ಭಗತ್ ಸಿಂಗ್ ಜನ್ಮದಿನದ ಅಪಬಳಕೆಗಳು!?

Update: 2021-10-04 19:30 GMT

ಇಡೀ ದೇಶವನ್ನು ಮತ್ತದರ ಎಲ್ಲಾ ಆಸ್ತಿ ಸಂಪತ್ತುಗಳನ್ನೂ ಜಾಗತಿಕ ಭಾರೀ ಕಾರ್ಪೊರೇಟ್‌ಗಳಿಗೆ ಒಪ್ಪಿಸಲು ಧಾವಂತ ಪಡುತ್ತಿರುವ ಪ್ರಧಾನಿ ಮೋದಿ ಭಗತ್ ಸಿಂಗ್ ಜನ್ಮದಿನವನ್ನು ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರೈತ ಚಳವಳಿಯಲ್ಲಿ ಪಂಜಾಬ್‌ನ ರೈತರು ಒಂದು ಪ್ರಧಾನ ಪಾತ್ರ ವಹಿಸುತ್ತಿರುವ ಸಂದರ್ಭದಲ್ಲಿ ತಮ್ಮ ಅನುಕೂಲಗಳಿಗೆ ಬಳಸಲು ಪ್ರಯತ್ನಿಸಿದ್ದು, ಹಾಗೆಯೇ ತಳಮಟ್ಟದಲ್ಲಿ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಾಗದೆ ಇದ್ದಾಗಲೂ ಸಿಪಿಐನ ಕೇಂದ್ರ ನಾಯಕತ್ವದ ಭಾಗವಾಗಿದ್ದರೆಂದು ಹೇಳಲಾದ ಕನ್ಹಯ್ಯ ಕುಮಾರ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ಭಗತ್ ಸಿಂಗ್ ವಾರಸುದಾರರೆಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನ ನಡೆಸಿರುವುದು ಬಹಳ ಅಭಾಸಕರವಾದವಾಗಿದೆ.



ಇದೇ ಕಳೆದ ಸೆಪ್ಟಂಬರ್ ಇಪ್ಪತ್ತೇಳರಂದು ಭಾರತ ದಲ್ಲಿ ಕ್ರಾಂತಿಕಾರಿ ಬದಲಾವಣೆಗಾಗಿ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ನೈಜ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವಕ್ಕಾಗಿ ದುಡಿದು ಅದಕ್ಕಾಗಿಯೇ ಪ್ರಾಣತೆತ್ತ ಸಂಗಾತಿ ಭಗತ್ ಸಿಂಗ್‌ರ ಜನ್ಮದಿನವಾಗಿತ್ತು. ಭಗತ್ ಸಿಂಗ್ ಬ್ರಿಟಿಷ್ ಇಂಡಿಯಾದಲ್ಲೂ ಹಾಗೂ ನಂತರದಲ್ಲೂ ಜನಸಾಮಾನ್ಯರ ಬಲು ದೊಡ್ಡ ಸ್ಫೂರ್ತಿಯಾಗಿದ್ದವರು. ಈಗ ನಡೆಯುತ್ತಿರುವ ದಿಲ್ಲಿ ರೈತ ಚಳವಳಿಯಲ್ಲೂ ಭಗತ್ ಸಿಂಗ್‌ರ ಹೋರಾಟ ಹಾಗೂ ವಿಚಾರಗಳ ಸ್ಫೂರ್ತಿ ಕೆಲಸ ಮಾಡುತ್ತಿದೆ.

ಈ ದಿನವನ್ನು ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿ ಸ್ಮರಿಸುತ್ತಾ ಭಗತ್ ಸಿಂಗ್‌ರ ಕ್ರಾಂತಿಕಾರಿ ಕೊಡುಗೆಗಳನ್ನು ಹೊಗಳುತ್ತಾ 'ಆತ್ಮ ನಿರ್ಭರ ಭಾರತ್'ಗಾಗಿ ಭಗತ್ ಸಿಂಗ್‌ರ ಸ್ಫೂರ್ತಿಯನ್ನು ಎಲ್ಲರೂ ಹೊಂದಬೇಕೆಂಬ ಅರ್ಥದಲ್ಲಿ ಸಂದೇಶವನ್ನು ತಮ್ಮ 'ಮನ್ ಕಿ ಬಾತ್'ನಲ್ಲಿ ಆಡಿದರು. ಅದೇ ದಿನದಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಈ ಹಿಂದಿನ ವಿದ್ಯಾರ್ಥಿ ನಾಯಕರಲ್ಲಿ ಒಬ್ಬರಾಗಿದ್ದ ಕನ್ಹಯ್ಯ ಕುಮಾರ್ ತಾನು ಪ್ರತಿನಿಧಿಸುತ್ತಿದ್ದ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾ ಭಗತ್ ಸಿಂಗ್ ಹುಟ್ಟಿದ ದಿನವೆಂದು ಸ್ಮರಿಸುತ್ತಾ ಭಗತ್ ಸಿಂಗ್‌ರ ಕ್ರಾಂತಿಕಾರಿ ಸ್ಫೂರ್ತಿಯನ್ನು ಕೊಂಡಾಡಿದರು. ಆದರೆ ವಾಸ್ತವದಲ್ಲಿ ಮೋದಿ ನೇತೃತ್ವದ ಒಕ್ಕೂಟ ಸರಕಾರ ತನ್ನ ಆಡಳಿತದಲ್ಲಿ ಜಾರಿಯಲ್ಲಿ ಇಟ್ಟಿರುವುದು ತಾನು ಪ್ರತಿಪಾದಿಸುವ 'ಆತ್ಮ ನಿರ್ಭರ'ವಲ್ಲ. ಬದಲಿಗೆ ಇದುವರೆಗೂ ಇದ್ದಂತಹ ಅಳಿದುಳಿದ ಒಂದು ಮಟ್ಟದ 'ಆತ್ಮ ನಿರ್ಭರ' ರಚನೆಗಳನ್ನು ಭಾರೀ ಕಾರ್ಫೊರೇಟ್‌ಗಳಿಗೆ ಹಸ್ತಾಂತರ ಮಾಡುತ್ತಿದೆ. ಹಿಂದಿನ ಸರಕಾರಗಳು; ಅದರಲ್ಲೂ ನಿರ್ದಿಷ್ಟವಾಗಿ ಜಾಗತೀಕರಣದ ನಂತರದಲ್ಲಿ ಮಾಡುತ್ತಾ ಬಂದ ಆತ್ಮ ಬರ್ಭರ ಕಾರ್ಯಗಳನ್ನೇ ಭಾರೀ ಆಕ್ರಮಣಕಾರಿಯಾಗಿ ಎಗ್ಗಿಲ್ಲದಂತೆ ಜಾರಿಗೊಳಿಸುತ್ತಾ ಸಾಗುತ್ತಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಸಾರ್ವಜನಿಕ ಸಂಸ್ಥೆಗಳನ್ನು ಆರು ಲಕ್ಷ ಕೋಟಿ ರೂಪಾಯಿಗಳಿಗೆ ನಗದೀಕರಿಸುವ ಯೋಜನೆಯ ಘೋಷಣೆ.

 ಭಗತ್ ಸಿಂಗ್ ತಮ್ಮ ಕಾಲದಲ್ಲೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಬಲು ದೊಡ್ಡ, ಸಮರ್ಥ ರಾಜಕೀಯ ಎದುರಾಳಿಯಾಗಿದ್ದವರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗಿಂತಲೂ ಹಲವು ಪಟ್ಟು ಜನಬೆಂಬಲ ಉಳ್ಳವರಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಕಾರ್ಯಸೂಚಿಗಳು ಇಂಡಿಯಾಕ್ಕೆ ನೈಜ ಸ್ವಾತಂತ್ರ್ಯ, ಸಮಾನತೆ, ಸಹೋದರತೆಗಳನ್ನು ತರುವುದಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ಪ್ರಮುಖರಲ್ಲಿ ಭಗತ್ ಸಿಂಗ್ ಒಬ್ಬರಾಗಿದ್ದವರು. ಭಗತ್ ಸಿಂಗ್ ತಾವು ಗ್ರಹಿಸಿದ್ದನ್ನು ಆಚರಣೆಯಲ್ಲಿ ತಂದವರಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಗಾಂಧೀಜಿಯವರ ಚಟುವಟಿಕೆಗಳು ಬ್ರಿಟಿಷ್ ವಸಾಹತುಶಾಹಿ ಹಿಡಿತದಿಂದ ಪೂರ್ಣವಾಗಿ ದೇಶವನ್ನು ಬಿಡಿಸುವುದಾಗಿಲ್ಲ ಎಂದು ಬಹಿರಂಗವಾಗಿಯೇ ತಮ್ಮ ಕಾರ್ಯಕ್ರಮಗಳ ಮೂಲಕ ಸಾರುತ್ತಾ ಬಂದಿದ್ದರು. ಭಗತ್ ಸಿಂಗ್, ಸುಖ್ ದೇವ್, ರಾಜಗುರು, ಇನ್ನಿತರ ಯುವಸಮೂಹದ ನಾಯಕತ್ವದಲ್ಲಿದ್ದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸಂಘಟನೆ ಹಾಗೂ ಅದರ ಮಿಲಿಟರಿ ಸಂಘಟನೆಯಾದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ಮೂಲಕ ದೇಶಾದ್ಯಂತ ಜನರಿಗೆ ಈ ವಿಚಾರವನ್ನು ತೆಗೆದುಕೊಂಡು ಹೋಗಲಾಗಿತ್ತು. ವಾಸ್ತವದಲ್ಲಿ ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಚಳವಳಿ ಕಾಂಗ್ರೆಸ್ ಇಲ್ಲವೇ ಗಾಂಧಿಯನ್ನು ನೆಚ್ಚಿಕೊಂಡು ಸಾಗುತ್ತಿರಲೂ ಇಲ್ಲ. ಆದರೆ ಕಾಂಗ್ರೆಸ್ ಹಾಗೂ ಗಾಂಧಿ ದೇಶಾದ್ಯಂತ ನಡೆಯುತ್ತಿದ್ದ ಜನಚಳವಳಿಗಳನ್ನು ತಮ್ಮ ಹಿಡಿತದಡಿ ಇಟ್ಟುಕೊಳ್ಳಲು ಶ್ರಮಿಸುತ್ತಾ ಬಂದಿದ್ದರು. ದೇಶದ ಉದ್ದಗಲಕ್ಕೂ ಭಗತ್ ಸಿಂಗ್ ಹಾಗೂ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ ಪ್ರಭಾವ ಹರಡಿತ್ತು. ಅದರ ಕ್ರಾಂತಿಕಾರಿ ವಿಚಾರಧಾರೆಗಳು ಬಹಳ ಜನಪ್ರಿಯತೆ ಪಡೆದಿದ್ದವು.

'ಕ್ರಾಂತಿ ಚಿರಾಯುವಾಗಲೀ' ಎಂಬ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ನ ಘೋಷಣೆಯ ಬಗ್ಗೆ ಆಗಿನ ಸಾಕಷ್ಟು ಹೆಸರಿದ್ದ 'ಮಾಡರ್ನ್ ರಿವ್ಯೆ' ಪತ್ರಿಕೆ ಲೇವಡಿ ಮಾಡಿದ್ದನ್ನು ಪ್ರತಿಭಟಿಸಿ ಭಗತ್ ಸಿಂಗ್ ಹಾಗೂ ಬಿ.ಕೆ. ದತ್ತ ಒಂದು ಪತ್ರವನ್ನು ಬರೆಯುತ್ತಾರೆ. ಅದನ್ನು ತಮ್ಮನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಿಗೆ ಕೊಟ್ಟು ಅವರ ಮೂಲಕ ಆ ಪತ್ರಿಕೆಯ ಸಂಪಾದಕರಿಗೆ ಕಳುಹಿಸಲು ಕೋರುತ್ತಾರೆ. ಅದು 'ದಿ ಟ್ರಿಬ್ಯೂನ್' 1929 ಡಿಸೆಂಬರ್ 24ರ ಸಂಚಿಕೆಯಲ್ಲಿ ಪ್ರಕಟವಾಗುತ್ತದೆ. ಅದರಲ್ಲಿ: ''ಕ್ರಾಂತಿ ಚಿರಾಯುವಾಗಲಿ ಎಂಬ ನಮ್ಮ ಕೂಗು ಜನರ ಪರಿಸ್ಥಿತಿ ಈಗಿನ ರೀತಿಯಲ್ಲೇ ಮುಂದುವರಿಯಲಿ ಎಂದಲ್ಲ. 'ಕ್ರಾಂತಿ ಚಿರಾಯುವಾಗಲಿ' ಎಂಬುದನ್ನು ಪದಶಃ ಅರ್ಥದಲ್ಲಿ ನೋಡುವುದಲ್ಲ ಅಥವಾ ಸ್ಥಾಯಿಯಾಗಿ ಉಳಿಯುವ ವಿಚಾರವೂ ಅಲ್ಲ. ಅದು ಆಶಯ, ಗುರಿ ಮತ್ತು ಅದರಾಚೆಗಿನ ಅರ್ಥವನ್ನೂ ಹೊಂದಿದೆ. ಹಲವಾರು ಅರ್ಥಗಳನ್ನು ಅದಕ್ಕೆ ಆರೋಪಿಸಬಹುದು. ಶೋಷಣೆ ಮಾಡುವ ಸ್ಥಾಪಿತ ಹಿತಾಸಕ್ತಿಗಳಿಗೆ ಅದು ರಕ್ತಪೂರಿತ ಕ್ರೌರ್ಯಗಳಾಗಿ ಕಾಣಬಹುದು, ಕ್ರಾಂತಿಕಾರಿಗಳಿಗೆ ಅದು ಪವಿತ್ರ ನುಡಿಗಟ್ಟಾಗಿದೆ. ಶಾಸನ ಸಭೆಯ ಬಾಂಬ್ ಪ್ರಕರಣದಲ್ಲಿ ನಮ್ಮನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರೆದುರು 'ಕ್ರಾಂತಿ' ಎಂಬ ಪದದ ನಮ್ಮ ಅರ್ಥ ಏನೆಂಬುದನ್ನು ನಾವು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದೇವೆ.'' ''ನಾವು ಅಲ್ಲಿ ಹೇಳಹೊರಟಿದ್ದು 'ಕ್ರಾಂತಿ' ಎಂದರೆ ರಕ್ತಸಿಕ್ತವಾಗಬೇಕಿಲ್ಲ. ಕ್ರಾಂತಿಯೆಂದರೆ ಬಾಂಬು ಪಿಸ್ತೂಲುಗಳ ಪಂಥವಲ್ಲ. ಬಾಂಬ್ ಬಂದೂಕುಗಳು ಕೆಲವೊಮ್ಮೆ ಕ್ರಾಂತಿಯನ್ನು ಸಾಧಿಸಲು ಸಾಧನಗಳಾಗಬಹುದು. ಕೆಲವು ಚಳವಳಿಗಳಲ್ಲಿ ಅವುಗಳು ಮುಖ್ಯ ಪಾತ್ರ ವಹಿಸಲೂಬಹುದು. ಆ ಕಾರಣದಿಂದಾಗಿ ಕ್ರಾಂತಿ ಹಾಗೂ ಬಾಂಬ್, ಪಿಸ್ತೂಲುಗಳು ಒಂದೇ ಎಂಬ ಅರ್ಥವಲ್ಲ. ಬಂಡಾಯವೇಳುವುದು ಕ್ರಾಂತಿಯಲ್ಲ. ಅದು ಅಂತಿಮವಾಗಿ ಕ್ರಾಂತಿಯತ್ತ ಕೊಂಡೊಯ್ಯಬಹುದು.

ಕ್ರಾಂತಿ ಎಂಬ ಪದವನ್ನು ನಾವು ಬಳಸಿದ್ದು ಒಳ್ಳೆಯ ಸಾಮಾಜಿಕ ಬದಲಾವಣೆಯ ಸ್ಫೂರ್ತಿಯಿಂದ. ಜನರು ಹಾಲಿ ಇರುವ ಸ್ಥಾಪಿತ ಸಾಮಾಜಿಕ ಪದ್ಧತಿಯಲ್ಲಿ ಒಪ್ಪಿತರಾಗಿರುತ್ತಾ ಬದಲಾವಣೆಯ ಬಗ್ಗೆ ನಡುಕ ಹೊಂದಿರುತ್ತಾರೆ. ಈ ರೀತಿಯ ನಕಾರಾತ್ಮಕ ಸ್ಫೂರ್ತಿಯನ್ನು ಕ್ರಾಂತಿಕಾರಿ ಸ್ಫೂರ್ತಿಗೆ ಬದಲಾಯಿಸುವ ಅಗತ್ಯವಿದೆ. ಇಲ್ಲದಿದ್ದರೆ ಅಧಃಪತನವು ಮೇಲುಗೈ ಸಾಧಿಸುತ್ತಾ ಮಾನವ ಜನಾಂಗದ ಇಡೀ ಪೀಳಿಗೆಯೇ ದಾರಿ ತಪ್ಪಿಪ್ರತಿಗಾಮಿ ಶಕ್ತಿಗಳ ನಾಯಕತ್ವದಡಿ ಸಿಲುಕಿಬಿಡುತ್ತದೆ. ಅಂತಹ ಚಟುವಟಿಕೆಗಳು ಸ್ಥಗಿತತೆಗೆ ದೂಡುವುದು ಮತ್ತು ಮಾನವ ಸಮಾಜದ ಬೆಳವಣಿಗೆಗಳಿಗೆ ಲಕ್ವ ಹೊಡೆಸುತ್ತದೆ. ಕ್ರಾಂತಿಯ ಸ್ಫೂರ್ತಿಯು ಯಾವಾಗಲೂ ಮಾನವೀಯತೆಯ ಅಂತಸ್ಸತ್ವವಾಗಿರಬೇಕು. ಹಾಗಾದಾಗ ತಮ್ಮ ಬಲವನ್ನು ವೃದ್ಧಿಸಿ ಮುನ್ನ್ನಡೆಯಲು ಪ್ರತಿಗಾಮಿಶಕ್ತಿಗಳಿಗೆ ತಡೆಗಳನ್ನು ಹಾಕಲು ಸಾಧ್ಯವಾಗುತ್ತದೆ. ಹಳೆಯ ವ್ಯವಸ್ಥೆ ಬದಲಾಗಲೇಬೇಕು, ಯಾವಾಗಲೂ ಬದಲಾಗುತ್ತಿರಬೇಕು, ಹೊಸದಕ್ಕೆ ದಾರಿ ಮಾಡಕೊಡಬೇಕು. ಆ ಮೂಲಕ ಒಂದು 'ಉತ್ತಮ' ವ್ಯವಸ್ಥೆ ಜಗತ್ತನ್ನು ಭ್ರಷ್ಟಗೊಳಿಸುವುದಿಲ್ಲ. ಈ ಅರ್ಥದಲ್ಲಿ ನಾವು 'ಕ್ರಾಂತಿ ಚಿರಾಯುವಾಗಲಿ' ಎಂದು ಘೋಷಣೆ ಕೂಗುತ್ತಿದ್ದೇವೆ.'' ಈ ರೀತಿಯಲ್ಲಿ ಪ್ರತಿಪಾದಿಸುತ್ತಾ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸುತ್ತಾರೆ. ಭಗತ್ ಸಿಂಗ್ ಮತ್ತವರ ಸಂಗಾತಿಗಳ ಇಂತಹ ಹಲವಾರು ಸ್ಪಷ್ಟ ಪ್ರತಿಪಾದನೆಗಳು ಹಾಗೂ ಹೇಳಿಕೆಗಳು ದೇಶಾದ್ಯಂತ ಭಾರೀ ಜನಮನ್ನಣೆ ಪಡೆದಿದ್ದವು.

ಇನ್ನೊಂದೆಡೆ ಯುವ ರಾಜಕೀಯ ಕಾರ್ಯಕರ್ತರಿಗೆ ಫೆಬ್ರವರಿ 2, 1931ರಲ್ಲಿ ಬರೆದ ಲೇಖನವೊಂದರಲ್ಲಿ ಕಾಂಗ್ರೆಸ್ ಹಾಗೂ ಗಾಂಧಿ ಬ್ರಿಟಿಷರೊಂದಿಗೆ ಹೊಂದಾಣಿಕೆಯ ಮಾತುಕತೆಯಾಡಲು ತಯಾರಾಗಿರುವ ಬಗ್ಗೆ ಪ್ರಸ್ತಾಪಿಸುತ್ತಾ ಭಗತ್ ಸಿಂಗ್ ''ಈ ಚಳವಳಿಯು ಕೆಲವು ಹೊಂದಾಣಿಕೆ ಮಾಡಿಕೊಂಡು ಇಲ್ಲವೇ ಸಂಪೂರ್ಣ ವಿಫಲವಾಗಿ ಅಂತ್ಯಗೊಳ್ಳುವಂತಾಗುತ್ತದೆ. ಹಾಗಾಗಿ ಈ ಬಾರಿ ನಿಜವಾದ ಕ್ರಾಂತಿಕಾರಿ ಶಕ್ತಿಗಳನ್ನು ಈ ಮಾತುಕತೆಯ ಪ್ರಕ್ರಿಯೆಯಿಂದ ಹೊರಗಿಡಲಾಗುತ್ತದೆ. ಈ ಚಳವಳಿಯು ಮಧ್ಯಮವರ್ಗ, ಅಂಗಡಿ ವ್ಯಾಪಾರಸ್ಥರು ಮತ್ತು ಕೆಲವೇ ಬಂಡವಾಳಶಾಹಿಗಳ ಮೇಲೆ ಆಧರಿಸಿದೆ. ಈ ಎಲ್ಲರೂ ಅದರಲ್ಲೂ ಬಂಡವಾಳಶಾಹಿಗಳು ಅವರ ಆಸ್ತಿಗಳನ್ನು ಇಲ್ಲವೇ ಅವರ ಹಿಡಿತದಲ್ಲಿರುವುದನ್ನು ಯಾವುದೇ ಚಳವಳಿಯಲ್ಲಿ ಆಪತ್ತಿಗೆ ಒಡ್ಡಿಕೊಳ್ಳಲು ಧೈರ್ಯ ವಹಿಸಲಾರರು. ನಿಜವಾದ ಕ್ರಾಂತಿಕಾರಿ ಸೇನೆ ರೈತಾಪಿಗಳು, ಕಾರ್ಮಿಕರು, ಹಳ್ಳಿಗಳು ಮತ್ತು ಕಾರ್ಖಾನೆಗಳಲ್ಲಿ ಇದ್ದಾರೆ. ಆದರೆ ಬಂಡವಾಳಶಾಹಿ ನಾಯಕರು ಅವರನ್ನು ನಿಭಾಯಿಸಲು ಧೈರ್ಯ ವಹಿಸರು ಮತ್ತು ವಹಿಸಲಾಗದು. ಮಲಗಿರುವ ಸಿಂಹವು ಒಮ್ಮೆ ನಿದ್ರೆಯಿಂದ ಎಚ್ಚರಗೊಂಡರೆ ಅದನ್ನು ತಡೆಯಲು ಈಗ ಈ ನಾಯಕರು ತಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸಿದ ಮೇಲೂ ಯಾರಿಗೂ ಸಾಧ್ಯವಾಗುವುದಿಲ್ಲ. 1920ರ ಅಹಮದಾಬಾದ್ ಕಾರ್ಮಿಕರ ಜೊತೆಗಿನ ಮೊದಲ ಅನುಭವದ ನಂತರ ಮಹಾತ್ಮಾ ಗಾಂಧಿ ಹೇಳುತ್ತಾರೆ 'ನಾವು ಈ ಕಾರ್ಮಿಕರೊಂದಿಗೆ ಮಧ್ಯಪ್ರವೇಶಿಸಕೂಡದು. ಫ್ಯಾಕ್ಟರಿ ಕಾರ್ಮಿಕರನ್ನು ನಾವು ರಾಜಕೀಯವಾಗಿ ಬಳಕೆ ಮಾಡುವುದು ಅಪಾಯಕಾರಿಯಾದುದು'. (ದಿ ಟೈಮ್ಸ್ . ಮೇ 1921) ಅದರ ನಂತರ ಅವರು ಯಾವತ್ತೂ ಕಾರ್ಮಿಕರನ್ನು ಸಮೀಪಿಸಲಿಲ್ಲ. ಅಲ್ಲಿ ರೈತಾಪಿಗಳಿದ್ದರು. 1922ರ ಬಾರ್ಡೋಲಿ ನಿರ್ಣಯವು ದೇಶದ ಮೇಲಿರುವ ಭೂಮಾಲಕರ ಪ್ರಾಬಲ್ಯವನ್ನು ನಡುಗಿಸಿದ್ದಷ್ಟೇ ಅಲ್ಲದೆ ಅವರ ನೊಗಗಳನ್ನು ಕಿತ್ತೊಗೆಯುವ ರೈತಾಪಿಗಳ ಭಾರೀ ವರ್ಗ ಬಂಡಾಯವನ್ನೂ ಸ್ಪಷ್ಟವಾಗಿ ತಿರಸ್ಕರಿಸುತ್ತದೆ.

ಈ ನಾಯಕರು ನಮ್ಮ ರೈತಾಪಿಗಳ ಬದಲು ಬ್ರಿಟಿಷರಿಗೆ ಶರಣಾಗತರಾಗುವುದನ್ನು ಆಯ್ದುಕೊಳ್ಳುತ್ತಾರೆ. ರೈತಾಪಿಗಳನ್ನು ಅಥವಾ ಕಾರ್ಮಿಕರನ್ನು ಸಂಘಟಿಸುವ ಯಾವುದಾದರೂ ಪ್ರಯತ್ನ ಮಾಡಿದ್ದನ್ನು ಹೆಸರಿಸಲು ಸಾಧ್ಯವೇ. ಇಲ್ಲ, ಅವರು ಆ ಶ್ರಮ ತೆಗೆದುಕೊಳ್ಳಲಾರರು. ಹಾಗಾಗಿಯೇ ನಾನು ಹೇಳಿದ್ದು ಇವರು ಸಂಪೂರ್ಣ ಕ್ರಾಂತಿಯ ಬಗ್ಗೆ ಎಂದೂ ಯೋಚಿಸಲಾರರು. ಆರ್ಥಿಕ ಮತ್ತು ಆಡಳಿತಾತ್ಮಕ ಒತ್ತಡಗಳ ಕಾರಣದಿಂದಾಗಿ ಇಂಡಿಯಾದ ಬಂಡವಾಳಶಾಹಿಗಳಿಗಾಗಿ ಅವರು ಕೆಲವು ಸುಧಾರಣೆಗಳನ್ನು, ಕೆಲವು ರಿಯಾಯಿತಿಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿಯೇ ನಾನು ಹೇಳಿದ್ದು ಈ ಚಳವಳಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಅಥವಾ ಅದಿಲ್ಲದೆಯೂ ಕೂಡ ನಾಶವಾಗಿ ಸಾಯುವತ್ತ ಸಾಗುತ್ತಿದೆ.'' ''ನೀವು 'ಕ್ರಾಂತಿ ಚಿರಾಯುವಾಗಲಿ' ಎಂದು ಘೋಷಣೆ ಕೂಗಿ ಅದರ ಅರ್ಥ ಗ್ರಹಿಸಿರಬಹುದು ಎಂದುಕೊಳ್ಳುತ್ತೇನೆ. ನಮ್ಮ ನಿರ್ವಚನೆಯ ಪ್ರಕಾರ, ನಾವು ಶಾಸನ ಸಭೆಯಲ್ಲಿ ಬಾಂಬ್ ಹಾಕಿರುವ ಪ್ರಕರಣದಲ್ಲಿ ನಮ್ಮ ಹೇಳಿಕೆಯಲ್ಲಿ ಇರುವಂತೆ ಕ್ರಾಂತಿ ಎಂದರೆ ಹಾಲಿ ಇರುವ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತೊಗೆದು ಅದರ ಜಾಗದಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸುವುದು. ಈ ಉದ್ದೇಶಕ್ಕಾಗಿ ನಾವು ಜನಸಮೂಹವನ್ನು ಈ ವಿಚಾರಗಳಲ್ಲಿ ಶಿಕ್ಷಿತಗೊಳಿಸಬೇಕು ಮತ್ತು ನಮ್ಮ ಸಾಮಾಜಿಕ ಕಾರ್ಯಕ್ರಮದ ಜಾರಿಗೆ ಪೂರಕವಾದ ವಾತಾವರಣ ನಿರ್ಮಾಣಮಾಡಬೇಕು. ಹೋರಾಟಗಳ ಮೂಲಕ ನಾವು ಅವರನ್ನು ಉತ್ತಮವಾಗಿ ತರಬೇತಿ ಪಡೆದವರನ್ನಾಗಿ ಹಾಗೂ ಶಿಕ್ಷಿತರನ್ನಾಗಿ ಮಾಡಬಹುದು'' ಹೀಗೆ ಭಗತ್‌ಸಿಂಗ್ ಆಗಿನ ಕಾಂಗ್ರೆಸ್ ಹಾಗೂ ಗಾಂಧಿ ನೇತೃತ್ವದ ಚಟುವಟಿಕೆಗಳ ಬಗ್ಗೆ ಸ್ಪಷ್ಟ ಹಾಗೂ ಖಚಿತ ನಿಲುವುಗಳನ್ನು ಹೊಂದಿ ಅವುಗಳನ್ನು ಜನಸಮೂಹಗಳಿಗೆ ದಾಟಿಸುತ್ತಿದ್ದರು.

ಅಲ್ಲದೆ ಕಾಂಗ್ರೆಸ್ ನಾಯಕತ್ವ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆದು ಪರಿಪೂರ್ಣ ಅರ್ಥದಲ್ಲಿ ಸ್ವಾತಂತ್ರ್ಯ ಪಡೆಯುವ ಇರಾದೆಯನ್ನೇ ಇಟ್ಟುಕೊಂಡಿರಲಿಲ್ಲ. ಕೇವಲ ಕೆಲವು ಸುಧಾರಣೆಗಳು ಹಾಗೂ ರಿಯಾಯಿತಿಗಳಿಗಾಗಿ, ಅದೂ ಕೂಡ ತಾವು ಪ್ರತಿನಿಧಿಸುತ್ತಿರುವ ಭಾರತದ ಬಂಡವಾಳಶಾಹಿ ಮತ್ತವರ ಬೆಂಬಲಿಗರ ಒಳಿತನ್ನು ಮಾತ್ರ ಗಮನದಲ್ಲಿಟ್ಟುಕೊಂಡಿದ್ದರೇ ಹೊರತು ಬೇರೆ ಏನೂ ಇರಲಿಲ್ಲ. ಅವರು ಈ ದೇಶದ ರೈತಾಪಿಗಳ ಹಾಗೂ ಕಾರ್ಮಿಕ ವರ್ಗದ ವಿರುದ್ಧವಾಗಿಯೇ ಕಾರ್ಯ ನಿರ್ವಹಿಸುತ್ತಾ ಬಂದರು ಎಂಬುದನ್ನು ಸ್ಪಷ್ಟವಾಗಿ ಬಿಚ್ಚಿಟ್ಟ ವ್ಯಕ್ತಿ ಭಗತ್ ಸಿಂಗ್ ಆಗಿದ್ದರು. ಭಗತ್ ಸಿಂಗ್ ಮತ್ತವರ ವಿಚಾರಗಳನ್ನು ಆಗ ಇದ್ದ ಸಿಪಿಐ ಪಕ್ಷ ಕೂಡ ಪುರಸ್ಕರಿಸಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಭಗತ್ ಸಿಂಗ್ ಕೂಡ ಆ ಪಕ್ಷವನ್ನು ಸೇರುವ ಪ್ರಯತ್ನ ನಡೆಸಿರಲಿಲ್ಲ. ಅಲ್ಲದೇ ಸಿಪಿಐ ನಿಲುವುಗಳು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕಾರ್ಯಕ್ರಮಗಳೊಂದಿಗೆ ಆಗಲೇ ಹೊಂದಾಣಿಕೆ ಮಾಡಿಕೊಂಡಿದ್ದವು. ಹಾಗಾಗಿ ಇಡೀ ದೇಶವನ್ನು ಮತ್ತದರ ಎಲ್ಲಾ ಆಸ್ತಿ ಸಂಪತ್ತುಗಳನ್ನೂ ಜಾಗತಿಕ ಭಾರೀ ಕಾರ್ಪೊರೇಟ್‌ಗಳಿಗೆ ಒಪ್ಪಿಸಲು ಧಾವಂತ ಪಡುತ್ತಿರುವ ಪ್ರಧಾನಿ ಮೋದಿ ಭಗತ್ ಸಿಂಗ್ ಜನ್ಮದಿನವನ್ನು ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರೈತ ಚಳವಳಿಯಲ್ಲಿ ಪಂಜಾಬ್‌ನ ರೈತರು ಒಂದು ಪ್ರಧಾನ ಪಾತ್ರ ವಹಿಸುತ್ತಿರುವ ಸಂದರ್ಭದಲ್ಲಿ ತಮ್ಮ ಅನುಕೂಲಗಳಿಗೆ ಬಳಸಲು ಪ್ರಯತ್ನಿಸಿದರು. ತಳಮಟ್ಟದಲ್ಲಿ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಾಗದೆ ಇದ್ದಾಗಲೂ ಸಿಪಿಐನ ಕೇಂದ್ರ ನಾಯಕತ್ವದ ಭಾಗವಾಗಿದ್ದರೆಂದು ಹೇಳಲಾದ ಕನ್ಹಯ್ಯ ಕುಮಾರ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ಭಗತ್ ಸಿಂಗ್ ವಾರಸುದಾರರೆಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನ ನಡೆಸಿರುವುದು ಬಹಳ ಅಭಾಸಕರವಾದ. ಹಾಗೆಯೇ ದೇಶದ ಜನರನ್ನು ತಮ್ಮ ನಿರ್ದಿಷ್ಟ ಉದ್ದೇಶಗಳಿಗಾಗಿ ಮರುಳುಗೊಳಿಸುವ ಮಾಮೂಲಿ ರಾಜಕಾರಣಿಗಳು ಮಾಡುವ ಅಗ್ಗದ ಗಿಮಿಕ್‌ಗಳಲ್ಲದೇ ಬೇರೇನೂ ಆಗಲು ಸಾಧ್ಯವಿಲ್ಲ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News