ರೆಕ್ಕೆ ಚಾಚಿದ ಹಕ್ಕಿ

Update: 2022-01-11 11:36 GMT

ಇಂಗ್ಲಿಷ್ ಉಪನ್ಯಾಸಕಿ ಆಗಿರುವ ತೇಜಶ್ರೀ ಅವರು ಒಂದು ವರ್ಷ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ‘ಟ್ಯಾಗೋರ್ ಪೀಠ’ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಆತ್ಮಕತೆಯ ಸಂಯೋಜನೆ ಮತ್ತು ನಿರೂಪಣೆ ಮಾಡಿದ್ದಾರೆ. ಆರು ಕವನ ಸಂಕಲನಗಳು, ಐದು ಅನುವಾದಿತ ಕೃತಿಗಳು, ನಾಟಕ ಅನುವಾದ, ಸಂಪಾದಿತ ಕೃತಿಗಳನ್ನು ರಚಿಸಿರುವ ಇವರು ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಪುತಿನ ಕಾವ್ಯ ಪುರಸ್ಕಾರವೂ ಸಂದಿದೆ.

ಜ.ನಾ. ತೇಜಶ್ರೀ

Hail to thee, blithe Spirit!
Bird thou never wert..
ಪಿ. ಬಿ. ಶೆಲ್ಲಿ (‘ಟು ಎ ಸ್ಕೈಲಾರ್ಕ್’ ಕವಿತೆಯಿಂದ)
ಮೈಗೊಂಡ ನಲವೆ, ಬಾ!
ಎಂದೂ ಅಲ್ಲ ನೀನು ಬರಿಯ ಹಕ್ಕಿ

ಒಮ್ಮೆ, ನೀರು ಕುಡಿಯಲೆಂದು ಒಬ್ಬ ಕೊಳದ ಕಡೆಗೆ ಬಾಗಿದ. ಬೊಗಸೆಯಲ್ಲಿ ನೀರು ಮೊಗೆಯುವ ಹೊತ್ತು ಅವನ ತಲೆಯ ಮೇಲೆ ಹಕ್ಕಿಯೊಂದು ಹಾರಿ ಹೋಯಿತು. ಅದು ಅವನಿಗೆ ಕಂಡದ್ದು ನೀರಿನಲ್ಲಿ ಮೂಡಿದ್ದ ಹಕ್ಕಿಯ ಪ್ರತಿಬಿಂಬದಿಂದ. ಪ್ರತಿಬಿಂಬದಲ್ಲೆ ಒಡೆದು ತೋರಿದ ಅದರ ಅಗಾಧ ಸೌಂದರ್ಯಕ್ಕೆ ಬೆರಗಾಗಿ, ಅವನು ನೀರು ಕುಡಿಯುವುದನ್ನೂ ಮರೆತು ಆ ಹಕ್ಕಿಯೆಡೆಗೆ ಕತ್ತೆತ್ತಿ ನೋಡಿದ. ಅಷ್ಟು ಹೊತ್ತಿಗಾಗಲೇ ಪಕ್ಷಿಯು ಸ್ವಲ್ಪ ದೂರ ಹಾರಿ ಹೋಗಿ, ಅದರ ಕ್ಷಣಿಕ ನೋಟವಷ್ಟೇ ಅವನಿಗೆ ದೊರೆಯಿತು. ಕುತೂಹಲ ತಡೆಯಲಾಗದೆ, ಅವನು ಅದರ ಹಿಂದೆ ಓಡತೊಡಗಿದ. ಅಪ್ರತಿಮ ತಾರುಣ್ಯದ ಅವನು ಓಡುತ್ತ್ತಾ ಓಡುತ್ತ್ತಾ ಎಷ್ಟೋ ಹಳ್ಳಿಗಳನ್ನು ದಾಟಿದ, ಕೆರೆ, ಹೊಳ್ಳಗಳನ್ನು ಹಾದ. ಎದುರಿಗೆ ಸಿಕ್ಕವರ ಬಳಿ ತಾನು ಕಂಡ ಹಕ್ಕಿಯ ರೂಪು-ರೇಖೆಗಳನ್ನು ವರ್ಣಿಸಿ ‘ಅಂಥ ಹಕ್ಕಿ ಇಲ್ಲೇನಾದರೂ ಹಾದು ಹೋಯಿತೇ?’ ಎಂದು ಕೇಳಿದ. ಅವರು ‘ಇಗೋ..ಅದು ಈಗ... ಇಲ್ಲೇ ಹಾರಿ ಹೋಯಿತಲ್ಲ...’ ಎಂದು ತೋರಿಸಿದ ಕಡೆ ಬೇಸರಿಸದೆ ಓಡಿದ. ಹೀಗೆ ಎಷ್ಟೊಂದು ಹಾಡಿ, ಕಾಡುಗಳನ್ನು ದಾಟುತ್ತ್ತಾ ದಾಟುತ್ತಾ ಕೊನೆಗೊಬ್ಬರನ್ನು ಕೇಳಿದಾಗ, ಅವರು ‘ಆ ಹಕ್ಕಿ ಅಗೋ ಆ ಬೆಟ್ಟದ ಮೇಲೆ ಹಾರಿ ಹೋಯಿತು’ ಎಂದರು. ಅವನು ಆ ಎತ್ತರದ ಬೆಟ್ಟವನ್ನು ಏರುತ್ತಾ, ಏರುತ್ತಾ ಅದರ ಶಿಖರ ತಲುಪಿದ. ಆ ಹೊತ್ತಿಗಾಗಲೇ ಅವನಿಗೆ ಸಾಕಷ್ಟು ವಯಸ್ಸಾಗಿ ಹೋಗಿತ್ತು. ಆಯಾಸದಿಂದ ಬೆಟ್ಟದ ತುದಿ ತಲುಪಿದ ಅವನು ತನ್ನ ಎರಡು ಕೈಗಳನ್ನೂ ಅಗಲಿಸಿ ಆಕಾಶಕ್ಕೆ ಮುಖ ಮಾಡಿ ನೆಲದ ಮೇಲೆ ಬಿದ್ದ. ಆ ಕ್ಷಣ ಅವನು ಅಷ್ಟು ಕಾಲ ಹುಡುಕಾಡುತ್ತಿದ್ದ ಪಕ್ಷಿಯ ಗರಿಯೊಂದು ಹಾರಿ ಬಂದು ಅವನ ಅಂಗೈಗೆ ಇಳಿಯಿತು. ಅದನ್ನು ನೋಡಿ ತುಟಿತುದಿಯಲ್ಲಿ ಸುಖದ ನಗು ಮೂಡಿ, ಅವನ ಪ್ರಾಣಪಕ್ಷಿ ಹಾರಿಹೋಯಿತು.

ಕಾವ್ಯಚೈತನ್ಯದ ಹುಡುಕಾಟಕ್ಕೆ ಸಂವಾದಿಯಾಗಿ ಈ ಕತೆ ನನ್ನೊಳಗೆ ಮರುಕಳಿಸುತ್ತಲೇ ಇರುತ್ತದೆ. ಸೃಜನಶೀಲತೆ ಎಂಬುದೇ ಹಾಗೆ. ಈ ಕ್ಷಣ ಸಿಕ್ಕಿತೆಂದರೆ, ಬೆರಳ ಸಂದಿಯಲ್ಲಿ ನುಸುಳಿ ಹಾರಿ ಹೋಗುವ ಚಿಟ್ಟೆಯ ಹಾಗೆ, ಒಂದಿಷ್ಟು ಬಣ್ಣಗಳನ್ನು ಉಳಿಸಿ, ನುಣುಚಿ ಕಣ್ಮರೆಯಾಗಿ ಬಿಡುತ್ತದೆ. ಇದೇಕೆ ಹೀಗೆ? ಅನ್ನುವ ಪ್ರಶ್ನೆಯೇ ಮರು-ಹುಡುಕಾಟದ ಆದಿಯೂ ಆಗಿ, ಹಳೆಯ ಹುಡುಕಾಟವೇ ಹೊಸದೊಂದು ರೂಪ ತಾಳಿ ನಿಲ್ಲುವ ಸೋಜಿಗ ಸಂಭವಿಸುತ್ತದೆ.

ಹಲವು ಕಾಲದ ಹಿಂದೆ, ಕವಿ ಬೇಂದ್ರೆಗೆ ಕಾಣಿಸಿದ ಹಕ್ಕಿಯನ್ನು ಕನ್ನಡ ಕಾವ್ಯಲೋಕ ಇಲ್ಲಿತನಕ ನೋಡುತ್ತಲೇ ಬಂದಿದೆಯಲ್ಲ? ಅದು ಎಂದಾದರೂ ನನ್ನದಾಯಿತೇ? ಒಂದು, ಮತ್ತೊಂದು, ಮಗದೊಂದು, ಮರು ಓದುಗಳಲ್ಲಿ ಈ ಹಕ್ಕಿ ಹೊಸದಾಗಿ ಹುಟ್ಟುವ ಮಾಯೆ ಎಂತದ್ದದು? ‘ಹಕ್ಕಿ ಹಾರುತಿದೆ ನೋಡಿದಿರಾ?’ ಎನ್ನುವ ಒಂದು ಸಾಲು ಎಷ್ಟು ಅರ್ಥವಿಸ್ತಾರಕ್ಕೆ ತೆರೆದುಕೊಂಡಿದೆ ಎಂಬುದು ಆಶ್ಚರ್ಯ ಮೂಡಿಸುತ್ತದೆ. ಇಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದ್ದರೂ ಕವಿತೆಯು ಬೆಳೆಯುವ ಬಗೆಯಲ್ಲಿ ಇದು ಕೇವಲ ಪ್ರಶ್ನೆಯಾಗಿ ನಿಲ್ಲದೆ, ಒಂದು ಹೇಳಿಕೆಯೋ, ಆಜ್ಞೆಯೋ, ಕೋರಿಕೆಯೋ, ಉದ್ಗಾರವೋ, ಹಕ್ಕಿಯೊಳಗಿನ ಚೈತನ್ಯವನ್ನು ಮೊದಲ ಬಾರಿಗೆ ಅನುಭವಿಸಿದ ಅರಿವೋ ಇತ್ಯಾದಿ ಇನ್ನೂ ಹಲವು ಅರ್ಥಗಳು ಹೊಮ್ಮತೊಡಗುತ್ತವೆ.

‘ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾಕೋ ಹಾಕಿದ ಹೊಂಚ’

ಎನ್ನುವಲ್ಲಿ ಹಕ್ಕಿಯು ಕಾಲದ ಪ್ರತಿಮೆಯಾಗಿ ಮಾತ್ರವಲ್ಲ, ಇನ್ನೂ ಮುಂದಕ್ಕೆ ಹೋಗಿ ತಾನೇ ಕಾಲವಾಗಿ ಮಾರ್ಪಡುವ ಸೋಜಿಗವಿದೆ. ಈ ಕಾಲದ ಬೀಸಿನಲ್ಲಿ ರಾಜ್ಯ, ಸಾಮ್ರಾಜ್ಯಗಳ ಏಳುಬೀಳು, ‘ಖಂಡ-ಖಂಡ’ಗಳ ಸಾರ್ವಭೌಮತೆಯ ಪತನ ಇತ್ಯಾದಿಗಳೆಲ್ಲ ಸೇರಿಕೊಂಡಿವೆ. ಹೊಸ ಕಾಲದ ‘ಭಾಗ್ಯ’ವನ್ನು ತೆರೆಯಿಸುವಂತೆ ‘ರೆಕ್ಕೆಯ ಬೀಸುತ’ ಬರುವ ಈ ಹಕ್ಕಿ ‘ಹಸುಮಕ್ಕಳ ಹರಸಿ’ ಹಾರುತ್ತಿದೆ, ಹೊಸಸೃಷ್ಟಿಯೊಂದರ ಅಭೀಪ್ಸೆಯ ರೂಪಕವೇ ತಾನಾಗಿ!

ಕವಿ ಮತ್ತು ಕವಿತೆಯ ಬಿಡುಗಡೆಗೆ ಸಂಕೇತವಾದ ಪಕ್ಷಿಗಳ ಸಾಲು ಕುವೆಂಪು ಅವರಿಗೆ ‘ದೇವರರುಜು’ವಾಯಿತಲ್ಲ!
‘ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!’

‘ದೃಶ್ಯದಿಗಂತದಿನೊಮ್ಮೆಯೆ ಹೊಮ್ಮೆ/ ಗಿರಿವನ ಪಟದಾಕಾಶದಲಿ/ ತೇಲುತ’ ಬರಲು ಹಕ್ಕಿಸಾಲು ಕವಿ ದಿಗ್ಮೂಢನಾಗದೆ ಬೇರೆದಾರಿಯೇ ಇರಲಿಲ್ಲ ಎನ್ನುವ ಭಾವವನ್ನು ಕವಿತೆಯ ಆಶ್ಚರ್ಯಸೂಚಕ ಚಿಹ್ನೆಯು ಸೂಚಿಸುತ್ತದೆ. ಈ ಕವಿತೆಯ ಆಗಸ, ಪರ್ವತ, ಕಿಕ್ಕಿರಿದ ಅಡವಿಯ ಅಂಚು, ಹರಿವ ನದಿ, ನೀಲಿ ಬಾನು, ಪಕ್ಷಿಗಳ ಪುಲಕ, ಹೂಬಿಸಿಲಿನ ಮಿರುಗು, ಬಂಡೆಗಳಲ್ಲಿ ಮೊರೆವ ‘ನೀರ್ತೊದಲು’, ಹೊಮ್ಮಳಲು- ಪ್ರತಿಯೊಂದು ಸಂಗತಿಯೂ ಉತ್ಕಟತೆಯ ಪರವಶ ಸ್ಥಿತಿಯಲ್ಲಿ ನಮಗೆ ಎದುರಾಗುತ್ತವೆ. ಇಂತಹ ತುಂಬಿದ ಭಾವತೀವ್ರತೆಯ ಗಳಿಗೆಯಲ್ಲಿ ಕವಿಗೆ ಕಂಡದ್ದು ‘ಲೇಖನ ರೇಖಾನ್ಯಾಸದಲಿ/ ಅವಾಙ್ಮಯ ಛಂದಃಪ್ರಾಸದಲಿ’ ಹಾರುತ್ತಾ ಬಂದ ಬೆಳ್ಳಕ್ಕಿಯ ಸಾಲು. ಸುತ್ತಲಿನ ಪ್ರಕೃತಿ ನೋಡುವಾಗ ಅಕಸ್ಮಾತ್ ಈ ಹಕ್ಕಿಗಳು ಕಂಡವು, ಆಗ ಕವಿತೆ ಮೈಪಡೆಯಿತು ಎಂದು ಹೇಳಿದರೆ ಏನೂ ಹೇಳಿದಂತಾಗುವುದಿಲ್ಲ. ಇಷ್ಟೆಲ್ಲದರ ಮೂಲಕ ಆ ಹಕ್ಕಿಸಾಲು ಕವಿಯ ಅಂತರಂಗದಲ್ಲಿ ಹೊಮ್ಮಿಸುತ್ತಿರುವ ಸತ್ಯ ಬೇರೊಂದಿದೆ. ಅದೆಂದರೆ, ಈ ಅಗಾಧ ಸೃಷ್ಟಿ ರಚನೆಯ ಕೌಶಲ್ಯ, ಚಂದ, ಇದರೊಳಗೆ ಮಿಳಿತಗೊಂಡಿರುವ ಅಚ್ಚರಿಯನ್ನು ತನಗೆ ತೋರಿಸಲು ಮತ್ತು ಸೃಷ್ಟಿಯ ಪ್ರತಿ ಜೀವಜೀವದಲ್ಲಿ ಕಂಡೂ ಕಾಣದಂತೆ ಅಡಗಿಕೊಂಡಿರುವ ‘ಚಿರಚೇತನ’ದ ಸಾಕ್ಷಾತ್ಕಾರವನ್ನು ಮಾಡಿಸಲು ಆ ಹಕ್ಕಿಗಳು ಒಂದು ‘ನೆವ’ವಾದವು ಎಂಬ ಅರಿವು. ಇದನ್ನು ನಮಗೆ ಅರ್ಥಪೂರ್ಣವಾಗಿ ಕಾಣಿಸುವುದು : (ವಿವರಣ ವಿರಾಮ) ಚಿಹ್ನೆ. ‘‘ದೇವರು ರುಜು ಮಾಡಿದನು;’’ ಎಂಬ ಆರಂಭಿಕ ಸಾಲಿನ ; (ಅರ್ಧ ವಿರಾಮ) ಚಿಹ್ನೆಯು ಕವಿತೆಯ ಕಡೆಯಲ್ಲಿ : (ವಿವರಣ ವಿರಾಮ) ಚಿಹ್ನೆಯಾಗಿ ಬದಲಾಗುವುದೇ ಒಟ್ಟಾರೆ ಕವಿತೆಯು ಕಾಣಿಸುವ ಶಿಫ್ಟ್ ಆಗಿದೆ. ಇದನ್ನು ಹೀಗೆ ವಿವರಿಸಬಹುದು: ಕಲಾವಿದನ ಮೂಲಕ ಚಿತ್ರವೊಂದು ಮೂಡುತ್ತಿದೆ. ಅದು ಮೂಡುತ್ತ ತನ್ನ ಕೃತಿಗೆ ಕಲಾವಿದ ತಾನೇ ಬೆರಗಾಗುತ್ತ ಒಂದು ‘ರುಜು’ವು ಮೂಡುತ್ತಿದೆ. ಈ ‘ರುಜು’ವು ಕಲೆಯ ಭಾಗವೂ ಹೌದು, ಕಲೆಯ ಹೊರಗಿನದೂ ಹೌದು. ‘ಅವಾಙ್ಮಯ ಛಂದಃಪ್ರಾಸದಲಿ’ ಬರುತ್ತಿರುವ ‘ರುಜು’ವು ಇಡೀ ಚಿತ್ರದ ಮುಗಿಯುವಿಕೆಯನ್ನೂ/ಪೂರ್ಣತೆಯನ್ನೂ ಹೇಳುತ್ತಿದೆ, ಅದೇ ಹೊತ್ತಿಗೆ ಅದರ ಅರ್ಥವನ್ನೂ ಬಿಡಿಸಿಡುತ್ತಿದೆ. ಒಬ್ಬ ಕಲಾವಿದ ಪೇಂಟಿಂಗ್ ಮಾಡುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ತನ್ನ ಚಿತ್ರ ಪೂರ್ಣವಾಯಿತು ಅಂದಾಗ ಆ ಕಲಾವಿದ ಕಲಾಕೃತಿಯ ಕೊನೆಯಲ್ಲಿ ತನ್ನ ರುಜುವನ್ನು ಮಾಡುತ್ತಾನೆ. ಆದರೆ ಈ ಕವಿತೆಯಲ್ಲಿ ಕವಿ ಬರೆಯುತ್ತಿರುವ ಚಿತ್ರ ಮುಗಿಯುವುದಿಲ್ಲ ಅದು ಇನ್ನೂ ಮೂಡುತ್ತಲಿರುವ ಚಿತ್ರ ಮತ್ತು ಮೂಡುತ್ತಿರುವ ಚಿತ್ರವೇ ಚಿತ್ರಕಾರನ ‘ರುಜು’ವೂ ಆಗುತ್ತಿರುವ ಸೋಜಿಗ! ಹಕ್ಕಿಯ ನೆವದಲ್ಲಿ ಆದ ‘ರುಜು’ವು ಕವಿ ಬರೆಯುತ್ತಿರುವ ಚಿತ್ರದ ಭಾಗವೇ ಆಗಿ, ಏಕಕಾಲಕ್ಕೆ ಚಿತ್ರವೂ, ಚಿತ್ರವಸ್ತುವೂ ಪರಿಪೂರ್ಣವಾಗುವ ವರ್ಣನೆ ಕವಿತೆಯ ನಡೆಯದ್ದು. ಆರಂಭದಲ್ಲಿ ಬೇರೆ ಬೇರೆಯಾಗಿ ಕಾಣುವ ಚಿತ್ರ, ಚಿತ್ರಕಾರ ಮತ್ತು ಅವನ ರುಜು ಕವಿತೆಯ ಕೊನೆಯಲ್ಲಿ ಒಂದಾಗಿ ಕಾಣುತ್ತದೆ. ಉದ್ಧರಣ ಚಿಹ್ನೆಗಳ ಮಹತ್ವ ಮತ್ತು ಸೊಗಸನ್ನೇ ಮರೆತಂತಿರುವ ನಮ್ಮ ಕಾಲದ ಕವಿಗಳು ಮತ್ತು ಕವಿತೆಗೆ ಈ ಬಗೆಯ ಓದು ಹೊಸ ದಾರಿಯನ್ನು ತೆರೆಯಬಲ್ಲದು.

ಹಾಗೆ ನೋಡಿದರೆ, ಟುವ್ವಿ, ಕಾಮಳ್ಳಿ, ತೇನೆಹಕ್ಕಿ, ಟಿಟ್ಟಿಭ, ಪಿಕಳಾರಗಳಿಗೆ ಕನ್ನಡ ಸಾಹಿತ್ಯದಲ್ಲಿ ಜಾಗ ಸಿಕ್ಕಿದ್ದು ಕುವೆಂಪು ಅವರಿಂದಲೇ. ಕನ್ನಡದ ನಿಜವಾದ ಹಕ್ಕಿಗಳು ಸದ್ದು ಮಾಡಿದ್ದು ಮತ್ತು ಆ ಮೂಲಕ ಕಾಡು, ಬಗೆಬಗೆಯ ಮರಗಳು, ಹಕ್ಕಿ ಪ್ರಾಣಿಗಳು ಕನ್ನಡಕ್ಕೆ ಅಗಾಧವಾಗಿ ಒದಗಿ ಬಂದದ್ದು ಕುವೆಂಪು ಅವರಿಂದ:

‘‘ಬೊಬ್ಬುಳಿ ಗಿಡದಲಿ ಗುಬ್ಬಳಿಸುತ್ತಿದೆ
ಒಬ್ಬೊಂಟಿಗ ಚೋರೆ;
ಕಿವಿಗೊಟ್ಟಲುಗಾಡದೆ ಕೇಳುತ್ತಿದೆ
ಹಗಲ್ ನಿದ್ದೆಯೊಳದ್ದಿದ ಬೋರೆ!’’... (‘ಚೋರೆ-ಬೋರೆ’)

‘‘ಅಃ ಅದೋ! ಆಲಿಸಲ್ಲಿ!
ಹೊದರುದಳಿದ ಮಾವಿನಲ್ಲಿ
ಹೊರಸು ಗುಬ್ಬಳಿಸುತ್ತಿದೆ!
ಅದೋ! ಮತ್ತೆ! ಏನು ಸವಿ!
ಇಂದ್ರಿಯಂಗಳೆಲ್ಲ ಕಿವಿ!
ಜೀವ ಬೆಬ್ಬಳಿಸುತಿದೆ!’’ (‘ಪಟ್ಟಣದಲ್ಲಿ ಹೊರಸುಹಕ್ಕಿ’)

‘‘ಹಗಲಿನಲ್ಲಿ ನೆಲಕೆ ಸೇರಿ
ಇರುಳಿನಲ್ಲಿ ಬಾನ್ಗೆ ಹಾರಿ
ಬಿಸಿಲು ತಂಪುಗಳನು ಮೀರಿ
ಸಮತೆಯಿಂದ ನಡೆವುದಂ
ಕಲಿಸು ನನಗೆ ಮೊದಲು; ಬಳಿಕ
ನೆಲ ಬಾನ್ಗಳ ಗೆಲುವುದಂ.’’ (ತೇನೆಹಕ್ಕಿ)

ನಮ್ಮ ಸಾಹಿತ್ಯದಲ್ಲಿ ಆತನಕ ಬಹುಮಟ್ಟಿಗೆ ಅ-ವಾಸ್ತವವಾಗಿಯೋ, ಕೇವಲ ಕವಿಸಮಯವಾಗಿಯೋ ಇದ್ದ ಪಕ್ಷಿಲೋಕವನ್ನು ಕೇಂದ್ರಕ್ಕೆ ತಂದು, ಹೀಗೆ ಪಂಚೇಂದ್ರಿಯಗಳಿಗೆ ದಕ್ಕುವಂತೆ ಒದಗಿಸಿದ್ದು ಕುವೆಂಪು ಎನ್ನುವ ‘ಕಾಡುಹಕ್ಕಿ’.

ಕವಿ ಪು.ತಿ.ನ. ಅವರಿಗೆ ಕೋಗಿಲೆಯ ‘ಚಿಕುಹೂ ಚಿಕುಹೂ’ ಕೂಗು ಯಾವುದೋ ‘ಸನ್ನೆ’ಯ ರೀತಿ ಕಂಡು,
‘...ಮಗು ತಾಯಿಗೆ, ಕವಿ ಚೆಲುವಿಗೆ,
ನನ್ನಿಗ ನನ್ನಿಗೆ, ಪರಮಗೆ

ಭಕ್ತರು ಹಂಬಲಿಸುವ ಬಗೆ

ಈ ಕೋಗಿಲೆಯುಲಿವು’ ಎನ್ನುವ ಅರಿವಾಗುತ್ತದೆ. ಹಕ್ಕಿ ದನಿಯೆಂಬ ಹಣ್ಣಿನಿಂದ ‘ಅಮೃತದರಸ’ ತೊಟ್ಟಿಡುತ್ತಲಿರುವಾಗ ಜೀವದೊಳಗಿನ ‘ತಾಮಸ’ವು ಸುಟ್ಟು ಹೋಗುವ ‘ಈ ಮಹದನುಭವಕೇನೆಂಬೆ?’ ಎಂದು ಕವಿ ಕೇಳುವಾಗ ಪ್ರಶ್ನಾರ್ಥಕ ಚಿಹ್ನೆಯು ಆಶ್ಚರ್ಯದ ಹುಡುಕಾಟವಾಗಿ ಪರಿವರ್ತನೆಯಾಗುವ ಸೊಗಸಿದೆ:

ಚಿಕುವೂ ಕುವ್ವೆ ? ಏನ್ ಸವಿ!
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿದೆ ಸೈ
ಇದನು ಹಿಡಿದು ಬಿಡುವಾಟದಿ
ಋತು ಋತು ಯುಗ ಯುಗವೂ.

 ಹಾಡು/ಕವಿತೆಯು ನಮಗೆ ನೇರವಾಗಿ ಕಾಣದೆ ಸುತ್ತಮುತ್ತಲೂ ಅವಿತು ಇದ್ದೇ ಇದೆ. ಪ್ರತಿ ಯುಗದಲ್ಲಿ, ಪ್ರತಿ ಋತುಮಾನದಲ್ಲಿ ಬರುವ ಕೋಗಿಲೆಯ ಶರೀರವು ಸೃಜನಶೀಲತೆಯ ಆ ಗಳಿಗೆಯನ್ನು ಹಿಡಿಯುತ್ತದೆ. ಆಗ ಹಾಡು ಅಭಿವ್ಯಕ್ತಗೊಳ್ಳುತ್ತದೆ. ‘ಚಿಕುಹೂ’ ಕೂಗು, ವೃದ್ಧಾಪ್ಯವಿಲ್ಲದೆ, ಸಾವಿನ ಹಂಗಿಲ್ಲದೆ ಅಜರಾಮರವಾಗಿ ಕ್ಷಣಕಾಲ ಇರುತ್ತದೆ. ಆನಂತರ ಆ ಕೋಗಿಲೆ ತರಗೆಲೆಯಂತೆ ಬಿದ್ದು ಹೋಗುತ್ತದೆ. ತರಗೆಲೆಯ ಪಾಡೂ ಹೀಗೆಯೇ ತಾನೆ? ಅದು ಒಂದಷ್ಟು ಕಾಲ ಹಸಿರನ್ನು ಹಿಡಿದದ್ದೇ ಅಲ್ಲವೆ! ಪು.ತಿ.ನ. ಹೇಳುವ ಈ ‘ಹಿಡಿದು ಬಿಡುವಾಟ’ವು ‘ಪುರಾಣ’ದಷ್ಟು ಹಳೆಯದು, ಆದರೆ ಅದು ನೀಡುವ ಅಚ್ಚರಿ ‘ನೂತನವು’. ಕವಿ ಅಭಿವ್ಯಕ್ತಿಯ ಈ ಬೆರಗು ಸುತ್ತಲಿನ ನಿಸರ್ಗದ ಬೆರಗನ್ನು ಕುರಿತದ್ದೂ ಹೌದು. ತನ್ನ ಕವಿತೆ ಹುಟ್ಟುವ ಅಚ್ಚರಿಯನ್ನು ಕುರಿತದ್ದೂ ಹೌದು. ಕನ್ನಡದ ಕವಿಗಳು, ಪ್ರಧಾನವಾಗಿ ನವೋದಯದ ಕವಿಗಳು ನೋಡಿರುವುದು ಮತ್ತು ಹಿಡಿಯಲು ಯತ್ನಿಸಿರುವುದು ಸೃಷ್ಟಿಯ ಈ ನಿರಂತರತೆಯನ್ನು: ಆಗಾಗ ಮೈಪಡೆಯುತ್ತ, ಅಭಿವ್ಯಕ್ತಿಗೊಳ್ಳುತ್ತ ಮತ್ತೆ ತನ್ನೊಳಗಿನ ಮೌನಕ್ಕೆ ಹಿಂದಿರುಗಿ ಹೋಗುವ ಕವಿತೆಯ ಪ್ರಯಾಣವನ್ನು; ನಿಸರ್ಗ, ಕವಿತೆ ಮತ್ತು ಹಕ್ಕಿ ಮೂರರ ನಡುವೆ ವ್ಯತ್ಯಾಸ ಅಳಿದ ಸ್ಥಿತಿಯನ್ನು. ನವ್ಯ ಕಾಲಘಟ್ಟದಲ್ಲಿ ಈ ಬಗೆಯ ನಿಸರ್ಗದ ಅನುಪಸ್ಥಿತಿಗೆ ಕಾರಣವೇನು ಮತ್ತು ಇದು ಕನ್ನಡ ಕಾವ್ಯದ ಹುಡುಕಾಟವನ್ನು ಯಾವ ನೆಲೆಗೆ ಕೊಂಡೊಯ್ದಿದೆ ಎನ್ನುವ ಸಂಗತಿಯು ಹೊಸದೊಂದು ಮಾರ್ಗ ಶೋಧನೆಗೆ ಒಳಪಡಿಸಬಲ್ಲದು. ವಸಹಾತುಶಾಹಿಯ ಪರಿಣಾಮಗಳನ್ನು ತೀವ್ರ ಸಂಘರ್ಷದ ನೆಲೆಯಲ್ಲಿ ಎದುರಾದ ಆಫ್ರಿಕಾದ ಲೇಖಕರು ಮತ್ತು ‘ಕಪ್ಪು’ ಬರಹಗಾರರಲ್ಲಿ ‘ಹಕ್ಕಿ’ಯ ಮೂಲಕ ನಡೆದಿರುವ ಹುಡುಕಾಟ ಮತ್ತು ಹೋರಾಟವು ಕುತೂಹಲಕಾರಿಯಾಗಿ ಕಾಣುತ್ತದೆ. ‘I know why the caged bird sings’. ಅಮೆರಿಕದ ಕಪ್ಪುಕವಯಿತ್ರಿ ಮಾಯಾ ಏಂಜಲೋಳ ಪ್ರಸಿದ್ಧ ಕವಿತೆ. ಇದೇ ಹೆಸರಿನ ಆಕೆಯ ಆತ್ಮಕಥೆಯ ಸಂಪುಟವೂ ಇದೆ. ಮಾಯಾ ಏಂಜಲೋಳ ಬದುಕು, ಬರಹ ಮತ್ತು ವಿಚಾರಗಳನ್ನು ಒಟ್ಟಾರೆಯಾಗಿ ಪ್ರತಿನಿಧಿಸುವ ಆ ಕವಿತೆಯ ಅನುವಾದ ಹೀಗಿದೆ:

ಪಂಜರದ ಹಕ್ಕಿ ಏಕೆ ಹಾಡುತ್ತದೆಂದು ಗೊತ್ತು ನನಗೆ
ರೆಕ್ಕೆಗಳಿಗೆ ಕಟ್ಟುಗಳಿಲ್ಲದ ಹಕ್ಕಿ
ಹಾರುತ್ತದೆ ಗಾಳಿಯ ಬೆನ್ನ ಮೇಲೇರಿ,
ಈಜುತ್ತದೆ ತೊರೆಯಲ್ಲಿ
ಬಲ ತಗ್ಗುವವರೆಗೂ ಪಕ್ಕೆಗಳಲ್ಲಿ,
ಅದ್ದುತ್ತದೆ ರೆಕ್ಕೆಗಳ
ಸೂರ್ಯನ ಕಿತ್ತಲೆ ಬೆಳಕಲ್ಲಿ,
ಇಡೀ ಆಕಾಶವೆ ನನ್ನದೆಂದು ಸಾರುವ
ಗತ್ತುಗಮ್ಮತ್ತಿನಲ್ಲಿ

ಆದರೆ ತನ್ನ ಪುಟ್ಟ ಪಂಜರದೊಳಗೆ
ಶತಪಥ ಹೆಜ್ಜೆ ಹಾಕುವ ಹಕ್ಕಿಗೆ
ಕಾಣಬಹುದು ಎಲ್ಲೋ ಒಮ್ಮಮ್ಮೆ
ಸರಳುಗಳಾಚೆ, ಉರಿಯುತ್ತದೆ
ಅಸಹಾಯಕ ಕೋಪ
ಮೊಟಕಾಗಿವೆ ರೆಕ್ಕೆಗಳು, ದಣಿದಿವೆ ಕಾಲುಗಳು,
ಆದ್ದರಿಂದ ಅದು ತೆರೆಯುತ್ತದೆ
ಹಾಡಲು ತನ್ನ ಬಾಯನ್ನು

ಹಾಡುತ್ತದೆ ಪಂಜರದ ಹಕ್ಕಿ
ಕಂಪಿಸುತ್ತ ಭಯಪಡುತ್ತ
ತನಗೆ ತಿಳಿಯದ ಲೋಕದ ಬಗೆಗೆ
ಹಂಬಲಿಸುವ ಲೋಕದ ಬಗೆಗೆ,
ಮುಟ್ಟುತ್ತದೆ ಅದರ ದನಿ
ದೂರದ ಬೆಟ್ಟಕ್ಕೂ ಬನಿ,
ಏಕೆಂದರೆ, ಪಂಜರದ ಹಕ್ಕಿ ಹಾಡುತ್ತದೆ
ಬಿಡುಗಡೆಯ ಬಗೆಗೆ

ಸ್ವತಂತ್ರ ಹಕ್ಕಿಗೆ ದೂರದೇಶದ ತಂಗಾಳಿಯ ಕನಸು,
ಪಿಸುಗುಟ್ಟುವ ಮರಗಳ ನಡುವೆ ಕರೆದೊಯ್ಯುವ
ವಾಣಿಜ್ಯಮಾರುತಗಳ ನೆನಪು,
ನಸುಮುಂಜಾವು ಹುಲ್ಲಿನ ಮೇಲೆ ತನಗಾಗಿ
ಕಾದಿರುವ ರಸತುಂಬಿದ ಹುಳಗಳ ಕನಸು,
ಆಕಾಶವೆಲ್ಲ ತನ್ನದೆಂದು ಹೇಳುವುದೊಂದೇ ಅದರ ಹಾಡಿನ ಬಗೆ

ಪಂಜರದ ಹಕ್ಕಿ ನಿಂತಿದೆ ಕನಸುಗಳ ಗೋರಿಯ ಮೇಲೆ
ಚೀರುತ್ತದೆ ಅದರ ನೆರಳು ದುಃಸ್ವಪ್ನದ ತೆರೆಯ ಮೇಲೆ.
ಮೊಟಕಾಗಿವೆ ಅದರ ರೆಕ್ಕೆಗಳು, ದಣಿದಿವೆ ಅದರ ಕಾಲುಗಳು
ಬೇರೇನಿದೆ ದಾರಿ? ತೆರೆಯುತ್ತದೆ ಅದು ಬಾಯನ್ನು ಹಾಡಲು,
ಹಾಡುತ್ತದೆ ಪಂಜರದ ಹಕ್ಕಿ
ಭಯಕಂಪಿತ ದನಿಯಲ್ಲಿ
ತಿಳಿಯದ ಲೋಕದ ಬಗೆಗೆ
ಹಂಬಲಿಸುವ ಲೋಕದ ಬಗೆಗೆ,
ಕೇಳುತ್ತದೆ ಅದರ ದನಿ
ದೂರದೂರದ ಬೆಟ್ಟಕ್ಕೆ
ಯಾಕೆಂದರೆ ಅದರ ಹಾಡು
ಬಿಡುಗಡೆಯ ಪಾಡು

ಕೆಲವು ವರ್ಷಗಳ ಹಿಂದೆ ಈ ಕವಿತೆಯನ್ನು ಓದಿದಾಗ ನನ್ನಲ್ಲಿ ಉಂಟಾದ ತಳಮಳ, ತಳಮಳದ ಹಿಂದೆಯೇ ಕಾಡಿದ ಪ್ರಶ್ನೆಗಳು ನೆನಪಿವೆ: ಇಲ್ಲಿ ಕವಯಿತ್ರಿ ಬಂಧನದ ಬಗ್ಗೆ ಮಾತನಾಡುತ್ತಿದ್ದಾಳೆಯೇ? ಅಕ್ಷರಶಃ ಪಂಜರದೊಳಗೆ ಸೆರೆಯಾಗಿರುವ ಹಕ್ಕಿಯ ಸಂಕಟಗಳ ಬಗ್ಗೆ ಈಕೆ ಮಾತನಾಡುತ್ತಿದ್ದಾಳೆಯೇ ಅಥವಾ ಹಕ್ಕಿಯು ಒಂದು ರೂಪಕವಾಗಿ ಮನುಷ್ಯನ ಮನಸ್ಸಿನ ಸ್ಥಿತಿಯ ಸೂಚಕವೇ? ಅಥವಾ ಬದುಕಿನ ಪ್ರತಿ ಹೆಜ್ಜೆಯೂ ಅನಿವಾರ್ಯವಾಗಿ ಇಂತಹದೇ ಬಂಧನದ ಸ್ಥಿತಿಯಾಗಿದೆ ಮತ್ತು ಆ ಬಂಧನದಲ್ಲಿಯೇ ‘ಬಿಡುಗಡೆ’ಯ ಬೆಳಕೂ ಇರಬಹುದು ಎನ್ನುವುದೇ? ‘ಬಂಧನ’ ಮತ್ತು ‘ಬಿಡುಗಡೆ’ಯ ಪರಿಕಲ್ಪನೆಯನ್ನು ಆಧುನಿಕ ಕಾಲದ ‘ಹಿಂಸೆ’ ಮತ್ತು ‘ಕೇಡಿ’ಗೆ ಸಂವಾದಿಯಾಗಿ ಬಳಸುವ ಈ ಶತಮಾನದ ಶ್ರೇಷ್ಠ ಲೇಖಕ ಆಫ್ರಿಕಾದ ಚಿನುವ ಅಚಿಬೆ ಸೃಷ್ಟಿಸಿದ ಹಕ್ಕಿಯ ಮೂಲಕ ಕಾಣಬಹುದು. ಆ ಹಕ್ಕಿಯ ಹೆಸರು ‘ಎನೇಕೆ’. ಅಚಿಬೆಯ ಅದ್ಭುತ ಕಾದಂಬರಿಗಳಲ್ಲಿ ಒಂದಾದ ‘ಥಿಂಗ್ಸ್ ಫಾಲ್ ಅಪಾರ್ಟ್’ನಲ್ಲಿ ಈ ಹಕ್ಕಿಯ ಪ್ರಸ್ತಾಪವಿದೆ. ‘ಎನೇಕೆ’ ಹಕ್ಕಿಯನ್ನು ‘ಯಾಕೆ ನೀನು ಯಾವಾಗಲೂ ರೆಕ್ಕೆ ಎತ್ತಿಕೊಂಡು ಹಾರಲು ಸಿದ್ಧವಾಗಿರುತ್ತೀಯ?’ ಎಂದು ಕೇಳಿದಾಗ ಅದು ಹೇಳುತ್ತದೆ: ‘ಮನುಷ್ಯರು ಗುರಿ ತಪ್ಪದೆ ಹೊಡೆಯಲು ಕಲಿತಿದ್ದಾರೆ, ನಾನು ಕೊಂಬೆ ಮೇಲೆ ಕೂರದೆಯೇ ಹಾರಲು ಕಲಿತಿದ್ದೇನೆ’ ಎಂದು.

ಮನುಷ್ಯನೊಳಗಿನ ‘ಪಶು’ ಪ್ರವೃತ್ತಿಯು ಬದುಕಿನ ಅನುಭವಗಳ ಮೂಲಕ ಪಕ್ವಗೊಂಡು, ಮಾನವೀಯ ಪ್ರಜ್ಞೆಯಾಗಿ ರೂಪುಗೊಳ್ಳುವುದು ಒಂದು ದೊಡ್ಡ ಹೋರಾಟ. ಅಂತಿಮವಾಗಿ ಈ ಹೋರಾಟವು ನನ್ನೊಳಗೂ ಒಂದು ಹಕ್ಕಿ ಸೃಷ್ಟಿಯಾಗಿ ಅದರ ದನಿಯನ್ನು ನಾನು ಕೇಳಿಸಿಕೊಳ್ಳುವ ಮತ್ತು ಆ ಮೂಲಕ ‘ಸೃಷ್ಟಿ’ ಎನ್ನುವ ಮಾನವತೆಯ ಜೊತೆಗೆ ನಮ್ಮನ್ನು ನಾವು ಸಂಬಂಧಿಸಿಕೊಳ್ಳುವ ಕ್ರಿಯೆಯಾಗದೆ ಹೋದರೆ ನಮ್ಮ ಯಾವ ಹುಡುಕಾಟಕ್ಕೂ ಅರ್ಥವಿಲ್ಲ ಎಂಬುದನ್ನು ಜಗತ್ತಿನ ಎಲ್ಲ ಶ್ರೇಷ್ಠ ಸಾಹಿತ್ಯ ಕೃತಿಗಳು ಅನನ್ಯ ರೀತಿಯಲ್ಲಿ ತೋರಿಸಿಕೊಡುತ್ತವೆ. ಮೇಲೆ ಪ್ರಸ್ತಾಪಿಸಿದ ಕಥೆ, ಕವಿತೆಗಳೆಲ್ಲ ಇಂತಹ ಮಾನವೀಯ ಹೋರಾಟೆಡೆಗೆ ರೆಕ್ಕೆ ಚಾಚಿದ ಹಕ್ಕಿಗಳು...

ಹಾಡು/ಕವಿತೆಯು ನಮಗೆ ನೇರವಾಗಿ ಕಾಣದೆ ಸುತ್ತಮುತ್ತಲೂ ಅವಿತು ಇದ್ದೇ ಇದೆ. ಪ್ರತಿ ಯುಗದಲ್ಲಿ, ಪ್ರತಿ ಋತುಮಾನದಲ್ಲಿ ಬರುವ ಕೋಗಿಲೆಯ ಶರೀರವು ಸೃಜನಶೀಲತೆಯ ಆ ಗಳಿಗೆಯನ್ನು ಹಿಡಿಯುತ್ತದೆ, ಆಗ ಹಾಡು ಅಭಿವ್ಯಕ್ತಗೊಳ್ಳುತ್ತದೆ. ‘ಚಿಕುಹೂ’ ಕೂಗು, ವೃದ್ಧಾಪ್ಯವಿಲ್ಲದೆ, ಸಾವಿನ ಹಂಗಿಲ್ಲದೆ ಅಜರಾಮರವಾಗಿ ಕ್ಷಣಕಾಲ ಇರುತ್ತದೆ. ಆನಂತರ ಆ ಕೋಗಿಲೆ ತರಗೆಲೆಯಂತೆ ಬಿದ್ದು ಹೋಗುತ್ತದೆ. ತರಗೆಲೆಯ ಪಾಡೂ ಹೀಗೆಯೇ ತಾನೆ?

Writer - ಜ.ನಾ. ತೇಜಶ್ರೀ

contributor

Editor - ಜ.ನಾ. ತೇಜಶ್ರೀ

contributor

Similar News

ಬೀಗ