ಕನ್ನಡ ಬದುಕು ರೂಪಿಸುವ ಭಾಷೆಯಾಗಿ ಬೆಳೆಯಲಿ

Update: 2021-11-02 19:57 GMT

ಕರ್ನಾಟಕದ ಸಾಮಾನ್ಯ ಜನತೆಯ ನಡುವೆ ಕನ್ನಡ ಜೀವಂತವಾಗಿಯೇ ಇದೆ, ಜೀವಂತಿಕೆಯಿಂದಲೂ ಇದೆ. ತಳ ತಲುಪಿದ್ದಾಗ ಮಾತ್ರ ಪುಟಿದೇಳಬೇಕಾದ ಅನಿವಾರ್ಯ ಎದುರಾಗುತ್ತದೆ. ಈಗ ಪುಟಿದೇಳಬೇಕಾದ ಸಂದರ್ಭ ಒದಗಿರುವುದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ, ರಾಜ್ಯ ಸರಕಾರ ಅನುಸರಿಸುತ್ತಿರುವ ಶಿಕ್ಷಣ ನೀತಿಯ ಮೂಲಕ, ಸರಕಾರದ ಆಡಳಿತ ನೀತಿಗಳಲ್ಲಿ ಮತ್ತು ಕನ್ನಡವನ್ನು ಬೆಳೆಸುವ ನೈತಿಕ ಜವಾಬ್ದಾರಿ ಹೊರಬೇಕಾದ ಮಾಧ್ಯಮಗಳಲ್ಲಿ.


ಕನ್ನಡ ನಾಡು ತನ್ನ 65 ವರ್ಷಗಳನ್ನು ಪೂರೈಸಿದ ನಂತರವೂ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯೊಡನೆ ಮತ್ತೊಂದು ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ. 1956ರ ನವೆಂಬರ್ ಒಂದರಂದು ಉದಯಿಸಿದ ಮೈಸೂರು ರಾಜ್ಯ ನಂತರ ಕರ್ನಾಟಕ ಎಂದಾಯಿತು. ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡವನ್ನು ಒಂದು ಭಾಷೆಯಾಗಿ, ಸಂಸ್ಕೃತಿಯಾಗಿ ಮತ್ತು ರಾಷ್ಟ್ರೀಯತೆಯಾಗಿ ಹೇಗೆ ಸಂರಕ್ಷಿಸಬೇಕು ಎನ್ನುವ ಗಂಭೀರ ಪ್ರಶ್ನೆಯೊಂದಿಗೇ ಏಳು ಕೋಟಿ ಜನರ ಕರ್ನಾಟಕದ ಅಸ್ತಿತ್ವ, ಅಸ್ಮಿತೆ ಮತ್ತು ಸಂಯುಕ್ತತತ್ವವನ್ನು ಉಳಿಸಿಕೊಳ್ಳುವ ಆತಂಕದ ನಡುವೆ ರಾಜ್ಯೋತ್ಸವದ ಸಂಭ್ರಮ ಕಂಗೊಳಿಸುತ್ತಿದೆ. ಪ್ರತಿ ವರ್ಷವೂ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಉತ್ಕಟ ಭಾವನೆಗಳು ಮೇಳೈಸುತ್ತವೆ. ಸರಕಾರದ ಪ್ರತಿನಿಧಿಗಳು ಕನ್ನಡ ಭಾಷೆಯ ರಕ್ಷಣೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಾರೆ. ಕನ್ನಡ ಪರ ಸಂಘಟನೆಗಳು ತಮ್ಮ ಭಾಷಾಭಿಮಾನವನ್ನು ಪ್ರದರ್ಶಿಸುತ್ತವೆ. ನಿರ್ದಿಷ್ಟ ಮತದ ಚೌಕಟ್ಟಿಗೆ ಅಳವಡಿಸಲ್ಪಟ್ಟ ಸಾರ್ವತ್ರಿಕ ಭಾಷೆಯೊಂದು ಭುವನೇಶ್ವರಿಯ ಮಡಿಲಲ್ಲಿ ಕುಳಿತು ರಾಜ್ಯಾದ್ಯಂತ ಕಂಗೊಳಿಸುತ್ತದೆ. ಭಾಷೆ, ಸಂಸ್ಕೃತಿ ಮತ್ತು ಭೌಗೋಳಿಕ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಅಸ್ತಿತ್ವ ಈ ಮೂರರ ನಡುವಿನ ಸೂಕ್ಷ್ಮ ಸಂಬಂಧಗಳು ಮುನ್ನೆಲೆಗೆ ಬರದೆಯೇ, ರಾಜ್ಯೋತ್ಸವ ಸಮಾರಂಭಗಳು ಹಾರ ತುರಾಯಿಗಳ ನಡುವೆ, ಜೈಕಾರಗಳ ನಡುವೆ, ಭುವನೇಶ್ವರಿಯ ಆರಾಧನೆಯ ಮೂಲಕ ಭಾಷಾಭಿಮಾನದ ಅಭಿವ್ಯಕ್ತಿಯ ಸಾಧನಗಳಾಗುತ್ತವೆ.

ಉತ್ಸವಗಳು ಮತ್ತು ಆಚರಣೆಗಳು ಕೇವಲ ಸಾಂದರ್ಭಿಕ ಉತ್ಸಾಹ ಮತ್ತು ಸಂಭ್ರಮದಲ್ಲಿ ಪರ್ಯವಸಾನಗೊಂಡಾಗ ಸಹಜವಾಗಿಯೇ ಆ ಸಂದರ್ಭದ ಮೂಲ ಆಶಯಗಳು ಮೂಲೆಗುಂಪಾಗುತ್ತವೆ. ಇದು ಭಾರತದ ಸ್ವಾತಂತ್ರ್ಯೋತ್ಸವಕ್ಕೆ ಅನ್ವಯಿಸುವಂತೆಯೇ ಕರ್ನಾಟಕ ರಾಜ್ಯೋತ್ಸವಕ್ಕೂ ಅನ್ವಯಿಸುತ್ತದೆ. ಕರ್ನಾಟಕದ ಜನಕೋಟಿಯ ಮುಂದೆ ಇಂದು ಹಲವು ಜ್ವಲಂತ ಸವಾಲುಗಳಿವೆ. ದಶಕಗಳ ಕಾಲ ನಿರ್ಲಕ್ಷಕ್ಕೊಳಗಾಗಿರುವ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿಯೇ ಉಳಿದಿರುವುದರೊಂದಿಗೆ, ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳಿಂದ, ಕೋಮುವಾದಿ ಫ್ಯಾಶಿಸ್ಟ್ ರಾಜಕಾರಣದಿಂದ ಮತ್ತಷ್ಟು ಉಲ್ಬಣಿಸಿವೆ. ಭಾಷಾ ರಾಜಕಾರಣದ ಭಾವುಕ ಚೌಕಟ್ಟಿನಲ್ಲಿ ನೇಪಥ್ಯಕ್ಕೆ ಸರಿಯುವ ಸೂಕ್ಷ್ಮ ಸಾಮಾಜಿಕ ಸಮಸ್ಯೆಗಳು, ಜನರ ಬದುಕನ್ನು ನಿಯಂತ್ರಿಸುವ ಮಾರುಕಟ್ಟೆ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಅಪಾಯಗಳು ಮತ್ತು ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಅಸಂಖ್ಯಾತ ಜನಸಮುದಾಯಗಳ ಜೀವನೋಪಾಯದ ಸಮಸ್ಯೆಗಳು ರಾಜ್ಯೋತ್ಸವದ ಸಂದರ್ಭದಲ್ಲಿ ಆತ್ಮಾವಲೋಕನದ ನೆಲೆಗಳಾಗಬೇಕಿವೆ. ‘‘ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರರಿಗೂ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧವಾಗಿರುತ್ತೇನೆ’’ ಎಂಬ ಪ್ರತಿಜ್ಞಾವಿಧಿಯನ್ನು ಬೋಧಿಸುವ ಮೂಲಕ ನಾಡಿನ ದಶದಿಕ್ಕಿನಲ್ಲೂ ಕನ್ನಡ ಗಾಯನವನ್ನು ಮೊಳಗಿಸುವ ಮೂಲಕ ಈ ಬಾರಿಯ ರಾಜ್ಯೋತ್ಸವದ ಸಂದರ್ಭವನ್ನು ಮತ್ತಷ್ಟು ಆಕರ್ಷಣೀಯವನ್ನಾಗಿ ಮಾಡಲಾಗಿದೆ. 447 ಸ್ಥಳಗಳಲ್ಲಿ ಲಕ್ಷಾಂತರ ಮಂದಿಯಿಂದ ಒಂದೇ ಬಾರಿಗೆ ಕನ್ನಡ ಗಾಯನದ ಮೂಲಕ ಕನ್ನಡದ ಕಹಳೆ ಆಕಾಶದಲ್ಲಿ ಮೊಳಗಿದೆ. ಭಾವನಾತ್ಮಕ ನೆಲೆಯಲ್ಲಿ ಇದು ರಾಜ್ಯದ ಜನತೆಯ ನಡುವೆ ಭಾಷಾಭಿಮಾನವನ್ನು ಮೂಡಿಸಲು ಯಶಸ್ವಿಯಾಗಲೂಬಹುದು. ಕನ್ನಡತನ ಪುಟಿದೇಳಲು ಈ ಪ್ರಯತ್ನ ನೆರವಾಗಬಹುದು ಎಂಬ ಆಶಯವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ವ್ಯಕ್ತಪಡಿಸಿದ್ದಾರೆ. ಆದರೆ ಕರ್ನಾಟಕದ ಸಾಮಾನ್ಯ ಜನತೆಯ ನಡುವೆ ಕನ್ನಡ ಜೀವಂತವಾಗಿಯೇ ಇದೆ, ಜೀವಂತಿಕೆಯಿಂದಲೂ ಇದೆ. ತಳ ತಲುಪಿದ್ದಾಗ ಮಾತ್ರ ಪುಟಿದೇಳಬೇಕಾದ ಅನಿವಾರ್ಯ ಎದುರಾಗುತ್ತದೆ. \

ಈಗ ಪುಟಿದೇಳಬೇಕಾದ ಸಂದರ್ಭ ಒದಗಿರುವುದು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ, ರಾಜ್ಯ ಸರಕಾರ ಅನುಸರಿಸುತ್ತಿರುವ ಶಿಕ್ಷಣ ನೀತಿಯ ಮೂಲಕ, ಸರಕಾರದ ಆಡಳಿತ ನೀತಿಗಳಲ್ಲಿ ಮತ್ತು ಕನ್ನಡವನ್ನು ಬೆಳೆಸುವ ನೈತಿಕ ಜವಾಬ್ದಾರಿ ಹೊರಬೇಕಾದ ಮಾಧ್ಯಮಗಳಲ್ಲಿ. ಭಾಷೆ ಸಾಯುವುದಿಲ್ಲ. ಜನಜೀವನದ ಒಂದು ಭಾಗವಾಗಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡೇ ಸಾಗುತ್ತದೆ. ಮೂಲತಃ ಭಾಷೆಯ ಬೆಳವಣಿಗೆಯಾಗಬೇಕಿರುವುದು ಬಳಕೆಯ ಮಾಧ್ಯಮಗಳ ಮೂಲಕ ಮತ್ತು ಶೈಕ್ಷಣಿಕ, ಬೌದ್ಧಿಕ ನೆಲೆಗಳ ಮೂಲಕ. ಈ ನಿಟ್ಟಿನಲ್ಲಿ ಕರ್ನಾಟಕದ ಯಾವ ಸರಕಾರಗಳೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎನ್ನುವುದು ಕಟು ವಾಸ್ತವ. ಆಡಳಿತದಲ್ಲಿ ಕನ್ನಡದ ಅನುಷ್ಠಾನ ಮಾಡುವುದರಲ್ಲಿ ಮುನ್ನಡೆ ಸಾಧಿಸಲಾಗಿದ್ದರೂ, ಇಂದಿಗೂ ಬ್ಯಾಂಕುಗಳಲ್ಲಿ, ನ್ಯಾಯಾಲಯಗಳಲ್ಲಿ, ಸರಕಾರದ ವ್ಯವಹಾರಗಳಲ್ಲಿ ಕನ್ನಡದ ಬಳಕೆ ನಿರ್ಲಕ್ಷಕ್ಕೊಳಗಾಗುತ್ತಲೇ ಇದೆ. ಈ ನೆಲೆಯಲ್ಲಿ ಕನ್ನಡ ಬೇಕಿರುವುದು ಸಮಾಜದ ಕೆಳಸ್ತರದ ಸಮುದಾಯಗಳಿಗೆ, ಅರೆಶಿಕ್ಷಿತ ಜನತೆಗೆ ಮತ್ತು ಪ್ರಧಾನವಾಗಿ ದುಡಿಯುವ ಜನತೆಗೆ. ಈ ಜನತೆಯ ನಡುವೆ ಕನ್ನಡ ಬದುಕಿನ ಭಾಷೆಯಾಗಿ ಬೆಳೆಯಬೇಕೆಂದರೆ ಭಾಷೆ ಶಿಕ್ಷಣದ ಮೂಲಕವೇ ಬೆಳೆಯಬೇಕು. ಒಂದು ಸಂವಹನ ಮಾಧ್ಯಮವಾಗಿ ಭಾಷೆ ಬೆಳೆಯುವುದಕ್ಕೂ, ಬದುಕು ರೂಪಿಸುವ ಭಾಷೆಯಾಗಿ ಬೆಳೆಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ರಾಜಕಾರಣ ನಿಷ್ಪ್ರಯೋಜಕವಾಗಿದೆ. ಕನ್ನಡ ಉಳಿಯಬೇಕೆಂದರೆ ಯಾರಿಗಾಗಿ ಉಳಿಯಬೇಕು? ಕನ್ನಡಿಗರಿಗಾಗಿ ಅಲ್ಲವೇ? ಯಾರು ಕನ್ನಡಿಗರು? ಕರ್ನಾಟಕದಲ್ಲಿ ನೆಲೆಸಿರುವ ಸಮಸ್ತರೂ. ಈ ಜನಕೋಟಿಯ ಅಳಿವು ಉಳಿವಿನ ಪ್ರಶ್ನೆ ಭಾಷೆಗಿಂತಲೂ ಹೆಚ್ಚಾಗಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ, ಸಾಂಸ್ಕೃತಿಕ ಸೌಹಾರ್ದದಲ್ಲಿ ನಿಷ್ಕರ್ಷೆಯಾಗುತ್ತದೆಯಲ್ಲವೇ? ದಶದಿಕ್ಕುಗಳಿಂದ ಮೊಳಗುವ ಕನ್ನಡ ಗಾಯನದಿಂದ ಭಾವನೆಗಳು ಪುಟಿದೇಳುತ್ತವೆ, ಕನ್ನಡ ಭಾಷಾ ಪ್ರೇಮ ಉದ್ದೀಪನಗೊಳ್ಳುತ್ತದೆ. ಆದರೆ ಈ ಗಾಯನದಲ್ಲಿ ಪಾಲ್ಗೊಳ್ಳುವ ಅಸಂಖ್ಯಾತ ಜೀವಗಳ ಬದುಕು ಹಸನಾಗುವಂತಹ ಒಂದು ಅರ್ಥವ್ಯವಸ್ಥೆಯನ್ನು ರೂಪಿಸದಿದ್ದರೆ, ಈ ಬದುಕುಗಳು ನೆಮ್ಮದಿಯಿಂದಿರುವ ಸೌಹಾರ್ದಯುತ ಸಮಾಜವನ್ನು ನಿರ್ಮಿಸದಿದ್ದರೆ, ಭಾಷೆ ಉಳಿಯುವುದಾದರೂ ಯಾರಿಗಾಗಿ? ಮಲೆನಾಡಿನ ಪಶ್ಚಿಮ ಘಟ್ಟಗಳಲ್ಲಿ ಮೊಳಗುವ ಕನ್ನಡ ಡಿಂಡಿಮ ಅಲ್ಲಿನ ವೈವಿಧ್ಯಮಯ ಭಾಷೆಗಳೊಂದಿಗೇ ಪರಿಸರ ಸಂಪತ್ತಿನ ಒಂದು ಭಾಗವಾಗಿಯೇ ಮೊಳಗುತ್ತದೆ. ಈ ನೈಸರ್ಗಿಕ ಪರಿಸರವನ್ನು ಮತ್ತು ಸಂಪನ್ಮೂಲಗಳನ್ನು ಸಂರಕ್ಷಿಸುವುದು ನಮ್ಮ ಆದ್ಯತೆಯಾಗದೆ ಹೋದರೆ, ಭಾಷೆಯೊಡನೆ ಭಾಷಿಕರೂ ಅವಸಾನದತ್ತ ಸಾಗುತ್ತಾರೆ.

ಕರ್ನಾಟಕದಲ್ಲಿ ಕೆಲವು ಭಾಷೆಗಳು, ಭಾಷಿಕರು ಈ ಅಪಾಯವನ್ನು ಎದುರಿಸುತ್ತಿದ್ದಾರೆ. ಭಾಷೆ ಬದುಕಿನ ಪ್ರಶ್ನೆಯಾಗಬೇಕು. ಬದುಕು ರೂಪಿಸುವ ಸಾಧನವಾಗಬೇಕು. ಇದಕ್ಕೆ ಪೂರಕವಾಗಿಯೇ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳೂ ನಡೆಯಬೇಕು. ಅನ್ಯಭಾಷಿಕರನ್ನು ಸ್ಥಳೀಯ ಸಮಸ್ಯೆಗಳಿಗೆ ಹೊಣೆ ಮಾಡುವ ಸಂಕುಚಿತ ಧೋರಣೆಯಿಂದ ಹೊರಬಂದು ನೋಡಿದಾಗ, ನವ ಉದಾರವಾದ ಮತ್ತು ಸಾಂಸ್ಕೃತಿಕ ರಾಷ್ಟ್ರೀಯವಾದದ ಮೂಲಕ ಒಕ್ಕೂಟ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಪ್ರಯತ್ನಗಳು ಢಾಳಾಗಿ ಕಾಣುತ್ತವೆ. ಆರ್ಥಿಕ ನೆಲೆಯಲ್ಲಿ ಔದ್ಯೋಗಿಕ ನೆಲೆಗಳು ಖಾಸಗೀಕರಣಕ್ಕೊಳಗಾಗಿ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವಲಯವೂ ಕಾರ್ಪೊರೇಟ್ ವಶವಾಗುತ್ತಿದ್ದಂತೆಯೇ, ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡದ ಭಾಷಾ ಅಸ್ಮಿತೆಯನ್ನು ಹಿಂದುತ್ವವಾದದ ಸಾಂಸ್ಕೃತಿಕ ರಾಷ್ಟ್ರೀಯತೆ ನುಂಗಿಹಾಕುತ್ತಿದೆ. ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿಯ ಪರಿಕಲ್ಪನೆಯಲ್ಲಿ, ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯದೊಂದಿಗೇ ಜೀವ ವೈವಿಧ್ಯಗಳೂ ಅವಸಾನ ಹೊಂದುತ್ತವೆ ಎನ್ನುವ ಎಚ್ಚರ ನಮ್ಮಲ್ಲಿರಬೇಕಲ್ಲವೇ? ಖಾಸಗೀಕರಣ ಮತ್ತು ಔದ್ಯಮಿಕ ಕಾರ್ಪೊರೇಟೀಕರಣ ಪ್ರಕ್ರಿಯೆಯಲ್ಲಿ ಕರ್ನಾಟಕದ/ಕನ್ನಡಿಗರ ಅಸ್ಮಿತೆಯಾಗಿಯೇ ಬೆಳೆದುಬಂದಿದ್ದ ಸಾರ್ವಜನಿಕ ಔದ್ಯಮಿಕ ಆಸ್ತಿಯನ್ನು ಸದ್ದಿಲ್ಲದೆ ಕಳೆದುಕೊಳ್ಳುತ್ತಿದ್ದೇವೆ. ನವ ಉದಾರವಾದ, ಜಾಗತಿಕ ಬಂಡವಾಳವನ್ನು ಪೋಷಿಸುತ್ತಲೇ ಸ್ಥಳೀಯ ಮಟ್ಟದ ಉತ್ಪಾದನಾ ಮೂಲಗಳನ್ನೂ, ಉತ್ಪಾದನೆಯ ವಲಯಗಳನ್ನೂ ವಶಪಡಿಸಿಕೊಳ್ಳುತ್ತದೆ. ಈ ಬಂಡವಾಳದ ಪೋಷಣೆಗೆ ಮತ್ತು ವೃದ್ಧಿಗೆ ಅನುಕೂಲಕರವಾದ ಪರಿಸರವನ್ನು ರೂಪಿಸುವ ನಿಟ್ಟಿನಲ್ಲಿ ಭಾಷೆಯೂ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ, ಮಾತೃಭಾಷೆಯ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಲಾಗಿದ್ದರೂ, ಬಂಡವಾಳ ಮತ್ತು ಮಾರುಕಟ್ಟೆಗೆ ಪೂರಕವಾದ ಒಂದು ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಸಂದರ್ಭದಲ್ಲಿ ಭಾಷೆ ನಗಣ್ಯವಾಗಿಬಿಡುತ್ತದೆ. ಸ್ಥಳೀಯ ಮಾರುಕಟ್ಟೆಯ ಪರಿಕಲ್ಪನೆಯೇ ಇಲ್ಲವಾಗಿ, ಜಾಗತಿಕ ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ಕರ್ನಾಟಕದ ಸಂಪತ್ತು ವಿನಿಮಯವಾಗುತ್ತದೆ.

ಈ ಬಂಡವಾಳದ ಏಜೆಂಟರಾಗಿ ನಮ್ಮ ಜನಪ್ರತಿನಿಧಿಗಳು, ಉದ್ಯಮಿಗಳು ಆಳ್ವಿಕೆ ನಡೆಸುತ್ತಾರೆ. ಈಗಾಗಲೇ ಈ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕರ್ನಾಟಕದಲ್ಲಿ ಸೃಷ್ಟಿಸಲಾಗುತ್ತಿದೆ. ಹೊಸ ಕೃಷಿ ಕಾಯ್ದೆಗಳು, ಹೊಸ ಶಿಕ್ಷಣ ನೀತಿ ಮತ್ತು ತಿದ್ದುಪಡಿಯಾದ ಭೂ ಸುಧಾರಣಾ ಕಾಯ್ದೆ ಕರ್ನಾಟಕದ ಔದ್ಯೋಗಿಕ ವಲಯದಲ್ಲಿ ಮಹತ್ತರ ಬದಲಾವಣೆಗಳನ್ನು ಉಂಟುಮಾಡಲಿವೆ. ಸಾರ್ವಜನಿಕ ಉದ್ದಿಮೆಗಳ ಪ್ರಮುಖ ಭೂಮಿಕೆಯಾಗಿದ್ದ ಕರ್ನಾಟಕ ತನ್ನ ಹೆಮ್ಮೆಯ ಬಿಇಎಂಎಲ್, ಬಿಎಚ್‌ಇಎಲ್, ಎಚ್‌ಎಂಟಿ, ಎಚ್‌ಎಎಲ್ ಮುಂತಾದ ಹೆಮ್ಮೆಯ ಉದ್ದಿಮೆಗಳನ್ನು ಶೀಘ್ರದಲ್ಲೇ ಕಳೆದುಕೊಳ್ಳಲಿದೆ. ಈಗಾಗಲೇ ಬ್ಯಾಂಕಿಂಗ್ ವಲಯದಲ್ಲಿ ತನ್ನದೇ ಆದ ಪ್ರಭಾವ ಉಂಟುಮಾಡಿದ್ದ ಕರ್ನಾಟಕ ಮೂಲದ ಕಾರ್ಪೊರೇಷನ್, ವಿಜಯಾ ಮತ್ತು ಸಿಂಡಿಕೇಟ್ ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಇದು ಕೇವಲ ಔದ್ಯಮಿಕ ಬಂಡವಾಳದ ಪ್ರಶ್ನೆಯಷ್ಟೇ ಅಲ್ಲ. ಸ್ಥಳೀಯ ಸಂಸ್ಕೃತಿಯೊಡನೆ ಬೆರೆತು, ಸ್ಥಳೀಯ ಉತ್ಪಾದನಾ ಮೂಲಗಳನ್ನು ನಿಯಂತ್ರಿಸುವ ಮೂಲಕ ಕರ್ನಾಟಕದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದ್ದ ಔದ್ಯೋಗಿಕ ಕೇಂದ್ರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ.

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯೊಂದಿಗೆ, ನೂತನ ಕೃಷಿ ಕಾಯ್ದೆಗಳು ಕೃಷಿ ಭೂಮಿಯ ಕಾರ್ಪೊರೇಟೀಕರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿವೆ. ಅಂತರ್‌ರಾಷ್ಟ್ರೀಯ ಹಣಕಾಸು ಬಂಡವಾಳ ರಾಜ್ಯದ ಔದ್ಯಮಿಕ ವಲಯವನ್ನು ಮುಕ್ತವಾಗಿ ಪ್ರವೇಶಿಸಲು ಇದು ಪ್ರವೇಶದ್ವಾರವಾಗುತ್ತದೆ. ಕೇಂದ್ರ ಸರಕಾರದ ನೂತನ ವಾಣಿಜ್ಯ ನೀತಿಗಳ ಪರಿಣಾಮ ಚಿಲ್ಲರೆ ವ್ಯಾಪಾರದ ಕ್ಷೇತ್ರದಲ್ಲೂ ಜಾಗತಿಕ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ದೊರೆಯುವುದರಿಂದ ವಿದೇಶಿ ಕಾರ್ಪೊರೇಟ್ ಬಂಡವಾಳದ ಹರಿವು ಸ್ಥಳೀಯ ಔದ್ಯಮಿಕ ನೆಲೆಗಳನ್ನು ಧ್ವಂಸ ಮಾಡುತ್ತವೆ. ಸೃಷ್ಟಿಯಾಗುವ ಉದ್ಯೋಗಾವಕಾಶಗಳು ಜಾಗತಿಕ ಬಂಡವಾಳದ ಅವಶ್ಯಕತೆಗಳಿಗೆ ಪೂರಕವಾಗಿರುವುದೇ ಹೊರತು, ಸ್ಥಳೀಯ ಜನತೆಯ ಮೂಲಭೂತ, ಜೀವನಾವಶ್ಯಕ ಅಗತ್ಯತೆಗಳನ್ನು ಪೂರೈಸುವಂತಿರುವುದಿಲ್ಲ. ನೆಲ, ಜಲ ಮತ್ತು ಅರಣ್ಯ ಸಂಪತ್ತಿನ ವಾಣಿಜ್ಯೀಕರಣ ಹಾಗೂ ಕಾರ್ಪೊರೇಟೀಕರಣ ಪ್ರಕ್ರಿಯೆಯಲ್ಲಿ ಉತ್ಪಾದನೆಯ ಸಾಧನಗಳು ಜಾಗತಿಕ ಬಂಡವಾಳದ ಆಧಿಪತ್ಯಕ್ಕೊಳಗಾಗುತ್ತವೆ. ಜೀವ ವೈವಿಧ್ಯ ಮತ್ತು ಸಸ್ಯ ವೈವಿಧ್ಯಕ್ಕೆ ಹೆಸರಾದ ಕರ್ನಾಟಕದ ಪಶ್ಚಿಮ ಘಟ್ಟಗಳು ಕಾರ್ಪೊರೇಟ್ ಬಂಡವಾಳದ ನಿಯಂತ್ರಣಕ್ಕೊಳಗಾಗುತ್ತವೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಶಿಕ್ಷಣದವರೆಗಿನ ಶೈಕ್ಷಣಿಕ ವಲಯ ವಾಣಿಜ್ಯೀಕರಣಕ್ಕೊಳಗಾಗುವುದರಿಂದ ಅಲ್ಲಿ ಭಾಷಾ ಅಧ್ಯಯನ ಮತ್ತು ಸಂಶೋಧನೆ ನೇಪಥ್ಯಕ್ಕೆ ಸರಿಯುತ್ತದೆ. ನೂತನ ಶಿಕ್ಷಣ ನೀತಿಯಲ್ಲಿ ಔದ್ಯಮೀಕರಣಕ್ಕೆ ಮತ್ತು ಮಾರುಕಟ್ಟೆ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿರುವುದರಿಂದ ಮಾರುಕಟ್ಟೆಗೆ ಪೂರಕವಾದ ಬೌದ್ಧಿಕ ಸರಕುಗಳನ್ನಷ್ಟೇ ಶಿಕ್ಷಣ ವ್ಯವಸ್ಥೆ ಉತ್ಪಾದಿಸುತ್ತದೆ. ಇಲ್ಲಿ ಭಾಷಾ ಕಲಿಕೆ ಮತ್ತು ಭಾಷಾಭಿವೃದ್ಧಿಗೆ ನೀಡಬೇಕಾದ ಪ್ರಾಶಸ್ತ್ಯ ಕ್ರಮೇಣ ಕ್ಷೀಣಿಸುತ್ತಾ ಹೋಗುತ್ತದೆ. ಕೇವಲ ಸಂವಹನ ಮಾಧ್ಯಮವಾಗಿ ಉಳಿಯುವ ಭಾಷೆ ಉದ್ಯೋಗದ ಭಾಷೆಯಾಗುವುದಿಲ್ಲ, ಮಾರುಕಟ್ಟೆಯ ಭಾಷೆಯೂ ಆಗಲು ಸಾಧ್ಯವಿಲ್ಲ. ಇದರೊಟ್ಟಿಗೇ, ಜಾಗತೀಕರಣದ ಪ್ರಭಾವದಿಂದ ಉತ್ಪಾದನೆಯ ಮೂಲಗಳಲ್ಲಿ ಉಂಟಾಗುವ ಪಲ್ಲಟಗಳಿಂದ, ಕೆಲವು ಸ್ಥಳೀಯ ಭಾಷಿಕ ಸಮುದಾಯಗಳೂ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ.

ಈ ಪ್ರಕ್ರಿಯೆಗೆ ಪೂರಕವಾಗಿಯೇ ಬೆಳೆಯುತ್ತಿರುವ ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ರಾಷ್ಟ್ರೀಯತೆ, ಸ್ಥಳೀಯ ಸಮುದಾಯಗಳನ್ನು ವಿಶಾಲ ಹಿಂದೂ ಅಸ್ಮಿತೆಯೊಳಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ಸ್ಥಳೀಯ ಭಾಷೆಗಳನ್ನೂ ಮೂಲೆಗುಂಪು ಮಾಡಲು ಯತ್ನಿಸುತ್ತದೆ. ಕನ್ನಡದ ಅಸ್ಮಿತೆಯನ್ನು ನಿರ್ದಿಷ್ಟ ಮತೀಯ ಚೌಕಟ್ಟಿನಲ್ಲಿ ಅಳವಡಿಸುವ ಅಪಾಯವನ್ನು ಇಲ್ಲಿ ಗುರುತಿಸಬಹುದು. ಒಂದೆಡೆ ಆಡಳಿತಾತ್ಮಕವಾಗಿ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಲೇ ಮತ್ತೊಂದೆಡೆ ಮತಾಂಧತೆಯನ್ನು ಪೋಷಿಸುವ ಮೂಲಕ ಹಿಂದುತ್ವ ರಾಜಕಾರಣ ಕರ್ನಾಟಕದ ಮತೀಯ ಅಲ್ಪಸಂಖ್ಯಾತರನ್ನು ಮತ್ತು ಭಾಷಾ ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ. ಅಂತಿಮವಾಗಿ ಇದು ಒಂದು ದೇಶ-ಒಂದು ಭಾಷೆ-ಒಂದು ಸಂಸ್ಕೃತಿಯ ಪರಿಕಲ್ಪನೆಯಲ್ಲಿ ಮೂಲ ಜನ ಸಂಸ್ಕೃತಿಗಳು ನಾಶವಾಗುತ್ತವೆ. ಕರ್ನಾಟಕದ ಒಳಗೇ ಇಂದಿಗೂ ಜೀವಂತವಾಗಿರುವ ಅನೇಕ ಸ್ಥಳೀಯ ಭಾಷೆಗಳು ಅಲ್ಲಿನ ಜನತೆಯ ಔದ್ಯೋಗಿಕ ಭಾಷೆಯೂ ಆಗಿವೆ. ಹಾಗೆಯೇ ಸಂವಹನ ಭಾಷೆಯೂ ಅಗಿವೆ. ಈ ಭಾಷೆಗಳನ್ನು ಉಳಿಸಿಕೊಳ್ಳಬೇಕಾದರೆ ಸರಕಾರದಿಂದ ಒಂದು ಸ್ಪಷ್ಟ ಭಾಷಾ ನೀತಿ ಅಗತ್ಯ. ಈವರೆಗೂ ಇದು ಸಾಧ್ಯವಾಗಿಲ್ಲ ಎನ್ನುವುದು ವಿಷಾದಕರ ಅಂಶ.

ಹಿಂದುತ್ವ ರಾಜಕಾರಣದೊಡನೆ ಉಲ್ಬಣಿಸುತ್ತಿರುವ ಮತಾಂಧತೆ ಮತ್ತು ಕೋಮುವಾದ ಕರಾವಳಿಯಿಂದ ಈಗ ರಾಜ್ಯದುದ್ದಕ್ಕೂ ಹಬ್ಬಿದ್ದು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭೀತಿ ಆವರಿಸಿದೆ. ಈ ಅಲ್ಪಸಂಖ್ಯಾತರ ನಡುವೆಯೇ ಅನೇಕ ಸ್ಥಳೀಯ ಭಾಷೆಗಳೂ ಬದುಕಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬೇಕಿದೆ. ಮತಾಧಾರಿತ ಧ್ರುವೀಕರಣದಿಂದ ಕರ್ನಾಟಕದಲ್ಲಿ ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವ ಬಹುಸಂಸ್ಕೃತಿಯ ನೆಲೆಗಳು ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಇತ್ತೀಚೆಗೆ ಸವಾಲಿನಂತೆ ಎರಗುತ್ತಿವೆ. ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಈ ಅಂಶಗಳನ್ನು ನೇಪಥ್ಯಕ್ಕೆ ತಳ್ಳಿ, ಕೇವಲ ಭಾಷಾಭಿಮಾನದೊಂದಿಗೇ ವಿಜೃಂಭಿಸುವುದು ಆತ್ಮದ್ರೋಹವಾಗುತ್ತದೆ. ಏಕೆಂದರೆ ನವೆಂಬರ್ 1ರಂದು ನಾವು ಆಚರಿಸುತ್ತಿರುವುದು ಕರ್ನಾಟಕ ಒಂದು ಭೌಗೋಳಿಕ ರಾಜ್ಯವಾಗಿ ಉದಯಿಸಿದ ದಿನವನ್ನು. ಈ ಭೌಗೋಳಿಕ ರಾಜ್ಯ ಈ ನಾಡಿನ ಸಮಸ್ತ ಜನತೆಯನ್ನೂ ಪ್ರತಿನಿಧಿಸುತ್ತದೆ. ಹಾಗಾಗಿ ಈ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಸೌಹಾರ್ದವನ್ನು ಮತ್ತು ಬಹುಸಂಸ್ಕೃತಿಯ ನೆಲೆಗಳನ್ನು ರಕ್ಷಿಸುವುದರೊಂದಿಗೇ, ಏಳು ಕೋಟಿ ಜನರ ಜೀವನ ನಿರ್ವಹಣೆಗೆ ಅಗತ್ಯವಾದ ಉತ್ಪಾದನೆಯ ಮೂಲಗಳನ್ನು ಮತ್ತು ಉತ್ಪಾದನಾ ಸಾಧನಗಳನ್ನು ಸಂರಕ್ಷಿಸುವುದೂ ನಮ್ಮ ಆದ್ಯತೆಯಾಗಬೇಕಿದೆ. ಹಾಗಾದಲ್ಲಿ ಮಾತ್ರ ರಾಜ್ಯೋತ್ಸವದ ಸಾರ್ಥಕತೆಯನ್ನು ಕಾಣಲು ಸಾಧ್ಯ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News