ಸಂಸ್ಕೃತ ಹೇರಿಕೆಯ ಮತ್ತೊಂದು ಆಯಾಮ
ಒಂದು ಪ್ರಾಚೀನ ಭಾಷೆಯಾಗಿ, ಒಂದು ನಿರ್ದಿಷ್ಟ ಜನಸಮುದಾಯದ ಪಾರಂಪರಿಕ ಸಂವಹನ ಮಾಧ್ಯಮವಾಗಿ ಸಂಸ್ಕೃತವು ತನ್ನದೇ ಆದ ಮಹತ್ವ ಪಡೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಇಂದು ಇದು ಮೃತಭಾಷೆ ಎಂದೇ ಪರಿಗಣಿಸಲ್ಪಟ್ಟಿದ್ದು ಯಾವುದೇ ಸಮುದಾಯದ ನಿತ್ಯಭಾಷೆಯಾಗಿ, ಆಡುಭಾಷೆಯಾಗಿ ಉಳಿದಿಲ್ಲ ಎನ್ನುವುದೂ ಸತ್ಯ. ಈ ಭಾಷೆಯಲ್ಲಿ ರಚಿತವಾಗಿರುವ ಗ್ರಂಥಗಳನ್ನು ಅಧ್ಯಯನ ಮಾಡುವ ಸಲುವಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು ತರವೇ? ಸಂಸ್ಕೃತ ವೇದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದಿದ್ದರೂ ಈವೆರಗೂ ಒಂದು ಸ್ಪಷ್ಟ ಪ್ರಜಾಸತ್ತಾತ್ಮಕ ಭಾಷಾ ನೀತಿಯನ್ನು ರೂಪಿಸಲು ಸಾಧ್ಯವಾಗದಿರುವುದು ಅಚ್ಚರಿ ಮೂಡಿಸುತ್ತದೆ. ರಾಜ್ಯ ಮಟ್ಟದಲ್ಲೂ ಕರ್ನಾಟಕದಲ್ಲಿ ಶೈಕ್ಷಣಿಕ ಭಾಷಾ ಮಾಧ್ಯಮವಾಗಿ ಕನ್ನಡವನ್ನು ಬಳಸಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಪ್ರಯತ್ನಗಳಿಗೆ ಬಂಡವಾಳ ವ್ಯವಸ್ಥೆಯ ಶೈಕ್ಷಣಿಕ ನೀತಿಗಳೇ ಅಡ್ಡಿಯಾಗುತ್ತಿವೆ. ಬಹುಭಾಷಿಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಕನ್ನಡದ ಬೆಳವಣಿಗೆಗೆ ಮತ್ತು ಇಲ್ಲಿಯದೇ ಆದ ತುಳು, ಕೊಂಕಣಿ, ಕೊಡವ, ಬ್ಯಾರಿ ಮುಂತಾದ ಸ್ಥಳೀಯ ಭಾಷೆಗಳ ಬೆಳವಣಿಗೆಗೆ ಪೂರಕವಾದ ಒಂದು ಸಾಂಸ್ಥಿಕ ಪರಿಸರವನ್ನೇ ಈವರೆಗೂ ರೂಪಿಸಲು ಸಾಧ್ಯವಾಗಿಲ್ಲ. ಗ್ರಾಂಥಿಕ ಭಾಷೆ, ಸಾಹಿತ್ಯಕ ಭಾಷೆ, ಆಡು ಭಾಷೆ ಮತ್ತು ಪ್ರಭುತ್ವದ ಭಾಷೆ ಹೀಗೆ ನಾಲ್ಕು ಸ್ತರಗಳಲ್ಲಿ ಭಾಷೆ ತನ್ನ ಬೆಳವಣಿಗೆಯ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಈ ವ್ಯತ್ಯಯಗಳನ್ನು ಬದಿಗೊತ್ತಿ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯೂ ನಮ್ಮನ್ನು ಬಾಧಿಸುತ್ತಿದೆ.
ಸಾರ್ವಜನಿಕ ವಲಯದಲ್ಲಿ, ನಾಗರಿಕರ ನಡುವಿನ ಸಂವಹನ ಮಾಧ್ಯಮಗಳಲ್ಲಿ, ನಿತ್ಯ ಜೀವನದ ಪರಿಸರದಲ್ಲಿ ಕನ್ನಡ ಒಂದು ಆಡುಭಾಷೆಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿದ್ದರೂ, ದಕ್ಷಿಣ ಭಾಗದಲ್ಲಿ ಇತರ ಪ್ರಾದೇಶಿಕ ಭಾಷೆಗಳ ಪ್ರಭಾವವೂ ದಟ್ಟವಾಗಿಯೇ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಒಂದು ಅಪರೂಪದ ಭಾಷೆಯಂತೆ ಕಾಣಿಸಿಕೊಳ್ಳುತ್ತಿರುವುದು ಭಾಷಾ ಪ್ರೇಮಿಗಳಲ್ಲಿ ಆತಂಕ ಮೂಡಿಸಿರುವುದೂ ವಾಸ್ತವ. ಶಿಕ್ಷಣ ಮಾಧ್ಯಮದ ಮೂಲಕ, ಸಾಂಸ್ಕೃತಿಕ ನೆಲೆಗಳಲ್ಲಿ ಕನ್ನಡವನ್ನು ಕಾಪಾಡುತ್ತಲೇ, ಈ ಸಮೃದ್ಧ ಭಾಷೆಯ ಚಾರಿತ್ರಿಕ ನೆಲೆಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಸರಕಾರಗಳ ಮೇಲಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಮತ್ತು ಪುಸ್ತಕ ಪ್ರಾಧಿಕಾರದಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು ಎನ್ನುವುದೂ ವಾಸ್ತವ. ಕನ್ನಡ ಭಾಷೆಯೊಂದಿಗೇ ಈ ನೆಲದ ಪ್ರಾಂತೀಯ ಭಾಷೆಗಳ ಅಭಿವೃದ್ಧಿಗೂ ಶ್ರಮಿಸುವುದು ಇಂದಿನ ಅಗತ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕದ ಜನತೆಯ ಹಲವು ವರ್ಷಗಳ ಪರಿಶ್ರಮ ಹಾಗೂ ನಿರಂತರ ಹೋರಾಟದ ಫಲವಾಗಿ 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಒದಗಿತ್ತು. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೂ ಈ ಸಮ್ಮಾನ ದೊರೆಯಬೇಕು ಎಂದು ಒತ್ತಾಯಿಸುವ ಮೂಲಕ ಕನ್ನಡದ ಹಿರಿಯ ಸಾಹಿತಿಗಳು, ಕಲಾವಿದರು, ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಮತ್ತು ಸಾರ್ವಜನಿಕರು ವರ್ಷಗಟ್ಟಲೆ ನಡೆಸಿದ ಹೋರಾಟದ ಪರಿಣಾಮ ಈ ಬೇಡಿಕೆ ಈಡೇರಿತ್ತು. ಇದರ ಪರಿಣಾಮವಾಗಿ ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರವು ಸ್ಥಾಪನೆಯಾಗಿದ್ದು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯ ಆಶ್ರಯದಲ್ಲೇ ಪ್ರಾಚೀನ ಕನ್ನಡ ಸಾಹಿತ್ಯದ ಸಂಶೋಧನೆಗಳೂ ನಡೆಯುತ್ತಿದ್ದು ಕನ್ನಡದ ಇತಿಹಾಸದ ಶೋಧ ಮುಂದುವರಿಯುತ್ತಿದೆ. ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಒಂದು ಸ್ವಾಯತ್ತ ಸಂಸ್ಥೆಯನ್ನಾಗಿ ಸ್ಥಾಪಿಸುವಂತೆ ನಾಡಿನ ಜನತೆ, ಮೈಸೂರಿನ ಸಾಹಿತಿ ಕಲಾವಿದರು ಒತ್ತಾಯಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲವು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿರುವುದು ಗಮನಕ್ಕೆ ಬಂದ ನಂತರ ಕೊಂಚ ಭರವಸೆಯೂ ಮೂಡಿತ್ತು. ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನದ(ಸಿಐಐಎಲ್) ಆಶ್ರಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಈ ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರಕಾರ ಮೀನ ಮೇಷ ಎಣಿಸುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಈ ಸಂಸ್ಥೆಯ ಸ್ವಂತ ಕಟ್ಟಡಕ್ಕಾಗಿ ನಾಲ್ಕು ಎಕರೆ ಭೂಮಿಯನ್ನು ನೀಡಲು ನಿರ್ಧರಿಸಲಾಗಿದೆ. ಆದಾಗ್ಯೂ ಕೇಂದ್ರ ಸರಕಾರ ಕನ್ನಡಿಗರ ಈ ಬೇಡಿಕೆಯನ್ನು ಕಡೆಗಣಿಸುತ್ತಲೇ ಬಂದಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರವು, ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಕೂಡಲೇ, ಅಲ್ಪಾವಧಿಯಲ್ಲೇ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದು ಇಂದು ನೂರಾರು ಸಂಶೋಧಕರೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಡುವಲ್ಲಿ ಅಲ್ಲಿನ ರಾಜಕೀಯ ನಾಯಕರು ಪಕ್ಷಾತೀತವಾಗಿ ಕೈಜೋಡಿಸಿ ಯಶಸ್ವಿಯಾಗಿದ್ದುದನ್ನು ಸ್ಮರಿಸಬಹುದು. ಇತ್ತೀಚೆಗೆ ಪ್ರಧಾನಿ ಮೋದಿ ಈ ಸಂಸ್ಥೆಯ ಒಂದು ಭವ್ಯ ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಈ ಸಮಾರಂಭವನ್ನು ಕರ್ನಾಟಕದ ಬಿಜೆಪಿ ಶಾಸಕರು ಕಂಠಪೂರ್ತಿಯಾಗಿ ಸ್ವಾಗತಿಸಿ ಸಂಭ್ರಮಿಸಿರುವುದು ವಿಡಂಬನೆ ಎನಿಸುವುದಿಲ್ಲವೇ?
ಆದರೆ ಈಗ ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಹೊಸ ಶೈಕ್ಷಣಿಕ ನೀತಿಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತಹ ಕೆಲವು ನೀತಿಗಳು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸಂಚಕಾರ ತರುವಂತೆ ತೋರುತ್ತಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನವನ್ನು(ಸಿಐಐಎಲ್) ಭಾರತೀಯ ಭಾಷಾ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸಲು ಕೇಂದ್ರ ಸರಕಾರ ಸಿದ್ಧತೆಗಳನ್ನು ನಡೆಸಿದ್ದು, ಈಗಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ನೂತನ ಭಾಷಾ ವಿಶ್ವವಿದ್ಯಾನಿಲಯದ ಒಂದು ವಿಭಾಗವನ್ನಾಗಿ ಪರಿವರ್ತಿಸಲು ಯೋಜಿಸಲಾಗುತ್ತಿದೆ. ಈ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಗಳು ಕೇಂದ್ರ ಮಟ್ಟದಲ್ಲಿ ಚಾಲನೆ ಪಡೆದಿದೆ. ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಉಳಿವಿವಾಗಿ ಮೈಸೂರಿನ ಸಾಹಿತ್ಯಕ ಮನಸ್ಸುಗಳು ನಡೆಸಿದ ಹೋರಾಟದ ಫಲವಾಗಿ ಇಂದಿಗೂ ಈ ಸಂಸ್ಥೆ ಉಸಿರಾಡುತ್ತಿದೆ.
ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಸಾಂಸ್ಕೃತಿಕ ರಾಜಕಾರಣ
ಈ ಅವಧಿಯಲ್ಲೇ ಕರ್ನಾಟಕ ಸರಕಾರ 2010ರಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯವನ್ನೂ ಸ್ಥಾಪಿಸಿದೆ. ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ವಿಶ್ವವಿದ್ಯಾನಿಲಯದ ಮೂಲಕ ವೈಜ್ಞಾನಿಕ, ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಗಳ ಅಧ್ಯಯನ ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ. 31 ಸಂಸ್ಕೃತ ವಿದ್ಯಾನಿಲಯಗಳು, 243 ಅನುದಾನಿತ ವೇದ ಮತ್ತು ಸಂಸ್ಕೃತ ಪಾಠಶಾಲೆಗಳು ಈ ವಿಶ್ವವಿದ್ಯಾನಿಲಯದೊಡನೆ ಸಂಯೋಜನೆಯನ್ನು ಹೊಂದಿದ್ದು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವು ಈ ಸಂಸ್ಥೆಗಳ ಆಡಳಿತ ನಿರ್ವಹಣೆಯನ್ನು ಮಾಡುತ್ತಿದೆ. ಸಂಸ್ಕೃತವಿಲ್ಲದೆ ವೇದವಿಲ್ಲ, ವೇದವಿಲ್ಲದೆ ಸಂಸ್ಕೃತವಿಲ್ಲ, ವೇದವಿಲ್ಲದೆ ಹಿಂದೂ ಧರ್ಮವಿಲ್ಲ, ಹಿಂದೂ ಧರ್ಮ ಇಲ್ಲದೆ ಭಾರತೀಯ ಸಂಸ್ಕೃತಿಗೆ ಅರ್ಥವಿಲ್ಲ ಇದು ಹಿಂದುತ್ವವಾದಿಗಳ ಭೈರವಿ ರಾಗ. ಈ ಪ್ರತಿಪಾದನೆಯ ಹಿನ್ನೆಲೆಯಲ್ಲೇ ವೇದಗಳ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಮೂಲಕ ಹಿಂದುತ್ವವಾದವನ್ನು ಪುಷ್ಟೀಕರಿಸುವ ಒಂದು ಪ್ರಯತ್ನವನ್ನೂ ಈ ವಿಶ್ವವಿದ್ಯಾನಿಲಯದ ಮೂಲಕ ಮಾಡಲಾಗುತ್ತದೆ. ಪ್ರಾಚೀನ ಇಂಡೋ ಆರ್ಯನ್ ಭಾಷೆಯಲ್ಲಿ ರಚಿತವಾಗಿದೆ ಎಂದು ಹೇಳಲಾಗುವ ವೇದಗಳು ಭಾರತೀಯ ಪ್ರಾಚೀನ ಸಾಹಿತ್ಯದ ಅಪ್ರತಿಮ ದಾರ್ಶನಿಕ ಕೃತಿಗಳು. ಕೆಲವು ಮೂಲಗಳ ಪ್ರಕಾರ ವೇದಗಳಲ್ಲಿ ಬಳಸಲಾಗಿರುವ ಭಾಷೆ ಪರ್ಷಿಯಾ ದೇಶದ ಅವೆಸ್ತಾ ಗ್ರಂಥದ ಭಾಷೆಯನ್ನು ಹೋಲುತ್ತದೆ. ಆದರೂ ಸಾಮಾನ್ಯವಾಗಿ ವೇದಗಳನ್ನು ಸಂಸ್ಕೃತ ಭಾಷೆಯಲ್ಲಿದೆ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಸಂಸ್ಕೃತ ಭಾಷೆಯ ಅಳಿವು-ಉಳಿವಿಗೆ ವೇದಗಳ ಅಸ್ಮಿತೆಯನ್ನು ತಳುಕುಹಾಕುವುದು ಸಮಂಜಸವಲ್ಲ. ಭಾರತದ ಮಹಾನ್ ಪೌರಾಣಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕಾಳಿದಾಸನ ಕೃತಿಗಳು ಸಂಸ್ಕೃತದಲ್ಲೇ ರಚಿತವಾಗಿದ್ದು ಜ್ಞಾನದ ಎಲ್ಲ ಶಿಸ್ತುಗಳಲ್ಲೂ ಸಂಸ್ಕೃತದ ಪ್ರಭಾವವನ್ನು ಕಾಣಬಹುದಾಗಿದೆ. ಆದರೆ ಹಿಂದುತ್ವವಾದಿಗಳಿಗೆ ಇವೆರಡನ್ನೂ ಭಿನ್ನವಾಗಿ ನೋಡಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸಂಸ್ಕೃತಿಗೆ ಸಂಸ್ಕೃತ ಭಾಷಿಕ ಅಡಿಪಾಯವಾದರೆ, ವೇದಗಳು ಮೌಲಿಕ ಅಡಿಪಾಯವೆಂದು ಪ್ರತಿಪಾದಿಸುವ ಸಂಪ್ರದಾಯವಾದಿಗಳು ವೇದಗಳಲ್ಲಿ ಜಗತ್ತಿನ ಸರ್ವಸ್ವವನ್ನೂ ಕಾಣುವುದು ಒಂದು ಪರಂಪರೆಯಾಗಿ ಬೆಳೆದುಬಂದಿದೆ. ಆಧುನಿಕ ಪ್ರಪಂಚದ ವೈಜ್ಞಾನಿಕ ಅನ್ವೇಷಣೆಗಳನ್ನೂ ವೇದಗಳಲ್ಲಿ ಹೆಕ್ಕಿ ತೆಗೆಯಲು ಯತ್ನಿಸುವ ವೇದಾಂತಿಗಳು ಸಂಸ್ಕೃತ ಭಾಷೆಯ ಐತಿಹ್ಯವನ್ನೂ ವೇದಗಳಲ್ಲೇ ಹುಡುಕುತ್ತಾರೆ. ಪ್ರಾಚೀನ ಭಾರತದ ಬುಡಕಟ್ಟು ಸಮಾಜದ ಸಾಮಾನ್ಯ ಜನಜೀವನದ ಅನುಭವದ ಹಿನ್ನೆಲೆಯಲ್ಲಿ ರಚಿತವಾಗಿರುವ ವೇದಗಳು ಮೌಖಿಕ ಪರಂಪರೆಯಲ್ಲೇ ಹೆಚ್ಚು ಪ್ರಚಲಿತವಾಗಿದ್ದುದನ್ನೂ ವಿದ್ವಾಂಸರು ಗುರುತಿಸುತ್ತಾರೆ. ಆದರೆ ಸಂಸ್ಕೃತಿಯನ್ನು ಸಂಸ್ಕೃತದ ಅನ್ಯಲಿಂಗ ರೂಪವೆಂದು ಪರಿಗಣಿಸುವ ವೇದಾಂತಿಗಳು ಭಾರತೀಯ ಸಂಸ್ಕೃತಿಗೆ ಸಂಸ್ಕೃತವೇ ತಳಹದಿ ಎಂದು ವಾದಿಸುತ್ತಾರೆ. ಈ ಹಿನ್ನೆಲೆಯಲ್ಲೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪಿಸುವ ಪ್ರಯತ್ನಗಳೂ ನಡೆಯುತ್ತಿವೆ.
ಭಾಷೆಗೊಂದು ವಿಶ್ವವಿದ್ಯಾನಿಲಯ?
ಒಂದು ಪ್ರಾಚೀನ ಭಾಷೆಯಾಗಿ, ಒಂದು ನಿರ್ದಿಷ್ಟ ಜನಸಮುದಾಯದ ಪಾರಂಪರಿಕ ಸಂವಹನ ಮಾಧ್ಯಮವಾಗಿ ಸಂಸ್ಕೃತವು ತನ್ನದೇ ಆದ ಮಹತ್ವ ಪಡೆದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಇಂದು ಇದು ಮೃತಭಾಷೆ ಎಂದೇ ಪರಿಗಣಿಸಲ್ಪಟ್ಟಿದ್ದು ಯಾವುದೇ ಸಮುದಾಯದ ನಿತ್ಯಭಾಷೆಯಾಗಿ, ಆಡುಭಾಷೆಯಾಗಿ ಉಳಿದಿಲ್ಲ ಎನ್ನುವುದೂ ಸತ್ಯ. ಈ ಭಾಷೆಯಲ್ಲಿ ರಚಿತವಾಗಿರುವ ಗ್ರಂಥಗಳನ್ನು ಅಧ್ಯಯನ ಮಾಡುವ ಸಲುವಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು ತರವೇ? ಸಂಸ್ಕೃತ ವೇದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಮೊದಲು ಸಂಸ್ಕೃತ ವಿವಿಯನ್ನು ಮಾತ್ರ ಸ್ಥಾಪಿಸುವುದಾಗಿ ಘೋಷಿಸಿ ನಂತರ ವೇದವನ್ನೂ ಸೇರಿಸಿದ ರಾಜ್ಯ ಸರಕಾರ ಈ ವಿಶ್ವವಿದ್ಯಾನಿಲಯದ ಎಲ್ಲ ಕಾಲೇಜುಗಳಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನೂ ಕಡ್ಡಾಯವಾಗಿ ಬೋಧಿಸುವ ಮೂಲಕ ಜ್ಯೋತಿಷ್ಯ ಶಾಸ್ತ್ರಕ್ಕೆ ವೈಜ್ಞಾನಿಕ ಮೆರುಗು ನೀಡಲು ಪ್ರಯತ್ನಿಸಲಾಗುತ್ತದೆ. ಭಾರತೀಯ ಪುರಾಣ ಗ್ರಂಥಗಳಲ್ಲಿ ಇರುವುದೆಲ್ಲವೂ ಶ್ರೇಷ್ಠ ಮತ್ತು ಶ್ರೇಷ್ಠವಾದುದನ್ನು ಯಾವುದೇ ರೀತಿಯಲ್ಲೂ ಪ್ರಶ್ನಿಸುವ, ಪರಾಮರ್ಶಿಸುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯವನ್ನು ತಳೆದ ಸಾಂಪ್ರದಾಯಿಕ ವ್ಯಕ್ತಿಗಳು, ಧಾರ್ಮಿಕ ಮತೀಯವಾದಿಗಳು ಸಂಸ್ಕೃತ ವಿಶ್ವವಿದ್ಯಾನಿಲಯದ ರೂಪುರೇಷೆಗಳನ್ನು ನಿರ್ಧರಿಸುವುದಾದರೆ ಅದು ಸಂಸ್ಕೃತ ಭಾಷೆಗೆ ಅಪಚಾರವೆಸಗಿದಂತಾಗುತ್ತದೆ.
ಯಾವುದೇ ಒಂದು ನಿರ್ದಿಷ್ಟ ಭಾಷೆಯಾಗಲೀ, ಅನ್ಯ ಶಿಸ್ತಿನ ವಿಷಯವಾಗಲೀ ಪ್ರತ್ಯೇಕ ಅಧ್ಯಯನ-ಸಂಶೋಧನೆಗೆ ಒಳಪಡಬೇಕಾದಲ್ಲಿ ವೈಜ್ಞಾನಿಕ ಪರಿಕಲ್ಪನೆ ಇರುವುದು ಅತ್ಯವಶ್ಯವಾಗುತ್ತದೆ. ಅದರಲ್ಲೂ ಒಂದು ನಿರ್ದಿಷ್ಟ ಭಾಷೆಗಾಗಿಯೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕಾದಲ್ಲಿ, ಆ ಭಾಷೆಯ ಚಾರಿತ್ರಿಕ, ಪಾರಂಪರಿಕ, ವೈಚಾರಿಕ ಅಂಶಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದಲೇ ಪರಾಮರ್ಶಿಸಬೇಕಾಗುತ್ತದೆ. ಸಂಸ್ಕೃತ ಭಾಷೆಗಾಗಿ ಒಂದು ವಿಶ್ವವಿದ್ಯಾನಿಲಯದ ಅಗತ್ಯ ಕಂಡುಬರುವುದಿಲ್ಲವಾದರೂ, ಒಂದು ಪ್ರಾಚೀನ ಭಾಷೆಯಾಗಿ ಸಂಸ್ಕೃತದ ಆಳವನ್ನು ಶೋಧಿಸುವ ಮೂಲಕ, ಪ್ರಾಚೀನ ಭಾರತದ ಸಾಹಿತ್ಯವನ್ನು ಆಧ್ಯಯನ ಮಾಡುವ ಅವಶ್ಯಕತೆಯಂತೂ ಇದ್ದೇ ಇದೆ. ಆದರೆ ಇದೇ ಅಗತ್ಯತೆ ಅನ್ಯ ಭಾಷೆಗಳಿಗೂ ಅನ್ವಯಿಸುತ್ತದೆ. ಭಾಷಾ ಅಧ್ಯಯನದಲ್ಲಿ ಬಹುಭಾಷಿಕ ಆಯಾಮಗಳಿಲ್ಲದೆ ಹೋದಲ್ಲಿ ಏಕಮುಖೀ ಸಂಶೋಧನೆಯಲ್ಲಿ ಪರ್ಯವಸಾನಗೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಈಗಾಗಲೇ ಸಂಸ್ಕೃತ ಅಧ್ಯಯನ ಪೀಠಗಳಲ್ಲಿ ಈ ನ್ಯೂನತೆಯನ್ನು ಗುರುತಿಸಬಹುದಾಗಿದೆ. ಎಲ್ಲ ಭಾಷೆಗಳಿಗೂ ಸಂಸ್ಕೃತವೇ ಮೂಲ ಎಂಬ ಅಭಿಪ್ರಾಯ, ಆ ಮೂಲವನ್ನು ಶೋಧಿಸುವುದರಲ್ಲಿ ಕೊನೆಗೊಳ್ಳದೆ, ವೈಭವೀಕರಿಸುವುದರಲ್ಲಿ ಕೊನೆಗಾಣುವುದು ಭಾಷಾ ಸಂಶೋಧನೆಯ ಪ್ರಥಮ ನ್ಯೂನತೆಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಕೃತದಷ್ಟೇ ಪ್ರಾಚೀನ ಭಾಷೆಗಳಾದ ಪ್ರಾಕೃತ, ಫಾರ್ಸಿ, ಪಾಲಿ ಮುಂತಾದ ಭಾಷೆಗಳನ್ನು ಸಮಕಾಲೀನ ಭಾಷೆಗಳಿಗೆ ಮುಖಾಮುಖಿಯಾಗಿಸಿ ಅಧ್ಯಯನ ಮಾಡುವುದು ಇಂದಿನ ತುರ್ತು ಅಗತ್ಯತೆಯಾಗಿದೆ. ಮತ್ತೊಂದೆಡೆ ಯಾವುದೇ ಒಂದು ಭಾಷೆಯ ಅಧ್ಯಯನ ಮಾಡುವಾಗ ಆ ಭಾಷೆಯ ಆಂತರ್ಯದಲ್ಲಿ ಅಡಗಿರಬಹುದಾದ ಜನಪರ ಕಾಳಜಿ ಮತ್ತು ಜನದನಿಯನ್ನು ಗುರುತಿಸದೆ ಹೋದಲ್ಲಿ ಗತಕಾಲದ ಸಾಮಾಜಿಕ ಚಿತ್ರಣವನ್ನು ವೈಜ್ಞಾನಿಕ-ವೈಚಾರಿಕ ನೆಲೆಗಟ್ಟಿನಲ್ಲಿ ಗ್ರಹಿಸುವುದು ಅಸಾಧ್ಯವಾಗುತ್ತದೆ. ಸಂಸ್ಕೃತ ವಿಚಾರದಲ್ಲಿ ಈ ಸಂಭವವನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ.
ಬಹುತೇಕ ಸಂದರ್ಭಗಳಲ್ಲಿ ಸಾಂಪ್ರದಾಯಿಕ ನಿಲುವುಗಳನ್ನು ವಿರೋಧಿಸಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬಿಂಬಿಸುವ ಸಂಸ್ಕೃತ ವಿದ್ವಾಂಸರನ್ನು ವಿದ್ವತ್ ಜಗತ್ತು ನಿರ್ಲಕ್ಷಿಸುವುದನ್ನೂ ಕಾಣಬಹುದಾಗಿದೆ. ಒಂದು ಸ್ಥಾಪಿತ ಪರಂಪರೆ ಮತ್ತು ಒಪ್ಪಿತ ತತ್ವಗಳಿಗೆ ಬದ್ಧರಾದವರನ್ನು ಮಾತ್ರ ಭಾಷಾ ಸಂಶೋಧನೆಯ-ಅಧ್ಯಯನದ ವಾರಸುದಾರರೆಂದು ಪರಿಗಣಿಸುವುದು, ಶ್ರೇಣೀಕೃತ ಜಾತಿವ್ಯವಸ್ಥೆಯ ವಿಸ್ತೃತ ಭಾಗವಾಗಿಯೇ ತೋರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಸಂಸ್ಕೃತ ಭಾಷಾ ಅಧ್ಯಯನಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯದ ಅವಶ್ಯಕತೆ ಕಂಡುಬರುವುದಿಲ್ಲ. ಬದಲಾಗಿ ಕರ್ನಾಟಕದ ಜನಸಮುದಾಯದ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತದಲ್ಲಿರುವುದರಿಂದ ಕನ್ನಡದ ಜೊತೆಗೇ ಈ ಭಾಷೆಗಳನ್ನೂ ಅಧ್ಯಯನ ಮಾಡಿ ಉಳಿಸುವ ಗುರುತರ ಜವಾಬ್ದಾರಿ ಹೆಚ್ಚಾಗಿದೆ. ವಿಶ್ವದಲ್ಲಿ ಪ್ರಾಚೀನ ಭಾಷೆಗಳೆಂದೇ ಗುರುತಿಸಲ್ಪಟ್ಟಿರುವ ಲ್ಯಾಟಿನ್, ಗ್ರೀಕ್, ಹಿಬ್ರೂಗಳಿಗೆ ಯಾವುದೇ ದೇಶದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿಲ್ಲ. ಜನಸಮುದಾಯಗಳ ದೃಷ್ಟಿಯಲ್ಲಿ ಈ ಭಾಷೆಗಳಿಗೂ ಸಂಸ್ಕೃತಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲದಿರುವುದನ್ನೂ ಪರಿಗಣಿಸಬೇಕಾಗಿದೆ. ಆದರೆ ಭಾರತದಲ್ಲಿನ ದುರಂತವೆಂದರೆ ಸಂಸ್ಕೃತ ಭಾಷೆ ಒಂದು ನಿರ್ದಿಷ್ಟ ಜಾತಿ ಸಮುದಾಯದ ಭಾವನಾತ್ಮಕ ಸಂಗತಿಯಾಗಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಸಂಸ್ಕೃತವನ್ನು ಒಂದು ಅಸ್ತ್ರವಾಗಿ ಪ್ರಯೋಗಿಸಲಾಗುತ್ತಿದೆ.
ಈಗ ರಾಜ್ಯ ಸರಕಾರ ರಾಮನಗರ ಜಿಲ್ಲೆಯ ಮಾಗಡಿ ಸಮೀಪ 100 ಎಕರೆ ಭೂಮಿಯನ್ನು ಸಂಸ್ಕೃತ ವಿಶ್ವವಿದ್ಯಾನಿಲಯಕ್ಕಾಗಿ ಬಳಸಿಕೊಳ್ಳುತ್ತಿದ್ದು 359 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದು ಸಹಜವಾಗಿಯೇ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾನಿಲಯದ ಸಮಸ್ಯೆಗಳನ್ನು ಪರಿಹರಿಸಿ, ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಬೇಕಾದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಎರಡು ಕೋಟಿ ರೂ. ಅನುದಾನ ನೀಡಲು ಕರ್ನಾಟಕ ಸರಕಾರ ಹಿಂದೇಟು ಹಾಕುತ್ತಿದೆ. ರಾಜ್ಯದ ಸರಕಾರಿ ಶಾಲೆಗಳಲ್ಲೂ ಕನ್ನಡ ಬೋಧಕರ ಕೊರತೆ ಇದ್ದು, ಭಾಷಾ ಕಲಿಕೆಗಾಗಿ ಸರಕಾರ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ವಾಸ್ತವ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ಕಡಿಮೆ ಮಾಡಲಾಗಿದ್ದು, ಭಾಷೆಯ ಬೆಳವಣಿಗೆಗಾಗಿ ಶ್ರಮಿಸಬೇಕಾದ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡಮಿ ಮತ್ತು ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳನ್ನು ರಾಜಕೀಕರಣಗೊಳಿಸಿ ಸಾಂಸ್ಕೃತಿಕವಾಗಿ ಕಲುಷಿತಗೊಳಿಸಲಾಗುತ್ತಿದೆ.
ಸಂಸ್ಕೃತ ವಿಶ್ವವಿದ್ಯಾನಿಲಯದ ವಿರುದ್ಧ ಕೇಳಿಬರುತ್ತಿರುವ ಗಟ್ಟಿ ಧ್ವನಿಗೆ ಕನ್ನಡದ ಸಾಹಿತ್ಯ ವಲಯವೂ ಸಕಾರಾತ್ಮಕವಾಗಿ ಇನ್ನೂ ಹೆಚ್ಚಿನ ಉತ್ಸುಕತೆಯಿಂದ ಸ್ಪಂದಿಸಬೇಕಿದೆ. ಮೈಸೂರಿನ ಶಾಸ್ತ್ರೀಯ ಅಧ್ಯಯನ ಕೇಂದ್ರ ಅಪಾಯದಲ್ಲಿದ್ದಾಗಲೂ ದಿವ್ಯಮೌನ ವಹಿಸಿದ್ದ ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರು ಇಂದೂ ಇದೇ ಮೌನವ್ರತವನ್ನು ಮುಂದುವರಿಸಿರುವುದು ದುರಂತ. ಇದು ಸಂಸ್ಕೃತ ಅಥವಾ ಮತ್ತಾವುದೇ ಭಾಷೆಯನ್ನು ವಿರೋಧಿಸುವ ಪ್ರಶ್ನೆಯಲ್ಲ, ಜನಜೀವನದ ಒಂದು ಭಾಗವಾಗಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳದ ಪ್ರಾಚೀನ ಭಾಷೆಯೊಂದನ್ನು ಮೆರೆಸುವ ಭರದಲ್ಲಿ, ರಾಜ್ಯದ ಏಳು ಕೋಟಿ ಜನರ ಮಾತೃಭಾಷೆ, ಆಡುಭಾಷೆಯನ್ನು ಕಡೆಗಣಿಸುವ ಸರಕಾರದ ಧೋರಣೆಯ ಪ್ರಶ್ನೆ. ಸಾಹಿತಿಗಳು, ಕಲಾವಿದರು ಮತ್ತು ಸಾಂಸ್ಕೃತಿಕ ಲೋಕದ ವಕ್ತಾರರು ಈ ಭಾಷಾ ಪ್ರಜ್ಞೆಯನ್ನು ಮನಗಂಡು ಸರಕಾರದ ತಾರತಮ್ಯ ನೀತಿಯ ವಿರುದ್ಧ ದನಿ ಎತ್ತಬೇಕಿದೆ.