದಾರೆ - ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ಶಾಸಕ
ಆದ್ದರಿಂದ ಅವರ ಹಿಂದೆ ನಡೆಯಲು ತೀರ್ಮಾನಿಸಿದಿರಾ?
20ವರ್ಷದ ಸಮರದಲ್ಲಿ ಅಫ್ಘಾನ್‌ನಲ್ಲಿ ಏನು ಸಾಧಿಸಬೇಕಾಗಿತ್ತೋ ಅದು ಸಾಧಿಸಿಯಾಗಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ
ಅಮೆರಿಕಕ್ಕೆ ಬೇಕಾದದ್ದು ಸಾಧಿಸಿ ಆಗಿರಬೇಕು. ಅಫ್ಘಾನಿಗೆ ಬೇಕಾಗಿರುವುದನ್ನು ಸಾಧಿಸುವುದು ಹೇಗೆ ?
ಸಿಎಎ ಕಾಯ್ದೆ ವಿರೋಧಿಸುತ್ತಿದ್ದವರು ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿ ಅರಿತುಕೊಳ್ಳಬೇಕು - ಪ್ರತಾಪ ಸಿಂಹ, ಸಂಸದ
ಮಹಾಶಯರು, ರಾಮರಾಜ್ಯವನ್ನು ಬಿಟ್ಟು ತಾಲಿಬಾನ್ ರಾಜ್ಯವನ್ನು ಆದರ್ಶವಾಗಿಸಿಕೊಂಡಂತಿದೆ!
ಶಾಸಕ ಸಿ.ಟಿ.ರವಿ ಏನೇ ಮಾತನಾಡಿದರೂ ದಾಖಲೆ ಇಟ್ಟುಕೊಂಡು ಮಾತನಾಡುತ್ತಾರೆ - ಗೋಪಾಲಯ್ಯ, ಸಚಿವ
ಹೌದು, ಬಾಯಿಗೆ ಬಂದಂತೆ ಮಾತನಾಡುವುದರಲ್ಲಿ ಅವರ ದಾಖಲೆ ಮೀರಿಸುವವರಿಲ್ಲ.
ಮೇಕೆದಾಟು ಯೋಜನೆಯಿಂದ ಕರ್ನಾಟಕದೊಂದಿಗೆ ತಮಿಳುನಾಡಿಗೂ ಅನುಕೂಲವಾಗಲಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಕರ್ನಾಟಕಕ್ಕೆ ಅನುಕೂಲವಾಗುವುದೇ ತಮಿಳು ನಾಡಿನ ಸಮಸ್ಯೆ ಅಂತೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವುದು, ದೇಶದ ಅಭಿವೃದ್ಧಿಯನ್ನು ವಿರೋಧಿಸುವುದು ಎರಡೂ ಒಂದೇ -ಡಾ.ಅಶ್ವತ್ಥನಾರಾಯಣ, ಸಚಿವ
ಬಹುಶಃ ಮುಂದಿನ ದಿನಗಳಲ್ಲಿ ಶಿಕ್ಷಣ ಅಧಿಕೃತವಾಗಿ ಉದ್ದಿಮೆಯಾಗಿ ಘೋಷಣೆಯಾಗಲಿದೆ.
ಇಡೀ ದೇಶದಲ್ಲಿ ದಿಲ್ಲಿ ಆಡಳಿತವು ಮಾದರಿಯಾಗಿ ಹೊರ ಹೊಮ್ಮಿದೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಅದಕ್ಕೆಲ್ಲ ದಿಲ್ಲಿಯಲ್ಲಿ ಮೋದೀಜಿಯವರ ದಿವ್ಯ ಉಪಸ್ಥಿತಿಯೇ ಕಾರಣ.