ಓ ಮೆಣಸೇ…!
ಇಬ್ಬರು ಮಾಡುತ್ತಿರುವ ಮಾರಾಟವನ್ನು ಇಬ್ಬರು ಖರೀದಿಸುತ್ತಿರುವ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಲಾಗಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
► ನೀವೇನಂತೀರಿ? ಮಾರುವವರು ಹೆಚ್ಚಬೇಕೇ? ಅಥವಾ ಖರೀದಿಸುವವರು ಹೆಚ್ಚಬೇಕೇ?
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ಸಾವಿನ ತಪ್ಪು ಲೆಕ್ಕ ನೀಡುತ್ತಿವೆ - ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಮುಖಂಡ
► ನಿಮ್ಮ ಲೆಕ್ಕ ಎಷ್ಟು ಎನ್ನುವುದನ್ನು ಮೊದಲು ಹೇಳಿ.
ನನ್ನ ಮೇಲಿನ ಕಿಕ್‌ಬ್ಯಾಕ್ ಆರೋಪದಲ್ಲಿ ಯಾವ ತನಿಖೆ ನಡೆಸಿದರೂ ಉತ್ತರ ನೀಡಲು ಸಿದ್ಧ - ಬಿ.ಸಿ.ಪಾಟೀಲ್, ಸಚಿ
► ಪ್ರಕರಣ ಲಂಚದ್ದಾಗಿದ್ದರೆ, ಅದಕ್ಕೆ ತನಿಖೆ ಪರಿಹಾರವಲ್ಲ. ನೇರ ನಿಲ್ಲಿಸಿ, ಸಾರ್ವಜನಿಕರು ಬೆನ್ನಿಗೆ ಒದಿಯಬೇಕು - ಅದೊಂದೇ ಪರಿಹಾರ.
ಬಿಜೆಪಿ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು, ಆದರೆ ನಾನು ಒಳ್ಳೆಯ ಸ್ಥಾನ-ಮಾನ ಕೇಳಿದ್ದೆ - ಶ್ರೀಮಂತ ಪಾಟೀಲ್, ಶಾಸಕ
► ಕೊನೆಗೆ ಎಷ್ಟು ಹಣ ಪಡೆದು ಸ್ಥಾನಮಾನದ ಬೇಡಿಕೆ ಕೈ ಬಿಟ್ಟಿರಿ?
ಯಾವುದೇ ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಬರದಿದ್ದಾಗ ಅಧಿಕಾರಕ್ಕೆ ಗುದ್ದಾಟ ಸಹಜ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
► ನಿಚ್ಚಳ ಬಹುಮತ ಬಂದಾಗ ನಡೆಯುವ ಭೀಕರ ದುರಾಡಳಿತಕ್ಕೆ ಹೋಲಿಸಿದರೆ ಅಂತಹ ಗುದ್ದಾಟವೇ ಒಳ್ಳೆಯದೆನಿಸುತ್ತದೆ.
ಬೇರೆಯವರಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
► ಜ್ಞಾನೋದಯವೆನ್ನುವುದು ಯಾವಾಗ, ಯಾವ ಮೂಲಕ ಬರುತ್ತದೆ ಎನ್ನಲಿಕ್ಕಾಗುವುದಿಲ್ಲ.
ಈ ದೇಶದಲ್ಲಿ ರೈತರು ಹಾಗೂ ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
► ಅವರನ್ನು ನಂಬಿಸಿ, ವಂಚಿಸಿ ರಾಜಕಾರಣ ಮಾಡಬೇಕಾಗುತ್ತದೆ! ಎಂತಹ ಅನುಭವದ ಮಾತು.
ಕಾಲಕಾಲಕ್ಕೆ ಹೊಣೆಗಾರಿಕೆ ಬದಲಿಸುವ ಸಂಪ್ರದಾಯ ಬಿಜೆಪಿಯಲ್ಲಿದೆ - ವಿಜಯ ರೂಪಾನಿ, ಗುಜರಾತ್ ನಿರ್ಗಮಿತ ಮುಖ್ಯಮಂತ್ರಿ
► ಕ್ಪಣ ಕ್ಷಣಕ್ಕೆ ಬಣ್ಣ ಬದಲಾಯಿಸುವ ಪಕ್ಷ ಬೇರೇನೂ ಬದಲಾಯಿಸಿದರೂ ಅಚ್ಚರಿ ಏನಿದೆ?
ಮುಂದಿನ ಚುನಾವಣೆಗಳಲ್ಲಿ ಮೋದಿ ಸರಕಾರದ ಸಾಧನೆಗಳು ಪಕ್ಷಕ್ಕೆ ವರದಾನವಾಗಲಿವೆ - ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ
► ರಾಹುಲ್ ಗಾಂಧಿ ಕೂಡಾ ಅದೇ ನಿರೀಕ್ಷೆಯಲ್ಲಿದ್ದಾರೆ.
ಸಚಿವ ವಿ.ಸೋಮಣ್ಣರನ್ನು ಕಂಡರೆ ನನಗೆ ಹೊಟ್ಟೆಕಿಚ್ಚು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
► ಬಹುಶಃ ಅವರ ದೊಡ್ಡ ಹೊಟ್ಟೆಯನ್ನು ನೋಡಿ ಹೇಳಿರಬೇಕು.
ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಲಾಭ ಬಿಜೆಪಿಗೇ ಹೊರತು ಅವರ ಕುಟುಂಬಕ್ಕಲ್ಲ - ಎಂ.ಪಿ.ರೇಣುಕಾಚಾರ್ಯ, ಶಾಸಕ
► ಆರೆಸ್ಸೆಸ್‌ಗೆ ನಷ್ಟವಾಗಬಹುದು ಎನ್ನುವ ಭಯ.
ಅರ್ಥ ವ್ಯವಸ್ಥೆ ಚೇತರಿಕೆಗೆ ಕೋವಿಡ್ ಲಸಿಕೆಯೇ ಮದ್ದು - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
► ಬೆಳ್ಳುಳ್ಳಿ ಜೊತೆ ತೆಗೆದುಕೊಂಡರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತಂತೆ?
ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಸಹಕಾರ ಬಹಳ ಅಗತ್ಯ - ಕುಮಾರಸ್ವಾಮಿ, ಮಾಜಿ ಸಿಎಂ
► ಎಷ್ಟು ಬಾರಿ ದ್ರೋಹ ಎಸಗಿದರೂ ನೆನಪಿಡದೆ, ಮತ್ತೆ ಮೋಸ ಹೋಗಲು ಮತ್ತು ನಿಶ್ಶರ್ತವಾಗಿ ಓಟು ಕೊಡಲು ಬರುವವರು ಅವರು ಮಾತ್ರ.
ಹಣ ತೋರಿಸಿ ಪಕ್ಷಕ್ಕೆ ಕರೆದುಕೊಳ್ಳುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ - ಜಗದೀಶ್ ಶೆಟ್ಟರ್, ಶಾಸಕ
► ಹೆಣ ತೋರಿಸಿ ಅಧಿಕಾರಕ್ಕೆ ಬಂದ ಪಕ್ಷವಲ್ಲವೇ?
ದೇಗುಲಗಳನ್ನು ಒಡೆಯುವುದು ಎಂದರೆ ಎದೆಗೆ ಒದ್ದಂತೆ - ಜಿ.ಟಿ.ದೇವೇಗೌಡ, ಶಾಸಕ
► ವಿರೋಧ ಪಕ್ಷದ ಎದೆಗೋ, ಆಡಳಿತ ಪಕ್ಷದ ಎದೆಗೋ ಎನ್ನುವುದೂ ಮುಖ್ಯವಾಗುತ್ತದೆ.
ನಾನು ಸತ್ಯ ಹೇಳಿದರೆ ಬಹಳಷ್ಟು ಜನರಿಗೆ ಸಿಟ್ಟು ಬರುತ್ತದೆ -ಕೆ.ಎಸ್.ಈಶ್ವರಪ್ಪ, ಸಚಿವ
► ಆದರೂ ಎಂದಾದರೊಮ್ಮೆ ಒಂದೆರಡು ಸತ್ಯ ಹೇಳುವ ಪ್ರಯತ್ನ ಮಾಡಬಹುದಲ್ಲಾ!
ಕೊರಗರು ತಮ್ಮ ಕೀಳರಿಮೆ ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು -ಎಸ್.ಅಂಗಾರ, ಸಚಿವ
► ಆಗ ಎಷ್ಟು ಮಂದಿ ಕೊರಗರು ಸಚಿವರಾಗಬಹುದು?
ಕಾಂಗ್ರೆಸ್ ಈ ದೇಶದಲ್ಲಿನ ಭಯೋತ್ಪಾದನೆಯ ತಾಯಿ- ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
► ಅವರೊಡನೆ ಕೇಳಿದರೆ, ನಿಮ್ಮಂಥವರನ್ನು ಹೆತ್ತೇ ಇಲ್ಲ ಅಂತಾರಲ್ಲಾ!
ಭಾರತ ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ತೀವ್ರ ಕಾಳಜಿ ಹೊಂದಿದೆ -ಎಸ್.ಜೈಶಂಕರ್, ಕೇಂದ್ರ ಸಚಿವ
► ನಮ್ಮಲ್ಲಿನ ಮಹಿಳೆಯರು, ಬಡವರು ಮತ್ತಿತರರ ಕಾಳಜಿಯನ್ನು ಅವರು ವಹಿಸಿಕೊಳ್ಳಲಿ. ಈ ರೀತಿ ಕಾಳಜಿಗಳ ವಿನಿಮಯದಿಂದಲಾದರೂ ಸಮಸ್ಯೆಗಳು ಬಗೆಹರಿಯಬಹುದೇನೋ?
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದರೂ ವಿಪಕ್ಷದಲ್ಲೇ ಕೂರಿಸುತ್ತೇನೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
► ನಿಮ್ಮ ಮೇಲೆ ಬಿಜೆಪಿ ಆ ಉದಾರತನ ತೋರಿಸುವ ಸಾಧ್ಯತೆಗಳೂ ಕಾಣಿಸುತ್ತಿಲ್ಲ.
ಸಚಿವ ಈಶ್ವರಪ್ಪರಿಗೂ ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್‌ಶಿಪ್ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
► ಅಂದ್ರೆ ನಿಮ್ಮ ಅಭಿವೃದ್ಧಿಯನ್ನು ಅವರು ಹೇಟ್ ಮಾಡ್ತಾರೆ ಮತ್ತು ಅವರ ಮೂರ್ಖ ನಡೆಗಳನ್ನು ನೀವು ಲವ್ ಮಾಡ್ತೀರಿ ಎನ್ನೋ ಅರ್ಥದಲ್ಲೇ?
ಆಧುನಿಕ ಶಿಕ್ಷಣ ಪದ್ಧತಿ ಮುನುಷ್ಯನನ್ನು ಸುಲಭ ಜೀವಿಯನ್ನಾಗಿಸುವ ಭಯಾನಕ ರೋಗ - ಪ್ರಸನ್ನ ಹೆಗ್ಗೋಡು, ರಂಗಕರ್ಮಿ
► ಹಳೆ ಗುರುಕುಲ ಶಿಕ್ಷಣ ಪದ್ಧತಿ ಮೂಲಕ ಬಡವರನ್ನು, ದುರ್ಬಲರನ್ನು ಇನ್ನಷ್ಟು ಕಷ್ಟ ಜೀವಿಯಾಗಿಸಲು ಆಸೆಯೇ?
2017ಕ್ಕೆ ಮೊದಲು ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದವರು ಗೂಂಡಾಗಳು - ನರೇಂದ್ರ ಮೋದಿ, ಪ್ರಧಾನಿ
► ಮುಂದೆ ಕೊಲೆಪಾತಕಿ, ಭ್ರಷ್ಟ, ಅಯೋಗ್ಯರೆಲ್ಲಾ ಅವರ ಉತ್ತರಾಧಿಕಾರಿಗಳಾಗಿ ಬಿಟ್ಟರು.
ಹಿಂದಿ ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳ ಸ್ನೇಹಿತ-ಅಮಿತ್ ಶಾ, ಕೇಂದ್ರ ಸಚಿವ
► ಆದ್ದರಿಂದ ಸದ್ಯ ಹಿಂದಿ ಮಾತ್ರ ಇರುವ ಪ್ರದೇಶಗಳಲ್ಲಿ ದಕ್ಷಿಣದ ಪ್ರಾದೇಶಕ ಭಾಷೆಗಳನ್ನು ಪರಿಚಯಿಸಿ. ಸ್ನೇಹಿತರು ಜೊತೆಗಿರಲಿ.
ಯಾವುದೇ ಒಂದು ಸಮುದಾಯ ಅಥವಾ ಧರ್ಮದ ಅನುಯಾಯಿಗಳಿಗೆ ನೋವು ಉಂಟು ಮಾಡಿದರೆ ನಮಗೆ ಒಳ್ಳೆಯದಾಗುವುದಿಲ್ಲ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
► ಆದ್ದರಿಂದ ಎರಡು ಮೂರು ಸಮುದಾಯಗಳನ್ನಾದರೂ ನೋಯಿಸಬೇಕೆಂದು ನಿರ್ಧರಿಸಿದ್ದೀರಾ?
ಶಾಂತಿಯುತ ಮತ್ತು ಸ್ಥಿರ ಅಫ್ಘಾನಿಸ್ತಾನವನ್ನು ಪಾಕ್ ಬಯಸುತ್ತದೆ - ಇಮ್ರಾನ್ ಖಾನ್, ಪಾಕ್ ಪ್ರಧಾನಿ
► ನಾಳೆ ಅವರೇನು ನಿಮ್ಮಲ್ಲಿಗೆ ಬಂದು ಶಾಂತಿಯುತ ಮತ್ತು ಸ್ಥಿರ ಪಾಕಿಸ್ತಾನವನ್ನು ಕಟ್ಟುತ್ತಾರೆಯೇ? ಖಾನ್ ಸಾಹೇಬರೇ, ನೀವು ನಿಮ್ಮ ನಾಡಿನ ಬಗ್ಗೆ ಚಿಂತಿಸಿ.
ನಾನು ತುರ್ತುಪರಿಸ್ಥಿತಿಯ ವೇಳೆ 5-6 ತಿಂಗಳು ಜೈಲಿನಲ್ಲಿದ್ದೆ - ಆರಗ ಜ್ಞಾನೇಂದ್ರ, ಸಚಿವ
► ನೀವು ಇದನ್ನೆಲ್ಲಾ ನೆನಪಿಸಿದರೆ ಜನ ದಿವಂಗತ ಇಂದಿರಾಗಾಂಧಿಯವರನ್ನು ಸ್ಮರಿಸಿ ಹೊಗಳಲು ಆರಂಭಿಸ್ತಾರೆ.
ಜಾಗತಿಕ ಭಯೋತ್ಪಾದನೆ ಹತ್ತಿಕ್ಕಲು ತಾಲಿಬಾನಿಗಳ ಜತೆಗೆ ಮಾತುಕತೆ ನಡೆಸುವುದು ಅಗತ್ಯ - ಆ್ಯಂಟೊನಿಯೊ ಗುಟೆರೆಸ್, ವಿಶ್ವಸಂಸ್ಥೆ ಪ್ರ.ಕಾರ್ಯದರ್ಶಿ
► ಜಗತ್ತಿನ ಎರಡು ದೈತ್ಯ ಭಯೋತ್ಪಾದಕ ಶಕ್ತಿಗಳನ್ನು ಸೋಲಿಸಿ ಒದ್ದೋಡಿಸಿದ ಅಫ್ಘಾನಿಗಳ ಅನುಭವದಿಂದ ಜಗತ್ತು ಕಲಿಯಬೇಕಾದದ್ದು ಬಹಳಷ್ಟಿದೆ.