ಉಳ್ಳಾಲ: ಲಾಕ್‌ಡೌನ್‌ನಿಂದ ಮೀನುಗಾರರ ಬದುಕು ತತ್ತರ
ಉಳ್ಳಾಲ, ಅ.7: ಕರಾವಳಿಯ ಪ್ರಮುಖ ಉದ್ಯಮವಾಗಿರುವ ಮೀನುಗಾರಿಕೆಯು ಕೋವಿಡ್ ಲಾಕ್‌ಡೌನ್, ಇಂಧನ ಬೆಲೆಯೇರಿಕೆ ಮತ್ತಿತರ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ನಾಡ ದೋಣಿ ಮೀನುಗಾರರ ಬದುಕು ತತ್ತರಿಸಿ ಹೋಗಿದ್ದು, ಮತ್ಸೋದ್ಯಮದಲ್ಲಿ ತೊಡಗಿಕೊಂಡವರು ಈಗ ಬದುಕಿಗೆ ಬೇರೆ ದಾರಿ ಹುಡುಕುವ ಪರಿಸ್ಥಿತಿ ಎದುರಾಗಿದೆ. ಮಾರುಕಟ್ಟೆ ಕೊರತೆ, ಇಳಿಕೆ ಆದ ರಫ್ತು, ಒಂದೆಡೆ ಸಿಗದ ಮಾರುಕಟ್ಟೆ ದರ, ಇನ್ನೊಂದೆಡೆ ಸೀಮೆಎಣ್ಣೆ ಸಮಸ್ಯೆ, ಸರಕಾರ ಕೈಬಿಟ್ಟ ರಿಯಾಯಿತಿ, ಸಿಗದ ಪರಿಹಾರ, ಹೀಗಿದ್ದರೂ ಎಲ್ಲವನ್ನೂ ಸರಿದೂಗಿಸಿಕೊಂಡು ಮೀನುಗಾರಿಕೆಗೆ ತೆರಳಿದರೆ ಕೆಲವು ಬಾರಿ ಮೀನು ಸಿಗದೆ ಬರಿಗೈಯಲ್ಲಿ ಮರಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಾರೆ.
ಸರಕಾರದ ವಿವಿಧ ಇಲಾಖೆಗಳು ಕೊರೋನ ಪರಿಹಾರ ನೀಡಿವೆ. ಆದರೆ ಮೀನುಗಾರರಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಮೀನು ಮಾರಾಟ ಮಾಡುವವರ ಕಷ್ಟಕ್ಕೆ ಸ್ಪಂದನ ಸಿಕ್ಕಿಲ್ಲ. ಉಳ್ಳಾಲ ನಗರದಲ್ಲಿ 15ಕ್ಕೂ ಅಧಿಕ ಮೊಗವೀರರು ಮೀನು ಮಾರಾಟ ಮಾಡಿ ಬದುಕುತ್ತಿದ್ದಾರೆ. ಅವರಿಗೆ ಲಾಕ್‌ಡೌನ್ ಸಮಯದಲ್ಲಿ ದುಡಿಮೆ ಇಲ್ಲವಾಗಿತ್ತು. ಈ ಬಗ್ಗೆ ಸರಕಾರ, ಜನಪ್ರತಿನಿಧಿಗಳ ಗಮನಸೆಳೆದು ಕಷ್ಟದ ಬಗೆ ತೋಡಿಕೊಂಡರೂ ನಗರ ಸಭೆಯಿಂದ ಸಿಕ್ಕಿದ್ದು 10 ಸಾವಿರ ರೂ. ಸಾಲ ಮಾತ್ರ. ಉಳಿದ ಯಾವುದೇ ಸವಲತ್ತು ಲಭಿಸಿಲ್ಲ. ಮೀನು ದರದ ಬಗ್ಗೆ ಚರ್ಚೆ ಮಾಡುವ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಲು ತಯಾರಿಲ್ಲ. ಮೀನುಗಾರಿಕೆ ಇಲಾಖೆಯಂತೂ ಸ್ಪಂದಿಸುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಮೀನುಗಾರರ ವಲಯದಿಂದ ಕೇಳಿಬಂದಿದೆ.
‘‘ನಾವು ಮೀನುಗಾರಿಕೆಯನ್ನೇ ಉದ್ಯಮವಾಗಿರಿಸಿಕೊಂಡವರು. ಆದರೆ ಕೊರೋನ ಲಾಕ್‌ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರಕಾರ ಸವಲತ್ತು ಕೂಡಾ ನೀಡುತ್ತಿಲ್ಲ. ಇಂಜಿನ್ ಸಬ್ಸಿಡಿಯಾಗಿ ಮೀನುಗಾರ ಮಹಿಳೆಯರಿಗೆ 65,000 ರೂ., ಪುರುಷರಿಗೆ 45,000 ಸಿಗುತ್ತಿತ್ತು. ಆದರೆ ಕೊರೊನ ಬಳಿಕ ಸರಕಾರ ಇದನ್ನು ಸ್ಥಗಿತಗೊಳಿಸಿದೆ. 14 ರೂ. ಇದ್ದ ಸೀಮೆಎಣ್ಣೆ ದರ 35 ರೂ. ಆಗಿದೆ. ಇದರಲ್ಲೂ ಸರಕಾರ ರಿಯಾಯಿತಿ ನೀಡುತ್ತಿಲ್ಲ. ಇದರಿಂದ ಬ್ಯಾಂಕ್ ಸಾಲ ಕಟ್ಟಲಾಗದೇ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕೊರೋನ ಸಮಯದಲ್ಲೂ ನಮ್ಮ ಬದುಕಿಗೆ ಸರಕಾರ ನೆರವಾ ಗಿಲ್ಲ’’ ಎನ್ನುತ್ತಾರೆ ಉಳ್ಳಾಲ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್.
‘ಮೀನುಗಾರಿಕೆಯಲ್ಲಿ ದುಡಿಯುತ್ತಿದ್ದವರನ್ನು ಕೊರೋನ ಕಷ್ಟದ ಕೂಪಕ್ಕೆ ತಳ್ಳಿದೆ. ಎರಡು ತಿಂಗಳು ವ್ಯಾಪಾರ ಬಂದ್ ಆಯಿತು. ಈ ವೇಳೆ ಹೊಟ್ಟೆಪಾಡಿಗಾಗಿ ಆಟೊದಲ್ಲಿ ದುಡಿದರೂ ದೊಡ್ಡ ಪ್ರಯೋಜನವಾಗಿಲ್ಲ. ಒಟ್ಟಾರೆ ಕಷ್ಟದ ಜೀವನ ನಮ್ಮದಾಯಿತು. ಸರಕಾರದ ಯಾವುದೇ ಯೋಜನೆ ಸಿಕ್ಕಿಲ್ಲ. ಪ್ಯಾಕೇಜ್ ಅಂತೂ ಇಲ್ಲವೇ ಇಲ್ಲ. ಎರಡು ಬಾರಿ ಲಾಕ್‌ಡೌನ್ ಆದಾಗಲೂ ಇದೇ ಸಮಸ್ಯೆ. ಈ ಕಾರಣದಿಂದ ಮೀನುಗಾರಿಕೆ ಮಾಡುವುದನ್ನೇ ನಿಲ್ಲಿಸಿದ್ದೇನೆ. ಸದ್ಯ ಆಟೊದಲ್ಲಿ ದುಡಿಯುತ್ತಿದ್ದೇನೆ ಎಂದು ಮೀನುಗಾರ ಸಚಿನ್ ತೊಕ್ಕೊಟು ಅಳಲು ತೋಡಿಕೊಂಡಿದ್ದಾರೆ.
ಮೀನುಗಾರರ ಪರಿಹಾರಕ್ಕಾಗಿ ಸರಕಾರದ ಯೋಜನೆ ಬರಲಿಲ್ಲ. ಅವರ ಕಷ್ಟ ಅರ್ಥ ಮಾಡಿಕೊಂಡು ಸಾಲದ ವ್ಯವಸ್ಥೆ ಮಾಡಲಾಗಿದೆ. 10 ಸಾವಿರ ರೂ. ಬ್ಯಾಂಕ್‌ಗೆ ಮೂರು ಪಾವತಿ ಮಾಡಿದ ಮೀನು ಮಾರಾಟಗಾರರಿಗೆ ಎರಡನೇ ಹಂತದ ಸಾಲ 20 ಸಾವಿರ ರೂ. ಸಿಗುತ್ತದೆ. ಅದರಲ್ಲೂ ಸಬ್ಸಿಡಿ ಇದೆ. ಅವರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ.
ರಾಯಪ್ಪ, ಪೌರಾಯುಕ್ತ, ಉಳ್ಳಾಲ ನಗರಸಭೆ
ಲಾಕ್‌ಡೌನ್‌ನಿಂದ ಎಲ್ಲಕ್ಕಿಂತ ಮಿಗಿಲಾಗಿ ಡೀಸೆಲ್ ದರ ಏರಿಕೆ ಮೀನುಗಾರಿಕೆ ಮೇಲೆ ದೊಡ್ಡ ಹೊಡೆತ ನೀಡಿದೆ. ಲಾಕ್‌ಡೌನ್ ಬಳಿಕ ಮೀನುಗಾರಿಕೆ ಸಮಗ್ರ ಬೆಳವಣಿಗೆ ಕೂಡಾ ಆಗಿಲ್ಲ. ವಿದೇಶಗಳಿಗೆ ಅದರಲ್ಲೂ ಮುಖ್ಯವಾಗಿ ಚೀನಾ, ಜಪಾನ್, ದುಬೈ ಸಹಿತ ಗಲ್ಫ್ ರಾಷ್ಟ್ರಗಳಿಗೆ ಆಗುತ್ತಿದ್ದ ಮೀನು ರಫ್ತು ಕೊರೋನ ಬಳಿಕ ಸ್ಥಗಿತಗೊಂಡಿದೆ. ಇದರಿಂದ ದೋಡ್ಡ ನಷ್ಟ ಮೀನುಗಾರಿಕೆ ಮೇಲಾಗಿದೆ. ಕಾರ್ಮಿಕ, ಸಿಬ್ಬಂದಿ ವರ್ಗದ ವೇತನ ಸರಿದೂಗಿಸಲು ಕಷ್ಟ ಆಗುತ್ತಿದೆ. ಈಗ ಕೇವಲ ಚೆನ್ನೈ, ಆಂಧ್ರ ಪ್ರದೇಶಗಳಿಗೆ ಮಾತ್ರ ರಫ್ತು ಆಗುತ್ತಿವೆ. ಮೀನು, ಹಾಗೂ ಅದರ ಎಣ್ಣೆಯ ಬೇಡಿಕೆ ಕಡಿಮೆ ಇದೆ. ಇದರಿಂದ ಲಾಕ್‌ಡೌನ್ ಬಳಿಕ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಲು ಸಾಧ್ಯ ಆಗದ ಪರಿಸ್ಥಿತಿ ಇದೆ. ಅವರ ವೇತನ ಭರಿಸಲು ಈಗಿನ ವ್ಯವಹಾರ ಸಾಕಾಗುವುದಿಲ್ಲ. ಕೇಂದ್ರ ಸರಕಾರ ನೋಟು ಬ್ಯಾನ್ ಮಾಡಿದ ಸಮಯದಲ್ಲೇ ಸಮಸ್ಯೆ ಎದುರಾಗಿತ್ತು. ಆದರೆ ವಿದೇಶಗಳಿಗೆ ರಫ್ತು ನಿರಂತರ ಇತ್ತು. ಕೊರೋನದಿಂದಾಗಿ ಸಿಬ್ಬಂದಿ, ಕಾರ್ಮಿಕರ ವೇತನ, ಖರ್ಚು ದೊಡ್ಡ ಹೊರೆಯಾಗಿದೆ. ಮೀನಿನ ಕೊರತೆ ಜತೆಗೆ ವಿದೇಶಗಳಿಗೆ ರಫ್ತು ಕಡಿಮೆ ಆದ ಕಾರಣ ದೊಡ್ಡ ಮೊತ್ತದ ಆದಾಯ ಇಲ್ಲದೆ ಬದುಕು ಸಂಕಷ್ಟ ದಲ್ಲಿದೆ.
ತ್ವಾಹಾ ಹಾಜಿ, ಉಪಾಧ್ಯಕ್ಷ, ಫಿಶ್ ಮಿಲ್ ಮತ್ತು ಫಿಶ್ ಆಯಿಲ್ ಫ್ಯಾಕ್ಟರಿ ಅಸೋಸಿಯೇಶನ್
ಕೊರೋನ ಕಾಣಿಸಿಕೊಳ್ಳುವ ಮೊದಲು ಮತ್ಸೋದ್ಯಮ ಚೆನ್ನಾಗಿತ್ತು. ಸರ್ಕಾರದ ವಿವಿಧ ಯೋಜನೆಗಳು, ಸಹಕಾರ ಗಳು ಇದ್ದವು. ಆದರೆ ಲಾಕ್‌ಡೌನ್ ಈ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಆದಾಯ ಇಳಿಕೆ ಆಗಿದೆ. ಸರಕಾರದ ಯೋಜನೆಗಳು ಸ್ಥಗಿತಗೊಂಡಿವೆೆ. ಆದ್ದರಿಂದ ಸರಕಾರ ಲೀಟರ್ ಗೆ 10 ರೂ. ರಿಯಾಯಿತಿಯಲ್ಲಿ ಸೀಮೆಎಣ್ಣೆ ಪ್ರತಿ ತಿಂಗಳ 10 ತಾರೀಖಿನೊಳಗೆ ನೀಡಬೇಕು. ಕೃಷಿಕರಿಗೆ ಏನು ಸವಲತ್ತು ನೀಡುತ್ತದೆಯೋ ಅದೇ ರೀತಿ ನಮಗೂ ನೀಡಬೇಕು. ವರ್ಷಕ್ಕೊಂದು ಬಲೆ ಉಚಿತವಾಗಿ ನೀಡಬೇಕು. ಮೀನು ಗಾರಿಕೆ ನಡೆಸುವವರಿಗೆ ರಕ್ಷಣೆ ನೀಡಬೇಕು. ತಿಂಗಳಿಗೆ 200 ಲೀಟರ್ ಸೀಮೆಎಣ್ಣೆ ನೀಡಬೇಕು.
ಸುಭಾಷ್ ಬೋಳಾರ, ಗೌರವಾಧ್ಯಕ್ಷ, ಉಳ್ಳಾಲ ವಲಯ ನಾಡದೋಣಿ ಮೀನುಗಾರರ ಸಂಘ